ಕರ್ನಾಟಕದಾದ್ಯಂತ ಕಟ್ಟಡಗಳು ಮತ್ತು ಹೊಲಗಳಲ್ಲಿ ದೃಷ್ಟಿ ಗೊಂಬೆಯಾಗಿ ಬಳಸಲಾಗುತ್ತಿರುವ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ವೈರಲ್ ಆಗಿದೆ. ಈಕೆ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಹೇಳಲಾಗುತ್ತಿದೆಯಾದರೂ, ಈಕೆಯ ನಿಜವಾದ ಗುರುತು ಮತ್ತು ಫೋಟೋದ ಹಿಂದಿನ ಸತ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸಾಮಾನ್ಯವಾಗಿ ಹೊಸ ಮನೆ ಕಟ್ಟುವಾಗ, ಅಂಗಡಿ ನಿರ್ಮಾಣದ ವೇಳೆ ಇಲ್ಲವೇ ಅಂಗಡಿ-ಮುಂಗಟ್ಟುಗಳ ನಡುವೆ ಯಾರ ಕೆಟ್ಟ ಕಣ್ಣೂ ಬೀಳದಿರಲಪ್ಪ ಎಂದು ಬೆರ್ಚು ಗೊಂಬೆ ಹಾಕುವುದು ಮಾಮೂಲು. ಹೊಲ- ತೋಟಗಳಲ್ಲಿಯೂ ಇಂಥ ಗೊಂಬೆ ನಿಲ್ಲಿಸುತ್ತಾರೆ. ಆದರೆ ಕೆಲ ವರ್ಷಗಳಿಂದ ಈ ಬೆರ್ಚು ಗೊಂಬೆ ಜಾಗದಲ್ಲಿ ಕಾಣಿಸಿಕೊಳ್ತಿರೋದು ದೊಡ್ಡ ಕಣ್ಣುಗಳುಳ್ಳ ಮಹಿಳೆ. ಈ ಮಹಿಳೆ ಯಾರು ಎನ್ನುವ ಬಗ್ಗೆ ಬಹುತೇಕ ಮಂದಿ ತಲೆ ಕೆಡಿಸಿಕೊಂಡಿದ್ದಾರೆ, ಗೂಗಲ್ ಸರ್ಚ್ ಮಾಡಿದ್ದಾರೆ. ಆದರೆ ಈ ಮಹಿಳೆ ಯಾರು ಎನ್ನುವ ಬಗ್ಗೆ ಸುಳಿವು ಮಾತ್ರ ಸಿಕ್ಕಿಲ್ಲ. ಎಷ್ಟೋ ಮಂದಿ ಇದು ಎಐ ನಿರ್ಮಿತ ಗೊಂಬೆ ಇರಬಹುದು ಎಂದುಕೊಂಡು ಸುಮ್ಮನಾಗಿದ್ದಾರೆ. ಆದರೆ ಅದು ಕೂಡ ಅಲ್ಲ. ಏಕೆಂದರೆ, ಈಕೆ ವೈರಲ್ ಆದ ಸಮಯದಲ್ಲಿ ಕೃತಕ ಬುದ್ಧಿಮತ್ತೆ (AI) ಈ ಪರಿಯಲ್ಲಿ ಫೇಮಸ್ ಆಗಿರೇ ಇಲ್ಲ. ಅಂದರೆ, ಆಗ ಈಗಿನಷ್ಟು ಸುಲಭವಾಗಿ ನಕಲಿ ಫೋಟೋ ಸೃಷ್ಟಿ ಮಾಡುವುದು ಸಾಧ್ಯವಿರಲಿಲ್ಲ. ಹಾಗಿದ್ದರೆ ಯಾರೀಕೆ?
ಹುಡುಕಿದರೂ ಸಿಗಲಿಲ್ಲ
ಕರ್ನಾಟಕದಾದ್ಯಂತ ಫೇಮಸ್ ಆಗಿರೋ ಈ ಮಹಿಳೆಯನ್ನು ಕೊನೆಗೂ ಕೆಲವು ಕಂಟೆಂಟ್ ಕ್ರಿಯೇಟರ್ಗಳು ಪತ್ತೆ ಹಚ್ಚಿದ್ದಾರೆ! ಈಕೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಸದ್ಯದ ಮಟ್ಟಿಗೆ ತಿಳಿದು ಬಂದಿದೆ. ಮಹಾರಾಷ್ಟ್ರದ ಮಹಿಳೆಯೊಬ್ಬರು ಇದನ್ನು ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಈ ದೊಡ್ಡ ಕಣ್ಣುಗಳ ಭಯಂಕರ ಮಹಿಳೆಯನ್ನು ನೋಡಿದ ಮಹಾರಾಷ್ಟ್ರದ ಮಹಿಳೆ, ಗೂಗಲ್ ಲೆನ್ಸ್ನಲ್ಲಿ ಹುಡುಕಿದರೂ ಈಕೆಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದ್ದರಿಂದ ಇವರು ಈ ಮಹಿಳೆ ಫೋಟೋ ಹಾಕಿ ಮಾಹಿತಿ ಕೇಳಿದ್ದರು. ಕುತೂಹಲದ ಸಂಗತಿ ಎಂದರೆ, ಈಕೆ ಹಾಕಿದ್ದ ಫೋಟೋಗೆ 3.2 ಮಿಲಿಯನ್ಸ್ ವ್ಯೂವ್ಸ್ ಬಂದರೂ ಮಹಿಳೆ ಯಾರೆಂದು ಪತ್ತೆಯಾಗಿರಲಿಲ್ಲ.
ಯಾರೀಕೆ?
ಕೊನೆಗೆ ಶಾಂತಾನು ಗೋಯೆಲ್ ಎನ್ನುವವರು ಎಐ ತಂತ್ರಜ್ಞಾನ ಬಳಸಿ, ಹರಸಾಹಸ ಮಾಡಿ ಈ ಮಹಿಳೆ ಕರ್ನಾಟಕದ ನಿಹಾರಿಕಾ ರಾವ್ ಎಂದು ಪತ್ತೆಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು ಇದನ್ನು ಬರೆದುಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಈ ಮಹಿಳೆ ಹುಟ್ಟಿಕೊಂಡಿದ್ದಳು. ಆದರೆ, ಕಂಟೆಂಟ್ ಕ್ರಿಯೇಟರ್ಗಳು ಈ ಗೊಂಬೆ ಬಗ್ಗೆ ಸಕತ್ ಪ್ರಚಾರ ಮಾಡಿದಾಗಿನಿಂದ ಅಂದರೆ 2023ರ ಸುಮಾರಿಗೆ ಈ ಮಹಿಳೆಯ ಫೋಟೋ ದೃಷ್ಟಿಗೊಂಬೆಯಾಗಿ ಮೂಲೆಮೂಲೆಗಳಲ್ಲಿಯೂ ಕಾಣಿಸುತ್ತಿದೆ. ಕಟ್ಟಡ ನಿರ್ಮಾಣ, ಅಂಗಡಿ, ಹೊಲ, ಗದ್ದೆ ಎಲ್ಲೆಂದರೆಲ್ಲಿ ದೊಡ್ಡ ಕಣ್ಣುಗಳ ಈ ಮಹಿಳೆ ಫೋಟೊ ಕಾಣಸಿಗುತ್ತಿದೆ ಎನ್ನಲಾಗಿದೆ.
ಇನ್ನೂ ಅಸಲಿಯತ್ತು ತಿಳಿಯಬೇಕಿದೆ
ಆದರೆ, ಇವರ ಅಸಲಿ ಫೋಟೋ ಬಗ್ಗೆ ಇನ್ನೂ ಪತ್ತೆಯಾಗಿಲ್ಲ. ಯಾರೀ ನಿಹಾರಿಕಾ ರಾವ್ ಎನ್ನುವುದು ಕೂಡ ಸ್ಪಷ್ಟವಾಗಿಲ್ಲ. ನಿಜವಾಗಿಯೂ ಈ ಫೋಟೋ ಅವರದ್ದೇನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಏಕೆಂದರೆ, ಈ ಬಗ್ಗೆ ನಿಹಾರಿಕಾ ರಾವ್ ಎನ್ನುವ ಮಹಿಳೆ ಯಾವುದೇ ಹೇಳಿಕೆ ಕೊಟ್ಟಿಲ್ಲ ಅಥವಾ ಅಂಥ ಮಹಿಳೆ ಇದ್ದಾರೋ, ಇಲ್ಲವೋ ಎನ್ನುವುದು ಕೂಡ ತಿಳಿಯಬೇಕಿದೆ. ಒಟ್ಟಿನಲ್ಲಿ ಈ ಮಹಿಳೆ ನಿಹಾರಿಕಾ ರಾವ್ ಎಂದು ರಾತ್ರೋರಾತ್ರಿ ಸಿಕ್ಕಾಪಟ್ಟೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ನೋಡಿದರೆ, ಇವಳ ಬಗ್ಗೆ ಎಷ್ಟು ಮಂದಿ ತಲೆ ಕೆಡಿಸಿಕೊಂಡಿದ್ದರು ಎನ್ನುವುದು ತಿಳಿಯುತ್ತದೆ.


