ವಿದ್ಯಾರ್ಥಿ ನನಗಿಂತ ಹೆಚ್ಚು ಕಲಿತು ಸಾಧನೆ ಮಾಡಲೆಂದು ಬಯಸುವವನು ಶಿಕ್ಷಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಕುಮಟಾ (ಸೆ.06): ಪ್ರಪಂಚದ ಯಾವುದೇ ಮೂಲೆಯಲ್ಲೂ ಸುಶಿಕ್ಷಿತ ಬದುಕು ಕಟ್ಟಿಕೊಂಡು ಜೀವನ ಸಾಧನೆ ಮಾಡುವ ಪ್ರತಿ ವ್ಯಕ್ತಿಯ ಹಿಂದೆ ಶಿಕ್ಷಕರ ಪ್ರಯತ್ನ ಮತ್ತು ಪ್ರೇರಣೆ ಇರುತ್ತದೆ. ವಿದ್ಯಾರ್ಥಿ ನನಗಿಂತ ಹೆಚ್ಚು ಕಲಿತು ಸಾಧನೆ ಮಾಡಲೆಂದು ಬಯಸುವವನು ಶಿಕ್ಷಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶಿಕಷಕ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊರತೆಯಾಗಬಾರದು ಎಂದರಲ್ಲದೇ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಹಾಗೂ ಎಲ್ಲ ಶಿಕ್ಷಕರಿಗೆ ಅಭಿನಂದಿಸಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ವರ್ಷದಿಂದ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯು ಶೈಕ್ಷಣಿಕ ಪ್ರಗತಿ ಖುಷಿ ತಂದಿದೆ. ಯಾವುದೇ ವ್ಯಕ್ತಿ ಸಮಾಜದ ಉನ್ನತ ಸ್ಥಾನಕ್ಕೆ ಏರಲು ಶಿಕ್ಷಕರ ಪ್ರೇರಣೆ ಕಾರಣ. ಮಕ್ಕಳಲ್ಲಿ ಜೀವನ ಪರಿವರ್ತನೆ ಹಾಗೂ ಸುರೂಪಗೊಳಿಸಲು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಿ, ಮಕ್ಕಳಿಗೆ ಜೀವನ ಮೌಲ್ಯಗಳ ಸಂಸ್ಕಾರ ಹಾಗೂ ನಾಗರಿಕ ಪ್ರಜ್ಞೆಯನ್ನು ರೂಢಿಸಿ ಎಂದರು. ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ಎಚ್. ನಾಯ್ಕ, ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಿದ ಕೆಲಸ ಗೌರವ ಕೀರ್ತಿಯನ್ನು ತಂದುಕೊಡುತ್ತದೆ. ಮಕ್ಕಳಲ್ಲಿ ಬೌದ್ಧಿಕ ಸಮೃದ್ಧಿ ತುಂಬುವ ಕೆಲಸವಾಗಲಿ, ಶಿಕ್ಷಕರ ಮೇಲೆ ಜವಾಬ್ದಾರಿ ಹಾಗೂ ನಿರೀಕ್ಷೆಗಳು ಯಥೇಚ್ಛವಾಗಿದೆ ಎಂದರು.
ಶಿಕ್ಷಕರ ಪರವಾಗಿ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಸದ್ಯ ಶಿಕ್ಷಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಶಾಲೆಗಳಿಗೆ ಸಾಕಷ್ಟು ಶಿಕ್ಷಕರನ್ನು ಭರ್ತಿ ಮಾಡಬೇಕು. ಪ್ರಾಥಮಿಕ ಶಾಲೆಗಳಲ್ಲಿ ಶೌಚಗ್ರಹಗಳ ಸ್ವಚ್ಛತೆಗೆ ಸಿಬ್ಬಂದಿ ಕೊಡಿ, ಮೊಟ್ಟೆ ವಿತರಣೆಯ ಸಮಸ್ಯೆ ಬಗೆಹರಿಸಿ, ಅನುದಾನ ಬಂದಿದ್ದರೂ ವರ್ಷದಿಂದ ನಿರ್ಮಾಣವಾಗದ ಜಿಲ್ಲಾ ಗುರುಭವನ ಕೂಡಲೇ ನಿರ್ಮಿಸಿಕೊಡಿ, ಎಲ್.ಬಿ. ಆನ್‌ಲೈನ್ ಸಮಸ್ಯೆ ಬಗೆಹರಿಸಿ, ಬಿಎಲ್‌ಒ ಡ್ಯೂಟಿಯಿಂದ ವಿನಾಯಿತಿ ಕೊಡಿ, ಮಳೆಯೆಂದು ಆದೇಶಿಸಿದ ರಜೆಗಳ ಹೊಂದಾಣಿಕೆಗೆ ಅಗತ್ಯವಿರುವಷ್ಟೇ ಪೂರ್ಣದಿನ ಶಾಲೆಗೆ ಅವಕಾಶಕೊಡಿ ಎಂದು ಬೇಡಿಕೆಗಳನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದೇನೆ. ಶಿಕ್ಷಕರ ಯಾವುದೇ ಸಮಸ್ಯೆ ಬಗೆಹರಿಸಲು ನಿರಂತರ ಸಹಯೋಗ ನೀಡಿದ್ದೇನೆ ಎಂದರಲ್ಲದೇ ಶಿಕ್ಷಕ ದಿನಾಚರಣೆಯ ಶುಭ ಹಾರೈಸಿದರು. ಡಯಟ್ ಪ್ರಾಚಾರ್ಯ ಎನ್. ಆರ್. ಹೆಗಡೆ ಮಾತನಾಡಿದರು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಹಬ್ಬುವಾಡ ಶಾಲೆಯ ನಾಗವೇಣಿ ಶಿವಾನಂದ ನಾಯ್ಕ, ಅಂಕೋಲಾ ಕಟ್ಟಿನಹಕ್ಕಲ ಶಾಲೆಯ ಬಾಬು ಬುದವಂತ ಗೌಡ, ಕುಮಟಾ ತಾರಿಬಾಗಿಲ ಶಾಲೆಯ ಉಷಾಬಾಯಿ ಗಣಪತಿ ನಾಯ್ಕ, ಹೊನ್ನಾವರ ಅನಂತವಾಡಿ ಕೋಟಾ ಶಾಲೆಯ ಸುನಂದಾ ಕೃಷ್ಣ ಭಟ್, ಭಟ್ಕಳ ಹಡಾಳ ಶಾಲೆಯ ಸುಮನಾ ಕೆ., ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಕಾರವಾರ ಮಾದರಿ ಶಾಲೆಯ ಮಾಲಿನಿ ಕೃಷ್ಣ ನಾಯಕ, ಅಂಕೋಲಾ ಕೇಣಿ ಮೀನುಗಾರಿಕೆ ಶಾಲೆಯ ಸಾವಿತ್ರಿ ಹಮ್ಮಣ್ಣ ನಾಯಕ, ಕುಮಟಾ ಉಪ್ಪಿನಪಟ್ಟಣ ಶಾಲೆಯ ಶ್ಯಾಮಲಾ ಸುಬ್ರಾಯ ಹೆಗಡೆ, ಹೊನ್ನಾವರ ಅಪ್ಸರಕೊಂಡ ಶಾಲೆಯ ಗಣಪಯ್ಯ ಈರಯ್ಯ ಗೌಡ, ಭಟ್ಕಳ ಜಾಲಿ ಶಾಲೆಯ ವಾಸು ಡಿ. ನಾಯ್ಕ ಪ್ರಶಸ್ತಿ ಪಡೆದರು.
ಪ್ರೌಢಶಾಲೆ ವಿಭಾಗದಲ್ಲಿ ಕಾರವಾರ ಚಂಡಿಯಾದ ದಿ ಪೊಪ್ಯುಲರ್ ನ್ಯೂಇಂಗ್ಲೀಷ್ ಶಾಲೆಯ ತಿಮ್ಮಪ್ಪ ಪರಮೇಶ್ವರ ನಾಯಕ, ಅಂಕೋಲಾ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ನೇಮಸಿಂಗ ವಾಲಪ್ಪ ರಾಠೋಡ, ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯ ಚಂದ್ರಶೇಖರ ಗೌಡಣ್ಣ ನಾಯಕ ದೊರೆ, ಹೊನ್ನಾವರ ಕರ್ಕಿ ಚನ್ನಕೇಶವ ಪ್ರೌಢಶಾಲೆಯ ಶ್ರೀಕಾಂತ ಭೀಮಪ್ಪ ಹಿಟ್ನಳ್ಳಿ, ಭಟ್ಕಳ ಬೈಲೂರದ ಕೆಪಿಎಸ್ ನ ಸುಜಾತಾ ಟಿ. ಹೊರ್ಟಾ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ತಾಲೂಕಿನ 8 ಪ್ರೌಢಶಾಲೆಗಳಿಗೆ ಅಳವಡಿಸಲಾಗುವ ₹20 ಲಕ್ಷ ಮೌಲ್ಯದ ಅತ್ಯಾಧುನಿಕ ಪೊರ್ಟೆಬಲ್ ಸ್ಟೆಮ್ ಲ್ಯಾಬ್ ನ್ನು ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. ವೇದಿಕೆಯಲ್ಲಿ ಎಸ್‌ಪಿ. ದೀಪನ್ ಎಂ.ಎನ್, ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ತಾಪಂ ಇಒ ರಾಜೇಂದ್ರ ಭಟ್, ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ದೈಹಿಕ ಶಿಕ್ಷಕರ ಸಂಘದ ರವೀಂದ್ರ ಭಟ್ ಸೂರಿ ಇನ್ನಿತರರು ಇದ್ದರು. ಶಿಕ್ಷಕ ಎಂ.ಆರ್.ನಾಯ್ಕರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಿಡಿಪಿಐ ಲತಾ ಎಂ. ನಾಯಕ ಸ್ವಾಗತಿಸಿದರು. ಬಿಇಒ ಉದಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಎನ್.ಆರ್.ನಾಯ್ಕ ಸಂಗಡಿಗರು ನಿರ್ವಹಿಸಿದರು.