Bengaluru Womans Viral Video: ಬೆಂಗಳೂರು ನಗರದಲ್ಲಿ 500 ರೂಪಾಯಿಗೆ ಬರೀ 50 ರೂಪಾಯಿ ಬೆಲೆ ಅನಿಸುತ್ತೆ. ಈ ನಗರದಲ್ಲಿ ಬದುಕಲು ಯಾಕಿಷ್ಟು ಖರ್ಚು? ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

Bengaluru Womans Viral Video: ಐಟಿ ಹಬ್ ಬೆಂಗಳೂರಿನಲ್ಲಿ ಜೀವನ ಮಾಡುವುದು ಸುಲಭದ ಮಾತಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಿಲಿಕಾನ್ ಸಿಟಿಯ ದುಬಾರಿ ಜೀವನದ ಬಗ್ಗೆ ದೀಪಾ ಗುಪ್ತಾ ಎಂಬ ಯುವತಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಈಗ ಇಡೀ ನಗರದ ಜನರ ಗಮನ ಸೆಳೆಯುತ್ತಿದ್ದು, 'ಬೆಂಗಳೂರು ಯಾಕಿಷ್ಟು ಕಾಸ್ಟ್ಲಿ?' ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಹಣ ನೀರಿನಂತೆ ಖಾಲಿಯಾಗುತ್ತೆ: ದೀಪಾ ಅಳಲು

ನಗರದಲ್ಲಿ ಬದುಕಲು ಆಗುವ ಖರ್ಚಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ದೀಪಾ, ಇಲ್ಲಿ ಹಣ ಹೇಗೆ ಖಾಲಿಯಾಗುತ್ತದೆ ಎಂಬುದೇ ತಿಳಿಯುವುದಿಲ್ಲ ಎಂದಿದ್ದಾರೆ. 'ನಾನು 500 ರೂಪಾಯಿ ಖರ್ಚು ಮಾಡಿದರೂ, ಅದು ಕೇವಲ 50 ರೂಪಾಯಿ ಖರ್ಚು ಮಾಡಿದ ಅನುಭವ ನೀಡುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಪ್ರತಿಯೊಂದೂ ದುಬಾರಿಯಾಗಿದೆ. ಮನೆಯಲ್ಲಿದ್ದರೂ ಅಥವಾ ಹೊರಗೆ ಹೋದರೂ 500 ರೂಪಾಯಿ ಎಂಬುದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ನ್ಯಾಕ್ಸ್ ತಿಂದ್ರೂ 500 ರೂಪಾಯಿ ಫಿನಿಶ್!

ಬೆಂಗಳೂರಿನ ಹೋಟೆಲ್ ಮತ್ತು ಕೆಫೆಗಳ ಖರ್ಚಿನ ಬಗ್ಗೆ ಮಾತನಾಡುತ್ತಾ, 'ನಾವು ಒಂದು ಸಾಮಾನ್ಯ ಸ್ನ್ಯಾಕ್ ತಿಂದಾಗ ಕೇವಲ 50 ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ಬಿಲ್ ನೋಡಿದಾಗ ಅದು 500 ರೂಪಾಯಿ ತಲುಪಿರುತ್ತದೆ. ಸುಮ್ಮನೆ ಹೊರಗೆ ಹೋಗಿ ಬರಲು ಕೂಡ ಸಾವಿರಾರು ರೂಪಾಯಿ ಬೇಕು. ಇಲ್ಲಿ ಬದುಕಲು ಯಾಕಿಷ್ಟು ಹಣ ಬೇಕು?' ಎಂದು ವಿಡಿಯೋದಲ್ಲಿ ದೀಪಾ ಪ್ರಶ್ನಿಸಿದ್ದಾರೆ.

View post on Instagram

10 ಪರ್ಸೆಂಟ್ ಇಂಕ್ರಿಮೆಂಟ್ ಎಲ್ಲಿಗೆ ಸಾಲಲ್ಲ!

ತಮ್ಮ ವಿಡಿಯೋಗೆ ಕುತೂಹಲಕಾರಿ ಕ್ಯಾಪ್ಷನ್ ನೀಡಿರುವ ಅವರು, 'ವರ್ಷಕ್ಕೆ ಸಿಗುವ 10% ಇಂಕ್ರಿಮೆಂಟ್ ಈ ನಗರದ ದೈನಂದಿನ ಖರ್ಚಿಗೂ ಸಾಲುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾದರೂ, ನಗರದ ಬೆಲೆ ಏರಿಕೆ ಮತ್ತು ಲೈಫ್ ಸ್ಟೈಲ್ ಆ ಹಣವನ್ನು ನುಂಗಿ ನೀರು ಕುಡಿಯುತ್ತಿದೆ ಎಂಬುದು ಅವರ ಮಾತಿನ ಅರ್ಥವಾಗಿತ್ತು.

ಇದು ನಮ್ಮೆಲ್ಲರ ಕಥೆ ಅಂದ ನೆಟ್ಟಿಗರು

ದೀಪಾ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 'ದೀಪಾ ಹೇಳಿದ್ದು ನೂರಕ್ಕೆ ನೂರು ಸತ್ಯ, ಇದು ನಮ್ಮೆಲ್ಲರ ದೈನಂದಿನ ಅನುಭವ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 'ಬೆಂಗಳೂರಿನಲ್ಲಿ ಮನೆಯಿಂದ ಹೊರಬಂದು ಆಟೋ ಹತ್ತಿ ಇಳಿಯುವಷ್ಟರಲ್ಲಿ ಅರ್ಧ ಪರ್ಸ್ ಖಾಲಿಯಾಗಿರುತ್ತದೆ' ಎಂದು ಇನ್ನು ಕೆಲವರು ತಮಾಷೆಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಬೆಂಗಳೂರಿಗರ 'ಪಾಕೆಟ್' ಪೇಚಾಟವನ್ನು ಜಗಜ್ಜಾಹೀರುಗೊಳಿಸಿದೆ.