ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಡಿಸೆಂಬರ್ 31ರಂದು ಮದ್ಯ ಮಾರಾಟದ ಅವಧಿಯನ್ನು ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಿದ್ದಾರೆ. ಈ ನಿಯಮವು CL-5 ಲೈಸೆನ್ಸ್ ಹೊಂದಿರುವ ಖಾಸಗಿ ಪಾರ್ಟಿಗಳಿಗೂ ಅನ್ವಯವಾಗಲಿದೆ.
ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ.
24 ಗಂಟೆಗಳ ಕಾಲ ಮದ್ಯ ಪಾರ್ಟಿಗೆ ಬ್ರೇಕ್
ಈ ಆದೇಶವು ಸಾಮಾನ್ಯ ಮದ್ಯ ಮಾರಾಟ ಕೇಂದ್ರಗಳ ಜೊತೆಗೆ CL-5 ಲೈಸೆನ್ಸ್ ಹೊಂದಿರುವವರಿಗೂ ಅನ್ವಯವಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಖಾಸಗಿ ಪಾರ್ಟಿಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ತಾತ್ಕಾಲಿಕ ಮದ್ಯ ವಿತರಣೆಗಾಗಿ CL-5 ಲೈಸೆನ್ಸ್ ಪಡೆಯಲಾಗುತ್ತದೆ. ಈ ಲೈಸೆನ್ಸ್ ಹೊಂದಿದ್ದರೆ 24 ಗಂಟೆಗಳ ಕಾಲ ಮದ್ಯ ಪಾರ್ಟಿ ನಡೆಸಬಹುದೆಂಬ ಅಭಿಪ್ರಾಯ ಇದ್ದರೂ, ಹೊಸ ವರ್ಷಾಚರಣೆಯ ದಿನಕ್ಕೆ ಸಂಬಂಧಿಸಿದಂತೆ ಇದಕ್ಕೂ ಕೂಡ ಸ್ಪಷ್ಟ ಸಮಯ ಮಿತಿಯನ್ನು ವಿಧಿಸಲಾಗಿದೆ. CL-5 ಲೈಸೆನ್ಸ್ ಹೊಂದಿರುವವರಿಗೂ ಕೂಡ 1 ಗಂಟೆಗೆ ಡೆಡ್ ಲೈನ್ ನೀಡಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಲೈಸೆನ್ಸ್ ಪಡೆದ ಖಾಸಗಿ ಪಾರ್ಟಿಗಳಿಗೂ ಒಂದೇ ನಿಯಮ
ನಗರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ, CL-5 ಲೈಸೆನ್ಸ್ ಪಡೆದ ಖಾಸಗಿ ಪಾರ್ಟಿಗಳಿಗೂ ಡಿಸೆಂಬರ್ 31ರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ಮದ್ಯ ಸರಬರಾಜು ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಧ್ಯರಾತ್ರಿ 1 ಗಂಟೆಯ ನಂತರ ಯಾವುದೇ ರೀತಿಯ ಮದ್ಯ ಮಾರಾಟ ಅಥವಾ ವಿತರಣೆ ನಡೆಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನಗರ ಪೊಲೀಸ್ ಆಯುಕ್ತರು ನೀಡಿದ್ದಾರೆ.
ಒಟ್ಟಾರೆ, ಹೊಸ ವರ್ಷಾಚರಣೆಯ ಸಂಭ್ರಮವನ್ನು ಸುರಕ್ಷಿತವಾಗಿ ಮತ್ತು ನಿಯಮಬದ್ಧವಾಗಿ ಆಚರಿಸಲು, ಮದ್ಯ ಮಾರಾಟಕ್ಕೆ ಸಮಯ ಮಿತಿ ನಿಗದಿಪಡಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.


