ವಿಧವೆಯರಿಗೆ ಅರಿಶಿಣ-ಕುಂಕುಮವೆ? ಸತ್ಯ ಸೀರಿಯಲ್ ಕಲಿಸಿದ ಪಾಠಕ್ಕೆ ಭೇಷ್ ಭೇಷ್ ಎಂದ ಪ್ರೇಕ್ಷಕರು
ವಿಧವೆಯರು ಮನೆಗೆ ಬಂದಾಗ ಅರಿಶಿಣ ಕುಂಕುಮ ಕೊಟ್ಟರೆ ಏನಾಗತ್ತೆ? ಸತ್ಯ ಸೀರಿಯಲ್ ದೃಶ್ಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.
ಹೆಣ್ಣಿಗೆ ಗಂಡಿನ ಮನೆಯೇ ಶ್ರೇಷ್ಠ. ಗಂಡೇ ಸರ್ವಸ್ವ ಎಂದು ತಲೆತಲಾಂತರಗಳಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕೆ ಹಿಂದೆ ಗಂಡ ಸತ್ತಾಗ, ಆತನ ಚಿತೆಯಲ್ಲಿ ತಾನೂ ದಹಿಸಿ ಹೋಗುವ ಸತಿ ಪದ್ಧತಿ ಕೂಡ ಇತ್ತು. ಬದಲಾದ ಕಾಲಘಟ್ಟದಲ್ಲಿ ಈ ಅನಿಷ್ಠ ಪದ್ಧತಿ ಹೋದರೂ ವಿಧವೆ ಎಂದಾಕ್ಷಣ ಆಕೆಯನ್ನು ನೋಡುವ ಸಮಾಜದ ದೃಷ್ಟಿಯೇ ಬೇರೆಯಾಗಿರುವುದು ಇಂದಿಗೂ ತಪ್ಪಲಿಲ್ಲ. ಕಾಲ ಎಷ್ಟೇ ಬದಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಕೆಲವೊಂದು ಸಂದರ್ಭದಲ್ಲಿ ತಲೆತಲಾಂತರಗಳಿಂದ ನಡೆದು ಬಂದಿರುವ ಸಂಸ್ಕೃತಿ ಬದಲಾಗುತ್ತಿಲ್ಲ. ಎಲ್ಲಾ ಕಡೆ ಅಲ್ಲದಿದ್ದರೂ ಕೆಲವು ಕಡೆಗಳಲ್ಲಿ ಒಂದಷ್ಟು ಪುರಾತನ ಪದ್ಧತಿ, ಆಚಾರ ವಿಚಾರಗಳು ನಡೆದುಕೊಂಡೇ ಬಂದಿವೆ. ನಮ್ಮ ಹಲವು ಪುರಾತನ ಸಂಸ್ಕೃತಿಗಳಿಗೆ ವೈಜ್ಞಾನಿಕ ಕಾರಣಗಳು ಇದ್ದರೂ, ಕೆಲವೊಂದು ಮಾತ್ರ ಎಂದಿಗೂ ಅಪ್ರಸ್ತುತವೇ. ಅಂಥದ್ದರಲ್ಲಿ ಒಂದು ವಿಧವೆಯರನ್ನು ಸಮಾಜ ನೋಡುವ ದೃಷ್ಟಿ. ದೇವತಾ ಕಾರ್ಯಗಳಲ್ಲಿ, ಶುಭ ಕಾರ್ಯಕ್ರಮಗಳಲ್ಲಿ ಅವರನ್ನು ದೂರವಿಡುವ ಅನಿಷ್ಠ ಪದ್ಧತಿ ಇಂದಿಗೂ ಹಲವೆಡೆ ಜೀವಂತ ಆಗಿಯೇ ಇದೆ. ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಇದು ಕೂಡ ಒಂದು.
ಮನೆಗಳಿಗೆ ಹೋದಾಗ ವಿಧವೆಯರಿಗೆ ಅರಿಶಿಣ ಕುಂಕುಮ ನೀಡುವ ಸಂಪ್ರದಾಯ ಹಲವೆಡೆ ಇಲ್ಲ. ಇವನ್ನೆಲ್ಲಾ ನಂಬದಿದ್ದರೂ ಬಂದ ವಿಧವೆಯರು ತಪ್ಪು ತಿಳಿದುಕೊಂಡು ಬಿಟ್ಟಾರು ಎನ್ನುವ ಭಯದಿಂದಲೂ ಕೆಲವೆಡೆ ಮನೆಯ ಗೃಹಿಣಿಯರು ಅವರಿಗೆ ಇವುಗಳನ್ನು ನೀಡದೇ ಇರುವುದೂ ಉಂಟು. ಗಂಡ ಸತ್ತ ಬಳಿಕ ಆತ ಕಟ್ಟಿರುವ ಮಂಗಳಸೂತ್ರ, ಹಾಕಿರುವ ಕಾಲುಂಗುರದ ಜೊತೆಗೆ ಹೆಣ್ಣಿನ ಹುಟ್ಟಿನಿಂದಲೇ ಬಂದಿರುವ ಕುಂಕುಮ, ಬಳೆಗಳನ್ನೂ ಅಳಿಸಿ ಹಾಕುವ ಪದ್ಧತಿ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಗಂಡ ಸತ್ತ ಬಳಿಕ, ಹೆಣ್ಣು ಸುಂದರವಾಗಿ ಕಾಣಬಾರದು, ಆಕೆಯ ದೃಷ್ಟಿ ಬೇರೊಬ್ಬ ಗಂಡಸಿನ ಮೇಲೆ ಅಥವಾ ಯಾವುದೇ ಗಂಡಸಿನ ದೃಷ್ಟಿ ಆಕೆಯ ಮೇಲೆ ಬೀಳಬಾರದು ಎಂದು ತಲೆ ಕೂಡ ಬೋಳಿಸುತ್ತಾರೆ. ಹೆಣ್ಣು ಎಷ್ಟೇ ಸುಂದರವಾಗಿದ್ದರೂ ಸಾಧ್ಯವಾದಷ್ಟು ಆಕೆಯನ್ನು ಕುರೂಪಗೊಳಿಸಿ ಮನೆಯಲ್ಲಿ ಕುಳ್ಳರಿಸುವುದು ಉಂಟು.
ಬಿಟ್ಟಿ ಸಿಗತ್ತೆ ಎಂದು ಬಾಚಿಕೊಳ್ಳುವ ಬುದ್ಧಿ... ಸತ್ಯ ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ ಗರಂ
ಅರಿಶಿಣ-ಕುಂಕುಮ, ಹೂವಿನ ಭಾಗ್ಯದಿಂದ ವಿಧವೆಯರನ್ನು ದೂರವಿಡುವ ಪದ್ಧತಿ ವಿರುದ್ಧ ಜೀ ಟಿವಿಯಲ್ಲಿ ಪ್ರಸಾರ ಆಗುವ ಸತ್ಯ ಸೀರಿಯಲ್ಯಲ್ಲಿ ಸುಂದರವಾಗಿ ಬಣ್ಣಿಸಲಾಗಿದೆ. ಬರೀ ಕೆಟ್ಟದ್ದನ್ನೇ ತೋರಿಸುವ ಹೆಚ್ಚಿನ ಧಾರಾವಾಹಿಗಳಲ್ಲಿ ಸಮಾಜಕ್ಕೆ ತಿಳಿವಳಿಕೆ ನೀಡುವ ಇಂಥ ದೃಶ್ಯಗಳನ್ನು ಸಾಧ್ಯವಾದಷ್ಟು ನೀಡಿದರೆ ಅದು ಜನರಿಗೆ ಬಹುಬೇಗ ತಲುಪುತ್ತದೆ ಎನ್ನುವ ಕಾರಣಕ್ಕೆ ಅಸಂಖ್ಯ ಪ್ರೇಕ್ಷಕರು ಧಾರಾವಾಹಿಯ ಈ ದೃಶ್ಯಕ್ಕೆ ತುಂಬಾ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಧಾರಾವಾಹಿಯ ನಾಯಕಿ ಸತ್ಯಾಳಿಗೆ ಅಪ್ಪ-ಅಜ್ಜ ಇಲ್ಲ. ಆಕೆಯ ವಿಧವೆಯರಾದ ತಾಯಿ ಮತ್ತು ಅಜ್ಜಿ ಸತ್ಯಳ ಗಂಡನ ಮನೆಗೆ ಬಂದಾಗ ಸತ್ಯಳ ಅತ್ತೆ ಅವರಿಗೆ ಅರಿಶಿಣ ಕುಂಕುಮ ನೀಡುವಂತೆ ಹೇಳುತ್ತಾಳೆ. ಇದನ್ನು ಕೇಳಿ ಸತ್ಯಳ ಅಮ್ಮ ಹಾಗೂ ಅಜ್ಜಿಗೆ ತುಂಬಾ ಅಚ್ಚರಿಯಾಗುತ್ತದೆ. ಇದು ತಮಗ್ಯಾಕೆ ಎಂದು ಅಚ್ಚರಿಯಿಂದ ಕೇಳುತ್ತಾರೆ. ಆಗ ಸತ್ಯಳ ಅತ್ತೆ ಸೀತಮ್ಮಾ ನುಡಿಯುವ ಮಾತು ಈಗ ಸಕತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಕಾರಣವಾಗಿದೆ.
ಅಷ್ಟಕ್ಕೂ ಸೀತಮ್ಮಾ ಹೇಳುವುದು ಏನೆಂದರೆ, ನೋಡಿ, ಕುಂಕುಮ, ಹೂವು, ಬಳೆ ಎನ್ನುವುದು ಹೆಣ್ಣಿಗೆ ಹುಟ್ಟಿನಿಂದ ಬಂದಿರೋ ಸೌಭಾಗ್ಯ. ಅದನ್ನು ಯಾಕೆ ಬೇಡ ಎನ್ನಬೇಕು ನಾವು? ಹೆಣ್ಣಿನ ಬಾಳಲ್ಲಿ ಗಂಡ ಬರುವುದಕ್ಕೂ ಮುಂಚೆನೇ ನಮ್ಮ ಜೊತೆ ಇರುವ ಸಂಪತ್ತು ಇದು. ಹಿಂದಿನ ಕಾಲದಲ್ಲಿ ಆ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದರೂ, ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಮುಜುಗರ ಇಲ್ಲದೇ ತೆಗೆದುಕೊಳ್ಳಿ. ಇದರಲ್ಲಿ ಯಾವ ತಪ್ಪೂ ಇಲ್ಲ ಎನ್ನುತ್ತಾರೆ. ಅದಕ್ಕೆ ತಲೆದೂಗುವ ಸತ್ಯಳ ಮಾವ, ಮುತ್ತಿನಂಥ ಮಾತು ಹೇಳಿದೆ ಸೀತಾ ಎನ್ನುತ್ತಾರೆ. ನಂತರ ಸತ್ಯಳ ಅಮ್ಮ ಮತ್ತು ಅಜ್ಜಿ ಅರಿಶಿಣ-ಕುಂಕುಮ, ಬಾಗೀನ, ಹೂವು ಪಡೆದುಕೊಳ್ಳುತ್ತಾರೆ. ಇದನ್ನು ನೋಡಿ ಸತ್ಯಳಿಗೂ ಖುಷಿಯಾಗುತ್ತದೆ. ಯಾವ ಹೆಣ್ಣು ಬಯಸೋದು ಹಣ-ಆಸ್ತಿ ಅಲ್ಲ, ತವರು ಮನೆಯವರಿಗೆ ಗಂಡನ ಮನೆಯಲ್ಲಿ ಮರ್ಯಾದೆ ಕೊಟ್ಟರೆ ಅದೇ ದಿಟ್ಟ ಆಸ್ತಿ. ನೀವು ನಿಜಕ್ಕೂ ಪ್ರಪಂಚಕ್ಕೇ ಮಾದರಿ ಎಂದು ಮನಸ್ಸಿನಲ್ಲಿ ಅತ್ತೆಯನ್ನು ಕೊಂಡಾಡುತ್ತಾಳೆ. ಈ ದೃಶ್ಯ ಪ್ರೇಕ್ಷಕರಿಗೆ ಖುಷಿ ತರಿಸಿದೆ. ನಿಜಕ್ಕೂ ಇಂಥ ದೃಶ್ಯಗಳು ಎಲ್ಲರಿಗೂ ಮಾದರಿ ಎನ್ನುತ್ತಿದ್ದಾರೆ.
'ಬಾದಲ್ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್ ಡ್ಯಾನ್ಸ್: ಮೆಸ್ ಸುಟ್ಟೋದ್ರೂ ಹೀಗ್ ಮಾಡೋದಾ ಅಂದ ಫ್ಯಾನ್ಸ್