ದಾವಣಗೆರೆಯಲ್ಲಿ ಬಿಜೆಪಿ ರಥಯಾತ್ರೆ ಮಹಾಸಂಗಮ: ಸಿ.ಟಿ.ರವಿ
ಮುಂಬರುವ ಚುನಾವಣೆಗೆ ಮತದಾರರ ಮನವೊಲಿಸುವ ಉದ್ದೇಶದೊಂದಿಗೆ ಆಡಳಿತಾರೂಢ ಬಿಜೆಪಿ ಇದೇ ತಿಂಗಳ ಅಂತ್ಯದಿಂದ ರಾಜ್ಯದ ನಾಲ್ಕು ಭಾಗಗಳಿಂದ ರಥಯಾತ್ರೆ ಮಾದರಿಯ ‘ವಿಜಯ ಸಂಕಲ್ಪ ಯಾತ್ರೆ’ ಆರಂಭಿಸಲಿದೆ.
ಬೆಂಗಳೂರು (ಫೆ.04): ಮುಂಬರುವ ಚುನಾವಣೆಗೆ ಮತದಾರರ ಮನವೊಲಿಸುವ ಉದ್ದೇಶದೊಂದಿಗೆ ಆಡಳಿತಾರೂಢ ಬಿಜೆಪಿ ಇದೇ ತಿಂಗಳ ಅಂತ್ಯದಿಂದ ರಾಜ್ಯದ ನಾಲ್ಕು ಭಾಗಗಳಿಂದ ರಥಯಾತ್ರೆ ಮಾದರಿಯ ‘ವಿಜಯ ಸಂಕಲ್ಪ ಯಾತ್ರೆ’ ಆರಂಭಿಸಲಿದೆ. ಮಾರ್ಚ್ ಮೂರನೇ ವಾರದ ವೇಳೆಗೆ ಈ ಯಾತ್ರೆ ದಾವಣಗೆರೆಯಲ್ಲಿ ಅಂತ್ಯಗೊಂಡು ‘ಮಹಾ ಸಂಗಮ’ ನಡೆಯಲಿದೆ. ಶುಕ್ರವಾರ ರಾತ್ರಿ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸುದ್ದಿಗಾರರಿಗೆ ವಿವರ ನೀಡಿದರು.
ಈ ವಿಜಯ ಸಂಕಲ್ಪ ಯಾತ್ರೆ ಸಲುವಾಗಿ ವಿವಿಧ ನಾಯಕರನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗುತ್ತದೆ. ಈ ನಾಲ್ಕು ತಂಡಗಳು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಪ್ರದೇಶದಲ್ಲಿ ಎರಡು ಭಾಗಗಳಾಗಿ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ವಿಧಾನಮಂಡಲದ ಅಧಿವೇಶನ ಬಳಿಕ ಯಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಇತ್ತೀಚಿನ ಆಂತರಿಕ ವಿವಿಧ ಸಮೀಕ್ಷಾ ವರದಿಗಳ ಬಗ್ಗೆ ಚರ್ಚೆಯಾಗಿದೆ. ಆ ವರದಿ ಪ್ರಕಾರ ಕರ್ನಾಟಕದಲ್ಲಿ ಮತ್ತೆ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ.
ಅಮಿತ್ ಶಾಗೆ ಸಿಡಿ ಷಡ್ಯಂತ್ರ ದಾಖಲೆ ನೀಡಿದೆ: ರಮೇಶ್ ಜಾರಕಿಹೊಳಿ
ಇದರಲ್ಲಿ ಅನುಮಾನವಿಲ್ಲ. ಅಭಿವೃದ್ಧಿ ಮತ್ತು ಸಿದ್ಧಾಂತದ ಮಂತ್ರದ ಮೂಲಕ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ರಾಜ್ಯದಲ್ಲೂ ಗುಜರಾತ್ ಪ್ರಯೋಗ ಅನುಷ್ಠಾನ: ಕಳೆದ ಗುಜರಾತ್ ಚುನಾವಣೆಯಲ್ಲಿ ಅನುಸರಿಸಿದ ಪ್ರಯೋಗವನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಲು ಕೋರ್ ಕಮಿಟಿ ಸಭೆ ನಿರ್ಧರಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.70ರಿಂದ 80ರಷ್ಟು ಮತದಾರರು ಒಂದಿಲ್ಲೊಂದು ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಅವರನ್ನು ಪಕ್ಷದ ಮತದಾರರನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಗುಜರಾತ್‌ನಲ್ಲಿ ಯಶಸ್ವಿಯಾಗಿದೆ. ಅದೇ ಪ್ರಯೋಗವನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿ.ಟಿ.ರವಿ ತಿಳಿಸಿದರು.
ರಾಮನಗರದಲ್ಲಿ ತ್ಯಾಗದ ನಾಟಕ ನಡೀತಿದೆ: ಜೆಡಿಎಸ್ ವಿರುದ್ಧ ಹರಿಹಾಯ್ದ ಸಿ.ಟಿ. ರವಿ
ಕರ್ನಾಟಕ ಸರ್ಕಾರದ ಸಚಿವರು ಮತ್ತು ಮುಖಂಡರ ನೇತೃತ್ವದ ತಂಡಗಳು ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಎಲ್‌ಇಡಿ ವ್ಯಾನ್ ಮೂಲಕ ಜನರಿಗೆ ಮನದಟ್ಟು ಮಾಡಿಕೊಡಲಾಗುವುದು ಎಂದೂ ಅವರು ಹೇಳಿದರು.