Vastu Shastra: ಒಣಗಿದ ಹೂ ಶವಕ್ಕೆ ಸಮಾನ, ಪೂಜೆಗೆ ಬಳಸಿದ್ರೆ ಹಾಳಾಗತ್ತೆ ಭವಿಷ್ಯ, ವರ್ತಮಾನ
ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ ಹೀಗೆ ತರ ತರಹದ ಹೂ ತರ್ತೇವೆ. ಅದನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡ್ತೇವೆ. ನಂತ್ರ ಹೂವನ್ನು ದೇವರ ಮೈಮೇಲೆ ಬಿಟ್ಟು ಬಿಡ್ತೇವೆ. ಹೂ ಅಲ್ಲಿಯೇ ಬಾಡಲು ಶುರುವಾಗಿರುತ್ತದೆ. ಈ ಒಣಗಿದ ಹೂ ಮನೆಯಲ್ಲಿದ್ರೆ ದುರಾದೃಷ್ಟ ಬೆನ್ನು ಹತ್ತಿದಂತೆ.
ಹಿಂದೂ ಧರ್ಮ (Hinduism) ದಲ್ಲಿ ದೇವರ (God) ಪೂಜೆಗೆ ಹೂ (Flower) ವನ್ನು ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಹೂಗಳಿವೆ. ಆ ದೇವರ ಆರಾಧನೆ ಸಂದರ್ಭದಲ್ಲಿ ಅವರಿಗೆ ಇಷ್ಟವಾದ ಹೂ ಹಾಕಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಬರೀ ದೇವರ ಪೂಜೆಗೆ ಮಾತ್ರವಲ್ಲ ಎಲ್ಲ ಶುಭ ಕಾರ್ಯಗಳಿಗೂ ಹೂ ಅವಶ್ಯಕ. ಗೃಹ ಪ್ರವೇಶವಿರಲಿ ಇಲ್ಲ ಮದುವೆಯಿರಲಿ, ಇಲ್ಲ ಹುಟ್ಟು ಹಬ್ಬದ ಸಂದರ್ಭವಿರಲಿ ಅಲ್ಲಿ ಹೂ ಬಳಕೆ ಮಾಡಲಾಗುತ್ತದೆ. ಬಣ್ಣ ಬಣ್ಣದ ಹೂಗಳು ಅಲಂಕಾರಿಕ ವಸ್ತುಗಳಾಗಿಯೂ ಬಳಕೆಯಾಗ್ತವೆ. ವಾಸ್ತು ಶಾಸ್ತ್ರದಲ್ಲೂ ಹೂವಿಗೆ ಮಹತ್ವದ ಸ್ಥಾನವಿದೆ. ದೇವರಿಗೆ ಹೂ ಅರ್ಪಣೆ ಮಾಡಿದ್ರೆ ಸಾಲದು ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ. ಇಲ್ಲವೆಂದ್ರೆ ಹಾಕಿದ ಹೂ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿರುತ್ತದೆ. ತಾಜಾ ಹೂಗಳನ್ನು ಪೂಜೆಗೆ ಅರ್ಪಿಸ್ತೇವೆ. ವಾಸ್ತು ತಜ್ಞರ ಪ್ರಕಾರ ಪೂಜೆಗೆ ಬಳಸುವ ಹೂವುಗಳನ್ನು ತಕ್ಷಣ ತೆಗೆಯಬೇಕು. ಒಣಗಿದ ಹೂವುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಶುಭ ಕಾರ್ಯಗಳಲ್ಲಿ ಬಳಸುವ ಈ ಹೂವುಗಳು ಒಣಗಿದ ನಂತರ ಮನೆಯಲ್ಲಿ ನಕಾರಾತ್ಮಕತೆ ತುಂಬಲು ಪ್ರಾರಂಭವಾಗುತ್ತದೆ ಇದರಿಂದ ಮನೆಯ ವಾತಾವರಣ ಹಾಳಾಗುತ್ತದೆ. ಜಗಳ ಮತ್ತು ಗಲಾಟೆ ಶುರುವಾಗುತ್ತದೆ ಎಂದು ವಾಸ್ತು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಹಿಂದಿನ ಕಾಲದಲ್ಲಿ ಜನರು ಬೆಳಿಗ್ಗೆ ದೇವರ ಪೂಜೆಗೆ ಬಳಸಿದ ಹೂಗಳನ್ನು ಸಂಜೆ ಸಂಧ್ಯಾವಂದನೆ ಹೆಸರಿನಲ್ಲಿ ತೆಗೆಯುತ್ತಿದ್ದರು. ಆದ್ರೆ ಈಗ ಈ ಪದ್ಧತಿ ಇಲ್ಲವಾಗಿದೆ. ಬೆಳಿಗ್ಗೆ ದೇವರಿಗೆ ಹಾಕಿದ ಹೂ ಬಾಡಿದ ಮೇಲೆ ಮರುದಿನ ತೆಗೆಯಲಾಗುತ್ತದೆ. ಬಾಡಿದ ಹೂ ಮನೆಯ ಸಮೃದ್ಧಿಗೆ ಧಕ್ಕೆ ತರುತ್ತದೆ.
ದೇವರಿಗೆ ಅರ್ಪಿಸಿದ ಹೂ ಮಾತ್ರವಲ್ಲ ನೀವು ಅಲಂಕಾರಕ್ಕೆ ಬಳಸಿದ ಹೂಗಳನ್ನು ಕೂಡ ಬಾಡುವ ಮೊದಲೇ ತೆಗೆಯಬೇಕು. ಇಲ್ಲವೆಂದ್ರೆ ಅದ್ರೆ ಅಡ್ಡಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ.
ಒಣಗಿದ ಹೂವುಗಳು ಮೃತ ದೇಹದಂತೆ : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಒಣ ಹೂಗಳು ಮೃತ ದೇಹದಂತೆ ಎಂದು ಹೇಳಲಾಗುತ್ತದೆ. ನಾವು ಮನೆಯಲ್ಲಿ ಮೃತ ದೇಹವನ್ನು ಇಡುವುದಿಲ್ಲ. ಹಾಗೆಯೇ ಒಣ ಹೂಗಳನ್ನು ಕೂಡ ಮನೆಯಲ್ಲಿ ಇಡಬಾರದು. ದೇವರಿಗೆ ಅರ್ಪಿಸುವ ಎಲ್ಲಾ ತಾಜಾ ಹೂವುಗಳು ಶುದ್ಧವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಆದ್ದರಿಂದ ಪೂಜೆಯ ನಂತರ ಅವುಗಳನ್ನು ತಕ್ಷಣವೇ ತೆಗೆದು ಹಾಕಿದ್ರೆ ಒಳ್ಳೆಯದು. ಸಾಧ್ಯವಿಲ್ಲವೆನ್ನುವವರು ಒಣಗುವವರೆಗೆ ಬಿಡಬೇಡಿ.
ಇದನ್ನೂ ಓದಿ: ಶನಿ ಬರೀ ಕೆಟ್ಟದ್ದೇ ಮಾಡೋಲ್ಲ, ಈ ಶುಭ ಸಂಕೇತಗಳನ್ನೂ ಕೊಡುತ್ತಾನೆ!
ದೇವರ ಪ್ರಸಾದವಾಗಿ ಸಿಕ್ಕ ಹೂ : ದೇವರ ಪ್ರಸಾದವಾಗಿ ಸಿಕ್ಕ ಹೂವನ್ನು ಮುಡಿಗೆ ಏರಿಸಿಕೊಂಡ ಮೇಲೆ ಅದರ ಆಯಸ್ಸು ಮುಗಿದಂತೆ. ದೇವರ ಪ್ರಸಾದ ಎನ್ನುವ ಕಾರಣಕ್ಕೆ ಅದನ್ನು ಒಣಗಲು ಬಿಡುವುದು ಒಳ್ಳೆದಲ್ಲ. ಅನೇಕರು ಪರ್ಸ್ ನಲ್ಲಿ ಒಣಗಿದ ಹೂ ಇಟ್ಟುಕೊಳ್ತಾರೆ. ಇದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತೆ.
ಇದನ್ನೂ ಓದಿ: ಬೆಕ್ಕು ದಾರಿಗಡ್ಡ ಬಂದ್ರೆ ಯಾಕೆ ಸ್ವಲ್ಪ ಹೊತ್ತು ನಿಲ್ಲೋದು ಗೊತ್ತಾ?
ಪೂಜೆಯಿಂದ ತೆಗೆದ ಹೂವನ್ನು ಏನು ಮಾಡ್ಬೇಕು ? : ಪೂಜೆಗೆ ಅಥವಾ ಬೇರೆ ಯಾವುದೇ ವಿಶೇಷ ಕಾರ್ಯಕ್ಕೆ ಬಳಸಿದ ಹೂವನ್ನು ಏನು ಮಾಡ್ಬೇಕೆಂಬ ಪ್ರಶ್ನೆ ಬರೋದು ಸಹಜ. ಹೂವನ್ನು ಕಸಕ್ಕೆ ಎಸೆಯಲಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪೂಜೆಯ ಈ ಹೂವುಗಳನ್ನು ನೀರಿನಲ್ಲಿ ಅಥವಾ ನದಿಯಲ್ಲಿ ಬಿಡಬೇಕು. ಎಲ್ಲ ಕಡೆ ನದಿ ಅಥವಾ ನೀರು ಸಿಗುವುದಿಲ್ಲ. ಹಾಗಾಗಿ ಮನೆಯ ಬಳಿ ಇರುವ ಪವಿತ್ರ ಮರದ ಕೆಳಗೆ ಇದನ್ನು ಹಾಕಬೇಕು. ಇಲ್ಲವೆ ಇದಕ್ಕೆ ಕೊಳಕು ತಾಗದಂತೆ ಮಣ್ಣನ್ನು ಅಗೆದು ಹೂಗಳನ್ನು ಹಾಕಿ ಮುಚ್ಚಬೇಕು. ಮನೆಯಲ್ಲಿರುವ ಕುಂಡದಲ್ಲಿಯೂ ನೀವು ಈ ಹೂವನ್ನು ಹಾಕಬಹುದು. ಆದ್ರೆ ಹೂ ಹಾಕಿದ ಕುಂಡಕ್ಕೆ ಯಾವುದೇ ಕಸ ಅಥವಾ ಕೊಳಕು ವಸ್ತುಗಳನ್ನು ಹಾಕ್ಬೇಡಿ.