Asianet Suvarna News Asianet Suvarna News

ಕಾರವಾರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಕಾಂಗ್ರೆಸ್, ಜೆಡಿಎಸ್ ವಿರುದ್ಧ ನಳಿನ್ ವಾಗ್ದಾಳಿ

ಉತ್ತರಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾದ ಶಾಸಕಿ ರೂಪಾಲಿ ನಾಯ್ಕ್ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಲಾದೇವಿ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಾಗೂ ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶ ನಡೆಯಿತು.

BJP Vijaya Sankalpa Abhiyan in Karwar, BJP state president Nalin kumar kateel lashes out at Congress, JDS akb
Author
First Published Feb 7, 2023, 11:09 PM IST

ಕಾರವಾರ: ಚುನಾವಣೆ ಹತ್ತಿರ ಬರುತ್ತಿದ್ದು, ಆಡಳಿತ ಪಕ್ಷ ಬಿಜೆಪಿಯಿಂದ ಭರ್ಜರಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾದ ಶಾಸಕಿ ರೂಪಾಲಿ ನಾಯ್ಕ್ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಲಾದೇವಿ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಾಗೂ ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಯರ್ರಾಬಿರ್ರಿ ವಾಕ್ ಪ್ರಹಾರ ನಡೆಸಿದರು. ಬಿಜೆಪಿ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ ನೋಡಿ...

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದ್ದು, ಫೀಲ್ಡಿಗಿಳಿದು ಪ್ರಚಾರ ಕಾರ್ಯ ಪ್ರಾರಂಭಿಸಿವೆ. ಇದಕ್ಕೆ ಪೂರಕವಾಗಿ ಕಾರವಾರದ‌ (Karawara) ಮಾಲಾದೇವಿ ಮೈದಾನದಲ್ಲಿ (Maladevi ground) ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಾಗೂ ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶವನ್ನು ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)ಈ ಕಾರ್ಯಕ್ರಮವನ್ನು ದೀಪ‌ ಬೆಳಗಿಸುವ ಮೂಲಕ ಉದ್ಘಾಟಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಾಸಕರಾದ ರೂಪಾಲಿ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್,  ಡಾ.ನಿತಿನ್ ಪಿಕಳೆ, ನಾಗರಾಜ ನಾಯಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

Assembly election: ಕಲಾಪ ಬಳಿಕ 4 ದಿಕ್ಕಿನಿಂದ ಬಿಜೆಪಿ ಜನಸಂಕಲ್ಪ ಯಾತ್ರೆ!

ಈ ವೇಳೆ ಶ್ರೀರಾಮನ ಮೂರ್ತಿ, ಕೇಸರಿ ಶಾಲು ಹಾಗೂ ಗದೆಯನ್ನು ನೀಡಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಸ್ವಾಗತಿಸಲಾಯಿತು.‌ ಕಾರ್ಯಕ್ರಮದ ಅಂಗವಾಗಿ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ (Rupali Naik) ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸುಮಾರು 2000 ಜನರನ್ನು ಬಿಜೆಪಿಯ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಕೌಂಟರ್ ಮೇಲೆ ಕೌಂಟರ್ ಹೊಡೆದು ವಾಕ್ ಪ್ರಹಾರ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಯಾತ್ರೆ ಹೋಗ್ತಿದೆ, ಪಂಚರ್ ಆಗ್ತಿದೆ. ಪ್ರಜಾಧ್ವನಿ ಮಾಡ್ತಿದ್ರೂ ಅವರ ಕಾರ್ಯಕರ್ತರ ಧ್ವನಿಗಳನ್ನು ಅಡಗಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಡಿಕೆಶಿ (DKS) ಹಾಗೂ ಸಿದ್ಧರಾಮಯ್ಯ (Siddaramia) ಧ್ವನಿ ಮಾತ್ರವಿದೆ. ರಾಜ್ಯದಲ್ಲಿ ನರಹಂತಕ ಮುಖ್ಯಮಂತ್ರಿಯಾದದ್ದು ಒಬ್ಬರೇ ಸಿದ್ಧರಾಮಣ್ಣ. 24 ಹಿಂದೂ ಕಾರ್ಯಕರ್ತರ ಹತ್ಯೆಯಾದ್ರೂ ಸಿದ್ಧರಾಮಯ್ಯನವರ ಕಣ್ಣಲ್ಲಿ ನೀರು ಬಂದಿಲ್ಲ. ಪಿಎಫ್‌ಐ ಸಂಘಟನೆಗೆ ಬೆಂಬಲ ನೀಡಿ, ಹಿಂದೂಗಳ ಕೊಲೆಗೆ ಕಾರಣವಾದ್ರು.‌ ಸಿದ್ಧರಾಮಯ್ಯನವರ ಕಾಲಗಟ್ಟದಲ್ಲಿ 3000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ರು. ರೈತರಿಗೆ, ಹಿಂದೂ ರಾಷ್ಟ್ರಭಕ್ತರಿಗೆ, ಜನರಿಗೆ ಮಾತ್ರವಲ್ಲದೇ ಗಣಪತಿಯಂತಹ ಅಧಿಕಾರಿಗಳಿಗೂ  ಸುರಕ್ಷತೆ ಇರಲಿಲ್ಲ. ರಾಜ್ಯದಲ್ಲಿ ಭಯೋತ್ಪಾದನೆ ಪ್ರಾರಂಭವಾಗಿದ್ರೆ ಅದು ಕಾಂಗ್ರೆಸ್‌ನಿಂದ, ಕಾಂಗ್ರೆಸ್ ಭಯೋತ್ಪಾದಕ ಪಕ್ಷ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರಿಗೆ ನಾಚಿಗೆಯಾಗಬೇಕು, ಅವರಿಗೆ ಇಂದು ಕ್ಷೇತ್ರವೇ ಇಲ್ಲ. ಬಾದಾಮಿ ಜನ ಓಡಿಸಿದ್ದಾರೆ, ವರುಣಾ ಜನ ಜಾಡಿಸಿದ್ದಾರೆ, ಕೋಲಾರ ಜನ ಕಲ್ಲು ಹಿಡಿದು ಬರಬೇಡಿ ಅಂದಿದ್ದಾರೆ. ಶುದ್ಧ ವಿರೋಧಿಗಳಾಗಿದ್ದ ಸಿದ್ಧರಾಮಯ್ಯ ಹಾಗೂ ಕುಮಾರಣ್ಣ ಸೇರಿ ಸಮ್ಮಿಶ್ರ ಸರಕಾರ ಮಾಡಿದ್ರೂ ಸರಕಾರ ಉಳೀಲಿಲ್ಲ.‌ ಈ ರಾಜ್ಯವನ್ನು ಮೂವರು ಮುಖ್ಯಮಂತ್ರಿಗಳು ಆಳಿದ್ದಾರೆ. ಒಬ್ಬರು ಕಣ್ಣೀರ ಮುಖ್ಯಮಂತ್ರಿ( ಕುಮಾರಸ್ವಾಮಿ), ಇನ್ನೊಬ್ರು ಕಣ್ಣೀರು ಬರಿಸಿದ ಮುಖ್ಯಮಂತ್ರಿ (ಸಿದ್ಧರಾಮಯ್ಯ), ಮತ್ತೊಬ್ರು ಕಣ್ಣೀರು ಒರೆಸಿದ ಮುಖ್ಯಮಂತ್ರಿ( ಯಡಿಯೂರಪ್ಪ). ಹೋಟೆಲ್‌ನಲ್ಲಿ ಕುಳಿತುಕೊಂಡು ಆಡಳಿತ ನಡೆಸಿದ್ದರಿಂದ ಕುಮಾರ ಸ್ವಾಮಿಗೆ ಸಂವಿಧಾನ ಅರ್ಥವಾಗಿಲ್ಲ. ಇದೇ ಕಾರಣಕ್ಕೆ ಒಂದು ಸಮಾಜಕ್ಕೆ ಕೊಲೆಗಳ ಹಣೆಪಟ್ಟಿ ಕಟ್ಟಿದವರು ಕುಮಾರಸ್ವಾಮಿ. 

ದಾವಣಗೆರೆಯಲ್ಲಿ ಬಿಜೆಪಿ ರಥಯಾತ್ರೆ ಮಹಾಸಂಗಮ: ಸಿ.ಟಿ.ರವಿ

ಕುಮಾರಸ್ವಾಮಿ (kumaraswami), ಸಿದ್ಧರಾಮಯ್ಯ ಅವರ ನಾಟಕ ನೋಡಿ ಆಡಳಿತ ಪಕ್ಷದ ಶಾಸಕರು ಬಿಟ್ಟು ಬಂದರು. ಕಾಂಗ್ರೆಸ್‌ನಲ್ಲಿ ಇಬ್ಬರು ಸಿಎಂ ಆಗಲು ಪ್ಯಾಂಟ್, ಶರ್ಟ್ ಹೊಲಿಸಿದ್ದರು.‌ ಆದರೆ, ಇಂದು ಅವರ ಪ್ಯಾಂಟ್ ಹರಿಯುತ್ತಿದೆ. ಕುಕ್ಕರ್ ಬ್ಲಾಸ್ಟ್ ಆರೋಪಿ ಬಂಧನವಾದಾಗ ಡಿಕೆಶಿ ಕಣ್ಣೀರು ಹಾಕಿದ್ರು. ಅದಕ್ಕಾಗಿಯೇ ಡಿಕೆಶಿಗೆ ಬೆಳಗಾಂ ಕುಕ್ಕರ್ ಹಾಗೂ ತೀರ್ಥಹಳ್ಳಿ ಕುಕ್ಕರ್ ಮೇಲೆ ಭಾರೀ ಪ್ರೀತಿ ಅಂದಿದ್ದೆ.‌‌ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾರ್ಟಿಯಂದರೆ ಅದು ಕಾಂಗ್ರೆಸ್. ಈ ಚುನಾವಣೆ ರಾಷ್ಟ್ರಭಕ್ತ ಹಾಗೂ ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ. ಟಿಪ್ಪು ಸುಲ್ತಾನ್ ಹಾಗೂ ವೀರ ಸಾವರ್ಕರ್ ನಡುವೆ ನಡೆಯುತ್ತಿರುವ ಚುನಾವಣೆ. ಕೊರೊನಾ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi), ಸಿದ್ಧರಾಮಯ್ಯ ಲಸಿಕೆ ಹಾಕಿಕೊಳ್ಳಬೇಡಿ, ಮಕ್ಕಳಾಗಲ್ಲ ಅಂದಿದ್ರು. ಆದ್ರೆ, ರಾಹುಲ್ ಗಾಂಧಿ ಎರಡು ಡೋಸ್‌ಗಳನ್ನು ಹಾಕಿಕೊಂಡಿದ್ದಾರೆ. ಅವರಿನ್ನು ಮದುವೆಯಾಗಲ್ಲ ಎಂದು ನಿರ್ಧರಿಸಿದ್ದಾರೆ. ಯಾಕಂದ್ರೆ ಅವರಿಗೆ ಮಕ್ಕಳಗಾಲ್ಲ ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಬಿಜೆಪಿ ತತ್ವ ಸಿದ್ದಾಂತಗಳಿಗೆ ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲಿ. ನಮಗೆ ಕಾರ್ಯಕರ್ತರೇ ದೇವರು. ಈ ಬಾರಿ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ. ಹೊಸಬರು ಸೇರ್ಪಡೆಯಾದಾಗ ಹಳೇಯ ಕಾರ್ಯಕರ್ತರಿಗೆ ಮುಜುಗರವಾಗುವುದು ನಿಜ.‌ ಆದರೆ, ದೇಶ, ಪಕ್ಷ ಕಟ್ಟುವ  ಕಾರ್ಯಕ್ಕೆ ಯಾರೂ ಹಿಂದೆ ಸರಿಯಬಾರದು. ಇತಿಹಾಸ ನಿರ್ಮಾಣ ಮಾಡಲು ಎಲ್ಲರ ಸಹಕಾರ ಬೇಕು ಎಂದು ಶಾಸಕರು ಹೇಳಿದರು. 

ಒಟ್ಟಿನಲ್ಲಿ ಹೊಸ ವರ್ಷಕ್ಕೆ ಬಿಜೆಪಿ ಪ್ರಚಾರದ ಭರ್ಜರಿ ಇನ್ನಿಂಗ್ಸ್ ಪ್ರಾರಂಭಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಜಿಲ್ಲೆಯಲ್ಲಿ ಮತ್ತೆ ಪಕ್ಷದ ಬಾವುಟ ಹಾರಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಅದರೆ, ಮುಂದಿನ ದಿನಗಳಲ್ಲಿ ಜನರ ಮತ ಸೆಳೆದು ಮತ್ತೆ ಅಧಿಕಾರ ಪಡೆಯಲು ಸಫಲವಾಗುವುದೇ ಎಂದು ಕಾದು ನೋಡಬೇಕಷ್ಟೇ.

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

Follow Us:
Download App:
  • android
  • ios