Ashika Padukone Birthday: ಜೀ ತೆಲುಗು ವಾಹಿನಿಯ ಸೂಪರ್‌ಹಿಟ್ ಧಾರಾವಾಹಿ 'ತ್ರಿನಯನಿ' ಮೂಲಕ ಮನೆಮಾತಾದ ನಟಿ ಆಶಿಕಾ ಗೋಪಾಲ್‌ ಪಡುಕೋಣೆ ಇಂದು ಬಹುಭಾಷಾ ಕಿರುತೆರೆ ತಾರೆಯಾಗಿ ಮಿಂಚುತ್ತಿದ್ದಾರೆ.

ಜೀ ತೆಲುಗು ವಾಹಿನಿಯ ಸೂಪರ್‌ಹಿಟ್ ಧಾರಾವಾಹಿ 'ತ್ರಿನಯನಿ' ಮೂಲಕ ಮನೆಮಾತಾದ ನಟಿ ಆಶಿಕಾ ಗೋಪಾಲ್‌ ಪಡುಕೋಣೆ ಇಂದು ಬಹುಭಾಷಾ ಕಿರುತೆರೆ ತಾರೆಯಾಗಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಈಗ ಹಿಂದಿ ಕಿರುತೆರೆಯಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿರುವ ಆಶಿಕಾ, ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಆ ಸಂಭ್ರಮದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ವಿಶೇಷವಾದ ಬರಹವೊಂದನ್ನು ಶೇರ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋಸ್ಟ್‌ನಲ್ಲೇನಿದೆ?

ಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದು ಪ್ರೀತಿ, ಸಂತೋಷ ಮತ್ತು ನಮ್ಮ ಬದುಕನ್ನು ಸಂಪೂರ್ಣಗೊಳಿಸುವ ಸಂಬಂಧಗಳು ಎಂಬುದನ್ನು ಜೀವನವೇ ಬಹಳ ಬೇಗ ಕಲಿಸಿತು. ಅದಕ್ಕಾಗಿಯೇ ಪ್ರೀತಿ, ನಗು ಮತ್ತು ತಮ್ಮೊಂದಿಗೆ ಸದಾ ನಿಂತಿರುವ ಜನರನ್ನು ಸದಾ ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಜೀವನದ ಪಯಣದಲ್ಲಿ ಜೊತೆಯಾಗಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, "ನನ್ನನ್ನು ಪ್ರೀತಿಸುವ, ಬೆಂಬಲಿಸುವ ಮತ್ತು ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ಸದಾ ಋಣಿ.

ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಮಯ ತೆಗೆದುಕೊಂಡ ಕುಟುಂಬದವರು, ಸ್ನೇಹಿತರು, ಆತ್ಮೀಯರು ಹಾಗೂ ವರ್ಷಗಳಿಂದ ನನ್ನನ್ನು ಬೆಂಬಲಿಸುತ್ತಿರುವ ಎಲ್ಲ ಅಭಿಮಾನಿಗಳ ಪ್ರೀತಿ ನನಗೆ ಅಪಾರ ಸಂತೋಷ ನೀಡಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೃತ್ಪೂರ್ವಕವಾಗಿ ಕೃತಜ್ಞಳಾಗಿದ್ದೇನೆ" ಎಂದು ಹೇಳಿದ್ದಾರೆ. "ಇನ್ನೊಂದು ಸುಂದರ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಈ ಹೊಸ ವರ್ಷ ಮತ್ತಷ್ಟು ಬೆಳವಣಿಗೆ, ಸಂತೋಷ ಮತ್ತು ಮರೆಯಲಾಗದ ನೆನಪುಗಳನ್ನು ನೀಡಲಿ. ಬದುಕಿಗೆ ಚಿಯರ್ಸ್" ಎಂದು ಅವರು ತಮ್ಮ ಪೋಸ್ಟ್‌ ಅನ್ನು ಮುಕ್ತಾಯಗೊಳಿಸಿದ್ದಾರೆ.

ದೊಡ್ಡ ಮಟ್ಟದ ಜನಪ್ರಿಯತೆ

ಮೂಲತಃ ಉಡುಪಿ ಜಿಲ್ಲೆಯವರಾದ ಆಶಿಕಾ ಗೋಪಾಲ್‌ ಪಡುಕೋಣೆ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಖಾಸಗಿ ಕಂಪನಿಯ ಉದ್ಯೋಗವನ್ನು ತೊರೆದು ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಸ್ಟಾರ್ ಸುವರ್ಣ ವಾಹಿನಿಯ 'ನಿಹಾರಿಕಾ' ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶಿಸಿದರು. ನಂತರ 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ಅಭಿನಯಿಸಿದ ಬಳಿಕ ತೆಲುಗು ಕಿರುತೆರೆಯತ್ತ ಮುಖ ಮಾಡಿ, ಸ್ಟಾರ್ ಮಾ ವಾಹಿನಿಯ 'ಕಥಲೋ ರಾಜಕುಮಾರಿ', ಸನ್ ಟಿವಿಯ 'ಸೆಲ್ವಿ' ಹಾಗೂ ಜೀ ತೆಲುಗಿನ 'ತ್ರಿನಯನಿ' ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದರು. 'ತ್ರಿನಯನಿ' ಕನ್ನಡಕ್ಕೂ ಡಬ್‌ ಆಗಿ ಪ್ರಸಾರವಾಗಿದ್ದು, ಆಶಿಕಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು.

ತೆಲುಗು ಮತ್ತು ತಮಿಳಿನ ಬಳಿಕ ಆಶಿಕಾ ಈಗ ಹಿಂದಿ ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶಾರದೆ' ಧಾರಾವಾಹಿಯ ಹಿಂದಿ ಅವತರಣಿಕೆಯಾದ 'ಶೆಹ್ಜಾದಿ ಹೈ ತೂ ದಿಲ್ ಕಿ' ಮೂಲಕ ಅವರು ಹಿಂದಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಮೂಲತಃ ತೆಲುಗಿನ 'ಚೆಲ್ಲಮ್ಮ' ಧಾರಾವಾಹಿಯ ಕಥೆಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಧಾರಾವಾಹಿಯಲ್ಲಿ ಆಶಿಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಆಶಿಕಾಗೆ ಅಭಿಮಾನಿಗಳು ಮತ್ತು ಕಿರುತೆರೆ ಕಲಾವಿದರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

View post on Instagram