ಬಿಗ್‌ಬಾಸ್, ಮೆಟ್ರೋ ದನಿಯಾದ ಬಡೆಕ್ಕಿಲ ಪ್ರದೀಪ್, ಕೌಟುಂಬಿಕ ಕಾರಣಗಳಿಂದ ಬೆಂಗಳೂರು ಬಿಡುತ್ತಿದ್ದಾರೆ. ಪತ್ರಕರ್ತ, ವಾಯ್ಸ್ ಓವರ್ ಕಲಾವಿದರಾಗಿ, ಹಲವು ಸೀರಿಯಲ್‌ಗಳ ಪ್ರೊಮೋಗಳಿಗೂ ದನಿ ನೀಡಿದ್ದಾರೆ. ತಮ್ಮ ಹುಟ್ಟೂರಿಗೆ ಹಿಂದಿರುಗುವ ನಿರ್ಧಾರ ಅಭಿಮಾನಿಗಳಿಗೆ ಆಘಾತ ತಂದಿದೆ.

ಬಿಗ್​ಬಾಸ್​... ಬೆಳಿಗ್ಗೆ ಆರು ಗಂಟೆ..., ಮುಂದಿನ ನಿಲ್ದಾಣ.... ಎನ್ನುತ್ತಲೇ ರಾಜ್ಯಾದ್ಯಂತ ಬಿಗ್​ಬಾಸ್​ ಪ್ರಿಯರಿಗೆ ಹಾಗೂ ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವವರಿಗೆ ಚಿರಪರಿಚಿತವಾಗಿರುವ ದನಿ ಕೊಡುತ್ತಿರುವವರು ಬಡೆಕ್ಕಿಲ ಪ್ರದೀಪ್. ಬಿಗ್​ಬಾಸ್ ಜರ್ನಿ ಶುರುವಾಗಿ ಹಲವಾರು ವರ್ಷ ಕಳೆದರೂ, ತೆರೆಮರೆಯಲ್ಲಿಯೇ ಇದ್ದ ಪ್ರದೀಪ್​, ವಾಹಿನಿಯ ಷರತ್ತಿನಂತೆ ಇದು ತಮ್ಮದೇ ದನಿ ಎಂದು ಹೊರಜಗತ್ತಿಗೆ ತೋರಿಸಿರಲಿಲ್ಲ. ಆದರೆ ಹಲವಾರು ಸೀರಿಯಲ್​ಗಳಿಗೂ ದನಿ ನೀಡುತ್ತಿದ್ದ ಪ್ರದೀಪ್​ ಅವರದ್ದೇ ದನಿ ಬಿಗ್​ಬಾಸ್​ನದ್ದು ಕೂಡ ಎಂದು ಒಮ್ಮೆ ವೈರಲ್​ ಆದ ನಂತರ, ಸೋಷಿಯಲ್​ ಮೀಡಿಯಾದಲ್ಲಿ ಇವರ ಫೋಟೋಗಳು ಹರಿದಾಡಿದವು. ಸಂದರ್ಶನಗಳೂ ನಡೆದವು. 'ನಾನಾಗಿಯೇ ಪ್ರಚಾರಕ್ಕೆ ಹೋಗಲಿಲ್ಲ. ಯಾರಿಗೋ ತಿಳಿದು ವಿಷಯ ವೈರಲ್​ ಆಗಿತ್ತು. ಈ ಸತ್ಯ ವಾಹಿನಿಗೂ ತಿಳಿದ ಕಾರಣ, ಏನೂ ಹೇಳಲಿಲ್ಲ' ಎಂದಿರುವ ಪ್ರದೀಪ್​, ಈಗ ಏಕಾಏಕಿ ಬೆಂಗಳೂರು ಬಿಟ್ಟು ವಾಪಸ್​​ ಊರಿಗೆ ಹೋಗುವ ಪ್ಲ್ಯಾನ್​ ಮಾಡಿದ್ದಾರೆ. ಇದು ಅವರ ಅಭಿಮಾನಿಗಳ ಬಳಗ್ಗೆ ಶಾಕ್​ ನೀಡಿರುವುದಂತೂ ದಿಟ.

ಅಂದಹಾಗೆ, ಬಿಗ್​ಬಾಸ್​ ಮಾತ್ರವಲ್ಲದೇ ನಮ್ಮ ಮೆಟ್ರೋದಲ್ಲಿ ಕೇಳಿಬರುವ ಪುರುಷ ದನಿ ಕೂಡ ಇವರದ್ದೇ. ಈಚೆಗೆ ಅಗಲಿದ ಅಪರ್ಣಾ ವಸ್ತಾರೆ ಅವರ ಜೊತೆ ದನಿ ನೀಡಿದವರು ಪ್ರದೀಪ್​. ಅಷ್ಟೇ ಅಲ್ಲದೇ, ಹಲವು ವಾಹಿನಿಗಳಲ್ಲಿ ಪತ್ರಕರ್ತರಾಗಿ, ವಾಯ್ಸ್​ ಓವರ್​​ ಆರ್ಟಿಸ್ಟ್​ ಆಗಿ ಕೆಲಸ ಮಾಡಿರುವ ಪ್ರದೀಪ್​ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟದ್ದು ಬಿಗ್​ಬಾಸ್​ನ ದನಿಯಾದರೂ, ಕಲರ್ಸ್​ ಕನ್ನಡ, ಜೀ ಕನ್ನಡ ಸೇರಿದಂತೆ ಈ ಹಿಂದಿನ ಎಲ್ಲಾ ಸೀರಿಯಲ್​ಗಳ ಪ್ರೊಮೋದಲ್ಲಿ ಇರುವುದು ಕೂಡ ಇವರದ್ದೇ ದನಿ. ಈಗ ಕಲರ್ಸ್​ ಕನ್ನಡದ ಸೀರಿಯಲ್​ಗಳಲ್ಲಿಯೂ ಇವರದ್ದೇ ದನಿ ಕೇಳಬಹುದು. ಭಾಗ್ಯಲಕ್ಷ್ಮಿ ಸೋಮವಾರದಿಂದ ಶನಿವಾರದವರೆಗೆ ಸಂಜೆ... ಲಕ್ಷ್ಮೀ ಬಾರಮ್ಮಾ ಸೋಮವಾರದಿಂದ ಶನಿವಾರದವರೆಗೆ ಸಂಜೆ... ಹೀಗೆ ಎಲ್ಲ ಸೀರಿಯಲ್​ಗಳ ದನಿ ಕೂಡ ಇವರದ್ದೇ. 

ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿರುವ ಪ್ರದೀಪ್​ ಅವರು ಅದರ ಕುರಿತ ಸಂಪೂರ್ಣ ವಿವರಣೆಯನ್ನು ರಾಜೇಶ್​ಗೌಡ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಬೆಂಗಳೂರು ಬಿಡುವ ನಿರ್ಧಾರದ ಕುರಿತು ಮಾತನಾಡಿರುವ ಅವರು, ಬೆಂಗಳೂರು ನನಗೆ ಬೇಕಾಗಿದ್ದನ್ನು ಕೊಟ್ಟಿದೆ, ಈಗಲೂ ಕೊಡುತ್ತಿದೆ. ಆದರೆ ಸದ್ಯ ಹುಟ್ಟಿ ಬೆಳೆದ ಜಾಗಕ್ಕೆ ಹೋಗುವ ಅನಿವಾರ್ಯತೆ ಇದೆ. ಅಲ್ಲಿ ಕರ್ತವ್ಯ ತುಂಬಾ ಇದೆ. ನಮ್ಮದೊಂದು ಟ್ರೆಡಿಷನಲ್​ ಕುಟುಂಬ, ತೋಟವಿದ್ದು, ಪೂಜೆ ಮಾಡಬೇಕಿದೆ. ನಾನು ಒಬ್ಬನೇ ಮಗ. ಈಗ ಅಪ್ಪ-ಅಮ್ಮ ಎಲ್ಲಾ ನೋಡಿಕೊಳ್ತಾ ಇದ್ದಾರೆ. ಆದರೆ ಅವರ ಮೇಲೆ ಎಲ್ಲಾ ಭಾರ ಹಾಕುವ ಮನಸ್ಸು ಇಲ್ಲ. ಕೆಲ ವರ್ಷಗಳ ಹಿಂದೆ ನಡೆದ ಕಹಿ ಘಟನೆಯಿಂದ ನಾನು ಊರಿಗೆ ಹೋಗಲೇ ಬೇಕಿದೆ. ಮನಸ್ಥಿತಿ ಇಲ್ಲದಿದ್ದರೂ ಪರಿಸ್ಥಿತಿಯಿಂದ ಬೆಂಗಳೂರು ಬಿಡುವ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ, ತಾವು ಆರಂಭದಲ್ಲಿ ವಾಯ್ಸ್​ ಓವರ್​ ಕೊಡುವಾಗ ಬೈದು, ಚೆನ್ನಾಗಿಲ್ಲ ಎಂದು ಹೇಳಿದವರೇ ಇಂದು ಹೊಗಳುತ್ತಿರುವ ಬಗ್ಗೆಯೂ ಅಭಿಮಾನದ ನುಡಿಗಳನ್ನಾಡಿದ್ದಾರೆ ಪ್ರದೀಪ್​. 

ಇನ್ನು ವಾಯ್ಸ್​ ಓವರ್​ ಆರ್ಟಿಸ್ಟ್​ ಆಗಬೇಕು ಅನ್ನುವವರಿಗೆ ಟಿಪ್ಸ್​ ಕೊಟ್ಟಿರುವ ಪ್ರದೀಪ್​, ಇದರಲ್ಲಿ ಎಷ್ಟು ಜಾಬ್​ ಸೆಕ್ಯುರಿಟಿ ಇದೆ ಎಂದು ಹೇಳುವುದು ಕಷ್ಟ. ಭಾಷೆ ಹಿಡಿತ, ಬ್ಯಾಕ್​ಗ್ರೌಂಡ್ ಸೇರಿದಂತೆ ಹಲವು ವಿಷಯಗಳು ಇರುತ್ತವೆ. ಕ್ರಿಯೇಟಿವಿಟಿ ಇರಬೇಕು. ಆದ್ದರಿಂದ ಇಂತಿಷ್ಟೇ ಸಂಬಳ ಸಿಗುತ್ತದೆ ಎಂದು ಆರಂಭದಲ್ಲಿ ಬಂದರೆ ಅದು ವರ್ಕ್​ಔಟ್​ ಆಗುವುದಿಲ್ಲ. ಆದರೆ ಆದಾಯದ ಬೇರೆ ಮೂಲ ಇಟ್ಟುಕೊಂಡು ಈ ಬಗ್ಗೆ ಸಮಯ ಸಿಕ್ಕಾಗ ಕೆಲಸ ಮಾಡಿದರೆ, ಮುಂದೆ ಸಕ್ಸಸ್​ ಆಗುವ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಅಂದಹಾಗೆ ಪ್ರದೀಪ್​, ಬಂಟ್ವಾಳ ತಾಲೂಕಿನವರು. ಪತ್ರಕರ್ತ, ವಾಯ್ಸ್​ ಓವರ್​ ಆರ್ಟಿಸ್ಟ್​ ಆಗಿ ಮಾತ್ರವಲ್ಲದೇ, ಹಲವು ರಿಯಾಲಿಟಿ ಶೋಗಳಿಗೆ ಅವರು ನರೇಟರ್ ಆಗಿದ್ದಾರೆ, ಕನ್ನಡ ಮತ್ತು ತಮಿಳಿನ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಈಗ ಬೆಂಗಳೂರಿಗೆ ಗುಡ್​ಬೈ ಹೇಳುತ್ತಿದ್ದಾರೆ. 

YouTube video player