ಕೆಲವು ದಶಕಗಳಿಂದ ಹೊಸದಾಗಿ ಕಟ್ಟಿಸಿದ ಮತ್ತು ಈಗ ಕಟ್ಟಿಸುತ್ತಿರುವ ಮನೆಗಳೆಲ್ಲವೂ ತಾರಸಿ ಮನೆಗಳು.ಹಂಚಿನ ಮನೆಗಳು ತೀರಾ ಕಡಿಮೆ. ನಾವು ಸಾಲ ಮಾಡಿ ತಾರಸಿ ಮನೆ ಕಟ್ಟಿಸಿ ಸುಮಾರು 7-8 ವರ್ಷಗಳಾದವು.

ಮನೆ ಕಟ್ಟಿಸಿದ ಹೊಸತರಲ್ಲಿ ಬೇಸಿಗೆಯಲ್ಲಿ ತಾರಸಿಯ ತಾಪಮಾನದ ಸಮಸ್ಯೆ ಪ್ರಾರಂಭವಾಯಿತು. ಸುತ್ತಲೂ ಗಿಡ / ಮರ ಗುಡ್ಡಗಳಿಲ್ಲದ ಬಯಲು ಪ್ರದೇಶದಲ್ಲಿ ನಾವು ಮನೆ ಕಟ್ಟಿಸಿದ್ದವು. ಇದರಿಂದ ಬೇಸಿಗೆಯಲ್ಲಿ ಮನೆಯೊಳಗಿನ ತಾಪಮಾನ ತುಂಬಾ ಜಾಸ್ತಿಯಾಗಿತ್ತು. ಫ್ಯಾನ್ ಹಾಕಿದರೂ  ಬಿಸಿ ಗಾಳಿಯೇ ಬರುತ್ತಿತ್ತು. ಮನೆ ಮೇಲೆ ಟ್ರಸ್ಸ್ ಹಾಕಿಸಲು ಅಂದಾಜು 2 ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡಬೇಕಿತ್ತು.

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

ನಾವು ಸಾಲ ಮಾಡಿ ಮನೆ ಕಟ್ಟಿದ ಕಾರಣ 2 ಲಕ್ಷ ಖರ್ಚು ಹೊಂದಿಸುವುದು ನಮ್ಮಿಂದ ಅಸಾಧ್ಯವಾಗಿತ್ತು. ತಾರಸಿಯನ್ನು ತಂಪಾಗಿರಿಸಲು ಇತರ ಮಾರ್ಗೋಪಾಯಗಳ ಬೆಗ್ಗೆ ಕೆಲವರಲ್ಲಿ ವಿಚಾರಿಸಿದೆವು. ಒಬ್ಬರು ತಾರಸಿಯಲ್ಲಿ ನೀರು ತುಂಬಿಸಿದರೆ ಪ್ರಯೋಜನವಾದೀತು ಎಂದರು. ಆದರೆ ಹಾಗೆ ಮಾಡಿದಲ್ಲಿ ನಿರಂತರ ನೀರಿನ ಸಂಪರ್ಕದಿಂದ ಕಾಂಕ್ರೀಟಿನ ಬಾಳಿಕೆಯ ಮೇಲೆ ಪರಿಣಾಮ ಬೀಳಬಹುದು ಎಂಬುದಾಗಿಯೂ ಎಚ್ಚರಿಸಿದ್ದರು.

ಇನ್ನೊಬ್ಬರ ಸಲಹೆಯ ಮೇರೆಗೆ ಮನೆಯ ಮೇಲೆ ಪೂರ್ತಿ ಅಡಿಕೆ ಸೋಗೆಯನ್ನು ಹಾಕಿದೆವು. ಸ್ವಲ್ಪ ಮಟ್ಟಿಗೆ ಪ್ರಯೋಜನ ವಾಯಿತು. ಆದರೆ ಮಳೆಗಾಲದಲ್ಲಿ ಅದರ ಕಸದಿಂದ ಪೈಪ್ ಗಳು ಬ್ಲಾಕ್ ಆಗಿ ಅವುಗಳನ್ನು ಸ್ವಚ್ಛಗೊಳಿಸಲು ಹರಸಾಹಸ ಪಡಬೇಕಾಯಿತು. ಪುನಃ ನಂತರದ ವರ್ಷಕ್ಕೆ ಶೇಡ್ ನೆಟ್ ನ ಪ್ರಯೋಗ ಮಾಡಿದೆವು. ತಾರಸಿಯ ನಾಲ್ಕು ಮೂಲೆಗಳಿಗೆ ಕಬ್ಬಿಣದ ರೋಡ್ಗಳನ್ನು ಫಿಕ್ಸ್ ಮಾಡಿ ಅವುಗಳಿಗೆ ಶೇಡ್ ನೆಟ್ ಗಳನ್ನು ಕಟ್ಟಿದೆವು. ಆದರೆ ಗಾಳಿಯ ರಭಸಕ್ಕೆ ನೆಟ್‌ಗಳು ಹರಿದು ಕಬ್ಬಿಣದ ರಾಡ್ಗಳು ಬೆಂಡ್ ಆದವು. ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿದೆವು. ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯೊಂದಿಗೆ ನಮ್ಮ ತಲೆಯೂ ಬಿಸಿಯಾಗತೊಡಗಿತು.

ಸೋಂಕು ಯಾವ ದಿಕ್ಕಿನಿಂದ ಪ್ರವೇಶಿಸುತ್ತೆ? ನಿಮ್ಮ ಮನೆ ಸೇಫಾ?

ಈ ಪರಿಸ್ಥಿತಿಯು  ನಮ್ಮನ್ನು ಮತ್ತೊಂದು ಪ್ರಯೋಗಕ್ಕೆ ಪ್ರೇರೇಪಿಸಿತು. ಇದರಲ್ಲಿ ನಾವು ಸಫಲರಾಗಿ ಇಂದಿನವರೆಗೂ ಅತ್ಯಂತ ಕಡಿಮೆ ಖರ್ಚಿನ ಈ ಪ್ರಯೋಗದಿಂದ ತುಂಬಾ ಪ್ರಯೋಜನ ಪಡೆದಿದ್ದೇವೆ. ತಾರಸಿ ಮೇಲೆ 1 ಫೀಟ್ ಎತ್ತರದ ಮನೆ ಕಟ್ಟಲು ಉಪಯೋಗಿಸುವ ಕಲ್ಲು / ಇಟ್ಟಿಗೆಗಳನ್ನು ನೇರವಾಗಿ ನಿಲ್ಲಿಸಿ ಅವುಗಳ ಮೇಲೆ ಅಡಿಕೆ ಮರದ ಸಲಕ್ಕೆಗಳನ್ನು ಜೋಡಿಸುವುದು. ತಾರಸಿಯ ಸುತ್ತಲೂ 1 ರಿಂದ 1.5 ಅಡಿಯಷ್ಟು ನಡೆದಾಡಲು ಜಾಗ ಬಿಟ್ಟು ಉಳಿದ ಭಾಗವನ್ನು ಹಳೆ ಸಿಮೆಂಟ್ ಶೀಟ್ಗಳಿಂದ ಮುಚ್ಚುವುದು.

ಸಿಮೆಂಟ್ ಶೀಟ್‌ಗಳ ಬದಲು ಹಳೆ ಡಬ್ಬಿ ಶೀಟ್ ಅಥವಾ ಫೈಬರ್ ಶೀಟ್‌ಗಳನ್ನು ಉಪಯೋಗಿಸಬಹುದು. ಇದರಲ್ಲಿ ಅಡಕವಾಗಿರುವ  ತತ್ವ ಇಷ್ಟೇ. ಸೂರ್ಯನ ಕಿರಣಗಳು ನೇರವಾಗಿ ಸ್ಲಾಬ್ ಮೇಲೆ ಬೀಳುವುದನ್ನು ತಪ್ಪಿಸುವುದು. ಮತ್ತು ಸುತ್ತಲೂ ಬಿಟ್ಟಿರುವ 1 ಅಡಿ ಗ್ಯಾಪ್ ನಲ್ಲಿ ಬಿಸಿ ಗಾಳಿಯು ಹೊರಗೆ ಹೋಗುವುದು. ಈ ಸಿಮೆಂಟ್ ಶೀಟ್‌ಗಳು ಸ್ಲಾಬ್ ನಿಂದ ಕನಿಷ್ಠ 1 ಅಡಿ ಎತ್ತರದಲ್ಲಿ ನಿಲ್ಲಬೇಕು. ಇದರ ಜೊತೆಗೆ ಶೇಡ್ ನೆಟ್ ಗಳನ್ನು ಮನೆಯ ಕಿಟಕಿ ಬಾಗಿಲುಗಳ ಮೇಲೆ ಮಾಡಿಗೆ ಸಮಾನಾಂತರ ವಾಗಿ (ಕರ್ಟನ್ ರೀತಿ ಅಲ್ಲ) ಕಟ್ಟಿ ಅತಿಯಾದ ಸೂರ್ಯನ ಶಾಖದಿಂದ ತಪ್ಪಿಸಿ ಮೆನೆ ಹಳೆಯ ಹಂಚಿನ ಮನೆಯಂತೆ ತಂಪಾಗಿರಿಸಲು ಸಾಧ್ಯವಾಗಿದೆ. 

-ಈಶ್ವರ ಪ್ರಸಾದ ನೀರ್ಕಜೆ 
(Ishwar.Prasad76@gmail.com)