ಬೆಕ್ಕು ದಾರಿಗಡ್ಡ ಬಂದ್ರೆ ಯಾಕೆ ಸ್ವಲ್ಪ ಹೊತ್ತು ನಿಲ್ಲೋದು ಗೊತ್ತಾ?
ಬೆಕ್ಕು ನಾವು ಹೋಗೋ ದಾರಿಗೆ ಅಡ್ಡ ಬಂದ್ರೆ ಅವತ್ತಿನ ಕೆಲಸ ಕೆಡ್ತು ಎಂಬ ನಂಬಿಕೆ ಇದೆ. ನಿಜವಾಗಿಯೂ ಬೆಕ್ಕು ಶಕುನ ಹೇಳುತ್ತಾ? ಅಪಾಯದ ಸೂಚನೆ ನೀಡೋಕಂತನೇ ಅಡ್ಡ ಬರತ್ತಾ?
ಸಗುಣ ಶಾಸ್ತ್ರ(Saguna sastra)ವು ಶಕುನಗಳ ಬಗ್ಗೆ ಅಧ್ಯಯನ ಮಾಡುವ ಜ್ಯೋತಿಷ್ಯದ ಒಂದು ಶಾಖೆಯಾಗಿದೆ. ಇದನ್ನು ನಿಮಿತ್ತ ಜ್ಯೋತಿಷ್ಯ ಎಂದೂ ಕರೆಯುತ್ತಾರೆ. ಶಕುನ ಎಂದರೆ ಮುಂಬರುವ ಘಟನೆಯನ್ನು ಸೂಚಿಸುವ ಒಂದು ಮಾರ್ಗ. ಎಲ್ಲವೂ ಪರಮಾತ್ಮನಿಂದ ನಿರ್ದೇಶಿತವಾಗಿದೆ ಮತ್ತು ಪ್ರಕೃತಿಯು ನಾವು ಎದುರಿಸಬೇಕಾದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಶಕುನಗಳ ರೂಪದಲ್ಲಿ ಪಿಸುಗುಟ್ಟುತ್ತದೆ ಎಂಬ ನಂಬಿಕೆ ಸಗುಣ ಶಾಸ್ತ್ರದ್ದು.
ಸಗುಣ ಶಾಸ್ತ್ರ
ಸಗುಣ ಶಾಸ್ತ್ರವು ಶಕುನಗಳ ಜ್ಯೋತಿಷ್ಯವಾಗಿದ್ದು, ಜ್ಯೋತಿಷಿಯು ಶಕುನಗಳ(omen) ಆಧಾರದ ಮೇಲೆ ಮುಂಬರುವ ಘಟನೆಗಳನ್ನು ಊಹಿಸಬಹುದು. ನಾವು ಪ್ರಯಾಣ ಹೊರಟಾಗ ಯಾರನ್ನು ಭೇಟಿಯಾಗುತ್ತೇವೆಯೋ ಅದು ವ್ಯಕ್ತಿಗಳು, ಪ್ರಾಣಿಗಳು, ಪಕ್ಷಿಗಳು, ವಿರುದ್ಧ ದಿಕ್ಕಿನ ಸರೀಸೃಪಗಳು ಅಥವಾ ಪ್ರಾಣಿಗಳ ಶಬ್ದಗಳು ನಮ್ಮ ಪ್ರಯತ್ನದಲ್ಲಿ ಸಿಗುವ ಯಶಸ್ಸು ಅಥವಾ ವೈಫಲ್ಯವನ್ನು ಸೂಚಿಸುತ್ತವೆ ಎಂಬುದು ಇದರ ನಂಬಿಕೆ. ಋಷಿ ಗರ್ಗರು ಒಳ್ಳೆಯ ಮತ್ತು ಕೆಟ್ಟ ಶಕುನಗಳ ಬಗ್ಗೆ ಒಂದು ಗ್ರಂಥವನ್ನೇ ಬರೆದಿದ್ದಾರೆ.
ಕಪ್ಪು ಬೆಕ್ಕು ದಾಟಿದಾಗ - ಕೆಟ್ಟ ಶಕುನವೇ?
ಬೆಕ್ಕು, ಅದರಲ್ಲೂ ಕಪ್ಪು ಬೆಕ್ಕು(black cat) ನಮ್ಮ ಹಾದಿಯನ್ನು ದಾಟಿದರೆ, ಅದೊಂದು ಕೆಟ್ಟ ಶಕುನವೆಂದು ಭಾವಿಸಲಾಗುತ್ತದೆ. ಹಾಗೊಂದು ವೇಳೆ ಬೆಕ್ಕು ಅಡ್ಡ ಹೋದಾಗ ಕೊಂಚ ಹೊತ್ತು ನಿಲ್ಲಲಾಗುತ್ತದೆ. ಮತ್ತೊಬ್ಬ ವ್ಯಕ್ತಿ ಆ ದಾರಿಯನ್ನು ದಾಟಿದ ಬಳಿಕ ದಾಟುತ್ತಾರೆ. ಇದರಿಂದ ದುರದೃಷ್ಟವು ತಮ್ಮನ್ನು ಬಿಟ್ಟು ಮೊದಲು ದಾಟಿದವರನ್ನು ಅಟಕಾಯಿಸುತ್ತದೆ ಎಂಬ ನಂಬಿಕೆ. ಹೋದ ಕೆಲಸ ಆಗುವುದಿಲ್ಲ ಎಂದು ಮನೆಗೆ ಹಿಂದಿರುಗುವವರೂ ಇದ್ದಾರೆ.
ಕಪ್ಪು ಶನಿ ಗ್ರಹ(Saturn planet)ವನ್ನು ಪ್ರತಿನಿಧಿಸುತ್ತದೆ. ಈ ಗ್ರಹವು ನಮ್ಮ ಕಾರ್ಯಗಳು ಮತ್ತು ಉದ್ಯಮಗಳಲ್ಲಿ ವೈಫಲ್ಯಗಳು ಮತ್ತು ವಿಳಂಬಗಳನ್ನು ಉಂಟು ಮಾಡುತ್ತದೆ. ಕಪ್ಪು ಬೆಕ್ಕು ಮಾರ್ಗವನ್ನು ದಾಟಿದಾಗ, ನಿರ್ದಿಷ್ಟ ಕಾರ್ಯವು ಫಲಪ್ರದವಾಗುವುದಿಲ್ಲ ಅಥವಾ ವಿಳಂಬವಾಗುತ್ತದೆ ಎಂದರ್ಥ ಎಂದು ಭಾವಿಸಲಾಗುತ್ತದೆ. ಅಂತಹ ಶಕುನವನ್ನು ಅನುಭವಿಸಿದಾಗ, ಶನಿ ಗ್ರಹದ ದುಷ್ಪರಿಣಾಮಗಳನ್ನು ನಿವಾರಿಸಲು ದೇವರಿಗೆ ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವುದು, ದೀಪ ಬೆಳಗುವುದು ಇತ್ಯಾದಿ ಮಾಡಲಾಗುತ್ತದೆ.
Chanakya Niti: ಸಿನಿಮಾಕ್ಕಾಗಲಿ, ಓದುವುದಕ್ಕಾಗಲಿ ಜೊತೆಗೊಬ್ಬರಿದ್ದರೆ ಚೆಂದ!
ಮತ್ತೊಂದು ನಂಬಿಕೆ ಪ್ರಕಾರ ಬೆಕ್ಕು ರಾಹು(Rahu)ವಿನ ವಾಹನ. ರಾಹುವು ಒಂದು ಕ್ಷುದ್ರ ಗ್ರಹ. ಅದು ನಮ್ಮ ವಿರುದ್ಧವಿದ್ದಾಗ ಸಾಕಷ್ಟು ಕಷ್ಟನಷ್ಟಗಳನ್ನೇ ಉಂಟು ಮಾಡುತ್ತದೆ. ಹೀಗಾಗಿ, ಬೆಕ್ಕನ್ನು ಅಪಶಕುನ ಎನ್ನುವವರೂ ಇದ್ದಾರೆ.
ಶುರುವಾಗಿದ್ದು ಹೀಗೆ..
ಆದರೆ, ನಿಜವೆಂದರೆ ಬೆಕ್ಕು ಕೆಟ್ಟದ್ದು, ದಾರಿಗಡ್ಡ ಬಂದರೆ ಅಪಶಕುನ ಎಂಬ ನಂಬಿಕೆ ಶುರುವಾದದ್ದು ಹೀಗೆ.. ಹಿಂದೆಲ್ಲ ಎತ್ತಿನ ಗಾಡಿ(cart)ಗಳಲ್ಲಿ, ಕುದುರೆಯ ಮೇಲೆ ದೂರದೂರುಗಳಿಗೆ ಸಾಗಬೇಕಿತ್ತು. ಹೆಚ್ಚು ದೂರವಲ್ಲದಿದ್ದರೂ, ಇವಿದ್ದ ವೇಗಕ್ಕೆ ರಾತ್ರಿ ಹೊತ್ತಿನ ಪ್ರಯಾಣವೂ ಸಾಮಾನ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಬೆಕ್ಕು ದಾರಿಗಡ್ಡ ಬಂದಾಗ ಕತ್ತಲೆಯಲ್ಲಿ ಅದರ ಕಣ್ಣುಗಳು ವಿಚಿತ್ರವಾಗಿ ಹೊಳೆಯುತ್ತಿದ್ದವು. ಇದಕ್ಕೆ ಬೆಕ್ಕಿನ ಕಣ್ಣಿನಲ್ಲಿರುವ ವಿಶೇಷ ರೆಟಿನಾ ಪದರ ಕಾರಣ. ಈ ಹೊಳಪನ್ನು ನೋಡಿ ಬೆದರುತ್ತಿದ್ದ ಕುದುರೆಗಳು, ಎತ್ತುಗಳು ಬೆದರುತ್ತಿದ್ದವು. ಅವು ಅಡ್ಡಾದಿಡ್ಡಿ ಓಡಲು ಶುರು ಮಾಡಿ ಅಪಘಾತಗಳಾಗುತ್ತಿದ್ದವು. ಹೀಗೆ ಬಹಳಷ್ಟು ಅಪಘಾತಗಳಾಗುತ್ತಲೇ ಬೆಕ್ಕು ದಾರಿಗಡ್ಡ ಬಂದರೇ ಅಪಶಕುನ ಎಂಬ ನಂಬಿಕೆ ಬೆಳೆದು ಬಂತು.
ಇದಲ್ಲದೇ ಬೆಕ್ಕು ಅಡ್ಡ ಬಂದಾಗ ನಿಂತು ಹೋಗುವ ವಿಚಾರ ಶುರುವಾಗಿದ್ದೂ ಹೀಗೆಯೇ- ಬೆಕ್ಕು, ಹುಲಿ, ಚಿರತೆ, ಮುಂತಾದವೆಲ್ಲ ಒಂದೇ ಜಾತಿಗೆ ಸೇರಿದವು. ಹಿಂದೆಲ್ಲ ಹೀಗೆ ಗಾಡಿಯಲ್ಲೋ, ಕುದುರೆಯಲ್ಲೋ ಕತ್ತಲೆಯಲ್ಲಿ ಸಾಗುವಾಗ ಬೆಕ್ಕು ಎಂದುಕೊಂಡು ಮುಂದೆ ಸಾಗಿದಾಗ ಅದಾವುದೋ ಈ ವರ್ಗದ ಕಾಡುಪ್ರಾಣಿಯಾಗಿ ಮೈ ಮೇಲೆರಗಿದ ಪ್ರಸಂಗಗಳು ಬಹಳ ನಡೆದಿವೆ. ಹಾಗಾಗಿ, ದೂರದಲ್ಲಿ ಬೆಕ್ಕು ಕಂಡಾಗ ಸುಮ್ಮನೆ ಸದ್ದು ಮಾಡದೆ ನಿಂತರೆ, ತಮ್ಮಿರುವನ್ನು ಮುಚ್ಚಿಟ್ಟರೆ ಅದು ಹುಲಿಯೋ, ಚಿರತೆಯೋ ಆಗಿದ್ದರೆ ಕೊಂಚ ಕ್ಷಣದಲ್ಲಿ ಅವು ಕಣ್ಮರೆಯಾದ ನಂತರ ಪ್ರಯಾಣ ಮುಂದುವರೆಸುವುದು ಕ್ಷೇಮ ಎಂಬ ಭಾವನೆ ಇತ್ತು. ಈ ಸಂದರ್ಭದಲ್ಲಿ ತಮ್ಮನ್ನು ದಾಟಿ ಹೋದವರ ಮೇಲೆ ಅವು ಎರಗಿದ್ದರಿಂದ ತಾವು ಬಚಾವಾದ ಘಟನೆಗಳೂ ಇದ್ದವು. ಹಾಗಾಗಿ, ಬೆಕ್ಕು ಅಡ್ಡ ಬಂದಾಗ ಮತ್ತೊಬ್ಬರು ಮುಂದೆ ಹೋಗಲು ಬಿಟ್ಟು ತಾವು ನಂತರ ಹೋಗುವ ಅಭ್ಯಾಸ ಬೆಳೆದು ಬಂತು. ಈಗಲೂ ಇದರ ಹಿಂದಿನ ಕಾರಣ ಗೊತ್ತಿಲ್ಲದೆ ಮೂಢನಂಬಿಕೆಯಿಂದ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
Sawan Shivratri 2022: ಆಷಾಢ ಶಿವರಾತ್ರಿ ಬಹಳ ವಿಶೇಷ.. ಯಾವಾಗ?
ಇಷ್ಟೇ ಅಲ್ಲ..
ಮತ್ತೂ ಒಂದು ಕಾರಣವಿದೆ.. ಬಹಳ ಹಿಂದಿನಿಂದಲೂ ಬೆಕ್ಕುಗಳನ್ನು ಮನೆಯಲ್ಲಿ ಸಾಕಲಾಗುತ್ತಿತ್ತು. ಅದೇ ಸಮಯದಲ್ಲಿ ಆಗೆಲ್ಲ ಪ್ರತಿ ಮನೆಯಲ್ಲೊಬ್ಬರು ದೇಶಸೇವೆಗಾಗಿ ರಾಜನ ಬಳಿ ಯೋಧರಾಗಿ ಸೇರಿಕೊಳ್ಳಬೇಕಿತ್ತು. ಬಹುತೇಕ ಮನೆಗಳಲ್ಲಿ ಕೇವಲ ಹೆಂಡತಿ ಮಕ್ಕಳಿರುತ್ತಿದ್ದರು. ರಾಜ ಅಥವಾ ಮತ್ತಿನ್ಯಾರೋ ಬೇಟೆಗಾಗಿ ತೆರಳಿದಾಗ ಬೆಕ್ಕು ದಾರಿಯಲ್ಲಿ ಕಂಡಿತೆಂದರೆ ಅದು ಜನವಸತಿ ಪ್ರದೇಶವೆಂಬ ಸಂದೇಶ ಅವರಿಗೆ ಸಿಗುತ್ತಿತ್ತು. ಅಲ್ಲಿ ಬೇಟೆಯಾಡಲು ಯಾವ ಪ್ರಾಣಿಯೂ ಸಿಗದು ಎಂಬುದು ತಿಳಿಯುತ್ತಿತ್ತು. ಮತ್ತು ಕೇವಲ ಹೆಂಗಸರು ಮಕ್ಕಳಿರುತ್ತಿದ್ದ ಪ್ರದೇಶಗಳಿಗೆ ಹಾಗೆ ನುಗ್ಗಿ ಹೋಗುವುದು ಸಂಭಾವಿತನವುಳ್ಳವರು ಮಾಡುವ ಕೆಲಸವೂ ಆಗಿರಲಿಲ್ಲ. ಈ ಕಾರಣದಿಂದ ಬೆಕ್ಕು ಕಂಡ ಕೂಡಲೇ ಆ ಸ್ಥಳದಿಂದ ಮರಳುತ್ತಿದ್ದರು.
ಇದೇ ಕಾರಣಕ್ಕೋ ಏನೋ ಈ ನಂಬಿಕೆಗಳು ಕೇವಲ ಭಾರತಕ್ಕೆ ಸೀಮಿತವಲ್ಲ, ಜಗತ್ತಿನ ಬಹುತೇಕ ದೇಶದಲ್ಲಿವೆ.