ಬೆಂಗಳೂರಿನಲ್ಲಿ ₹50 ಲಕ್ಷ ವಾರ್ಷಿಕ ಸಂಬಳ ಪಡೆದರೂ ದೊಡ್ಡ ಸಂಪತ್ತು ಕಟ್ಟುವುದು ಕಷ್ಟ ಎಂದು ಟೆಕ್ಕಿ ಅನ್ಮೋಲ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ವಾದಿಸಿದ್ದಾರೆ. ತೆರಿಗೆ ಬಳಿಕ ಸುಮಾರು ₹3 ಲಕ್ಷ ತಿಂಗಳ ಆದಾಯದಲ್ಲಿ ಬಾಡಿಗೆ, ಕಾರು, ದಿನಸಿ, ಜೀವನಶೈಲಿ ಖರ್ಚು ಸೇರಿ ಹೆಚ್ಚಿನ ಮೊತ್ತ ವ್ಯಯವಾಗುತ್ತದೆ. ಅವರ ಲೆಕ್ಕಾಚಾರ ಇದೀಗ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

₹50 ಲಕ್ಷ ಸಂಬಳ ಬಂದರೂ ಬೆಂಗಳೂರಿನಲ್ಲಿ ಶ್ರೀಮಂತರಾಗೋದು ಕಷ್ಟವೇ?

ಬೆಂಗಳೂರು ದೇಶದ ಪ್ರಮುಖ ಟೆಕ್ ಹಬ್‌ಗಳಲ್ಲಿ ಒಂದಾಗಿದೆ. ಇಲ್ಲಿ ಲಕ್ಷಾಂತರ ಟೆಕ್ಕಿಗಳು ಹೆಚ್ಚಿನ ವೇತನ ಪಡೆಯುತ್ತಿದ್ದರೂ, ಹೆಚ್ಚಿನ ಸಂಬಳ ಎಂದರೆ ಹೆಚ್ಚಿನ ಸಂಪತ್ತು ಎಂದೇನಲ್ಲ ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಟೆಕ್ ಉದ್ಯೋಗಿ ಅನ್ಮೋಲ್ ಅಗರ್ವಾಲ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಬೆಂಗಳೂರಿನ ಜೀವನ ವೆಚ್ಚವನ್ನು ಗಮನಿಸಿದರೆ ₹50 ಲಕ್ಷ ವಾರ್ಷಿಕ ವೇತನವೂ ದೊಡ್ಡ ಸಂಪತ್ತು ಕಟ್ಟಲು ಸಾಕಾಗುವುದಿಲ್ಲ ಎಂದು ವಾದಿಸಿದ್ದಾರೆ. ಅವರ ಈ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

₹50 LPA ಸಂಬಳದಲ್ಲಿ ನಿಜವಾಗಿ ಕೈಗೆ ಸಿಗೋದು ಎಷ್ಟು?

ಅಗರ್ವಾಲ್ ತಮ್ಮ ಲೆಕ್ಕಾಚಾರಕ್ಕಾಗಿ ₹50 ಲಕ್ಷವನ್ನೇ ಸಂಪೂರ್ಣ ಮೂಲ ವೇತನ ಎಂದು ಪರಿಗಣಿಸಿದ್ದಾರೆ. ತೆರಿಗೆ ಮತ್ತು EPF ಮುಂತಾದ ಕಡಿತಗಳ ನಂತರ ವಾರ್ಷಿಕವಾಗಿ ಸುಮಾರು ₹35 ಲಕ್ಷ ಉಳಿಯಬಹುದು ಎಂದು ಅವರು ಅಂದಾಜಿಸಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು ₹3 ಲಕ್ಷ ಕೈಗೆ ಸಿಗುವ ಪರಿಸ್ಥಿತಿ ಎಂದು ಅವರು ಲೆಕ್ಕ ಹಾಕಿದ್ದಾರೆ.

ಬಾಡಿಗೆಗೇ ₹60–70 ಸಾವಿರ!

ಬೆಂಗಳೂರಿನಲ್ಲಿ ಉತ್ತಮ ಪ್ರದೇಶದಲ್ಲಿ 2BHK ಮನೆಗೆ ತಿಂಗಳಿಗೆ ₹60,000–₹70,000 ಬಾಡಿಗೆ ಹೋಗಬಹುದು ಎಂಬುದು ಅವರ ಅಂದಾಜು. ಇದಕ್ಕೆ ಕೆಲಸದಾಳು, ಅಡುಗೆ ಸಹಾಯಕ, ದಿನಸಿ, ಜಿಮ್, ಶಾಪಿಂಗ್ ಮತ್ತು ಪ್ರಯಾಣದ ವೆಚ್ಚ ಸೇರಿಸಿದರೆ ತಿಂಗಳ ಖರ್ಚು ಸುಮಾರು ₹1.2–1.3 ಲಕ್ಷ ತಲುಪಬಹುದು ಎಂದು ಅವರು ಹೇಳಿದ್ದಾರೆ.

ಕಾರು ಖರೀದಿಸಿದರೆ ಮತ್ತೊಂದು ದೊಡ್ಡ ಖರ್ಚು!

ಕಾರು ಹೊಂದಿದ್ದರೆ EMI, ಇಂಧನ, ನಿರ್ವಹಣೆ, ವಿಮೆ ಸೇರಿದಂತೆ ತಿಂಗಳಿಗೆ ಸುಮಾರು ₹50,000 ಹೆಚ್ಚುವರಿ ವೆಚ್ಚವಾಗಬಹುದು ಎಂದು ಅಗರ್ವಾಲ್ ತಮ್ಮ ಉದಾಹರಣೆಯಲ್ಲಿ ಹೇಳಿದ್ದಾರೆ. ಮಕ್ಕಳಿರುವ ಕುಟುಂಬಗಳಿಗೆ ಶಿಕ್ಷಣ ಮತ್ತು ಇತರ ಖರ್ಚುಗಳು ಸೇರಿದರೆ ಉಳಿತಾಯದ ಮೊತ್ತ ಮತ್ತಷ್ಟು ಕಡಿಮೆಯಾಗಬಹುದು.

₹3 ಲಕ್ಷ ಸಂಬಳ... ಕೈಯಲ್ಲಿ ಉಳಿಯೋದು ₹1 ಲಕ್ಷ?

ಈ ಎಲ್ಲ ವೆಚ್ಚಗಳನ್ನು ಕಳೆದ ನಂತರ ತಿಂಗಳಿಗೆ ಸುಮಾರು ₹1 ಲಕ್ಷದಷ್ಟು ಹಣವನ್ನು ಮಾತ್ರ ಹೂಡಿಕೆ ಅಥವಾ ಸಂಪತ್ತು ನಿರ್ಮಾಣಕ್ಕೆ ಮೀಸಲಿಡಲು ಸಾಧ್ಯವಾಗಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ಇದು ವ್ಯಕ್ತಿಯ ಜೀವನಶೈಲಿ, ಕುಟುಂಬದ ಗಾತ್ರ, ವಾಸಿಸುವ ಪ್ರದೇಶ ಮತ್ತು ಖರ್ಚಿನ ಅಭ್ಯಾಸದ ಮೇಲೆ ಬಹಳಷ್ಟು ಬದಲಾಗುತ್ತದೆ.

ಮನೆ ಖರೀದಿಸುವುದು ಮತ್ತೊಂದು ಸವಾಲು!

ಬೆಂಗಳೂರಿನ ಆಸ್ತಿ ಬೆಲೆಗಳನ್ನೂ ಟೆಕ್ಕಿ ತಮ್ಮ ವಾದದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಇಂದು ಸುಮಾರು ₹3 ಕೋಟಿಗೆ ಇರುವ ಮನೆ ಮುಂದಿನ ದಿನಗಳಲ್ಲಿ ₹6–7 ಕೋಟಿಗೆ ಏರಬಹುದು ಎಂಬ ಉದಾಹರಣೆಯನ್ನು ಅವರು ನೀಡಿದ್ದಾರೆ. ಹೀಗಾಗಿ ಉತ್ತಮ ಸಂಬಳವಿದ್ದರೂ ಸ್ವಂತ ಮನೆ ಖರೀದಿಸುವುದು ಸುಲಭವಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ.

ಹೆಚ್ಚು ಸಂಬಳಕ್ಕಿಂತ ಕಡಿಮೆ ಖರ್ಚಿನಲ್ಲಿ ಬದುಕುವುದೇ ಜಾಣತನ..!

ಈ ಸಮಸ್ಯೆಗೆ ಪರ್ಯಾಯವಾಗಿ ರಿಮೋಟ್ ಉದ್ಯೋಗ ಅಥವಾ ಸ್ವಂತ ಉದ್ಯಮದಂತಹ ಆಯ್ಕೆಗಳನ್ನು ಅವರು ಸೂಚಿಸಿದ್ದಾರೆ. ಕಡಿಮೆ ಜೀವನ ವೆಚ್ಚವಿರುವ Tier-3 ನಗರದಲ್ಲಿ ವಾಸಿಸುತ್ತಾ ಹೆಚ್ಚಿನ ಆದಾಯ ಗಳಿಸುವುದು ಸಂಪತ್ತು ನಿರ್ಮಾಣಕ್ಕೆ ಹೆಚ್ಚು ಅನುಕೂಲಕರವಾಗಬಹುದು ಎಂಬುದು ಅವರ ವಾದ.

ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ!

ಅವರ ವಿಡಿಯೋಗೆ ಕೆಲವರು ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನ ದುಬಾರಿ ಜೀವನದ ಅನುಭವವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ವಿದೇಶದಲ್ಲಿ ಉದ್ಯೋಗ ಹುಡುಕುವುದು ಅಥವಾ ಬೇರೆ ನಗರಗಳಿಗೆ ತೆರಳುವುದು ಉತ್ತಮ ಆಯ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.

View post on Instagram