ಸೀರಿಯಲ್​ ನಾಯಕಿ ಎಂದರೆ ಸಹನಾಮೂರ್ತಿ, ಅಳುಮುಂಜಿ ಎಂದೆಲ್ಲಾ ಪರಿಕಲ್ಪನೆ ಇಂದು ಬದಲಾಗಿದೆ. ಇದಕ್ಕೆ ಈ ಸೀರಿಯಲ್​ಗಳೇ  ಸಾಕ್ಷಿ ನೋಡಿ...  

ಸಹನಾಮೂರ್ತಿಯಂತಿದ್ದ, ಅಳುಮುಂಜಿಯೆಂದೇ ಅಂದುಕೊಂಡಿದ್ದ ಪುಟ್ಟಕ್ಕನ ಮಗಳು ಸಹನಾ, ತನ್ನ ಮೇಲೆ ಆಗಿರುವ ದೌರ್ಜನ್ಯವನ್ನು ಖಂಡಿಸಿ ಅತ್ತೆ ಹೇಳಿದ ಕಾರಣ, ತಾಳಿಯನ್ನೇ ತೆಗೆದುಕೊಟ್ಟಳು. ಅಮೃತಧಾರೆಯಲ್ಲಿ ಜೈದೇವನ ಹೆಂಡ್ತಿ ಮಲ್ಲಿಗೆ ಆಗ್ತಿರೋ ಅವಮಾನವನ್ನು ಭೂಮಿಕಾ ಸೌಮ್ಯ ರೂಪದಲ್ಲಿಯೇ ಮುಖಕ್ಕೆ ಹೊಡೆದವರ ಥರ ತಿರುಗೇಟು ನೀಡಿದಳು, ಪತಿ-ಮಕ್ಕಳು ಅಂತೆಲ್ಲಾ ಹೇಳಿದ್ದನ್ನು ಕೇಳಿಕೊಂಡು ಎಲ್ಲವನ್ನೂ ಸಹಿಸಿಕೊಂಡಿದ್ದ ಭಾಗ್ಯಲಕ್ಷ್ಮಿ, ಮಗಳಿಗೆ ಕೇಡು ಮಾಡಿದ ಟೀಚರ್​ ವಿರುದ್ಧವೇ ತಿರುಗಿ ಬಿದ್ದಳು... ಹೀಗೆ ಇಂದಿನ ಧಾರಾವಾಹಿಗಳ ಕಾನ್ಸೆಪ್ಟ್​ ಬದಲಾಗುತ್ತಿದೆ ಎಂದೇ ಬಿಂಬಿತವಾಗುತ್ತಿದೆ.

ಹಿಂದೆಲ್ಲಾ, ಸೀರಿಯಲ್​ಗಳಲ್ಲಿ ಹೆಣ್ಣು ಎಂದರೆ ಪ್ರತಿಭಟಿಸಿದ್ದು ಕಡಿಮೆಯೇ. ಅದೇನೇ ಇದ್ದರೂ ಘಾಟಿ ಹೆಂಗಸು, ವಿಲನ್​ಗಷ್ಟೇ ಸೀಮಿತವಾಗಿತ್ತು. ಹೀರೋಯಿನ್​ ಎಂದರೆ ಎಲ್ಲವನ್ನೂ ಸಹಿಸಿಕೊಂಡು ಇರುವವಳೇ ಎನ್ನುವುದಾಗಿತ್ತು. ಇಂದಿನ ಸೀರಿಯಲ್​ಗಳಲ್ಲಿಯೂ ಈ ಕಾನ್​ಸೆಪ್ಟ್​ ಇಲ್ಲವೆಂದೇನಲ್ಲ. ಕೆಲವು ಧಾರಾವಾಹಿಗಳಲ್ಲಿ ನಾಯಕಿಯರು ಅತೀ ಎನಿಸುವಷ್ಟು ಮುಗ್ಧರಾಗಿ ಇರುವುದೂ ಇದೆ. ವಿಲನ್​ಗೆ ಕಪಾಳಮೋಕ್ಷ ಮಾಡಬಾರದೇ ಎಂದು ಎಷ್ಟೋ ಬಾರಿ ನೆಟ್ಟಿಗರು ಹೇಳುತ್ತಿರುವುದೂ ಉಂಟು. ಆದರೆ ಹೀಗೆ ಮಾಡಿದರೆ ಸೀರಿಯಲ್​ಗಳ ಟಿಆರ್​ಪಿ ರೇಟ್​ ಕಡಿಮೆಯಾಗುತ್ತದೆ, ನಾಯಕಿ ಏನಿದ್ದರೂ ಅಳುತ್ತಲೇ ಇರಬೇಕು, ಅವಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಹೆಚ್ಚು ಜನ ನೋಡುತ್ತಾರೆ ಎನ್ನುವ ಪರಿಕಲ್ಪನೆಯೂ ಇತ್ತು. ಆದರೆ ಈಗ ಕಾಲಕ್ಕೆ ತಕ್ಕಂತೆ ಸೀರಿಯಲ್​ಗಳ ಪರಿಕಲ್ಪನೆ ಬದಲಾಗುತ್ತಿದೆ. 

ತಾಳಿಯೇ ಸರ್ವಸ್ವ ಎನ್ನೋ ಪುಟ್ಟಕ್ಕನ ಎದುರೇ ಅದನ್ನು ಕಿತ್ತೆಸೆದ ಮಗಳು! ಸರಿ-ತಪ್ಪುಗಳ ವಿಮರ್ಶೆ ಶುರು...

ಹೌದು. ಇದೀಗ ಧಾರಾವಾಹಿಗಳ ಪ್ರೊಮೋ ಸೋಷಿಯಲ್​ ಮೀಡಿಯಾಗಳಲ್ಲಿ ಬಿಡುಗಡೆಯಾದಾಗ, ಅವುಗಳನ್ನು ಜನರು ಅಕ್ಸೆಪ್ಟ್​ ಮಾಡಿಕೊಳ್ಳುವ ರೀತಿ ಕಂಡರೆ ಕಾಲ ಬದಲಾಗಿದೆ, ವೀಕ್ಷಕರ ಮನಸ್ಥಿತಿಯೂ ಬದಲಾಗುತ್ತಿದೆ ಎನ್ನುವುದು ತಿಳಿದುಬರುತ್ತದೆ. ಅಳುಮುಂಜಿ ರೀತಿ ಅಳ್ತಾ ಕೂರದೇ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೆಣ್ಣು ಸಿಡಿದೇಳಬೇಕು ಅಂತ ಕನ್ನಡ ಸೀರಿಯಲ್ಸ್ ತೋರಿಸುವಷ್ಟು ಪ್ರಗತಿಪರ ಆಗುತ್ತಿದೆ. ಅದನ್ನು ವೀಕ್ಷಕರು ಅಕ್ಸೆಪ್ಟ್ ಮಾಡುತ್ತಿರುವುದು ಒಳ್ಳೇ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ. 

ಅಷ್ಟಕ್ಕೂ ಸೀರಿಯಲ್​ಗಳು ಟಿಆರ್​ಪಿ ಮೇಲೆ ನಿಂತಿವೆ. ಟಿಆರ್​ಪಿ ರೇಟ್​ ಕಡಿಮೆಯಾಗುತ್ತಿದ್ದರೆ, ಸೀರಿಯಲ್​ಗಳ ಕಥೆಯನ್ನೇ ಬದಲಿಸಲಾಗುತ್ತದೆ. ಅಂಥ ಸಂದರ್ಭದಲ್ಲಿ ಹೆಚ್ಚಾಗಿ ನಾಯಕಿಯರಿಗೆ ವಿಷ ಹಾಕುವುದು ಮಾಮೂಲಾಗಿದೆ. ಈಗಲೂ ಅದೇನೂ ನಿಂತಿಲ್ಲ. ಅಮೃತಧಾರೆ ಸೀರಿಯಲ್​ನಲ್ಲಿ ಜೈದೇವನ ಪತ್ನಿ ಮಲ್ಲಿಗ ವಿಷ ಹಾಕುವುದು, ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಮಗಳು ಸಹನಾಗೆ ಅತ್ತೆ ವಿಷ ಹಾಕುವುದು ಇಂದಿಗೂ ಇದೆ. ವಿಷ ಪ್ರಾಷನ ಮಾಡಿಸಿದ್ದು ಗೊತ್ತಾದ ಮೇಲೂ ನಾಯಕಿ ಅದನ್ನು ಸಹಿಸಿಕೊಂಡು ಇರುವುದು ಇಲ್ಲಿಯವರೆಗಿನ ವಸ್ತುವಾಗಿತ್ತು. ಒಟ್ಟಿನಲ್ಲಿ ಸಹನಾಮೂರ್ತಿ, ತಾಳ್ಮೆಯ ಪ್ರತಿಬಿಂಬ ಎಂದೆಲ್ಲಾ ಹೆಣ್ಣಿಗೆ ಏನು ಬಿರುದುಗಳನ್ನು ನೀಡಲಾಗಿವೆಯೋ ಅವೆಲ್ಲವೂ ಸೀರಿಯಲ್​ ನಾಯಕಿಯಲ್ಲಿ ಇರುತ್ತಿದ್ದವು. ಆದರೆ ಇದೀಗ ಕಾಲ ಬದಲಾಗುತ್ತಿದೆ ಎನ್ನುವುದಕ್ಕೆ ಇಂದಿನ ಸೀರಿಯಲ್​ಗಳೇ ಸಾಕ್ಷಿಯಾಗಿವೆ. ಪುಟ್ಟಕ್ಕನ ಮಗಳು ತಾಳಿ ಕಿತ್ತುಕೊಟ್ಟ ಸಂದರ್ಭದಲ್ಲಿ ನೆಟ್ಟಿಗರು ಅಪಾರ ಪ್ರಮಾಣದಲ್ಲಿ ಮೆಚ್ಚುಗೆಯ ಕಮೆಂಟ್​ ಹಾಕಿರುವುದೂ ಇದಕ್ಕೆ ಸಾಕ್ಷಿಯಾಗಿದೆ. 

ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್​ಗೆ ಶಿಕ್ಷೆ ಆಗತ್ತಾ, ಅಥ್ವಾ..?