ಬೀಚ್‌ನಲ್ಲಿ ಹೊಸ ವರ್ಷ ಆಚರಿಸುವವರಿಗೆ ವಾರ್ನಿಂಗ್, ಡಿ.31ರ ಸಂಜೆ 6ರ ಬಳಿಕ ಸಮುದ್ರಕ್ಕಿಳಿಯುವಂತಿಲ್ಲ, ಜಿಲ್ಲಾಧಿಕಾರಿ ಈ ಖಡಕ್ ಆದೇಶ ನೀಡಿದ್ದಾರೆ. ಬೀಚ್‌ನಲ್ಲಿ ಯಾವುದೇ ಸಮಾರಂಭ, ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ ಎಂದಿದೆ. 

ಕಾರವಾರ (ಡಿ.30) ಹೊಸ ವರ್ಷಸಂಭ್ರಮಾಚರಣೆ ಶುರುವಾಗಿದೆ. ನಾಳೆ (ಡಿ.31) ಸಂಜೆಯಿಂದ ಸೆಲೆಬ್ರೇಷನ್ ಮುಗಿಲು ಮುಟ್ಟಲಿದೆ. ಹಲವು ಪ್ರವಾಸಿ ತಾಣಗಳ ಭರ್ತಿಯಾಗಿದೆ. ಪಬ್, ಬಾರ್, ನೈಟ್ ಕ್ಲಬ್ ಸೇರಿದಂತೆ ಎಲ್ಲೆಡೆ ಪಾರ್ಟಿ ಜೋರಾಗಿದೆ. ಇನ್ನು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸಿಗರಿಂದ ಭರ್ತಿಯಾಗಿದೆ. ಕರಾವಳಿಯಲ್ಲಿ ಸಮುದ್ರ ಕಿನಾರೆಯಲ್ಲಿ ಹೊಸ ವರ್ಷ ಆಚರಿಸಲು ಬಯಸುವವರಿಗೆ ಇದೀಗ ವಾರ್ನಿಂಗ್ ನೀಡಲಾಗಿದೆ. ಡಿಸೆಂಬರ್ 31ರಂದು ಸಂಜೆ 6 ಗಂಟೆ ಬಳಿಕ ಸಮುದ್ರಕ್ಕೆ ಯಾರು ಇಳಿಯುಂತಿಲ್ಲ. ಬೀಚ್‌ನಲ್ಲಿ ಯಾವುದೇ ಹೊಸ ವರ್ಷದ ಸಂಭ್ರಮ ಆಚರಿಸುವಂತಿಲ್ಲ. ಈ ಆದೇಶವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ

ಹೊಸ ವರ್ಷದ ಸಂಭ್ರಮದಲ್ಲಿ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ನೀಡಿದ್ದಾರೆ. ಡಿ. 31ರಂದು ಸಂಜೆ 6 ಗಂಟೆಯ ನಂತರ ಯಾರೂ ಕೂಡಾ ಸಮುದ್ರಕ್ಕೆ ಇಳಿಯಬಾರದು. ಬೀಚ್‌ಗಳಲ್ಲಿ ಯಾವುದೇ ರೀತಿಯ ಸಮಾರಂಭ ಆಯೋಜಿಸಲು ಯಾರಿಗೂ ಅನುಮತಿಯಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾತ್ರಿ 12.30 ರ ನಂತರ ಬೀಚ್ ಗಳಲ್ಲಿ ಯಾರೂ ಉಳಿಯದೇ ಮನೆಗಳಿಗೆ ತೆರಳಬೇಕು ಎಂದು ಖಡಕ್ ಆದೇಶ ನೀಡಿದ್ದಾರೆ.

ಯಾವೆಲ್ಲಾ ಬೀಚ್ ಬಳಿ ಎಚ್ಚರ

ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಜಿಲ್ಲೆಯ ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಗೋಕರ್ಣ ಕಡಲತೀರ, ಓಂ ಕಡಲತೀರ, ಕುಡ್ಲೆ ಕಡಲತೀರ , ಹಾಫ್ ಮೂನ್, ಪ್ಯಾರಾಡೈಸ್ ಬೀಚ್, ಕಾಸರಕೋಡ ಕಡಲತೀರ, ಅಪ್ಸರಕೊಂಡ ಕಡಲತೀರ, ಮುರ್ಡೇಶ್ವರ ಕಡಲತೀರಗಳಲ್ಲಿ ಹೆಚ್ಚಿನ ಲೈಫ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಪ್ರವಾಸಿ ತಾಣಗಳಾದ ಯಾಣ, ಬನವಾಸಿ, ಶಿರಸಿ, ಸಹಸ್ರಲಿಂಗದಲ್ಲಿ ಪ್ರವಾಸಿ ಮಿತ್ರರ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ಎಲ್ಲೆಡೆ ರಾತ್ರಿ 12.30 ರ ನಂತರ ಎಲ್ಲಾ ಚಟುಚಟಿಕೆ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ತಡ ರಾತ್ರಿವರೆಗೆ ಪಾರ್ಟಿ ಮಾಡಲು ಬಾರ್, ಪಬ್ , ರೆಸಾರ್ಟ್ ತೆರೆದಿಡುವಂತಿಲ್ಲ. ಪ್ರವಾಸಿಗರಿಗೆ, ಸಂಭ್ರಮಾಚರಣೆ ಮಾಡುವವರಿಗೆ ಅವಕಾಶ ನೀಡುವಂತಿಲ್ಲ. ಕಟ್ಟು ನಿಟ್ಟಾಗಿ ಆದೇಶ ಪಾಲಿಸಲು ಸೂಚಿಸಲಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಪಾರ್ಟಿ ಮಾಡುವುದಕ್ಕೂ ಅವಕಾಶವಿಲ್ಲ. ರಸ್ತೆ ಬದಿಗಳಲ್ಲಿ ಮದ್ಯ ಪಾನ, ತೀರ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಸೇರಿದಂತೆ ಯಾವುದೇ ಪಾರ್ಟಿ ಮಾಡುವಂತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ

ಹೊಸ ವರ್ಷದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಸೇರುವ ಕಡೆ ಹೆಚ್ಚಿನ ಮುತುವರ್ಜಿ ವಹಿಸಲು ಸೂಚಿಸಿದ್ದಾರೆ. ಇದೇ ವೇಳೆ ಯಾವುದೇ ಸಂದರ್ಭದಲ್ಲಿ ಪೊಲೀಸ್ ನೆರವು ನೀಡಲು ಸದಾ ಸಿದ್ದವಾಗಿರುವಂತೆ ಅಲರ್ಟ್ ನೀಡಲಾಗಿದೆ.