ಬದಲಾಗ್ತಿದಾರೆ ತುಳಸಿ, ಭಾಗ್ಯಾ.. ; ಪ್ರೇಕ್ಷಕರಿಗೆ ಮಾದರಿಯಾಗಲಿ ನಾಯಕಿ ಪಾತ್ರ..
ಅದೇನೋ ಸೀರಿಯಲ್ ನಿರ್ದೇಶಕರು ನಾಯಕಿ ಎಂದರೆ ನೋವು ನುಂಗಿಕೊಂಡು ಕುಟುಂಬ ಕಾಪಾಡುವವಳು ಎಂಬ ಸೂತ್ರಕ್ಕೇ ಗಂಟು ಬಿದ್ದಿರುತ್ತಾರೆ. ಆದರೆ, ನಿಜವಾಗಿ ನಾಯಕಿ ಎಂದರೆ, ಒಳ್ಳೆಯವಳಾಗಿಯೂ ಆತ್ಮವಿಶ್ವಾಸದಿಂದ ಇರುವುದು..
ಸಾಮಾನ್ಯವಾಗಿ ಧಾರಾವಾಹಿಗಳೆಂದರೆ ಯಾವಾಗಲೂ ವಿಲನ್‌ಗಳ ಕೈಯ್ಯೇ ಮೇಲೆ. ನಾಯಕಿ ಪಾತ್ರಧಾರಿ ಅಳುಮುಂಜಿಯಾಗಿ ಮನೆಮಂದಿ ಹೇಳಿದ್ದೆಲ್ಲ ಹೇಳಿಸಿಕೊಂಡು, ಇನ್ನೊಬ್ಬರ ಕೈಲಿ ಅನ್ನಿಸಿಕೊಂಡು, ಯಾರ ಸಂಚೂ ಅರ್ಥವಾಗದಷ್ಟು ಮುಗ್ಧೆಯಾಗಿ(ದಡ್ಡಿಯಾಗಿ) ಪ್ರೇಕ್ಷಕರಿಗೆ ಮಾತ್ರ ಅತ್ಯಂತ ಒಳ್ಳೆಯವಳೆನಿಸಿಕೊಂಡು ಇರಬೇಕು. ಅದೇನೋ ಸೀರಿಯಲ್ ನಿರ್ದೇಶಕರು ನಾಯಕಿ ಎಂದರೆ ನೋವು ನುಂಗಿಕೊಂಡು ಕುಟುಂಬ ಕಾಪಾಡುವವಳು ಎಂಬ ಸೂತ್ರಕ್ಕೇ ಗಂಟು ಬಿದ್ದಿರುತ್ತಾರೆ.
ಆದರೆ, ನಿಜವಾಗಿ ನಾಯಕಿ ಎಂದರೆ, ಒಳ್ಳೆಯವಳಾಗಿಯೂ ಆತ್ಮವಿಶ್ವಾಸದಿಂದ ಇರುವುದು, ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿ, ಎಲ್ಲಿ ಸುಮ್ಮನಿರಬೇಕೋ ಅಲ್ಲಿ ಸುಮ್ಮನಿರಬೇಕು. ಕೆಟ್ಟವರನ್ನು ಹೆಡೆ ಮುರಿ ಕಟ್ಟಬೇಕು, ಹೊಸ ಹೊಸ ಕೌಶಲ್ಯಗಳನ್ನು ಕಲಿಯುತ್ತಾ ಪ್ರೇಕ್ಷಕರಿಗೆ ಮಾದರಿಯಾಗಬೇಕು. ಜೀವನ ಹೇಗೆ ಸಾಧಿಸಬೇಕೆಂಬುದನ್ನು ಹೇಳದೆಯೇ ಹೇಳಿಕೊಡುವಂತಿರಬೇಕು. ಏಕೆಂದರೆ ಧಾರಾವಾಹಿಗಳನ್ನು ಕುಟುಂಬದ ಮಂದಿ ಎಲ್ಲ ಕುಳಿತು ನೋಡುತ್ತಾರೆ.
ಕನ್ನಡದ ಖ್ಯಾತ ಸಾಹಿತಿಯ ಮರಿ ಮೊಮ್ಮಗಳು ಅದಿತಿ ರಾವ್ ಹೈದರಿ; ಸರ್ನೇಮ್ ...
ಅದ್ಯಾಕೆ ನಿರ್ದೇಶಕರು ಈ ವಿಷಯ ಅರ್ಥ ಮಾಡಿಕೊಳ್ಳುವುದಿಲ್ಲವೋ ಗೊತ್ತಿಲ್ಲ. ಆದರೆ, ಈಗೀಗ ಕೆಲ ಧಾರಾವಾಹಿಗಳಲ್ಲಿ ನಾಯಕಿಯರ ವ್ಯಾಖ್ಯಾನ ಕೊಂಚ ಬದಲಾಗುತ್ತಿದೆ. ಮನೆಯೊಳಗಿನ ಬದುಕಿಗೇ ಸೀಮಿತವಾಗಿದ್ದ ಭಾಗ್ಯಲಕ್ಷ್ಮಿಯ ಭಾಗ್ಯಾ ದುಡಿಯಲು ಹೋಗುವುದು, ಓದುವುದಿರಬಹುದು, ಅಮೃತಧಾರೆಯ ಭೂಮಿಕಾಗೆ ಮನೆಯ ವಿಲನ್‌ಗಳ ನಡೆ ಅರ್ಥವಾಗುವುದಿರಬಹುದು, ಸತ್ಯ ಪೋಲೀಸ್ ಆಗಿರುವುದಿರಬಹುದು, ಅಂತೆಯೇ ಶ್ರೀರಸ್ತು ಶುಭಮಸ್ತುವಿನ ತುಳಸಿ ತನ್ನ ವಯಸ್ಸನ್ನು ಪರಿಗಣಿಸದೆ ನೃತ್ಯ, ಡ್ರೈವಿಂಗ್ , ಇಂಗ್ಲಿಷ್ ಕಲಿತಿದ್ದಿರಬಹುದು- ಇಂಥ ಬದಲಾವಣೆಯನ್ನು ಧಾರಾವಾಹಿ ಲೋಕ ತೋರಿಸಬೇಕು.
ಈ ಬದಲಾವಣೆಗಳಿಗೆ ಪ್ರೇಕ್ಷಕವರ್ಗ ಎಷ್ಟೊಂದು ಥ್ರಿಲ್ ಆಗಿದ್ದಾರೆ ಎಂಬುದನ್ನು ಸೋಷ್ಯಲ್ ಮೀಡಿಯಾದಲ್ಲಿನ ಪ್ರತಿಕ್ರಿಯೆಗಳೇ ಹೇಳುತ್ತವೆ.
ವಿಮಾನ ಖರೀದಿಸಿದ ಮೊದಲ ಭಾರತೀಯ ಈ ಮಹಾರಾಜನಿಗಿದ್ದಿದ್ದು 360 ಪತ್ನಿಯರು ...
ಹೆಣ್ಣನ್ನು ಅಬಲೆಯಂತೆ ತೋರಿಸುವುದು ಬಿಟ್ಟು ಸಬಲೆಯಾಗಿ ತೋರಿಸಬೇಕು. ಅವರು ಕಷ್ಟದ ಪರಿಸ್ಥಿತಿಯಲ್ಲಿ ಹೇಗೆ ಗಟ್ಟಿಯಾಗಿ ನಿಲ್ಲುತ್ತಾರೆ, ಹೇಗೆ ಹೊಸತನ್ನು ಕಲಿತು ಬದುಕನ್ನು ಉತ್ತಮಗೊಳಿಸಿಕೊಳ್ಳುತ್ತಾರೆ, ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಲು ಸಾಧ್ಯ ಎಂಬುದನ್ನು ಧಾರಾವಾಹಿಗಳು ತೋರಿಸಬೇಕು. ಏಕೆಂದರೆ, ಧಾರಾವಾಹಿ ಮಾಧ್ಯಮಗಳು ನೋಡುವ ಪ್ರೇಕ್ಷಕವರ್ಗದ ಮೇಲೆ ಅಗಾಧ ಪರಿಣಾಮ ಬೀರುತ್ತವೆ.
ಮೊದಲೆಲ್ಲ ರಾಜ್‌ಕುಮಾರ್ ಚಿತ್ರಗಳು ಸಾಕಷ್ಟು ಒಳ್ಳೆಯತನವನ್ನು ತೋರಿಸುತ್ತಲೇ ಮಾದರಿಯಾಗುತ್ತಿದ್ದವು. ಹೇಗೆ ಬದುಕಬೇಕೆಂದು ನೀತಿಪಾಠ ಹೇಳಿಕೊಡುತ್ತಿದ್ದವು. ಆದರೆ ಈಗೀಗ ಚಲನಚಿತ್ರಗಳು ರೌಡಿಸಂನ್ನೇ ಮುಖ್ಯ ಮಾಡಿ ತೋರಿಸುತ್ತವೆ, ಕ್ರೌರ್ಯ ತೋರಿಸಲು ಮಿತಿಯೇ ಇಲ್ಲವಾಗಿದೆ. ಹೀರೋ ಕೂಡಾ ದೊಡ್ಡ ವಿಲನ್ ಪಾತ್ರ ಮಾಡುತ್ತಾನೆ, ನೂರಾರು ಜನರನ್ನು ಸಾಯಿಸುತ್ತಾನೆ, ಪಶ್ಚಾತ್ತಾಪವಿಲ್ಲದೆ ಗೆಲ್ಲುತ್ತಾನೆ- ಇದರಿಂದ ಸಮಾಜಕ್ಕೆ ಖಂಡಿತಾ ಯಾವುದೇ ಸಂದೇಶ ಸಿಗೋದಿಲ್ಲ.. ಕನಿಷ್ಠ ಪಕ್ಷ ಧಾರಾವಾಹಿಗಳಾದರೂ ಮಾದರಿ ಪಾತ್ರಗಳನ್ನು ತೋರಿಸುತ್ತಾ, ಉತ್ತಮ ಕತೆಗಳನ್ನು ಹೆಣೆದರೆ ಪ್ರೇಕ್ಷಕವರ್ಗಕ್ಕೆ ಉತ್ತಮ ಸಂದೇಶ ಹೋಗುತ್ತದೆ. ಪ್ರೇರಣೆ ಸಿಗುತ್ತದೆ.