Serial Actress Death: ಖ್ಯಾತ ಕಿರುತೆರೆ ನಟಿ ವಾಹಿನಿ ( Vahini ) ನಿಧನರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರ ಸಾವು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ. ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಗೆ ಹಣವಿಲ್ಲದ ಕಾರಣ ವಾಹಿನಿ ಕೊನೆಯುಸಿರೆಳೆದಿದ್ದಾರೆ. 

ಖ್ಯಾತ ಸಿನಿಮಾ ಮತ್ತು ಕಿರುತೆರೆ ನಟಿ ವಾಹಿನಿ ಅಲಿಯಾಸ್ ಪದ್ಮಕ್ಕ (48) ದುರಂತ ಅಂತ್ಯ ಕಂಡಿದ್ದಾರೆ. ನಟಿ ವಾಹಿನಿ ಹೆಚ್ಚಾಗಿ ಕಿರುತೆರೆಯಲ್ಲಿ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಕೆಲವು ಸಿನಿಮಾಗಳಲ್ಲಿ ಪೋಷಕ ಕಲಾವಿದೆಯಾಗಿಯೂ ಮಿಂಚಿದ್ದರು. ವಾಹಿನಿ ಅವರ ಸಾವಿನ ಸುದ್ದಿಯಿಂದ ಅವರ ಆಪ್ತರು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.

‌ಬಲಿ ತಗೊಂಡ ಸ್ತನ ಕ್ಯಾನ್ಸರ್

ವಾಹಿನಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಾಯಿಲೆ ಉಲ್ಬಣಗೊಂಡಿದ್ದರಿಂದ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಚಿಕಿತ್ಸೆಗೆ ಬೇಕಾದ ಹಣವಿಲ್ಲದೆ, ಅವರ ಸ್ಥಿತಿ ಗಂಭೀರವಾದ ಕಾರಣ ಬುಧವಾರ ವಾಹಿನಿ ನಿಧನರಾದರು. ಈ ವಿಷಯವನ್ನು ಅವರ ಆಪ್ತ ಸ್ನೇಹಿತೆ, ನಟಿ ಕರಾಟೆ ಕಲ್ಯಾಣಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಕರಾಟೆ ಕಲ್ಯಾಣಿ ಹೇಳಿದ್ದೇನು?

ಕರಾಟೆ ಕಲ್ಯಾಣಿ ಅವರಿಗೆ ವಾಹಿನಿ ಬಾಲ್ಯದಿಂದಲೇ ಪರಿಚಿತರು. ವಿಜಯನಗರದಲ್ಲಿರುವ ತಮ್ಮ ದೊಡ್ಡಪ್ಪನ ಮನೆಯ ಪಕ್ಕದಲ್ಲೇ ವಾಹಿನಿ ಅವರ ಮನೆಯಿತ್ತು ಎಂದು ಕರಾಟೆ ಕಲ್ಯಾಣಿ ಹೇಳಿದ್ದಾರೆ. ವಾಹಿನಿ ಸಾವಿನಿಂದ ಕರಾಟೆ ಕಲ್ಯಾಣಿ ತುಂಬಾ ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ. 'ವಾಹಿನಿ (ಪದ್ಮಕ್ಕ) ಅಕ್ಕ, ನಿನ್ನನ್ನು ಉಳಿಸಿಕೊಳ್ಳಲು ನಾನು ತುಂಬಾ ಪ್ರಯತ್ನಿಸಿದೆ. ಸ್ವಲ್ಪ ಸಮಯದ ಹಿಂದೆ, ತನ್ನ ಜನ್ಮಸ್ಥಳವಾದ ವಿಜಯನಗರದಲ್ಲಿ ಅವರು ದೇವರ ಪಾದ ಸೇರಿದ್ದಾರೆ. ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ. ವಿ ಮಿಸ್ ಯು. ಪದ್ಮಕ್ಕ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಕರಾಟೆ ಕಲ್ಯಾಣಿ ಪೋಸ್ಟ್ ಮಾಡಿದ್ದಾರೆ.

ಹಣ ಹೊಂದಿಸಲು ಪರದಾಟ

ನಟಿ ವಾಹಿನಿ 1978ರಲ್ಲಿ ವಿಜಯನಗರದಲ್ಲಿ ಜನಿಸಿದರು. ಸಿhನಿಮಾ ಮತ್ತು ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ವಾಹಿನಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ತನ ಕ್ಯಾನ್ಸರ್ ಉಲ್ಬಣಗೊಂಡು ಅವರ ಬಹು ಅಂಗಾಂಗಗಳು ವಿಫಲವಾಗಿದ್ದವು. ಹೀಗಾಗಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಕೀಮೋಥೆರಪಿ ಮತ್ತು ಐಸಿಯು ನಿಗಾ ವೆಚ್ಚಗಳು ತುಂಬಾ ಹೆಚ್ಚಾಗಿದ್ದವು.

ಚಿಕಿತ್ಸೆಗೆ ಸುಮಾರು 35 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಅಷ್ಟು ದೊಡ್ಡ ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿ ಅವರ ಕುಟುಂಬ ಇರಲಿಲ್ಲ. ಹೀಗಾಗಿ ಪದ್ಮಕ್ಕ ಅವರ ಚಿಕಿತ್ಸೆಗೆ ಸಹಾಯ ಮಾಡುವಂತೆ ಈ ಹಿಂದೆ ಕರಾಟೆ ಕಲ್ಯಾಣಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನು ಕೇಳಿಕೊಂಡಿದ್ದರು. ಕೆಲವರು ತಮಗೆ ಸಾಧ್ಯವಾದಷ್ಟು ಸಹಾಯ ಮಾಡಿದರು. ಆದರೆ ಹಣ ಸಾಕಾಗಲಿಲ್ಲ. ಅಷ್ಟರಲ್ಲಿ ವಾಹಿನಿ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತು. 'ಇನ್ನು ಕಷ್ಟ, ಮನೆಗೆ ಕರೆದುಕೊಂಡು ಹೋಗಿ' ಎಂದು ವೈದ್ಯರು ಸ್ಪಷ್ಟಪಡಿಸಿದರು. ಹೀಗಾಗಿ ಅವರು ಬುಧವಾರ ತಮ್ಮ ಸ್ವಂತ ಊರಾದ ವಿಜಯನಗರದಲ್ಲಿ ನಿಧನರಾದರು. ನಟಿ ವಾಹಿನಿ ಧಾರಾವಾಹಿಗಳ ಜೊತೆಗೆ, ನಟ ನರೇಶ್ ಅಭಿನಯದ 'ರಘುಪತಿ ವೆಂಕಯ್ಯ ನಾಯ್ಡು' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.