ಗಣೇಶನಿಗೆ ನಮಿಸಿ ಯಾವುದೇ ಕಾರ್ಯ ಕೈಗೊಂಡರೂ ಅದು ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ನಂಬಿಕೆ ಹಿಂದು ಧರ್ಮಿಯರದ್ದು. ಇದೇ ಕಾರಣಕ್ಕೆ ಗಣೇಶನಿಗೆ ಪ್ರಥಮ ಪೂಜೆ,ಮೊದಲ ನಮಸ್ಕಾರ. ಗಣೇಶ ಖುಷಿ, ಸಮೃದ್ಧಿ ಹಾಗೂ ನೆಮ್ಮದಿಯ ಸಂಕೇತ ಕೂಡ. ಇದೇ ಕಾರಣಕ್ಕೆ ಪ್ರತಿ ಮನೆಯಲ್ಲಿ ಗಣೇಶನ ಫೋಟೋವಂತೂ ಇದ್ದೇಇರುತ್ತೆ. ಕೆಲವು ಮನೆಗಳಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಮನೆಗೆ ತಂದು ಪ್ರತಿಷ್ಠಾಪಿಸಿ, ಪೂಜಿಸಿ ಆ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡೋ ಸಂಪ್ರದಾಯವಿದೆ.ಆದ್ರೆ ಬಹುತೇಕರಿಗೆ ಗಣೇಶ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿಡಬೇಕು ಎಂಬುದು ತಿಳಿದಿರೋದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ಗಣೇಶನನ್ನು ಮನೆಯ ಕೆಲವು ಭಾಗಗಳಲ್ಲಿಟ್ಟರೆ ಮಾತ್ರ ಶುಭ ಫಲಗಳು ದೊರೆಯಲು ಸಾಧ್ಯ. ಹಾಗಾದ್ರೆ ಗಣೇಶ ವಿಗ್ರಹಕ್ಕೆ ಸಂಬಂಧಿಸಿರುವ ವಾಸ್ತು ನಿಯಮಗಳೇನು?

ಶ್ರೀಕೃಷ್ಣ ಈ ಫೋಟೋಗಳ ತನ್ನಿ ವಾಸ್ತು ದೋಷ ನಿವಾರಸಿಕೊಳ್ಳಿ..!

ಗಣೇಶನಿಗೆ ಇದೇ ಸೂಕ್ತ ಸ್ಥಳ
ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿಡಬೇಕು. ಅದ್ರಲ್ಲೂ ಗಣೇಶ ವಿಗ್ರಹವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡೋದು ಅತ್ಯಂತ ಶುಭದಾಯಕ. ಪುರಾಣಗಳ ಪ್ರಕಾರ ಶಿವ ಉತ್ತರ ದಿಕ್ಕಿನಲ್ಲಿ ನೆಲೆಸಿರೋ ಕಾರಣ ಗಣೇಶನ ವಿಗ್ರಹವನ್ನು ಈ ದಿಕ್ಕಿಗೆ ಮುಖ ಮಾಡಿಟ್ಟರೆ ಶುಭ ಫಲಗಳು ಸಿಗುತ್ತವೆ. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನಿಡಬಾರದು. ಇನ್ನು ಟಾಯ್ಲೆಟ್ ಅಥವಾ ಬಾತ್‍ರೂಮ್‍ಗೆ ಅಟ್ಯಾಚ್ ಆಗಿರೋ ಗೋಡೆಯಲ್ಲಿ ಗಣೇಶನ ಫೋಟೋ ತೂಗು ಹಾಕೋದು ಅಥವಾ ಗಣೇಶನ ವಿಗ್ರಹವನ್ನು ಗೋಡೆಗೆ ತಾಗಿಸಿಡೋದು ಮಾಡ್ಬಾರ್ದು. ಮೆಟ್ಟಿಲುಗಳ ಕೆಳಭಾಗದಲ್ಲಿ ಕೂಡ ಗಣೇಶನ ಮೂರ್ತಿಯನ್ನಿಡೋದು ವಾಸ್ತು ಪ್ರಕಾರ ನಿಷಿದ್ಧ. ಗಣೇಶ ಮೂರ್ತಿ ಅಥವಾ ಫೋಟೋದ ಹಿಂಭಾಗ ಮನೆಯ ಮುಖ್ಯ ದ್ವಾರಕ್ಕೆ ಮುಖ ಮಾಡಿರುವಂತೆ ಇರಿಸೋದು ಮುಖ್ಯ.

ಕುಂತ ಭಂಗಿಯ ಗಣಪನನ್ನೇ ತನ್ನಿ
ಮನೆಯಲ್ಲಿ ಪೂಜಿಸಲು ಕುಳಿತ ಅಥವಾ ಲಲಿತಾಸನ ಭಂಗಿಯಲ್ಲಿರೋ ಗಣೇಶನ ಮೂರ್ತಿ ಅಥವಾ ಫೋಟೋ ಸೂಕ್ತ. ಕುಳಿತ ಭಂಗಿಯಲ್ಲಿರೋ ಗಣೇಶನನ್ನು ಪೂಜಿಸೋದ್ರಿಂದ ಆತ ಸದಾ ಆ ಮನೆಯಲ್ಲಿ ನೆಲೆಸುತ್ತಾನೆ ಎನ್ನುತ್ತದೆ ವಾಸ್ತುಶಾಸ್ತ್ರ. ಕುಳಿತ ಭಂಗಿಯಲ್ಲಿರೋ ಗಣೇಶ ಶಾಂತಿ ಹಾಗೂ ನೆಮ್ಮದಿಯ ಸಂಕೇತವಾಗಿದ್ದಾನೆ. ಹೀಗಾಗಿ ಕುಳಿತ ಭಂಗಿಯ ಗಣೇಶ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತಾನೆ. 

ಸೊಂಡಿಲಿನ ದಿಕ್ಕಿಗೂ ಮಹತ್ವವಿದೆ
ಗಣೇಶನ ಸೊಂಡಿಲು ಯಾವ ದಿಕ್ಕಿನಲ್ಲಿದೆ ಅನ್ನೋದರ ಆಧಾರದಲ್ಲಿ ವಿವಿಧ ಅರ್ಥಗಳು ಹಾಗೂ ಪರಿಣಾಮಗಳನ್ನು ವಾಸ್ತುಶಾಸ್ತ್ರ ವಿವರಿಸುತ್ತದೆ. ಎಡ ಭಾಗಕ್ಕೆ ಮುಖ ಮಾಡಿರೋ ಸೊಂಡಿಲಿರೋ ಗಣೇಶನನ್ನು ಮನೆಯಲ್ಲಿ ಪೂಜಿಸೋದು ಉತ್ತಮ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆಯಂತೆ. ಬಲಭಾಗಕ್ಕೆ ಮುಖ ಮಾಡಿರೋ ಸೊಂಡಿಲು ಹೊಂದಿರೋ ಗಣೇಶನನ್ನು ಸಿದ್ಧಿ ವಿನಾಯಕ ಎನ್ನುತ್ತಾರೆ. ಇಂಥ ಗಣೇಶನ ವಿಗ್ರಹವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೂಜಿಸಬೇಕು. ಇನ್ನು ಆಫೀಸ್‍ನಲ್ಲಿ ನೀವು ಗಣೇಶನ ವಿಗ್ರಹವನ್ನಿಡಲು ಬಯಸಿದರೆ ನಿಂತ ಭಂಗಿಯಲ್ಲಿರೋ ಗಣೇಶನನ್ನೇ ಆಯ್ಕೆ ಮಾಡಿ. ನಿಂತ ಭಂಗಿಯ ಗಣೇಶನ ಮೂರ್ತಿ ಕೆಲಸದ ಸ್ಥಳದಲ್ಲಿ ಉತ್ಸಾಹ ಹಾಗೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು.

ಯಾವ ಬಣ್ಣದ ಗಣೇಶ ಓಕೆ?
ಜೀವನದಲ್ಲಿ ಶಾಂತಿ, ಖುಷಿ ಹಾಗೂ ಸಮೃದ್ಧಿ ಬಯಸೋರು ಬಿಳಿ ಬಣ್ಣದ ಗಣೇಶ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿಡೋದು ಸೂಕ್ತ. ಸ್ವ ಪ್ರಗತಿಯ ಬಗ್ಗೆ ಹೆಚ್ಚು ಯೋಚಿಸೋ ವ್ಯಕ್ತಿಗಳು ಕುಂಕುಮ ಬಣ್ಣದ ಗಣೇಶನನ್ನು ಆರಾಧಿಸೋದು ಒಳ್ಳೆಯದು. ಕುಂಕುಮ ಬಣ್ಣದ ಗಣೇಶ ವಿಗ್ರಹ ಮನೆಗೆ ಶುಭದಾಯಕ ಎನ್ನುತ್ತದೆ ವಾಸ್ತುಶಾಸ್ತ್ರ.

ಮೂಷಿಕ, ಮೋದಕದ ಬಗ್ಗೆಯೂ ಗಮನವಿರಲಿ
ಮೂಷಿಕ ಗಣೇಶನ ವಾಹನವಾದ್ರೆ, ಮೋದಕ ಆತನ ಇಷ್ಟದ ತಿನಿಸು. ಹೀಗಾಗಿ ಗಣೇಶ ಮೂರ್ತಿಯನ್ನು ಖರೀದಿಸುವಾಗ ಇವೆರಡೂ ಆ ಮೂರ್ತಿ ಅಥವಾ ಫೋಟೋದ ಭಾಗವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಮನೆಯಲ್ಲಿಟ್ಟು ಪೂಜಿಸೋ ಗಣೇಶನ ಮೂರ್ತಿ ಅಥವಾ ಫೋಟೋದಲ್ಲಿ ಇವೆರಡೂ ಇರೋದು ಮುಖ್ಯ.

ವಾಸ್ತು ದೋಷ; ಫೆಂಗ್ ಶುಯ್‌ನಲ್ಲಿದೆ ಪರಿಹಾರ

ಎಷ್ಟು ಮೂರ್ತಿಗಳನ್ನು ಮನೆಯಲ್ಲಿಡಬಹುದು?
ಇಂಥದೊಂದು ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡೋದು ಸಹಜ. ಈ ಪ್ರಶ್ನೆಗೆ ವಾಸ್ತುಶಾಸ್ತ್ರದಲ್ಲಿ ಉತ್ತರವಿದೆ. ಎಷ್ಟು ಗಣೇಶನ ಮೂರ್ತಿ ಅಥವಾ ಫೋಟೋಗಳನ್ನು ಮನೆಯಲ್ಲಿಡಬಹುದು ಎನ್ನೋದು ವೈಯಕ್ತಿಕ ಆಯ್ಕೆ ವಿಚಾರವಾಗಿದ್ರೂ ಒಂದೇ ಗಣೇಶ ಮೂರ್ತಿಯನ್ನು ಮನೆಯಲ್ಲಿಡೋದು ಸೂಕ್ತ. ವಾಸ್ತುತಜ್ಞರ ಪ್ರಕಾರ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗಣೇಶ ಮೂರ್ತಿಗಳನ್ನು ಮನೆಯಲ್ಲಿಡೋದ್ರಿಂದ ರಿದಿ ಸಿದ್ಧಿ ಬೇಸರಗೊಳ್ಳುತ್ತಾರೆ. ಇದ್ರಿಂದ ಅವರ ಶಕ್ತಿಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ.