ಕನ್ನಡದ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ಗೆ ಸಿನಿಮಾ ಹೀರೋ ಪಟ್ಟ ಯಾಕೆ ಸಿಗಲೇ ಇಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ದಿಲೀಪ್ ರಾಜ್ ಎಂದಕೂಡಲೇ ಕಟ್ಟುಮಸ್ತಾದ ದೇಹ, ಸುಂದರವಾದ ಮುಖ, ಗಮನಸೆಳೆಯುವ ಧ್ವನಿ, ಮಾಸ್ ಲುಕ್ ಎಲ್ಲವೂ ಒಂದೇ ಸಮನೆ ಕಣ್ಣುಮುಂದೆ ಬರುವುದು. ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗಮನಸೆಳೆದ ದಿಲೀಪ್ ರಾಜ್, ಸಿನಿಮಾದಲ್ಲಿ ಹೀರೋ ಆಗಿ ಮಿಂಚಲಾಗಲೇ ಇಲ್ಲ. ಇದಕ್ಕೆ ಕಾರಣ ಏನು ಎಂದು ದಿಲೀಪ್ ರಾಜ್ ಅವರೇ Rapid Rashmi ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ರತಿಭೆ ಇದ್ರೂ ಸಿನಿಮಾದಲ್ಲಿ ಗೆಲ್ಲಲಾಗಲಿಲ್ಲ..!
23 ಸಿನಿಮಾ, 13 ಧಾರಾವಾಹಿಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ಗೆ ಸಿನಿಮಾದಲ್ಲಿ ಯಶಸ್ಸು ಸಿಗಲೇ ಇಲ್ಲ. ಈ ಬಗ್ಗೆ ನಟ ಅಂಬರೀಶ್ ಅವರು ʼಅಂಬಿ ನಿಂಗ್ ವಯಸ್ಸಾಯ್ತೋʼ ಸಿನಿಮಾ ಟೈಮ್‌ನಲ್ಲಿ ಕೂಡ ಪ್ರಶ್ನೆ ಮಾಡಿದ್ದರಂತೆ. ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ್ ಕಿಟ್ಟಿ, ಸುನೀಲ್ ರಾವ್ ಅವರ ಸಮಕಾಲೀನ ನಟ ದಿಲೀಪ್ ರಾಜ್‌ಗೆ ಪ್ರತಿಭೆಯಿದ್ದಷ್ಟು ಯಶಸ್ಸು ಸಿಗಲೇ ಇಲ್ಲ.
ಅದೃಷ್ಟ ಮುಖ್ಯ!
ನಟನಾಗಬೇಕು ಅಂತ ಅಂದುಕೊಳ್ಳದ ದಿಲೀಪ್ ರಾಜ್ ಅವರು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು, ಅದೇ ಅವರನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿತು. ಆರಂಭದಲ್ಲಿ ಪ್ರತಿಭೆ, ಪರಿಶ್ರಮ ಇದ್ದರೆ ಯಶಸ್ಸು ಸಿಗೋದು ಫಿಕ್ಸ್ ಅಂತ ನಂಬಿಕೊಂಡಿದ್ದ ದಿಲೀಪ್ ರಾಜ್ ಇಂದು ಅದೃಷ್ಟಕ್ಕೆ ಶರಣಾಗಿದ್ದಾರಂತೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರ ವಿಮರ್ಶೆ: ಕಳ್ಳತನದಲ್ಲಿ ಎಷ್ಟು ವಿಧ? ಅವು ಯಾವುವು?
ಹೀರೋ ಆಗಿ ಯಾಕೆ ಗೆಲ್ಲಲಾಗಲಿಲ್ಲ?
“ಅದೃಷ್ಟ ಎನ್ನೋದು ತುಂಬ ಮುಖ್ಯ. ಅದೃಷ್ಟ ಇಲ್ಲ ಅಂದ್ರೆ ನೂರು ಕೋಟಿ ನಿನ್ನ ಮೇಲೆ ಹಾಕಿದ್ರೂ ಅದು ಮಣ್ಣೇ. ಚೆನ್ನಾಗಿ ನಟಿಸ್ತೀಯಾ, ಡ್ಯಾನ್ಸ್ ಮಾಡ್ತೀಯಾ ಆದರೂ ಯಾಕೆ ಸಿನಿಮಾ ಮಾಡಲ್ಲ ಅಂತ ಕೆಲವರು ಕೇಳ್ತಾರೆ. ಆದರೆ ನಾನು ಸಿನಿಮಾ ಮಾಡೋದಿಲ್ಲ ಅಂತ ಎಲ್ಲಿಯೂ ಹೇಳಲ್ಲ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಟೈಮ್‌ನಲ್ಲಿ ಅಂಬರೀಶ್ ಅವರು ನನ್ನ ನಟನೆ ನೋಡಿ ಯಾಕೆ ನಿಂಗೆ ಹೀರೋ ಚಾನ್ಸ್ ಕೊಡ್ತಿಲ್ಲ ಅಂತ ಪ್ರಶ್ನೆ ಮಾಡಿದ್ದರು. ನನಗೂ ಕೂಡ ಇದೇ ಯಾವಾಗಲೂ ಪ್ರಶ್ನೆ ಕಾಡುತ್ತಿರುತ್ತದೆ. ಬಾಯ್‌ಫ್ರೆಂಡ್, ಮಿಲನ, ಗಾನ ಬಜಾನಾ ಹೀಗೆ ಸಿನಿಮಾದಲ್ಲಿ ನಟಿಸುವಾಗ ನನ್ನ ಲಕ್ ಬದಲಾಗುತ್ತದೆ, ಯಶಸ್ಸು ಸಿಗುತ್ತದೆ ಅಂತ ಎಲ್ರೂ ಹೇಳಿದರು. ಆಗಲೇ ಇಲ್ಲ” ಎಂದು ದಿಲೀಪ್ ರಾಜ್ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಯಶಸ್ಸು ಸಿಗಲಿಲ್ಲ.. ಯಾಕೆ?
“2005 ರ ಸಮಯದಲ್ಲಿ ನನ್ನ ಸಿನಿಮಾ ಹಾಡುಗಳು ತುಂಬ ಜನಪ್ರಿಯತೆ ಪಡೆಯಿತು. ಆದರೆ ಅವೆಲ್ಲ ನನ್ನದೆ ಸಿನಿಮಾ ಹಾಡುಗಳು ಅಂತ ಎಲ್ಲರಿಗೂ ಗೊತ್ತಿರಲಿಲ್ಲ. ರಿಲೀಸ್ ವಿಚಾರವಾಗಿ ಸಮಸ್ಯೆ ಆಯ್ತು. ನಿರ್ದೇಶಕ ಹೆಸರು ಮಾಡಿರಬೇಕು ಎನ್ನೋದಿತ್ತು. ಇನ್ನು ಸೀರಿಯಲ್ ಮುಖ ಎನ್ನೋದು ಮುಖ್ಯ ವಿಚಾರವಾಗಿತ್ತು. ಒಟ್ಟಾರೆಯಾಗಿ ಅಂದಿನ ಫಾರ್ಮುಲ ಎಲ್ಲವೂ ನನಗೆ ಯಶಸ್ಸು ತಂದುಕೊಡಲು ಸಾಧ್ಯವಾಗಲಿಲ್ಲ” ಎಂದು ದಿಲೀಪ್ ರಾಜ್ ಅವರು ಮಾತನಾಡಿದ್ದಾರೆ.
'ಹಿಟ್ಲರ್ ಕಲ್ಯಾಣ' ಮೆಹಂದಿ ಕಾರ್ಯಕ್ರಮದಲ್ಲಿ ನಟಿ ನಮ್ರತಾ ಗೌಡ ಡ್ಯಾನ್ಸ್!
ಟಿವಿಯಲ್ಲಿ ಗೆದ್ರು!
'ಸೀರಿಯಲ್ ವಿಚಾರಗಳು ಅಡುಗೆ ಮನೆಗೆ, ಮನೆ ಹಾಲ್‌ಗೆ ಮಾತ್ರ ಸೀಮಿತವಾಗಿರುತ್ತದೆ, ಆದರೆ ಆಟೋ ಸ್ಟ್ಯಾಂಡ್‌ವರೆಗೆ ಬರೋದಿಲ್ಲ,' ಎಂದು ದಿಲೀಪ್ ರಾಜ್ ಅವರು ಹೇಳಿದ್ದಾರೆ. ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ದಿಲೀಪ್ ರಾಜ್ ಅವರು ಈಗಾಗಲೇ ʼಹಿಟ್ಲರ್ ಕಲ್ಯಾಣʼ, ʼಪಾರುʼ ಮುಂತಾದ ಧಾರಾವಾಹಿಗಳ ನಿರ್ಮಾಣ ಮಾಡಿದ್ದಾರೆ. ಸದ್ಯ ʼವಧುʼ ಎನ್ನುವ ಧಾರಾವಾಹಿಗೆ ದಿಲೀಪ್ ರಾಜ್ ಅವರು ಹಣ ಹೂಡುತ್ತಿದ್ದಾರೆ.
'ಸಿನಿಮಾ ಹಾಗೂ ಟಿವಿ ವೀಕ್ಷಕರು ಬೇರೆ ಇರುತ್ತಾರೆ. ಈ ಎರಡೂ ಕ್ಷೇತ್ರಕ್ಕೆ ಫಿಟ್ ಆಗುವ ಕಲಾವಿದರು ಮಾತ್ರ ತುಂಬ ವಿರಳ. ಟಿವಿಯಲ್ಲಿ ಗೆದ್ದವರೆಲ್ಲರೂ ಸಿನಿಮಾದಲ್ಲಿ ಗೆಲ್ಲುತ್ತಾರೆ ಅಂತ ಹೇಳೋಕೆ ಆಗೋದಿಲ್ಲ,' ಎಂದು ದಿಲೀಪ್ ರಾಜ್ ಅವರು ಹೇಳಿದ್ದಾರೆ.
