ಕೋಲ್ಕತ್ತಾದ ಬೀದಿಗಳಲ್ಲಿ ವಯೋಲಿನ್ ನುಡಿಸಿ ದಿನಕ್ಕೆ ಕೇವಲ 100 ರೂಪಾಯಿ ಸಂಪಾದಿಸುವ 80 ವರ್ಷದ ಭಗವಾನ್ ಮಲಿಕ್ ಅವರ ಕಷ್ಟದ ಕಥೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಉದ್ಯಮಿ ಆನಂದ್ ಮಹೀಂದ್ರಾ, ದಶಕಗಳಿಂದ ಹೋರಾಡುತ್ತಿರುವ ಈ ಹಿರಿಯ ಜೀವಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

80ರ ವಯಸ್ಸಲ್ಲು ಕೋಲ್ಕತ್ತಾದ ಬೀದಿ ಸಂಗೀತಗಾರ(Street musician from Kolkata) ಭಗವಾನ್ ಮಲಿಕ್ ಅವರ ಬದುಕಿನ ಕಥೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾ(Social media)ದಲ್ಲಿ ವೈರಲ್ ಆದ ನಂತರ ಸಾವಿರಾರು ಜನರು ಮಮ್ಮಲ ಮರುಗಿದ್ದಾರೆ. ಈ ವಿಡಿಯೋ ನೋಡಿದವರಲ್ಲಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು. ಅವರು ನೋಡಿ ಸುಮ್ಮನಾಗಿಲ್ಲ. ಈ ಹಿರಿಯ ವಯೋಲಿನ್ ವಾದಕನಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ವಿಡಿಯೋವನ್ನು X ನಲ್ಲಿ ಹಂಚಿಕೊಂಡ ಮಹೀಂದ್ರಾ, ಮಲಿಕ್ ಅವರ ಸಂಗೀತದ ಮೇಲಿನ ಪ್ರೀತಿ ಮತ್ತು ಹಲವು ವರ್ಷಗಳ ಹೋರಾಟವನ್ನು ನೋಡಿ ಸಹಾಯ ಅವರಿಗೆ ಏನಾದರೂ ಸಹಾಯ ಮಾಡಬೇಕು ಅನಿಸಿದೆ. ಆದರೆ, ಈ ಸಂಗೀತಗಾರನನ್ನು ಸಂಪರ್ಕಿಸಲು ಅಥವಾ ಸಹಾಯ ಮಾಡಲು ಯಾವುದೇ ವಿವರಗಳು ವಿಡಿಯೋದಲ್ಲಿ ಲಭ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಭಗವಾನ್ ಮಲಿಕ್ ಅವರು ದಶಕಗಳಿಂದ ಕೋಲ್ಕತ್ತಾದ ಬೀದಿಗಳಲ್ಲಿ ವಯೋಲಿನ್ ನುಡಿಸುತ್ತಿದ್ದಾರೆ. ಇದು ಕೀರ್ತಿಗಾಗಿ ಅಲ್ಲ, ಬದಲಿಗೆ ಹೊಟ್ಟೆಪಾಡಿಗಾಗಿ. ಮೇ ತಿಂಗಳಲ್ಲಿ ಅವರ ಲೈಫ್ ಬಗ್ಗೆ ಮೊದಲ ಬಾರಿಗೆ ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ಆರಾಧನಾ ಚಟರ್ಜಿ ಪ್ರಕಾರ, ಮಲಿಕ್ ಅವರು ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡರು ಮತ್ತು ತಮ್ಮ ತಂದೆಯಿಂದ ವಯೋಲಿನ್ ನುಡಿಸುವುದನ್ನು ಕಲಿತರು.

ತಂದೆಯ ಮರಣದ ನಂತರ, ಸಂಗೀತವೇ ಅವರ ಬದುಕಿಗೆ ಆದಾಯದ ಏಕೈಕ ಮೂಲವಾಯಿತು. ಬಾಲ್ಯದಿಂದಲೂ, ಅವರು ತಮ್ಮ ಮತ್ತು ತಮ್ಮ ಕುಟುಂಬದ ನಿರ್ವಹಣೆಗಾಗಿ ಬೀದಿಗಳಲ್ಲಿ ಸಂಗೀತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

View post on Instagram

ಈ 80ರ ಇಳಿವಯಸ್ಸಲ್ಲೂ, ಮಂದ ದೃಷ್ಟಿ ಮತ್ತು ಹಾನಿಗೊಳಗಾದ ಹಳೆಯ ವಯೋಲಿನ್‌ನೊಂದಿಗೆ ಪ್ರತಿದಿನ ಸಂಜೆ ಅವರು ಸಂಗೀತ ನುಡಿಸುತ್ತಾರೆ. ವರದಿಗಳ ಪ್ರಕಾರ, ಅವರು ದಿನಕ್ಕೆ ಸುಮಾರು 100 ರೂಪಾಯಿ ಮಾತ್ರ ಸಂಪಾದಿಸುತ್ತಾರೆ. ಅಷ್ಟು ಕಡಿಮೆ ಸಂಪಾದನೆಯಲ್ಲೇ ಅವರು ತಮ್ಮ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರದರ್ಶನ ನೀಡುವಾಗ ಅವರ ಪತ್ನಿ ಪಕ್ಕದಲ್ಲೇ ಕುಳಿತಿರುತ್ತಾರೆ.

ಹರಿದುಬಂದ ಸಹಾಯದ ಮಹಾಪೂರ

ಆನಂದ್ ಮಹೀಂದ್ರಾ ಅವರ ಪೋಸ್ಟ್ ನಂತರ, ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಮಲಿಕ್ ಅವರ ವಿವರಗಳನ್ನು ಹಂಚಿಕೊಂಡರು. ಇದರಿಂದ ಅವರ ಪರಿಸ್ಥಿತಿಯ ಬಗ್ಗೆ ಮತ್ತಷ್ಟು ಗಮನ ಹರಿಯಿತು.

ಇದಕ್ಕೂ ಮುನ್ನ, ಆರಾಧನಾ ಅವರು ಕೋಲ್ಕತ್ತಾದ ನ್ಯೂ ಟೌನ್ ಬಸ್ ನಿಲ್ದಾಣ, ಡಿಎಲ್‌ಎಫ್ ಸಬ್‌ವೇ ಮತ್ತು ನ್ಯೂ ಟೌನ್ ಆರ್ಟ್ ಸ್ಟ್ರೀಟ್ ಬಳಿ ಸಂಜೆ 5 ರಿಂದ ರಾತ್ರಿ 11 ಗಂಟೆಯವರೆಗೆ ಮಲಿಕ್ ಅವರನ್ನು ಕಾಣಬಹುದು ಎಂದು ಹೇಳಿದ್ದರು. ಅಲ್ಲದೆ, ಕೆಫೆಗಳು, ಈವೆಂಟ್ ಆಯೋಜಕರು ಮತ್ತು ಸಮುದಾಯ ಗುಂಪುಗಳು ಅವರನ್ನು ಪ್ರದರ್ಶನಕ್ಕೆ ಆಹ್ವಾನಿಸುವಂತೆ ಮನವಿ ಮಾಡಿದ್ದರು.

ಈ ತಿಂಗಳ ಆರಂಭದಲ್ಲಿ ಆರಾಧನಾ ಹಂಚಿಕೊಂಡ ಅಪ್‌ಡೇಟ್ ಪ್ರಕಾರ, ವಿಡಿಯೋ ಪೋಸ್ಟ್ ಮಾಡಿದ ನಂತರ ಸಾರ್ವಜನಿಕರ ಬೆಂಬಲದಿಂದ ಮಲಿಕ್ ಅವರಿಗಾಗಿ ₹1 ಲಕ್ಷ ಸಂಗ್ರಹವಾಗಿದೆ. ಜೊತೆಗೆ, ಅವರು ಮಲಿಕ್‌ಗೆ ಹೊಸ ವಯೋಲಿನ್ ಅನ್ನು ಉಡುಗೊರೆಯಾಗಿ ನೀಡಿದ್ದು, ದಶಕಗಳ ಕಷ್ಟದ ನಂತರ ಈ ಹಿರಿಯ ಸಂಗೀತಗಾರನಿಗೆ ಹೊಸ ಭರವಸೆ ಮೂಡಿದೆ.