ತುಳಸಿ ಮಾಡಿದ ಐಸ್​ಕ್ರೀಂ ಎಡವಟ್ಟಾಗಿ ಪಾಯಸದ ರೀತಿ ಆಗಿದೆ. ಆದರೆ ಮಾಧವ್​ ಅದನ್ನು ತಿಂದು ಆಡಿದ ಮಾತಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಏನಪ್ಪಾ ವಿಷಯ? 

ಹೊರಗೆ ದುಡಿಯುವ ಗಂಡಂದಿರಿಗೆ ತಿಂಗಳಿಗೆ ಇಂತಿಷ್ಟು ಸಂಬಳ, ಇಂತಿಷ್ಟು ರಜೆ, ರೆಸ್ಟು ಅದು, ಇದು ಎಲ್ಲವೂ ಇರುತ್ತದೆ. ಆದರೆ ಮನೆಯಲ್ಲಿ ಇರುವ ಪತ್ನಿಯರದ್ದು 24/7 ಕೆಲಸ. ಇದರಲ್ಲಿ ಸಂಬಳವೂ ಇಲ್ಲ. ರಜೆಯೂ ಇಲ್ಲ. ಮನೆಯಲ್ಲಿ ಎಲ್ಲರನ್ನೂ ಸಂಭಾಳಿಸಿಕೊಂಡು ಎಲ್ಲರ ಇಷ್ಟಾನಿಷ್ಟಗಳನ್ನು ನೋಡಿಕೊಂಡು, ಮಕ್ಕಳ ಲಾಲನೆ ಪಾಲನೆ ಮಾಡಿಕೊಂಡು, ಹಿರಿಯರು ಇದ್ದರೆ ಅವರ ಆರೋಗ್ಯವನ್ನು ನೋಡಿಕೊಂಡು... ಅಬ್ಬಬ್ಬಾ ಒಂದೋ, ಎರಡೋ ಕೆಲಸ. ಅದರಲ್ಲಿಯೂ ಕೂಡು ಕುಟುಂಬವಿದ್ದರಂತೂ ಮುಗಿದೇ ಹೋಯ್ತು. ದಿನದಲ್ಲಿ 24 ಗಂಟೆ ಮಹಿಳೆಗೆ ಸಾಕಾಗುವುದೇ ಇಲ್ಲ. ಕೂಡು ಕುಟುಂಬ ಇಲ್ಲದಿದ್ದರೂ 2-3 ಮಕ್ಕಳಿದ್ದಾಗಲೂ ಹೆಂಗಸರ ಪಾಡು ಇಂದಿನ ಕಾಲದಲ್ಲಿ ಕಷ್ಟವೇ. ಇವರಿಗೆ ಆಗಿದ್ದು, ಅವರಿಗೆ ಆಗಲ್ಲ, ಇವರಿಬ್ಬರಿಗೆ ಆಗಿದ್ದು ಗಂಡನಿಗೆ ಆಗಲ್ಲ. ಎಲ್ಲರ ರುಚಿಗೆ ತಕ್ಕಂತೆ ಅಡುಗೆ ಮಾಡಿ ಬಡಿಸುವುದೇ ದೊಡ್ಡ ಸವಾಲು. ಇದರ ಹೊರತಾಗಿಯೂ ಗೃಹಿಣಿಯರಿಗೆ ಸಿಗುವ ಟ್ರೀಟ್​ಮೆಂಟೇ ಬೇರೆ.

ಅದೇನೇ ಇದ್ದರೂ, ಗೃಹಿಣಿಯಾದವಳು ಬಯಸುವುದು ಅವಳ ಶ್ರಮಕ್ಕೆ ತಕ್ಕ ಹೊಗಳಿಕೆಯಲ್ಲ, ಬದಲಿಗೆ ಅವಳು ಮಾಡುವ ಅಡುಗೆಗೆ ನಾಲ್ಕು ಮೆಚ್ಚುಗೆ ಮಾತುಗಳು. ಎಷ್ಟೋ ಸಂದರ್ಭದಲ್ಲಿ ಮನೆಯಲ್ಲಿ ಅಡುಗೆ ಏನೋ ಎಡವಟ್ಟು ಆಗಿಬಿಟ್ಟರೆ ಬಾಯಿಗೆ ಬಂದಂತೆ ಬೈಯುವುದು ಇದೆ, ಅದೇ ಅಡುಗೆ ಚೆನ್ನಾಗಿ ಮಾಡಿದಾಗ ಅದನ್ನು ಹೊಗಳಲು ಅಹಂ ಅಡ್ಡಿಯಾಗುತ್ತದೆ. ಇದೆಲ್ಲವುಗಳ ಹೊರತಾಗಿಯೂ ಪತ್ನಿ ಮಾಡುವ ಅಡುಗೆಯನ್ನು ಮೆಚ್ಚುವ ಗಂಡಂದಿರೂ ಇದ್ದಾರೆ. ಏನೋ ಅವಸರದಲ್ಲಿಯೋ, ಅಥವಾ ಯಾವುದೋ ಮೂಡ್​ನಲ್ಲಿ ಇದ್ದಾಗ ಪತ್ನಿ ರುಚಿಕಟ್ಟಾದ ಅಡುಗೆ ಮಾಡದಿದ್ದರೂ ಇರಲಿ ಬಿಡು, ದಿನವೂ ಚೆನ್ನಾಗಿಮಾಡುತ್ತಿಯಾ, ಇವತ್ತೊಂದು ದಿನ ಏನೋ ಆಗಿದೆ ನೋ ಪ್ರಾಬ್ಲೆಮ್​ ಎನ್ನುವವರೂ ಇದ್ದಾರೆ. ಇದೇ ರೀತಿಯ ಗಂಡ ಶ್ರೀರಸ್ತು ಶುಭಮಸ್ತುವಿನ ಮಾಧವ್​.

ಮದ್ವೆ ಎಂದ್ರೆ ವರ್ಕ್​ಷಾಪ್​... ಅಮೃತಧಾರೆ ನಟಿಯರು ವಿವರಿಸಿದ್ದು ಕೇಳಿ ಪುರುಷರು​ ಗರಂ!

ಇದು ವಯಸ್ಸು ಮೀರಿದ ಮದುವೆಯ ಕಥೆ. ಇಲ್ಲಿ ಮದುವೆಯಾದ ಮಕ್ಕಳ ಅಪ್ಪ-ಅಮ್ಮನಾಗಿರುವ ಮಾಧವ್​ ಮತ್ತು ತುಳಸಿ ಮದುಮಕ್ಕಳು. ತುಳಸಿ ನವವಿವಾಹಿತೆಯ ರೀತಿಯಲ್ಲಿ ಗಂಡನ ಮನೆಯಲ್ಲಿ ಎಲ್ಲರ ಪ್ರೀತಿ ದಕ್ಕಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸುದೀರ್ಘ ಹೋರಾಟದ ಬಳಿಕ ಪತಿಯ ಒಬ್ಬ ಮಗನ ಪ್ರೀತಿ ಸಿಕ್ಕಿದೆ. ಗಂಡ, ಮೈದುನ ಅವರಿಗೆ ತುಳಸಿ ಕಂಡರೆ ಪ್ರಾಣ. ಇನ್ನು ಸೊಸೆ ಪೂರ್ಣಿಗೂ ಇವಳು ಅಮ್ಮನ ಸಮಾನ. ಉಳಿದವರೆಲ್ಲರೂ ತುಳಸಿಯನ್ನು ದ್ವೇಷಿಸುವವರೇ. ಯಾರೇ ದ್ವೇಷಿಸಲಿ, ಪತಿ ಎನ್ನಿಸಿಕೊಂಡವರ ಜೊತೆಯಾಗಿದ್ದರೆ ಎಂಥ ಹೋರಾಟವನ್ನು ಎದುರಿಸಬಹುದು ಎನ್ನುವುದಕ್ಕೂ ಈ ಸೀರಿಯಲ್​ ಸಾಕ್ಷಿಯಾಗಿದೆ.

ಇದರಲ್ಲಿ ಮಾಧವ್​ಗೆ ತುಳಸಿ ಐಸ್​ಕ್ರೀಂ ಮಾಡಲು ಹೋಗಿದ್ದಾಳೆ. ಮಾಡುತ್ತಿರುವ ಮಧ್ಯೆ ಮಗ-ಸೊಸೆಯ ಕರೆ ಬಂದಿದೆ. ವಾಪಸ್​ ಬಂದಾಗ ಐಸ್​ಕ್ರೀಂಗೆ ಏನು ಹಾಕಿದ್ದೇನೆ ಎಂದು ಮರೆತು ಹೋಗಿದೆ. ಆದ್ದರಿಂದ ಅದನ್ನು ಗಂಡ ಮಾಧವ್​ಗೆ ಕೊಡಲು ಹಿಂದೇಟು ಹಾಕಿದ್ದಾಳೆ. ಆದರೆ ಮಾಧವ್​ ಅದನ್ನು ತಂದುಕೊಡುವಂತೆ ಕೇಳಿದ್ದಾನೆ. ತುಳಸಿ ನಡೆದ ವಿಷಯವನ್ನೆಲ್ಲಾ ಹೇಳುತ್ತಾ, ಕೊಡಲು ಮುಜುಗರ ಪಟ್ಟುಕೊಂಡಿದ್ದಾಳೆ. ಐಸ್​ಕ್ರೀಂ, ಪಾಯಸದಂತಾಗಿದೆ. ಮಾಧವ್​ ಅದನ್ನು ನೋಡಿ ನಕ್ಕರು ಮನಸಾರೆ ಅದನ್ನು ತಿಂದಿದ್ದಾರೆ. ಐಸ್​ಕ್ರೀಂ ಚೆನ್ನಾಗಿದೆ ಎಂದು ತುಳಸಿಯನ್ನು ಹೊಗಳಿದ್ದಾನೆ. ಇದಕ್ಕೆ ನೆಟ್ಟಿಗರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಪ್ರತಿ ಹೆಣ್ಣು ಬಯಸುವುದೂ ಇದೇ ಒಂದು ಅಣಿಮುತ್ತು ತಾನೇ ಎನ್ನುತ್ತಿದ್ದಾರೆ. ಗಂಡನ ಬಾಯಲ್ಲಿ ತುಂಬಾ ಚೆನ್ನಾಗಿದೆ ಎನ್ನುವ ಮಾತು ಬಂದರೆ ಹೆಚ್ಚಿನ ಗೃಹಿಣಿಯರಿಗೆ ಅದೇ ಸ್ವರ್ಗ ಎನ್ನುವುದು ಸುಳ್ಳಲ್ಲ ಎನ್ನುತ್ತಿದ್ದಾರೆ. 

ಆಹಾ! ಗಂಡನ ಸತಾಯಿಸುವುದು ಎಂದ್ರೆ ಹೆಂಡ್ತಿಗೆ ಎಷ್ಟು ಖುಷಿ ಅಲ್ವಾ? ಸೀರಿಯಲ್​ ಪ್ರೇಮಿಗಳು ಹೇಳ್ತಿರೋದೇನು?