ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..
ಹೊನ್ನಾವರ: ತಲತಲಾಂತರಗಳಿಂದ ಅರಣ್ಯ ನಂಬಿ ಬದುಕುತ್ತಿರುವ ಬಡ ಕುಟುಂಬಗಳ ಮೇಲೆ ಈಗ ಅರಣ್ಯ ಇಲಾಖೆಯ 'ತೆರವು' ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಡಿನಬಾಳ ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ 26 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಅರಣ್ಯವಾಸಿಗಳು ದಿಕ್ಕುತೋಚದಂತಾಗಿದ್ದಾರೆ.
ಬೆಟ್ಟದ ಮೇಲಿನ ಬದುಕಿಗೆ ಈಗ ಸಂಚಕಾರ!
ಹೊನ್ನಾವರ ತಾಲೂಕಿನ ಮೇಲಿನ ಹಡಿನಬಾಳ ಅರಣ್ಯ ವ್ಯಾಪ್ತಿಯ ಮೂಡ್ಕಣಿಯಲ್ಲಿರುವ ಸುಮಾರು 15 ಗುಂಟೆ ಅರಣ್ಯ ಪ್ರದೇಶದಲ್ಲಿ 26 ಕುಟುಂಬಗಳು ವಾಸವಾಗಿವೆ. ತಗ್ಗು ಪ್ರದೇಶದಲ್ಲಿ ವಾಸಿಸಲು ಹತ್ತಾರು ಸಮಸ್ಯೆಗಳಿದ್ದ ಕಾರಣ, ಈ ಕುಟುಂಬಗಳು ಕೊಂಚ ಎತ್ತರದ ಪ್ರದೇಶವಾದ ಬೆಟ್ಟದ ಮೇಲೆ ಮನೆ ಮಾಡಿಕೊಂಡಿದ್ದವು. ಆದರೆ, ಈಗ ಈ ಜಾಗವನ್ನು ಅರಣ್ಯ ಅತಿಕ್ರಮಣ ಎಂದು ಪರಿಗಣಿಸಿರುವ ಇಲಾಖೆ, ತಕ್ಷಣವೇ ಮನೆಗಳನ್ನು ತೆರವುಗೊಳಿಸಲು ಆದೇಶಿಸಿದೆ.
ಇಲಾಖೆಯ ಖಡಕ್ ಎಚ್ಚರಿಕೆ
ಅತಿಕ್ರಮಿತ ಜಾಗದಲ್ಲಿರುವ ಕಟ್ಟಡ ಹಾಗೂ ಬೆಳೆಗಳನ್ನು ನಿವಾಸಿಗಳೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಬೇಕು. ಒಂದು ವೇಳೆ ನಿಗದಿತ ಸಮಯದೊಳಗೆ ತೆರವು ಮಾಡದಿದ್ದರೆ, ಇಲಾಖೆಯೇ ಜಪ್ತಿ ಮಾಡಿ ತೆರವು ಕಾರ್ಯ ನಡೆಸಲಿದೆ ಎಂದು ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆತಂಕದಲ್ಲಿರುವ ನಿವಾಸಿಗಳು ಯಾರು?
ಅರಣ್ಯ ಇಲಾಖೆಯ ಈ ನೋಟಿಸ್‌ನಿಂದಾಗಿ ಕೆರವಳ್ಳಿಯ ಕೇಶವ ನಾಯ್ಕ ಸೇರಿದಂತೆ ಜಾಕಿ ಬಾಂವ ಅಡಾ, ಧರ್ಮ ಮಂಜುನಾಥ ನಾಯ್ಕ ಮರಬಳ್ಳಿ, ಶಾಂತಾನಂದ ಅನಂತ ಶಾನಭಾಗ, ಸಂತೋಷ ನರಸಿಂಹ ಶಾನಭಾಗ, ಬೇತಾಳ ನರಸಿಂಹ ಶಾನಭಾಗ, ರಾಮಚಂದ್ರ ಗಣಪ ನಾಯ್ಕ, ನಾರಾಯಣ ಅಮಕೂಸ ಗೌಡ, ಪ್ರಶಾಂತ ಶೇಷಗಿರಿ ನಾಯ್ಕ, ಕೇಶವ ಗಣಪಯ್ಯ ನಾಯ್ಕ, ರಾಘು ನಾರಾಯಣ ಶೆಟ್ಟಿ, ಐವಾನ ಆಶಿಸಿ ಮೆಂಡಿಸ್, ವಿನಾಯಕ ಸುಬ್ರಮಣ್ಯ ವೈದ್ಯ, ವಿಘ್ನಶ್ವರ ಸುಬ್ರಮಣ್ಯ ವೈದ್ಯ, ಪಾರ್ವತಿ ಗಜಾನನ ನಾಯ್ಕ, ವಿಲಿಯಂ ಸಂತಾನ ಮಿರಾಂಡ, ಆಶಿಸ್ ಬಾಂವ್, ದಯಾನಂದ ಈಶ್ವರ ನಾಯ್ಕ, ಶ್ರೀಧರ ಮಂಜಪ್ಪ ಮಹಾಲೆ, ಕೃಷ್ಣಪ್ಪ ಗಣಪತಿ ನಾಯ್ಕ, ಸಂತಾ ಡಿಯೋಗ ಡಯಾಸ, ದಯಾನಂದ ಧರ್ಮ ನಾಯ್ಕ, ಹನುಮಂತ ಸುಬ್ರಾಯ ನಾಯ್ಕ, ಮಹಾದೇವ ಮಂಜಪ್ಪ ಮಹಾಲೆ, ನಿತ್ಯಾನಂದ ವೆಂಕಟೇಶ ಶ್ಯಾನಭಾಗ ಹಾಗೂ ಮಾಲ್ವೇಶ್ವರ ಸಣ್ಣ ತಮ್ಮ ನಾಯ್ಕ ಎಂಬುವವರು ಅಕ್ಷರಶಃ ಕಂಗಾಲಾಗಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ
ಜುಲೈ 15ರಂದೇ ಈ ಆದೇಶ ಹೊರಡಿಸಲಾಗಿದ್ದರೂ ನಿವಾಸಿಗಳ ಕೈಗೆ ಸಿಕ್ಕಿದ್ದು ಮಾತ್ರ ಮೂರು ದಿನಗಳ ಹಿಂದೆ! ಅಂದರೆ 30 ದಿನಗಳ ಕಾಲಾವಕಾಶದಲ್ಲಿ ಈಗಾಗಲೇ 25 ದಿನಗಳು ಕಳೆದುಹೋಗಿವೆ. ಕೇವಲ 5-6 ದಿನಗಳ ಬಾಕಿ ಇರುವಾಗ ನೋಟಿಸ್ ನೀಡಿರುವುದು ಅರಣ್ಯವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಭೂಮಿ ಹಕ್ಕಿನ ಹೋರಾಟಗಾರ ಮಹೇಶ ನಾಯ್ಕ, ಜುಲೈ 15ರ ಆದೇಶವನ್ನು ತಲುಪಿಸಲು 25 ದಿನ ವಿಳಂಬ ಮಾಡಿರುವುದು ವಿಷಾದನೀಯ. ಆಗಸ್ಟ್ 14ರ ಒಳಗೆ ಒಕ್ಕಲೆಬ್ಬಿಸುವಂತೆ ಸೂಚಿಸಿರುವುದು ಅನ್ಯಾಯ. ಬದುಕು ಕಟ್ಟಿಕೊಂಡಿರುವ ಅರಣ್ಯವಾಸಿಗಳನ್ನು ಈ ರೀತಿ ಬೀದಿಗೆ ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಮನೆ ತೆರವುಗೊಳಿಸುವಂತೆ ಆದೇಶಿಸಿರುವುದು ಮಾನವೀಯತೆಯ ದೃಷ್ಟಿಯಿಂದಲೂ ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಬಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಸರ್ಕಾರದ ಕಡೆಗೆ ಮುಖ ಮಾಡಿವೆ.


