ಅನಂತ್ ಅಂಬಾನಿ ಅವರು ತಮ್ಮ ಭದ್ರತೆ ಹಾಗೂ ಅನಾರೋಗ್ಯವನ್ನು ಲೆಕ್ಕಿಸದೆ ಪುಟ್ಟ ಮಗುವೊಂದರ ಜೊತೆ ಫೋಟೋ ತೆಗೆಸಿಕೊಳ್ಳಲು ಕಾರಿನಿಂದ ಕೆಳಗಿಳಿದಿದ್ದಾರೆ. ಅವರ ಈ ಸರಳತೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮುಂಬೈ (ಸೆ. 25): ವಿಶ್ವದ ಅತಿ ದೊಡ್ಡ ಶ್ರೀಮಂತ ಕುಟುಂಬದ ಕುಡಿ, ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಅತ್ಯಂತ ಸರಳ ಹಾಗೂ ಮಾನವೀಯ ನಡವಳಿಕೆಯಿಂದ ಮತ್ತೆ ಸಾರ್ವಜನಿಕರ ಹೃದಯ ಗೆದ್ದಿದ್ದಾರೆ. ಅನಾರೋಗ್ಯ ಮತ್ತು ಅತಿಯಾದ ದೇಹದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೂ, ತಮ್ಮ ಭದ್ರತೆ ಹಾಗೂ ದೈಹಿಕ ಕಷ್ಟವನ್ನು ಲೆಕ್ಕಿಸದೆ ಪುಟ್ಟ ಮಗುವೊಂದರ ಆಸೆ ತೀರಿಸಲು ಕಾರಿನಿಂದಿಳಿದು ಬಂದು ಫೋಟೋ ನೀಡಿದ ಅವರ ಸರಳತೆಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ನಡವಳಿಕೆಯನ್ನು ಕಂಡ ನೆಟ್ಟಿಗರು ಅದಕ್ಕೇ ಇವರಿಗೆ ತಲೆತಲಾಂತರದಿಂದ ಬಂದಿರೋ ಅಷ್ಟೂ ಆಸ್ತಿ ಸಿಕ್ಕಿರೋದು ಎಂದು ಶ್ಲಾಘಿಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಅನಂತ್ ಅಂಬಾನಿ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಬದಿಯಲ್ಲಿದ್ದ ಮಗುವೊಂದು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಕಾತರದಿಂದ ಕಾಯುತ್ತಿರುವುದನ್ನು ಗಮನಿಸಿದರು. ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿದ ಅನಂತ್, ಮೊದಲು ಆ ಮಗು ತನ್ನೊಂದಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಬಯಸುತ್ತಿದೆ ಎಂದು ಭಾವಿಸಿ, ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳಲು ಸಿದ್ಧರಾದರು.
ಆದರೆ, ಮಗುವಿನ ಕುಟುಂಬಸ್ಥರು ಆತನಿಗೆ ನಿಮ್ಮೊಂದಿಗೆ ಒಂದು ಫೋಟೋ ತೆಗೆದುಕೊಳ್ಳುವ ಆಸೆ ಇದೆ ಎಂದು ಹೇಳಿದರು. ಈ ಮಾತು ಕೇಳಿದ ತಕ್ಷಣವೇ ಅನಂತ್ ಅಂಬಾನಿ, ತಮ್ಮ ಅನಾರೋಗ್ಯ ಹಾಗೂ ಸೆಕ್ಯೂರಿಟಿ ಸಿಬ್ಬಂದಿಯ ಭದ್ರತಾ ನಿಯಮಗಳನ್ನು ಬದಿಗೊತ್ತಿ, ತಾವೇ ಸ್ವತಃ ಕಾರಿನಿಂದ ಕೆಳಗಿಳಿದರು. ಬಳಿಕ ಆ ಮಗುವನ್ನು ಪ್ರೀತಿಯಿಂದ ಅಪ್ಪಿಕೊಂಡು, ಸಮಾಧಾನಪಡಿಸಿ, ನಗುನಗುತ್ತಾ ಆತನೊಂದಿಗೆ ಫೋಟೋಗೆ ಪೋಸ್ ನೀಡಿದರು. ಒಬ್ಬ ಸಾಧಾರಣ ಮಗುವಿನ ಮುಖದಲ್ಲಿ ನಗು ಮೂಡಿಸಲು ಜಗತ್ತಿನ ಪ್ರಭಾವಿ ಕೋಟ್ಯಧಿಪತಿ ತೋರಿದ ಈ ಔದಾರ್ಯ ಮತ್ತು ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂಥ ಮನಸ್ಸಿನ ಕೋಟ್ಯಧಿಪತಿ ನೋಡುವುದೇ ಅಪರೂಪ: ಕಾಮೆಂಟ್ ವೈರಲ್
ಅನಂತ್ ಅಂಬಾನಿ ಅವರ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದಾರೆ. 'ಅನಂತ್ ಅಂಬಾನಿ ಇಷ್ಟು ಒಳ್ಳೆಯ ವ್ಯಕ್ತಿಯಾಗಲು ಅವರ ತಂದೆ-ತಾಯಂದಿರು ನೀಡಿದ ಉತ್ತಮ ಪೋಷಣೆಯೇ ಕಾರಣ. ಪ್ರಪಂಚದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ಇವರಲ್ಲಿ ಎಳ್ಳಷ್ಟೂ ಅಹಂಕಾರವಿಲ್ಲ. ಇದಕ್ಕೆ ಮುಕೇಶ್ ಮತ್ತು ನೀತಾ ಅಂಬಾನಿ ಅವರಿಗೆ ಧನ್ಯವಾದ ಹೇಳಬೇಕು' ಎಂದು ಯೂಸರ್‌ವೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಅಂಬಾನಿ ಕುಟುಂಬದ ನಿಜವಾದ ಸೌಂದರ್ಯವೇ ಇದು. ಇಷ್ಟೊಂದು ಬೃಹತ್ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದರೂ ಅವರು ಎಂದಿಗೂ ತಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ ಮತ್ತು ಪ್ರತಿಯೊಂದು ಕ್ಷಣವನ್ನು ಭಾರತೀಯರೊಂದಿಗೆ ಸಂಭ್ರಮಿಸುತ್ತಾರೆ," ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
"ಅನಂತ್ ಅಂಬಾನಿ ಅವರ ಈ ಉದಾತ್ತ ಹಾಗೂ ಪ್ರೀತಿಯ ಗುಣಕ್ಕಾಗಿಯೇ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಿದ್ದು, ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗೆ ದೇವರೆಂದೂ ಒಳಿತನ್ನೇ ಮಾಡಲಿ," ಎಂದು ಜನರು ಹಾರೈಸಿದ್ದಾರೆ.
"ಯಾವುದೇ ಭದ್ರತೆಯ ಚಿಂತೆಯಿಲ್ಲದೆ, ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಕಾರಿನಿಂದ ಕೆಳಗಿಳಿದು ಬಂದು ಮಗುವನ್ನು ಸಂತಸಗೊಳಿಸಿದ ಇಂತಹ ಕೋಟ್ಯಧಿಪತಿಯನ್ನು ನಾನು ಅಪರೂಪಕ್ಕೆ ನೋಡಿದ್ದೇನೆ. ಅನಂತ್ ಅವರು ಎಂತಹದೇ ಕಾಯಿಲೆಯಿಂದ ಬಳಲುತ್ತಿದ್ದರೂ, ದೇವರು ಅವರನ್ನು ಶೀಘ್ರವಾಗಿ ಗುಣಮುಖರನ್ನಾಗಿ ಮಾಡಲಿ," ಎಂದು ಜಾಲತಾಣಗಳಲ್ಲಿ ಸಾಲು ಸಾಲು ಪ್ರಾರ್ಥನೆಗಳು ಸಲ್ಲಿಕೆಯಾಗುತ್ತಿವೆ. ಪ್ರಚಾರದ ಹಂಬಲವಿಲ್ಲದೆ, ಸಹಜವಾಗಿ ಮೂಡಿಬಂದ ಈ ಮಾನವೀಯ ಘಟನೆಯು ಕೋಟ್ಯಂತರ ಜನರ ಮನಸ್ಸನ್ನು ಸ್ಪರ್ಶಿಸಿದ್ದು, ಶ್ರೀಮಂತಿಕೆಗೆ ಸಂಸ್ಕಾರವೇ ಮೆರುಗು ಎಂಬುದನ್ನು ನಿರೂಪಿಸಿದೆ.


