ಕನ್ನಡದ ಖ್ಯಾತ ಸಾಹಿತಿಯ ಮರಿ ಮೊಮ್ಮಗಳು ಅದಿತಿ ರಾವ್ ಹೈದರಿ; ಸರ್‌ನೇಮ್‌ಗಳ ವೈಶಿಷ್ಠ್ಯತೆಯೇನು?
ಅದಿತಿ ರಾವ್ ಹೈದರಿ ತಮ್ಮ ಹೆಸರಿನ ಸರ್‌ನೇಮ್‌ಗಳ ಬಗ್ಗೆ ಮಾತಾಡಿದ್ದಾರೆ. ಅಂದ ಹಾಗೆ, ಈಕೆ ಕನ್ನಡದ ಖ್ಯಾತ ಸಾಹಿತಿಯ ಮರಿಮೊಮ್ಮಗಳಾಗಿದ್ದು, ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಸೋದರ ಸಂಬಂಧಿಯಾಗಿದ್ದಾರೆ.
ಹಿರಾಮಂಡಿಯ 'ಬಿಬ್ಬೋಜಾನ್' ಅದಿತಿ ರಾವ ಹೈದರಿ ಈಚಿನ ದಿನಗಳಲ್ಲಿ ನಟನೆ, ಕೇನ್ಸ್ ಫೆಸ್ಟಿವಲ್‌ನಲ್ಲಿ ಭಾಗಿ, ತನ್ನ ವೈಯಕ್ತಿಕ ಸಂಬಂಧ, ಪ್ಲ್ಯಾಸ್ಟಿಕ್ ಸರ್ಜರಿ ಮುಂತಾದ ಹಲವಾರು ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿದ್ದಾರೆ.
ಅದೇನೇ ಇರಲಿ, ಈಕೆ ಪ್ರತಿಭಾವಂತೆ ಅನ್ನೋದ್ರಲ್ಲಿ ಡೌಟಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ತನ್ನ ಹೆಸರಿನ ಮುಂದಿರುವ ಸರ್‌ನೇಮ್‌ಗಳ ಬಗ್ಗೆ ಮಾತಾಡಿದ್ದಾಳೆ.
ಅದಿತಿ ತನ್ನ ತಂದೆ ತಾಯಿ ಇಬ್ಬರ ಸರ್‌ನೇಮ್‌ಗಳನ್ನೂ ಹೆಸರಿನ ಮುಂದೆ ಉಳಿಸಿಕೊಂಡಿದ್ದಾಳೆ. ಆಕೆ 2 ವರ್ಷದವಳಿದ್ದಾಗಲೇ ತಾಯಿತಂದೆ ಡೈವೋರ್ಸ್ ಆದರೂ, ತಂದೆಯ ಹೆಸರೂ ತನ್ನ ಕುಟುಂಬದ ಐಡೆಂಟಿಟಿಯಾಗಿರುವುದರಿಂದ ಉಳಿಸಿಕೊಂಡಿದ್ದೇನೆ ಎಂದು ಅದಿತಿ ಹೇಳಿದ್ದಾಳೆ.
ಅದಿತಿಯ ತಂದೆ ಹೈದರಾಬಾದ್ ರಾಜ್ಯದ ಮಾಜಿ ಪ್ರಧಾನಿ ಅಕ್ಬರ್ ಹೈದರಿಯ ಮೊಮ್ಮಗ ಮತ್ತು ಅಸ್ಸಾಂನ ಮಾಜಿ ಗವರ್ನರ್ ಮುಹಮ್ಮದ್ ಸಲೇಹ್ ಅಕ್ಬರ್ ಹೈದರಿಯ ಸೋದರಳಿಯ.
ಅದಿತಿಯ ತಾಯಿ, ವಿದ್ಯಾ ರಾವ್, ಹಿಂದೂಸ್ತಾನಿ ಸಂಗೀತದ ಠುಮ್ರಿ ಮತ್ತು ದಾದ್ರಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಶಾಸ್ತ್ರೀಯ ಗಾಯಕಿ. ಆಕೆಯ ತಾಯಿ (ಅದಿತಿಯ ತಾಯಿಯ ಅಜ್ಜಿ), ಶಾಂತಾ ರಾಮೇಶ್ವರ್ ರಾವ್ ಹೈದರಾಬಾದ್‌ನ ವಿದ್ಯಾರಣ್ಯ ಹೈಸ್ಕೂಲ್‌ನ ಸಂಸ್ಥಾಪಕರು ಮತ್ತು ಪ್ರಕಾಶನ ಸಂಸ್ಥೆಯ ಓರಿಯಂಟ್ ಬ್ಲ್ಯಾಕ್‌ಸ್ವಾನ್ ಅಧ್ಯಕ್ಷರಾಗಿದ್ದರು.
ಈ ಅದಿತಿ ಕನ್ನಡದ ಖ್ಯಾತ ಸಾಹಿತಿ, ಕೊಂಕಣಿ ಹಾಗೂ ಕನ್ನಡದಲ್ಲಿ ಸಾಹಿತ್ಯ ಸೇವೆ ಸಲ್ಲಿಸಿದ ಬಂಟ್ವಾಳ ಮೂಲದ ಪಂಜೆ ಮಂಗೇಶರಾಯರ ಮರಿ ಮೊಮ್ಮಗಳು.
ಹೌದು, ಆಮೀರ್ ಖಾನ್ ಮಾಜಿ ಪತ್ನಿ, ಬಾಲಿವುಡ್ ನಿರ್ದೇಶಕಿ ಕಿರಣ್ ರಾವ್ ಕೂಡಾ ಇದೇ ಹುತ್ತರಿ ಹಾಡು ರಚಿಸಿದ ಪಂಜೆ ಮಂಗೇಶರಾಯರ ಮರಿ ಮೊಮ್ಮಗಳು.
ಅಂದರೆ ಅದಿತಿ ಮತ್ತು ಕಿರಣ್ ರಾವ್ ಹತ್ತಿರದ ಸೋದರ ಸಂಬಂಧಿಯಾಗಿದ್ದಾರೆ. ಮುಸ್ಲಿಂ ತಂದೆ, ಸಾರಸ್ವತ ಬ್ರಾಹ್ಮಣ ಕುಟುಂಬದ ತಾಯಿ(ಬೌದ್ಧ ಧರ್ಮ ಪಾಲಿಸುತ್ತಾರೆ)ಗೆ ಜನಿಸಿದ ಅದಿತಿ ಎರಡೂ ಕಡೆಯಿಂದ ಹೆಸರಾಂತ ಮನೆತನ ಹೊಂದಿದ್ದಾರೆ.
'ಎರಡೂ ಕುಟುಂಬಗಳು ಸುಂದರವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿವೆ ಎಂಬ ಅಂಶದ ಹೊರತಾಗಿ, ನಾನು ಬಹು-ಸಾಂಸ್ಕೃತಿಕ ಕುಟುಂಬದವಳು, ಮತ್ತು ನನ್ನ ಕುಟುಂಬದ ಎರಡೂ ಕಡೆಯವರು ತುಂಬಾ ಆಸಕ್ತಿದಾಯಕವಾಗಿರುವುದರಿಂದ, ನಾನು ಈ ಇಬ್ಬರು ಅದ್ಭುತ ವ್ಯಕ್ತಿಗಳ ಉತ್ಪನ್ನವಾಗಿದ್ದೇನೆ. ಅವರು ಒಟ್ಟಿಗೆ ಇಲ್ಲದಿರಬಹುದು, ಆದರೆ ನಾನು ಅವರಿಬ್ಬರ ಹೆಸರನ್ನೂ ತೆಗೆದುಕೊಳ್ಳುತ್ತೇನೆ' ಎಂದು ಅದಿತಿ ಹೇಳಿದ್ದಾಳೆ.
'ಈ ಅದ್ಭುತ ವ್ಯಕ್ತಿಗಳು ನನ್ನ ಜೀವನದಲ್ಲಿ ಪ್ರಭಾವ ಬೀರಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನಾನು ನನ್ನ ಅಮ್ಮನ ಕುಟುಂಬದೊಂದಿಗೆ ಬೆಳೆದಿದ್ದೇನೆ. ನಾನು ನನ್ನ ತಂದೆಯೊಂದಿಗೆ ಬೆಳೆದಿಲ್ಲ ಆದರೆ ಖಂಡಿತವಾಗಿಯೂ ನಾನು ಅವರನ್ನು ಭೇಟಿಯಾಗಿದ್ದೇನೆ, ಅವರು ತುಂಬಾ ಅದ್ಭುತ ವ್ಯಕ್ತಿ' ಎಂದಿದ್ದಾರೆ.