ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನವರಿ 27ರಿಂದ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿವೆ. ಟಿ.ಎನ್.ಸೀತಾರಾಮ್ 'ವಧು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: 11ನೇ ಸೀಸನ್ ಬಿಗ್‌ಬಾಸ್ ರಿಯಾಲಿಟಿ ಶೋ ಮುಕ್ತಾಯವಾಗಿದ್ದು, ಜನವರಿ 27ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಪ್ರಸಾರಗಗೊಳ್ಳುತ್ತಿವೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಡಿವೋರ್ಸ್ ಲಾಯರ್ ಮದುವೆ ಕಥೆಯನ್ನು ಹೊಂದಿರುವ ವಧು ಧಾರಾವಾಹಿ ಪ್ರಸಾರವಾಗಲಿದೆ. ರಾತ್ರಿ 10 ಗಂಟೆಗೆ ರೆಡಿಮೇಡ್ ಗಂಡನನ್ನು ಹುಡುಕುತ್ತಿರುವ ಪುರುಷ ದ್ವೇಷಿ, ಹಠಮಾರಿ ಹಣ್ಣಿನ ಕಥೆ ಯಜಮಾನ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಎರಡು ಧಾರಾವಾಹಿಗಳ ಪ್ರೋಮೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಎರಡು ಧಾರಾವಾಹಿ ಪೈಕಿ 'ವಧು' ಸೀರಿಯಲ್‌ನಲ್ಲಿ ಹಿರಿಯ ಕಲಾವಿದರಾಗಿರುವ ಟಿ.ಎನ್.ಸೀತಾರಾಮ್ ಜನಪ್ರಿಯ ವಕೀಲರಾಗಿ ನಟಿಸುತ್ತಿದ್ದಾರೆ. ಇದೀಗ ಟಿಎನ್ ಸೀತಾರಾಮ್ ಅವರು 'ವಧು' ಧಾರಾವಾಹಿ ನಿರ್ದೇಶಕರಾಗಿರುವ ಪರಮೇಶ್ವರ ಗುಂಡ್ಕಲ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಟಿಎನ್ ಸೀತಾರಾಮ್ ಪೋಸ್ಟ್
ಪರಮೇಶ್ವರ ಗುಂಡ್ಕಲ್ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ರಾಗಿ ನೇಮಕವಾದ ಒಂದು ವರ್ಷದಲ್ಲಿಯೇ ಅದರ ಟಿ.ಆರ್.ಪಿ.ಯನ್ನು ದಾಖಲೆಯ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು.ಆಗ ನಮಗೆಲ್ಲ ಅಚ್ಚರಿ, ಇಂಥಾ ದಾಖಲೆಯ ಸಂಗತಿ ಸಾಧ್ಯವೇ ಎಂದು. ಟಿವಿಗಾಗಿ ಮಾಡುವ ಕಥೆಗಳ ಬಗ್ಗೆ, ಅವು ನಡೆಸುವ ಪಯಣ, ಪ್ರೇಕ್ಷಕರನ್ನು ಹೇಗೆ ಆವರಿಸಿಕೊಳ್ಳಬಲ್ಲವು ಎಂಬುದರ ಬಗ್ಗೆ ಖಚಿತ ಜ್ಞಾನವಿರುವ ಪರಮ್ ಗೆ ಬದುಕಿನ ಬಗ್ಗೆ ಆಳವಾದ ಮತ್ತು ಸೂಕ್ಷ್ಮವಾದ ಗ್ರಹಿಕೆಯಿದೆ. ಕಲರ್ಸ್ ವಾಹಿನಿಗಾಗಿ ಪರಮ್ ವಧು ಎಂಬ ಧಾರಾವಾಹಿಯನ್ನು ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಹೊಸ ಬಗೆಯ ಕಥೆ ಬರೆದಿದ್ದಾರೆ. ಅದು ಪ್ರತಿದಿನ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ. ನಾಳೆ (ಸೋಮವಾರದಿಂದ) ಆರಂಭ.
ಇದರಲ್ಲಿ ನಾನೂ ಕೂಡ ಒಂದು ಪಾತ್ರ ಮಾಡುತ್ತಿದ್ದೇನೆ. ಯಾವಾಗಲೂ ನಾನು ಮಾಡುತ್ತಾ ಬಂದಿರುವ ಲಾಯರ್ ಪಾತ್ರ. ವಧು ಧಾರಾವಾಹಿಗೆ ದೊಡ್ಡ ಮಟ್ಟದ ಗೆಲುವು ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗಳು ಬೇಕು.
ಪರಮ್, ಶುಭಾಶಯಗಳು.
ವಧು ಧಾರಾವಾಹಿ ಕಥೆ ಏನು?
ವಧು ಈ ಧಾರಾವಾಹಿತ ಕಥಾ ನಾಯಕಿ, ಸಾರ್ಥಕ್ ಕಥಾ ನಾಯಕನಾಗಿರುತ್ತಾನೆ. ತಾನು ಮಾಡುವ ವೃತ್ತಿಯಿಂದಲೇ ವಧುವಿಗೆ ಮದುವೆ ಆಗುತ್ತಿರಲಿಲ್ಲ. ಇದರಿಂದಲೇ ಮನೆಯಲ್ಲಿ ವಧು ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಇತ್ತ ತಾಯಿಯ ಮುದ್ದಿನ ಮಗನಾಗಿರುವ ಸಾರ್ಥಕ್‌ಗೆ ಆತನ ಪತ್ನಿಯೇ ಸಮಸ್ಯೆ. ಪತ್ನಿಯಿಂದ ಡಿವೋರ್ಸ್ ಪಡೆಯಲು ಕಥಾ ನಾಯಕಿ ವಧು ಬಳಿ ಬರುತ್ತಾನೆ. ನಂತರ ಮುಂದೆ ಇವರಿಬ್ಬರ ನಡುವಿನ ಸಂಬಂಧ ಹೇಗೆ ಮುಂದುವರಿಯುತ್ತೆ ಎಂಬುವುದೇ ಧಾರಾವಾಹಿಯ ಒನ್‌ಲೈನ್ ಕಥೆಯಾಗಿದೆ.
ಇದನ್ನೂ ಓದಿ: 'ಹೋಗಿ ಬಾ ಜಾನಕಿ' ಕೊನೆಯ ಕಂತಿಗೂ ಮುನ್ನ ಸೀತಾರಾಮ್ ಭಾವುಕ ನುಡಿ
ತಿಂಗಳಿಗೊಮ್ಮೆ ಕನಸಿನಲ್ಲಿ ಬರುವ ಪಾತ್ರ
ಪ್ರೀತಿಯ ಗೆಳೆಯ ಕಲರ್ಸ್ (Colors Kannada) ಮುಖ್ಯರಾದ ಪರಮ್ ಕೆಲದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ..ನೀವು ಪಾತ್ರ ಮಾಡಬೇಕು ಎಂದರು.. ಏನು ಕಥೆ, ಏನು ಪಾತ್ರ ಎಂದೆ. ಕೋರ್ಟ್ ಕಥೆ. ನಿಮ್ಮದು ಸಿ.ಎಸ್.ಪಿ. .ಪಾತ್ರ ಎಂದರು. ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂದಂತೆ ಆಯಿತು. ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ .ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ. ಅರ್ಧ ಸೆಕೆಂಡಿನಲ್ಲಿ ಹೂ ಎಂದೆ. ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು. ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ.ಕೆಲವು ದಿನವಾದರೂ ಸೀ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ. ಈ ಸಂಗತಿ ಇಷ್ಟ ವಾದರೆ ಹೇಳಿ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಸಿಎಸ್ಪಿ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ ಟಿ.ಎನ್ ಸೀತಾರಾಮ್
