ಮನೆಯಲ್ಲಿರೋ ರಾಶಿ ರಾಶಿ ಸಾಮಾನು, ಕ್ಲೀನ್ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್
ಕಸ ತುಂಬಿದಂತೆ ಗೊಂದಲಮಯವಾಗಿರುವ ಮನೆಯನ್ನು ನೀಟ್ ಆಂಡ್ ಕ್ಲೀನ್ ಮಾಡುವುದು ಹೇಗೆ?
ಮನೆ ಕ್ಲೀನಾಗಿದ್ದರೆ ಒಂಥರಾ ನೆಮ್ಮದಿ. ಮಂಚದ ಮೇಲೆ ಮಡಚಿಡದ ಬೆಡ್‌ಶೀಟು, ಶೂರ್ಯಾಕ್‌ನಲ್ಲಿಡದ ಚಪ್ಪಲಿಗಳು, ಮೂರು ದಿನದಿಂದ ಗುಡಿಸದ ಕಸ, ಒಗೆಯದೆ ಎಲ್ಲೆಲ್ಲೋ ಬಿಸಾಕಿದ ಬಟ್ಟೆ, ಬುಕ್ ರ್ಯಾಕ್‌ನಲ್ಲೇ ಮೆಡಿಸಿನ್‌ಗಳು- ಈ ಥರಾ ಎಲ್ಲ ಇದ್ದರೆ ತಲೆ ಕೆಟ್ಟು ಮೊಸರು ಗಡಿಗೆಯಾಗಿಬಿಡುತ್ತದಲ್ಲವೇ? ಮನೆ ಶುಚಿಯಾಗಿ, ಕಡಿಮೆ ವಸ್ತುಗಳಿಂದ ಕೂಡಿದ್ದು ನಳನಳಿಸುತ್ತಾ ಇರಬೇಕು ಎಂದು ಎಲ್ಲರಿಗೂ ಅನಿಸುತ್ತಿರುತ್ತದೆ. ಹಾಗಾದರೆ ಇದನ್ನು ಮಾಡೋದು ಹೇಗೆ? ಅನೇಕರಿಗೆ ಅದೇ ಸಮಸ್ಯೆ. ಏನು ಮಾಡುವುದು, ಎಲ್ಲಿಂದ ಶುರು ಮಾಡುವುದು ಎಂಬಷ್ಟರಲ್ಲಿಯೇ ದಿನಗಳು ಉರುಳಿಹೋಗುತ್ತವೆ. ಕಸದ ಮೇಲೆ ಕಸ ಗುಡ್ಡೆ ಬೀಳುತ್ತದೆ.
ಇದಕ್ಕೆ ಮರಿ ಕೋಂಡೋ ಎಂಬಾಕೆ ಒಂದು ಮೆಥಡ್ ಕಂಡು ಹಿಡಿದಿದ್ದಾಳೆ. ಇದು ಮೂಲತಃ ಒಂದು ಜಪಾನೀ ಪರಿಕಲ್ಪನೆ. ಅದರ ಹೆಸರು ʼಕೋನ್‌ಮಾರಿʼ (KonMari). ಅಂದರೆ ಕಡಿಮೆ ವಸ್ತುಗಳನ್ನು ಇಟ್ಟುಕೊಂಡು, ಅವುಗಳನ್ನು ಅಚ್ಚುಕಟ್ಟಾಗಿ ಕೈಗೆ ಸಿಗುವಂತೆ ಇಟ್ಟುಕೊಂಡು ಜೀವಿಸುವುದು ಎಂದರ್ಥ. ಈ ಕಲ್ಪನೆಯನ್ನು ಆಕೆ ಇನ್ನಷ್ಟು ಡೆವಲಪ್ ಮಾಡಿ ಎಲ್ಲರಿಗೂ ಕೊಟ್ಟಳು. ಈಗ ಇದೊಂದು ಜನಪ್ರಿಯ ಪರಿಕಲ್ಪನೆ.
ಹಾಗಾದರೆ ಇದನ್ನು ಮಾಡುವುದು ಹೇಗೆ? ಇರುವುದು ಎರಡೇ ಎರಡು ಸೂತ್ರಗಳು: ಒಂದು, ಕೋಣೆಯ ನಂತರ ಕೋಣೆ ಸ್ವಚ್ಛ ಮಾಡುವುದಲ್ಲ. ಕ್ಯಾಟಗರಿ ಅಥವಾ ವಿಭಾಗವಾರು ಸ್ವಚ್ಛ ಮಾಡಿ. ಎರಡನೇ ಸೂತ್ರ: ಈ ವಸ್ತು ನನ್ನಲ್ಲಿ ಸಂತೋಷ ತುಂಬುತ್ತದೆಯಾ ಎಂದು ಕೇಳಿಕೊಳ್ಳಿ. ಇಲ್ಲವೇ? ಹಾಗಾದರೆ ಅದರಿಂದ ಕಳಚಿಕೊಳ್ಳಿ. ಇದು ಮುಖ್ಯವಾದುದು.
ಈ ಕೋನ್‌ಮಾರಿ ಮೆಥಡ್ ಅನ್ನು ನಿಮ್ಮ ಜೀವನದಲ್ಲಿ ಮನೆಗೆ ಮಾತ್ರವಲ್ಲ, ಎಲ್ಲ ವಿಷಯಗಳಿಗೂ ಅನ್ವಯಿಸಬಹುದು ಎಂದೂ ಅರ್ಥ ಮಾಡಿಕೊಳ್ಳಿ! ಅಲ್ಲೇ ಅದರ ಸ್ವಾರಸ್ಯ ಇರುವುದು. ಬಟ್ಟೆ ಮಡಚಿಡುವುದರಿಂದ ಹಿಡಿದು, ನಿಮ್ಮ ಸಂಬಂಧಗಳವರೆಗೆ ಎಲ್ಲವನ್ನೂ ಇದರಲ್ಲಿ ಅನ್ವಯಿಸಿಕೊಳ್ಳಬಹುದು.
ಕೋನ್‌ಮಾರಿ ಮೆಥಡ್‌ನ ಬೇಸಿಕ್ ಗೈಡ್‌ಲೈನುಗಳು ಇಲ್ಲಿವೆ:
1. ಸ್ವಚ್ಛ ಮಾಡುವುದಕ್ಕೆ ಶಪಥ ಮಾಡಿ. ನೀವು ಕಮಿಟ್ ಆಗದಿದ್ದರೆ, ನಿಮಗೆ ನೀವೇ ಸವಾಲು ಹಾಕಿಕೊಳ್ಳದಿದ್ದರೆ, ನೀವು ಏನೂ ಮಾಡಲು ಸಾಧ್ಯವಿಲ್ಲ.
2. ನಿಮ್ಮದೊಂದು ಮಾದರಿ ಲೈಫ್‌ಸ್ಟೈಲ್ ಕಲ್ಪಿಸಿಕೊಳ್ಳಿ. ಸ್ವಚ್ಛವಾದ, ಹೆಚ್ಚು ಸ್ಪೇಸ್ ಇರುವ, ಕಡಿಮೆ ಕಸ ಇರುವ ಮನೆಯಲ್ಲಿದ್ದಾಗ ನಿಮಗೆ ಆಗುವ ಆನಂದವನ್ನು ಕಲ್ಪಿಸಿಕೊಳ್ಳುವುದು.
3. ಅನಗತ್ಯವಾದುದನ್ನು ಹೊರಗೆಸೆಯುವತ್ತ ಮೊದಲು ಲಕ್ಷ್ಯ ಕೊಡಿ. ಅವು ನಿಮ್ಮ ಉದ್ದೇಶವನ್ನು ಈಗಾಗಲೇ ಪೂರೈಸಿವೆ. ಅವುಗಳನ್ನು ಹೊರಗೆ ಕಳಿಸುವ ಮೊದಲು ಅವುಗಳಿಗೆ ಒಂದು ಥ್ಯಾಂಕ್ಸ್ ಹೇಳಿ.
4. ವಿಭಾಗವಾರು ವರ್ಗೀಕರಿಸಿ. ಕೋಣೆವಾರು ವರ್ಗೀಕರಿಸಬೇಡಿ. ಅಂದರೆ ವಸ್ತುಗಳು ನಿಮಗೆ ಯಾವುದು ಯಾವಾಗ ಬೇಕೋ ಆಗ ಕೈಗೆ ದಕ್ಕುವಂತಿರಬೇಕು. ಆಗ ಸಮಯ ಹಾಳಾಗುವುದಿಲ್ಲ.
5. ಇದು ನನ್ನಲ್ಲಿ ಸಂತೋಷ ಉಕ್ಕಿಸುತ್ತದೆಯೇ ಎಂದು ಕೇಳಿಕೊಳ್ಳಿ. ಇದು ನನ್ನಲ್ಲಿ ಇರಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲು ಇದಕ್ಕಿಂತ ಉತ್ತಮ ಸೂತ್ರ ಇನ್ನೊಂದಿಲ್ಲ.
ಮೇರಿ ಕೋಂಡೋ ನಿಗದಿಪಡಿಸಿದ ಐದು ವರ್ಗಗಳು ಹೀಗಿವೆ:
ಬಟ್ಟೆಗಳು
ಪುಸ್ತಕಗಳು
ಪೇಪರ್‌ಗಳು
ಕೊಮೊನೊ (ಮಿಸಲೇನಿಯಸ್, ಇತರೆ)
ಭಾವನಾತ್ಮಕ ವಸ್ತುಗಳು (Emotional Items)
ಜೋಡಿ ಮೀನನ್ನು ಮನೆಯಲ್ಲಿಡಿ, ವಿಪತ್ತಿಗೆ ಹೇಳಿ ಗುಡ್ ಬೈ, ಸಂಪತ್ತು ಸಮೃದ್ಧಿ!
ಮಾಡಬೇಕಾದುದು ಹೀಗೆ: ಮೊದಲು ಒಂದೊಂದೇ ವಿಭಾಗ ಆರಿಸಿಕೊಳ್ಳಿ. ಮೊದಲು ಬಟ್ಟೆ, ನಂತರ ಪುಸ್ತಕ ಹೀಗೆ. ಎಲ್ಲವನ್ನೂ ರಾಶಿ ಹಾಕಿಕೊಳ್ಳಿ. ಒಂದೊಂದನ್ನೇ ನೋಡುತ್ತಾ ಬನ್ನಿ. ಇದು ನನಗೆ ಇಷ್ಟವೇ, ಇದರಿಂದ ನನ್ನಲ್ಲಿ ಆನಂದ ಉಂಟಾಗುವುದೇ ಎಂಬ ಪ್ರಶ್ನೆ ಕೇಳಿಕೊಳ್ಳಿ. ʼಇಲ್ಲʼ ಎಂಬ ಉತ್ತರ ಬಂದರೆ ನಿರ್ದಾಕ್ಷಿಣ್ಯವಾಗಿ ನೀವು ಅದನ್ನು ಎಸೆಯಬೇಕು ಎಂದರ್ಥ.
ಈ ಮೆಥಡ್ ಅನುಸರಿಸುತ್ತಿದ್ದಂತೆಯೇ ನಿಮಗೇ ಅರ್ಧಕ್ಕರ್ಧ ಕೆಲಸ ಹಗುರ ವಾಗಿಬಿಡುತ್ತದೆ. ಬೇಡವಾದ ವಸ್ತುಗಳ ರಾಶಿಯನ್ನು ನೀವೇ ನೋಡುತ್ತೀರಿ. ನಂತರ ಅದನ್ನು ಕ್ಲೀನ್ ಮಾಡುವುದು ಸುಲಭ ಅಲ್ಲವೇ.
ಪಾಸಿಟಿವ್ ಆಗಿ ಚಿಂತಿಸಿ. ʼಬೇಡವಾದುದನ್ನು ಎಸೆಯಬೇಕುʼ ಎಂದು ಚಿಂತಿಸುವುದು ಬದಲು, ʼಬೇಕಾದುದನ್ನು ಮಾತ್ರ ಇಟ್ಟುಕೊಳ್ಳಬೇಕುʼ ಎಂದು ಯೋಚಿಸಿ. ಇದು ಆನಂದದ ಮೂಲ ಅಂತಾಳೆ ಮೇರಿ ಕೋಂಡೋ.
Vaastu Tips: ಮಲಗೋದಕ್ಕಷ್ಟೇ ಅಲ್ಲ, ಊಟ ಮಾಡೋದಕ್ಕೂ ಸೂಕ್ತ ದಿಕ್ಕು ಮುಖ್ಯ