2020ಕ್ಕೆ ನಿಮ್ಮ ಅದೃಷ್ಟ ಖುಲಾಯಿಸಲು ಏನು ಮಾಡಬೇಕು ಗೊತ್ತಾ?
ಹೊಸ ವರ್ಷ ಅದೃಷ್ಟವನ್ನು ಹೊತ್ತು ತರುತ್ತದೆ ಎಂಬ ನಿರೀಕ್ಷೆ ಸಹಜ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ನೀವು ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ.
ಹೊಸ ವರ್ಷ ಅದೃಷ್ಟವನ್ನೇ ಹೊತ್ತು ತರಲಿ ಎಂಬುದು ಎಲ್ಲರ ಪ್ರಾರ್ಥನೆಯೂ ಆಗಿದೆ. ಅದೃಷ್ಟ ಎನ್ನುವುದು ನಮ್ಮ ಕೈಯಲ್ಲಿಲ್ಲ ನಿಜ. ಆದರೆ, ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಅದೃಷ್ಟವನ್ನು ಆಹ್ವಾನಿಸಲು ಸಾಧ್ಯವಿದೆ. 2020 ಅದೃಷ್ಟದ ವರ್ಷವಾಗಬೇಕೆಂದರೆ ವಾಸ್ತು ಪ್ರಕಾರ ಏನೆಲ್ಲ ಮಾಡಬೇಕು ಗೊತ್ತಾ?
ಮುಖ್ಯದ್ವಾರದಲ್ಲಿ ಹೀಗೆ ಮಾಡಿ: ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಸುಖ ಹಾಗೂ ಸಮೃದ್ಧಿ ಯಾವಾಗಲೂ ಮುಖ್ಯದ್ವಾರದ ಮೂಲಕವೇ ಪ್ರವೇಶಿಸುತ್ತದೆ. ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಲಕ್ಷ್ಮೀ ಮುಖದ್ವಾರದ ಮೂಲಕ ಮನೆಯೊಳಗೆ ಬರುತ್ತಾಳೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಮನೆಯ ಮುಖದ್ವಾರದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಅಗತ್ಯ. ಮುಖ್ಯದ್ವಾರದ ಮೇಲೆ ಓಂ, ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ಅದೇರೀತಿ ಗಣೇಶನ ಫೋಟೋವನ್ನು ಹಾಕಿ.
ಜೇಬಿನಲ್ಲಿ ಈ ವಸ್ತುಗಳಿದ್ದರೆ ಅದೃಷ್ಟವೋ ಅದೃಷ್ಟ
ಲಾಫಿಂಗ್ ಬುದ್ಧನನ್ನು ಮನೆಗೆ ತನ್ನಿ: ಚೈನೀಸ್ ವಾಸ್ತುಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧ ಶುಭಕಾರಕ ಹಾಗೂ ಸಮೃದ್ಧಿಯನ್ನು ಹೊತ್ತು ತರುವವನಾಗಿದ್ದಾನೆ. ಹೊಸ ವರ್ಷ ನಿಮ್ಮ ಬದುಕಿನಲ್ಲಿ ಅದೃಷ್ಟವನ್ನು ಹೊತ್ತು ತರಲು ಲಾಫಿಂಗ್ ಬುದ್ಧನನ್ನು ಮನೆಗೆ ತನ್ನಿ. ಇದನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಪ್ರತಿಷ್ಠಾಪಿಸುವುದರಿಂದ ನಿಮಗೆ ಹೆಚ್ಚಿನ ಯಶಸ್ಸು ಸಿಗುತ್ತದೆ.
ಮನೆಯನ್ನು ಸ್ವಚ್ಛಗೊಳಿಸಿ: ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಗಾಗಿ ಮನೆಯನ್ನು ಹೇಗೆ ಸ್ವಚ್ಛಗೊಳಿಸುತ್ತೀರೋ ಹಾಗೆಯೇ ಹೊಸ ವರ್ಷದ ಆಗಮನಕ್ಕೂ ಮುನ್ನ ಮನೆಯನ್ನು ಸ್ವಚ್ಛ ಮಾಡಿ. ಮನೆ ಸ್ವಚ್ಛವಿದ್ದಾಗ ಮನಸ್ಸೂ ಕೂಡ ಕೆಟ್ಟ ಯೋಚನೆಗಳಿಂದ ಮುಕ್ತವಾಗಿರುತ್ತದೆ. ಸ್ವಚ್ಛತೆ ಮನೆಯೊಳಗೆ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತದೆ.
ಗಿಡವೊಂದನ್ನು ಮನೆಗೆ ತನ್ನಿ: ಹೊಸ ವರ್ಷಕ್ಕೆ ತುಳಸಿ ಅಥವಾ ಮನಿ ಪ್ಲ್ಯಾಂಟ್ ಅನ್ನು ಮನೆಗೆ ತನ್ನಿ. ತುಳಸಿ ಗಿಡ ನಕಾರಾತ್ಮಕ ಶಕ್ತಿಗಳು ದೂರ ಮಾಡುತ್ತದೆ. ಜೊತೆಗೆ ಮನೆಮಂದಿಗೆ ಆರೋಗ್ಯ ಹಾಗೂ ನೆಮ್ಮದಿಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಮನಿ ಪ್ಲ್ಯಾಂಟ್ ನಿಮ್ಮ ಆದಾಯವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗುತ್ತದೆ. ಮನಿ ಪ್ಲ್ಯಾಂಟ್ ತಂದರಷ್ಟೇ ಸಾಲದು, ಅದನ್ನು ನೀವು ಎಷ್ಟು ಚೆನ್ನಾಗಿ ಪೋಷಿಸುತ್ತೀರಿ ಎಂಬುದರ ಆಧಾರದಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ.
ಹ್ಯಾಂಡ್‍ಬ್ಯಾಗ್ ಬಣ್ಣದಲ್ಲಿದೆ ನಿಮ್ಮ ಲಕ್, ಖರೀದಿಸುವಾಗ ನೆನಪಿರಲಿ ಜನ್ಮ ಸಂಖ್ಯೆ
ಉಪಯೋಗಕ್ಕೆ ಬಾರದ ವಸ್ತುಗಳನ್ನು ಎಸೆಯಿರಿ: ಹೊಸ ವರ್ಷದ ಆಗಮನಕ್ಕೂ ಮುನ್ನ ಮನೆಯಲ್ಲಿರುವ ಪ್ರಯೋಜನಕ್ಕೆ ಬಾರದ ವಸ್ತುಗಳನ್ನು ಹೊರಗೆ ಎಸೆಯಿರಿ. ಇದರಿಂದ ಮನೆಯಲ್ಲಿನ ಅನಗತ್ಯ ಹೊರೆ ಕಡಿಮೆಯಾಗುತ್ತದೆ.
ದೇವರ ಕೋಣೆ ಸ್ಥಾನ ಹೀಗಿರಲಿ: ಮನೆಯಲ್ಲಿ ದೇವರ ಕೋಣೆಯಿರುವ ದಿಕ್ಕು ಕೂಡ ನೆಮ್ಮದಿ ಹಾಗೂ ಸಮೃದ್ಧಿಯನ್ನು ನಿರ್ಧರಿಸುತ್ತದೆ. ಹೀಗಾಗಿ ನಿಮ್ಮ ಮನೆಯ ದೇವರ ಕೋಣೆ ಪೂರ್ವ ದಿಕ್ಕಿನಲ್ಲಿರದಿದ್ದರೆ ಹೊಸ ವರ್ಷಕ್ಕೂ ಮುನ್ನ ಅದು ಪೂರ್ವದಲ್ಲಿರುವಂತೆ ಕ್ರಮ ಕೈಗೊಳ್ಳಿ. ವಾಸ್ತು ಪ್ರಕಾರ ದೇವರ ಕೋಣೆ ಪೂರ್ವ ದಿಕ್ಕಿನಲ್ಲಿದ್ದರೆ ಆ ಮನೆಗೆ ಹೆಚ್ಚಿನ ಶ್ರೇಯಸ್ಸು ಸಿಗುತ್ತದೆ. ದೇವರ ಕೋಣೆಯನ್ನು ಪ್ರತಿದಿನ ಸ್ವಚ್ಛ ಮಾಡಿ ಪೂಜೆ ಮಾಡಬೇಕು. ಮನೆಯ ಮುಂದಿರುವ ತುಳಸಿ ಗಿಡಕ್ಕೆ ಪ್ರತಿದಿನ ಬೆಳಗ್ಗೆ ನೀರು ಎರೆಯಲು ಮರೆಯಬೇಡಿ.
ಸದ್ದು ಮಾಡುವ ಬಾಗಿಲುಗಳನ್ನು ಸರಿಪಡಿಸಿ: ಮನೆಯಲ್ಲಿನ ಯಾವುದೇ ಬಾಗಿಲನ್ನು ಹಾಕುವಾಗ ಅಥವಾ ತೆರೆಯುವಾಗ ಕರ್ಕಶ ಶಬ್ದ ಬರುತ್ತಿದ್ದರೆ ಅದನ್ನು ಕೂಡಲೇ ಸರಿಪಡಿಸಿ. ಬಾಗಿಲು ಶಬ್ದ ಮಾಡುವುದು ಶುಭ ಸೂಚಕವಲ್ಲ.
ಒಣಗಿದ ಗಿಡಗಳನ್ನು ತೆಗೆಯಿರಿ: ಮನೆಯಲ್ಲಿ ಹೂ ಕುಂಡಗಳನ್ನಿಟ್ಟಿದ್ದರೆ ಅದರಲ್ಲಿ ಯಾವುದಾದರೂ ಗಿಡ ಒಣಗಿದ್ದರೆ ಕೂಡಲೇ ಅದನ್ನು ಕಿತ್ತು ಎಸೆಯಿರಿ.
ಅತಿಥಿಗಳ ಕೋಣೆ ಉತ್ತರ ಅಥವಾ ದಕ್ಷಿಣಕ್ಕಿರಲಿ: ಮನೆಗೆ ಬರುವ ಅತಿಥಿಗಳೊಂದಿಗೆ ನಿಮ್ಮ ಬಾಂಧವ್ಯ ಬಲಗೊಳ್ಳಲು ಅವರು ತಂಗುವ ಕೋಣೆ ಮನೆಯ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.
ಮನೆ ಶಿಫ್ಟಿಂಗ್ ತಲೆನೋವಿಗೆ ಪ್ಲ್ಯಾನಿಂಗ್ಯೇ ರಾಮಬಾಣ!
ಔಷಧಗಳನ್ನು ಉತ್ತರದಲ್ಲಿಡಿ: ಆರೋಗ್ಯದ ದಿಕ್ಕು ಉತ್ತರ. ಹೀಗಾಗಿ ಉತ್ತರ ದಿಕ್ಕಿನಲ್ಲಿ ಔಷಧಗಳನ್ನಿಡುವುದರಿಂದ ನಿಮ್ಮ ರೋಗ ಬೇಗ ಗುಣಮುಖವಾಗುತ್ತದೆ.
ದಕ್ಷಿಣಕ್ಕೆ ಕಾಲು ಹಾಕಿ ಮಲಗಬೇಡಿ: ಮನೆಯ ಯಾವುದೇ ಸದಸ್ಯನು ದಕ್ಷಿಣಕ್ಕೆ ಕಾಲು ಹಾಕಿ ಮಲಗಬಾರದು. ಇದರಿಂದ ಗಾಬರಿಯಾಗುವ ಜೊತೆಗೆ ನಿದ್ರೆ ಸರಿಯಾಗಿ ಬಾರದಿರುವ ಸಾಧ್ಯತೆ ಇರುತ್ತದೆ. ನಿದ್ರೆ ಸರಿಯಾಗಿಲ್ಲವೆಂದರೆ ಮನಸ್ಸು ಕೂಡ ಪ್ರಶಾಂತವಾಗಿರುವುದಿಲ್ಲ. ಹೀಗಾಗಿ ಮನೆಯಲ್ಲಿ ಗಲಾಟೆ ನಡೆದು ನೆಮ್ಮದಿ ಹಾಳಾಗುವ ಸಾಧ್ಯತೆಯಿರುತ್ತದೆ.