ಬೆಂಗಳೂರು (ಏ. 19):  ‘ನಾವು ನಮ್ಮ ನಿಜವಾದ ಶಕ್ತಿ ಗ್ರಹಿಸದೆ ಜೀವನಕ್ಕೆ ಶರಣಾಗಿಬಿಟ್ಟಿರುತ್ತೇವೆ. ಅಂಥವರಿಗೆ ಒಬ್ಬ ಸಾಧಕನ ಕತೆ ಹೇಳಿ, ಅವರೂ ನಮ್ಮ ಥರಾನೇ ಇದ್ದರು ಮತ್ತು ಒಂದು ತಿರುವಲ್ಲಿ ಟರ್ನ್‌ ತೆಗೆದುಕೊಂಡು ಗೆದ್ದು ಸಾಧಕರಾದರು. ನೀವೂ ಹಾಗೆ ಸಾಧನೆ ಮಾಡಬಹುದು ಅಂತ ಹೇಳಿ ಬಡಿದೆಚ್ಚರಿಸುವ ಪ್ರಯತ್ನವೇ ವೀಕೆಂಡ್‌ ವಿತ್‌ ರಮೇಶ್‌. ಇದು ಖುಷಿಯಿಂದ, ಪ್ರೀತಿಯಿಂದ ಮತ್ತು ಸ್ಫೂರ್ತಿಯಿಂದ ರಮೇಶ್‌.’

ರಮೇಶ್‌ ಅರವಿಂದ್‌ ಎಂದಿನ ಲವಲವಿಕೆಯಲ್ಲಿ ಹೇಳುತ್ತಾ ಹೋದರು. ನೀವು ರಮೇಶ್‌ರನ್ನು ಯಾವಾಗ ಬೇಕಾದರೂ ಮಾತನಾಡಿಸಿ ಅವರದು ಅದೇ ಉತ್ಸಾಹ. ಈಗ ಏಪ್ರಿಲ್‌ 20 ಶನಿವಾರ ರಾತ್ರಿ 9.30ಕ್ಕೆ ಅವರ ಯಶಸ್ವೀ ರಿಯಾಲಿಟಿ ಶೋ ವೀಕೆಂಡ್‌ ವಿತ್‌ ರಮೇಶ್‌ ಶುರುವಾಗಲಿದೆ. ಇನ್ನು ಪ್ರತೀ ಶನಿವಾರ, ಭಾನುವಾರ ರಮೇಶ್‌ ಝೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಅವರ ಉತ್ಸಾಹ ಮತ್ತಷ್ಟುಜಾಸ್ತಿಯಾಗಿದೆ.

ಈ ಕುರಿತು ಹೇಳಲೆಂದೇ ರಮೇಶ್‌ ಕೂತಿದ್ದರು. ಅವರ ಜತೆ ಝೀ ಕನ್ನಡದ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಇದ್ದರು. ಇವರಿಬ್ಬರದು ಎಂಥಾ ಉತ್ಸಾಹದ ಜೋಡಿ ಎಂದರೆ ಈಗಾಗಲೇ ಕೊಡಗಿನ ಮಾಂದಲಪಟ್ಟಿಯ ಬೆಟ್ಟವೇರಿ ಪ್ರೋಮೋ ಶೂಟ್‌ ಮಾಡಿ ಬಂದಿದ್ದಾರೆ. ಸತತ ಪ್ರಯತ್ನದ ನಂತರ ಮೊದಲ ಸಂಚಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕರೆದುಕೊಂಡು ಬಂದಿದ್ದಾರೆ. ಆ ಸಂಚಿಕೆ ಇದೇ ಶನಿವಾರ, ಭಾನುವಾರ ಪ್ರಸಾರವಾಗಲಿದೆ. ಇನ್‌ಫೋಸಿಸ್‌ ಸುಧಾಮೂರ್ತಿ, ನಾರಾಯಣಮೂರ್ತಿ ಮುಂದಿನ ಸಂಚಿಕೆಗಳಲ್ಲಿ ಬರಲಿದ್ದಾರೆ. ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ರಜನಿಕಾಂತ್‌ ಅವರನ್ನು ಕರೆತರುವ ಪ್ರಯತ್ನ ಜಾರಿಯಲ್ಲಿದೆ.

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ತಮಗೆ ಎಷ್ಟುಮುಖ್ಯ ಅಂತ ಹೇಳಿದ್ದು ಹುಣಸೂರು. ‘ಝೀ ಕನ್ನಡ ಇವತ್ತು ಅಷ್ಟೆತ್ತರಕ್ಕೆ ಬೆಳೆದಿದೆ. ಈ ಗೆಲುವಿನ ಆರಂಭವಾಗಿದ್ದು ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಿಂದ. ಇದುವರೆಗೆ 65 ಜನ ಸಾಧಕರು ಇಲ್ಲಿಗೆ ಬಂದಿದ್ದಾರೆ. ತಮ್ಮ ಜೀವನದ ಅತಿ ಮುಖ್ಯ ಸಂದರ್ಶನ ಇದು ಎಂದು ಹೇಳಿಹೋಗಿದ್ದಾರೆ. ಸಾಧಕರ ಕತೆಯನ್ನು ಸಾಧಕರಿಗೇ ಎಕ್ಸೈಟ್‌ ಆಗುವ ಹಾಗೆ ಹೇಳುವುದು ನಮ್ಮ ಉದ್ದೇಶ. ಇದು ನಾವೇ ಕಟ್ಟಿದ ನಮ್ಮ ಸ್ವಂತ ಶೋ. ಯಾವುದೋ ಇಂಟರ್‌ನ್ಯಾಷನಲ್‌ ಫಾರ್ಮಾ್ಯಟ್‌ ಅಲ್ಲ. ಈಗ ಈ ಶೋ ಕನ್ನಡದ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ’ ಎಂದರು. ಎರಡನೇ ವಾರ ನಟಿ ಪ್ರೇಮಾ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಎಪಿಸೋಡ್‌ಗಳು ಪ್ರಸಾರವಾಗಲಿವೆ.

ಅತಿ ಹೆಚ್ಚು ಟಿಆರ್‌ಪಿ ದರ್ಶನ್‌ಗೆ

ಈಗ ಶುರುವಾಗುತ್ತಿರುವುದು ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 4. ಇದುವರೆಗಿನ 65 ಸಾಧಕರಲ್ಲಿ ಝೀ ಕನ್ನಡಕ್ಕೆ ಅತಿ ಹೆಚ್ಚು ಟಿಆರ್‌ಪಿ ಬಂದಿರುವುದು ದರ್ಶನ್‌ ಎಪಿಸೋಡಿಗೆ. ಈ ಸಂಗತಿ ಹೇಳಿದ್ದು ರಾಘವೇಂದ್ರ ಹುಣಸೂರು. ತನಗೆ ತುಂಬಾ ತಟ್ಟಿದ ಎಪಿಸೋಡ್‌ಗಳು ಅಂದ್ರೆ ಅಂಗವಿಕಲ ಸಾಧಕರ ಎಪಿಸೋಡ್‌ಗಳು ಎಂದರು ರಮೇಶ್‌. ಹಾಗೆ ಅವರನ್ನು ಸುಸ್ತು ಮಾಡಿದ್ದು ದೇವೇಗೌಡರ ಎಪಿಸೋಡ್‌ ಶೂಟಿಂಗು. ಅದು ಸುಮಾರು 12 ಗಂಟೆಗಳ ಕಾಲ ನಡೆಯಿತು ಅಂದರು. ದೇವೇಗೌಡರ ಜ್ಞಾಪಕ ಶಕ್ತಿಯನ್ನು ಬಹಳ ಮೆಚ್ಚಿಕೊಂಡರು.