ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ.
ವಿಜಯಪುರ (ಮಾ.08): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ. ಆದರೆ ಕಾಂಗ್ರೆಸ್‌ನವರು ಈ ಹಿಂದಿನ ಚುನಾವಣೆಯಲ್ಲಿ ಜನರನ್ನು ಗ್ಯಾರಂಟಿ ಹೆಸರಿನಲ್ಲಿ ಯಾಮಾರಿಸುವ ಪ್ರಯತ್ನ ಮಾಡಿದರು.
ಆದರೆ ಈಗ ಗ್ಯಾರಂಟಿಗಳನ್ನೇ ಸರಿಯಾಗಿ ನೀಡುತ್ತಿಲ್ಲ, ಕೇವಲ ಕುರ್ಚಿ ಕಾದಾಟದಲ್ಲಿಯೇ ನಿರತವಾಗಿರುವುದು ಜನರಿಗೆ ಬೇಸರ ತರಿಸಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ ಎಂದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಯಕರ್ತರ ತ್ಯಾಗ ಬಲಿದಾನದಿಂದ ಬಿಜೆಪಿ ಇಂದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಕರ್ನಾಟಕ ಭಾಗದಿಂದ ಮೂವರು ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದೇ ಬಿಜೆಪಿ.
ದೊಡ್ಡ ಪಡೆಯೇ ಇದೆ
ಬಿಜೆಪಿ ಸಮಗ್ರ ಕರ್ನಾಟಕ ಹಾಗೂ ಸಮಗ್ರ ಭಾರತದ ಪ್ರಗತಿಯನ್ನು ಬಯಸುವ ಶ್ರೇಷ್ಠ ಚಿಂತನೆಯ ಪಕ್ಷವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕಾರ್ಯಕರ್ತರು ಮನಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ, ಬಿಜೆಪಿಗೆ ಸಮರ್ಪಣಾ ಮನೋಭಾವ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಮಳುಗೌಡ ಪಾಟೀಲ, ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ಕಾಸುಗೌಡ ಬಿರಾದಾರ, ಈರಣ್ಣ ರಾವೂರ, ಸಂಜಯ ಪಾಟೀಲ ಕನಮಡಿ, ಸಂಜೀವ ಐಹೊಳಿ, ವಿವೇಕಾನಂದ ಡಬ್ಬಿ, ಗೋಪಾಲ ಘಟಕಾಂಬಳೆ, ಸಾಬು ಮಾಶ್ಯಾಳ, ಅನೀಲ ಜಮಾದಾರ, ರಜನಿ ಸಂಬಣ್ಣಿ, ಸ್ವಪ್ನಾ ಕಣಮುಚನಾಳ, ವಿಜಯಕುಮಾರ ಕುಡಿಗನೂರ ಪಾಲ್ಗೊಂಡಿದ್ದರು.


