ಉಡುಪಿ/ದಕ್ಷಿಣ ಕನ್ನಡ, [ಅ.25]: ಕ್ಯಾರ್ ಚಂಡಮಾರುತದಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಅಂದ್ರೆ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿ ತೀವ್ರ ಮಳೆಯಾಗುತ್ತಿದ್ದು  ಇದರ ಪರಿಣಾಮ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 

ಮಲೆನಾಡಿನಲ್ಲೂ ಕ್ಯಾರ್ ಆರ್ಭಟ : ಬಿರುಗಾಳಿ ಸಹಿತ ಭಾರೀ ಮಳೆ

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ವರು ಇಂದು [ಶುಕ್ರವಾರ] ಆದೇಶ ಹೊರಡಿಸಿದ್ದಾರೆ.  ಅಷ್ಟೇ ಅಲ್ಲದೇ ಮೀನುಗಾರಿಕೆ ತೆರಳದಂತೆ ಸೂಚನೆ ನೀಡಿದ್ದಾರೆ.

ಕ್ಯಾರ್ ಚಂಡಮಾರುತ ಗಾಳಿ ಮಳೆ ಹೊತ್ತು ತರುತ್ತಿದೆ. ಈ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ  ಸಹ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಮೌಖಿಕ ಆದೇಶ ಹೊರಡಿಸಿದ್ದಾರೆ.

ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್‌ ಕ್ಯಾರ್‌...?

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಮೀನುಗಾರರಿಗೆ, ನದಿ ಬದಿಯ ಜನ ನೀರಿಗಿಳಿಯದಂತೆ ಸೂಚಿಸಿದೆ. ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗ್ಗೆಯವರೆಗೂ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅದು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.