ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತಗಳು ಆತಂಕ ಸೃಷ್ಟಿಸಿವೆ. ಕುಮಟಾದ ಶಾಲೆಯೊಂದರ ಬಳಿ ಗುಡ್ಡ ಕುಸಿದರೂ, ಸಮಯಪ್ರಜ್ಞೆಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಇನ್ನೊಂದೆಡೆ, ಗೋಕರ್ಣ-ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದ್ದು, ಈ ಘಟನೆಗಳು ಶಿರೂರು ದುರಂತದ ಕಹಿ ನೆನಪನ್ನು ಮರುಕಳಿಸುವಂತೆ ಮಾಡಿವೆ.

ಕಾರವಾರ/ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತದ ಘಟನೆಗಳು ಜನರನ್ನು ಆತಂಕಕ್ಕೆ ತಳ್ಳಿವೆ. ಶಿರೂರು ದುರಂತದ ಕಹಿ ನೆನಪುಗಳು ಹಸಿಯಾಗಿರುವಾಗಲೇ, ಈಗ ಕುಮಟಾ ಮತ್ತು ಗೋಕರ್ಣ ಭಾಗದಲ್ಲಿ ನಡೆದ ಘಟನೆಗಳು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿವೆ.

1000ಕ್ಕೂ ಹೆಚ್ಚು ಜೀವಗಳು ಸೇಫ್

ಕುಮಟಾ ಪಟ್ಟಣದ 'ಕರ್ನಾಟಕ ಪಬ್ಲಿಕ್ ಸ್ಕೂಲ್'ನಲ್ಲಿ ಇಂದು ಪವಾಡವೊಂದು ನಡೆದಿದೆ. ಶಾಲೆಯ ಪಕ್ಕದಲ್ಲೇ ಇದ್ದ ಗುಡ್ಡ ಕುಸಿದು ಬೃಹತ್ ಕಲ್ಲುಬಂಡೆಗಳು ಶಾಲಾ ಕಟ್ಟಡದ ಮೇಲೆ ಅಪ್ಪಳಿಸಿವೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ಇಂದು ಬೆಳಿಗ್ಗೆಯಿಂದಲೇ ಮಳೆ ಅಬ್ಬರಿಸುತ್ತಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯದ ಅಂಚಿನಲ್ಲಿದ್ದ ಕೊಠಡಿಗಳಿಂದ ಮಕ್ಕಳನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಲಾಗಿತ್ತು.

ಮಕ್ಕಳನ್ನು ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಗುಡ್ಡದ ಮೇಲಿಂದ ಭಾರಿ ಗಾತ್ರದ ಬಂಡೆಗಳು ಶಾಲೆಯ ಕಟ್ಟಡಕ್ಕೆ ಅಪ್ಪಳಿಸಿದವು. ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದಂತಾಗಿದೆ.

ಗೋಕರ್ಣ-ತದಡಿ ರಸ್ತೆ ಸಂಪರ್ಕ ಕಡಿತ

ಇನ್ನೊಂದೆಡೆ, ಕುಮಟಾ ತಾಲೂಕಿನ ಗೋಕರ್ಣ-ತದಡಿ ರಸ್ತೆಯಲ್ಲೂ ಭಾರಿ ಗುಡ್ಡ ಕುಸಿತ ಸಂಭವಿಸಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶಿರೂರು ದುರಂತದ ಭೀತಿ ಇನ್ನೂ ಮಾಸಿಲ್ಲ

ಪ್ರಸ್ತುತ ನಡೆಯುತ್ತಿರುವ ಈ ಗುಡ್ಡ ಕುಸಿತದ ಘಟನೆಗಳು 2024ರ ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ನಡೆದ ಭೀಕರ ದುರಂತವನ್ನು ನೆನಪಿಸುತ್ತಿವೆ. ಅಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದ್ದ ಗುಡ್ಡ ಕುಸಿದು ಕೇರಳದ ಲಾರಿ ಚಾಲಕ ಅರ್ಜುನ್ ಸೇರಿದಂತೆ 11 ಮಂದಿ ಬಲಿಯಾಗಿದ್ದರು. ಐಆರ್‌ಬಿ (IRB) ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಈ ದುರಂತಕ್ಕೆ ಕಾರಣ ಎಂಬ ಆಕ್ರೋಶ ಇಂದಿಗೂ ಜಿಲ್ಲೆಯ ಜನರಲ್ಲಿದೆ. ಈಗ ಮತ್ತೆ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತವಾಗುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ಮತ್ತು ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಜನರಲ್ಲಿ ನಡುಕ ಹುಟ್ಟಿಸಿದೆ. ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುತ್ತಿರೋದ್ರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.