ಉಡುಪಿ(ಅ.26): ಪ್ರಸ್ತುತ ರಾಜ್ಯದ 6 ಜಿಲ್ಲೆಗಳಲ್ಲಿ ಮಾತ್ರ ಸರ್ಕಾರಿ ಮೆಡಿಕಲ್‌ ಕಾಲೇಜು ಇಲ್ಲ. ಪ್ರತಿ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್‌ ಕಾಲೇಜು ಇರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆದ್ದರಿಂದ ಉಡುಪಿಯೂ ಸೇರಿದಂತೆ ಈ 6 ಜಿಲ್ಲೆಗಳಲ್ಲಿಯೂ ಹಂತಹಂತವಾಗಿ ಸರ್ಕಾರಿ ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸಲಾಗುತ್ತದೆ ಎಂದು ರಾಜ್ಯ ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್  ನಾರಾಯಣ್‌ ಹೇಳಿದ್ದಾರೆ.

ಸಚಿವರಾಗಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಅವರು ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಕೈಗಾರಿಕೆಗಳ ನಡುವೆ ಸಂಪರ್ಕ ಇಲ್ಲ, ಆದ್ದರಿಂದ ನಮ್ಮ ಯುವಜನತೆ ಪಡೆದ ಶಿಕ್ಷಣಕ್ಕೆ ಅವರ ಮಾಡುವ ಉದ್ಯೋಗಕ್ಕೂ ಸಂಬಂಧ ಇಲ್ಲದಂತಾಗಿದೆ. ಆದ್ದರಿಂದ ಇದನ್ನು ಸರಿಪಡಿಸಲು ಸರ್ಕಾರ ಯೋಚಿಸಲಾಗುತ್ತಿದೆ, ಇದರಿಂದ ಔದ್ಯಮಿಕ ಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ ಎಂದು ಐಟಿ- ಬಿಟಿ, ವಿಜ್ಞಾನ- ತಂತ್ರಜ್ಞಾನ ಸಚಿವರೂ ಆಗಿರುವ ಅವರು ಹೇಳಿದ್ದಾರೆ.

ಉಡುಪಿ: 256 ಅನರ್ಹ ಬಿಪಿ​ಎಲ್‌ ಕಾರ್ಡ್‌​ದಾ​ರರ ವಿರುದ್ಧ ಕ್ರಮ

ದೇಶದ ನೀತಿ ಆಯೋಗ ಕೂಡ ರಾಜ್ಯಕ್ಕೆ ಆವಿಷ್ಕಾರ ಕ್ಷೇತ್ರದಲ್ಲಿ ಮೊದಲ ಸ್ಥಾನ ನೀಡಿದೆ. ಮುಂದೆ ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳಲ್ಲಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ ಎಂದವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್‌, ಕಾಪು ಶಾಸಕ ಲಾಲಾಜಿ ಮೆಂಡನ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ನವೀನ್‌ ಕುಮಾರ್‌ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು. ಸುರೇಶ್‌ ನಾಯಕ್‌ ಸ್ವಾಗತಿಸಿದರು. ಸಂಧ್ಯಾ ರಮೇಶ್‌ ವಂದಿಸಿದರು.

ಉಡುಪಿಗೆ ಮೆಡಿಕಲ್‌ ಕಾಲೇಜು ಬೇಕು: ಭಟ್‌

ಉಡುಪಿ ಶಾಸಕ ಕೆ. ರಘುಪತಿ ಭಟ್‌, ಉಡುಪಿ ಜಿಲ್ಲೆಯಲ್ಲಿ ಒಂದೇ ಖಾಸಗಿ ವೈದ್ಯಕೀಯ ಕಾಲೇಜು ಮಣಿಪಾಲದಲ್ಲಿದೆ, ಅದು ಉಡುಪಿಯ ಜನರಿಗೆ ಎಟಕುತ್ತಿಲ್ಲ, ಆದ್ದರಿಂದ ಉಡುಪಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು, ನರ್ಸಿಂಗ್‌ ಮತ್ತು ಅರೆ ಮೆಡಿಕಲ್‌ ಕಾಲೇಜುಗಳನ್ನು ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿದರು. ಮೆಡಿಕಲ್‌ ಕಾಲೇಜಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಭೂಮಿಯಲ್ಲಿ, 25 ಎಕರೆ ಭೂಮಿಯನ್ನು ಬಳಸಿಕೊಳ್ಳಬಹುದು ಎಂದರು. ಇದಕ್ಕೆ ವೈದ್ಯಕೀಯ ಸಚಿವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಬೇರೆಯಲ್ಲ ಪಕ್ಷ ಬೇರೆಯಲ್ಲ: ಡಿಸಿಎಂ

ಸರ್ಕಾರ ಬೇರೆ ಅಲ್ಲ, ಪಕ್ಷ ಬೇರೆ ಅಲ್ಲ. ಪಕ್ಷದ ಕಾರ್ಯಕರ್ತರ ಗುಣಮಟ್ಚವೇ ಸರ್ಕಾರದ ಗುಣಮಟ್ಟ, ಮಾರ್ಗದರ್ಶನ ಆಗಿರುತ್ತದೆ. ಕಾರ್ಯಕರ್ತರ ಶ್ರಮಕ್ಕೆ ಪೂರಕವಾಗಿ ಕೆಲಸ ಮಾಡುವುದು ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ. ಕರಾವಳಿಯ ಬಿಜೆಪಿ ಕಾರ್ಯಕರ್ತರ ಶ್ರಮ ರಾಜ್ಯದ ಉಳಿದ ಭಾಗದ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ. ಬಿಜೆಪಿಯ ನಾಯಕರು ಯಾವತ್ತೂ ಅಧಿಕಾರಕ್ಕಾಗಿ ಗುದ್ದಾಟ ನಡೆಸುವುದಿಲ್ಲ, ಸಿಕ್ಕಿದ ಅವಕಾಶವನ್ನು ಸಮಾಜ ಕಟ್ಟುವುದಕ್ಕೆ ಬಳಸಿಕೊಳ್ಳುತ್ತೇವೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕೆರಳಿದ ಕ್ಯಾರ್: ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ