Vasudeva Kutumba Serial Producer: ಕಲಾವಿದರು ಧಾರಾವಾಹಿ ಬಿಡ್ತಾರೆ ಎಂದು ಕೆಲವರು ಆರೋಪ ಮಾಡೋದುಂಟು. ಆದರೆ ಇದಕ್ಕೆಲ್ಲ ಕಾರಣ ಬೇರೆ ಇರುತ್ತದೆ. ವಸುದೇವ ಕುಟುಂಬ ಸೀರಿಯಲ್‌ ಪ್ರೊಡಕ್ಷನ್‌ ಹೌಸ್‌ ಸಂಭಾವನೆ ಕೊಡ್ತಿಲ್ಲ ಎಂದು ಕಲಾವಿದರು ಆರೋಪ ಮಾಡಿದ್ದಾರೆ. 

ವಸುದೇವ ಕುಟುಂಬ ಧಾರಾವಾಹಿ ( Vasudeva Kutumba Serial ) ನಿರ್ಮಾಪಕರು ಸಂಭಾವನೆಯನ್ನೇ ಕೊಡುತ್ತಿಲ್ಲ. ಸಂಭಾವನೆ ಕೊಡಿ ಎಂದರೆ ಚಾನೆಲ್‌ನವರು ದುಡ್ಡು ಕೊಟ್ಟಿಲ್ಲ ಎಂದು ಹೇಳುತ್ತಾರೆ. ನಾವು ಮನೆಯನ್ನು ನಡೆಸಬೇಕು, ಸಂಭಾವನೆ ಬಗ್ಗೆ ಪ್ರಶ್ನೆ ಮಾಡಿದ್ರೆ ಉತ್ತರ ಕೊಡಲ್ಲ, ಫೋನ್‌ ರಿಸೀವ್‌ ಮಾಡಲ್ಲ ಎಂದು ನಟಿ ಹಂಸ ಅವರು ಹೇಳಿದ್ದಾರೆ. ಹೌದು, ಮಾಧ್ಯಮದವರು ಪ್ರಶ್ನೆ ಮಾಡಿದಾಗಲೂ ಕೂಡ ಕೋರಮಂಗಲ ಅನಿಲ್‌ ದಂಪತಿ ಉತ್ತರವನ್ನೇ ಕೊಡದೆ, ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಚೈತ್ರಾ ಹೇಳಿದ್ದೇನು?

ಕೋರಮಂಗಲ ಟಾಕೀಸ್‌ ಪ್ರೊಡಕ್ಷನ್‌ ಹೌಸ್‌ಗೆ ಆರ್ಟಿಸ್ಟ್‌ ಆಗಿ ಆಯ್ಕೆ ಆಗ್ತೀವಿ. ಮೇ ತಿಂಗಳಲ್ಲಿ ಪ್ರೋಮೋ ಶೂಟ್‌ ಆಗತ್ತೆ, ಜೂನ್‌ನಿಂದ ಎಪಿಸೋಡ್‌ ಶೂಟ್‌ ಆಗುತ್ತದೆ. ಕಾಂಟ್ರ್ಯಾಕ್ಟ್‌ ಪ್ರಕಾರ ನಾವು ಸೀರಿಯಲ್‌ ಬಿಟ್ಟರೆ ನಾವು ಅವರಿಗೆ ದಂಡ ಕಟ್ಟಬೇಕು ಅಥವಾ ಅವರೇ ನಮ್ಮನ್ನು ತೆಗೆದು ಹಾಕಿದರೆ ದಂಡ ಕೊಡುತ್ತಾರೆ. ಜಿಎಸ್‌ಟಿ ಎಲ್ಲ ಕಟ್‌ ಆಗಿ ಎಷ್ಟು ಹಣ ಬರುತ್ತದೆ ಎನ್ನೋದು ಕೂಡ ಒಪ್ಪಂದದಲ್ಲಿ ಇದೆ. ಇವರಿಗೆ ಆರ್ಥಿಕವಾಗಿ ಸಮಸ್ಯೆಯಾಗಿ ನಮಗೆ ಹಣ ಬಂದಿಲ್ಲ. ಜುಲೈನಲ್ಲಿ ಶೂಟಿಂಗ್‌ ಮಾಡಿದರೆ ಸೆಪ್ಟೆಂಬರ್‌ಗೆ ಹಣ ಕೊಡುತ್ತಾರೆ ಎಂದು ನಟಿ ಚೈತ್ರಾ ಹೇಳಿದ್ದಾರೆ.

ಹಂಸ ಹೇಳಿದ್ದೇನು?

"ಕಲಾವಿದರು ಎಂದು ಹೊರಗಡೆಯಿಂದ ವೈಭವೀಕರಣ ಮಾಡಬಹುದು. ಪ್ರೊಡಕ್ಷನ್‌ ಹೌಸ್‌ಗಳು ಕೂಡ ಸರಿಯಾದ ಊಟ ತಿಂಡಿ ಕೊಡೋದಿಲ್ಲ, ವಾಶ್‌ರೂಮ್‌ ಕೊಡೋದಿಲ್ಲ, ನಮಗೆ ಏನೇ ಆರೋಗ್ಯ ಸಮಸ್ಯೆಯಾದರೂ ಕೂಡ ನಾವು ಕೆಲಸ ಮಾಡಿಕೊಡಬೇಕು. ಸಮಾಜದಲ್ಲಿ ನಮಗೆ ಮರ್ಯಾದೆ, ಗೌರವ ಇದ್ದೇವೆ ಎಂದು ಸುಮ್ಮನಿದ್ದೇವೆ, ಆದರೆ ಈಗ ಮಾತನಾಡಲೇಬೇಕಿದೆ. ಸೀರಿಯಲ್‌ ಟೀಂ ಬಿಟ್ಟೋಗ್ತೀವಿ ಎಂದು ಹೇಳ್ತೀವಿ, ಆದರೆ ನಿಜವಾದ ಕಾರಣ ಏನು ಎಂದು ಯಾರಿಗೂ ಗೊತ್ತಿರೋದಿಲ್ಲ" ಎಂದು ನಟಿ ಹಂಸ ಹೇಳಿದ್ದಾರೆ.

ನಟಿ ಚೈತ್ರಾ ಹೇಳಿದ್ದೇನು?

ಜನವರಿ 25ಕ್ಕೆ ಸಂಭಾವನೆ ಕೊಡಬೇಕಿತ್ತು, ಆದರೆ ಮದುವೆ ಸೀನ್‌ ಇದ್ದರಿಂದ ಲೇಟ್‌ ಆಗುತ್ತೆ ಎಂದು ಹೇಳಿದರು. ನಮ್ಮ ಸಮಸ್ಯೆಗಳನ್ನು ಬದಿಗಿಟ್ಟು, ನಾವು ಸುಮ್ಮನಿದ್ದರೆ ಆದರೆ ಅವರು ಹಣ ಕೊಡುತ್ತಿಲ್ಲ. ಕೋರಮಂಗಲ ಟಾಕೀಸ್‌ನಿಂದ ಬೇರೆ ಪ್ರೊಡಕ್ಷನ್‌ ಹೌಸ್‌ಗೆ ನಿರ್ಮಾಣ ಸಂಸ್ಥೆಯನ್ನು ವರ್ಗಾಯಿಸಿದ್ದಾರೆ. ಆದರೆ ಕೋರಮಂಗಲ ಟಾಕೀಸ್‌ನವರು ಹಣ ಕೊಡುತ್ತಿಲ್ಲ. ಹಣ ಕೊಟ್ಟಿಲ್ಲ ಅಂದರೆ ನಾವು ಶೂಟಿಂಗ್‌ಗೆ ಬರೋದಿಲ್ಲ ಎಂದು ಹೇಳಿದಾಗ ಮತ್ತೆ ಮಧ್ಯಸ್ಥಿಕೆ ವಹಿಸಿ ಮಾತನಾಡ್ತಾರೆ. ನೀವು ಇದರ ವಿರುದ್ಧ ಧ್ವನಿ ಎತ್ತಿದರೆ ನಿಮಗೆ ಬೇರೆ ಚಾನೆಲ್‌ನವರು ಕೂಡ ಅವಕಾಶ ಕೊಡೋದಿಲ್ಲ ಎಂದು ಧಮ್ಕಿ ಹಾಕ್ತಾರೆ. ಹಣದ ಬಗ್ಗೆ ಪ್ರಶ್ನೆ ಮಾಡಿದರೆ ಗೂಂಡಾಗಿರಿ ಮಾಡ್ತಾರೆ ಅಂತ ಹೇಳ್ತಾರೆ, ನಮಗೆ ಬರಬೇಕಾದ ಹಣವನ್ನು ಕೂಡ ಕೊಟ್ಟಿಲ್ಲ. ಕನ್ನಡದಲ್ಲಿ ಯಾಕೆ ನಟಿಸೋದಿಲ್ಲ? ಬೇರೆ ಕಡೆ ಯಾಕೆ ಹೋಗ್ತೀರಿ ಎಂದು ನೀವು ಪ್ರಶ್ನೆ ಮಾಡೋದುಂಟು. ಆದರೆ ನಮಗೆ ಹಣವೇ ಇಲ್ಲ ಅಂದರೆ ಹೇಗೆ ಜೀವನ ಮಾಡೋದು? ಎಂದು ಚೈತ್ರಾ ಪ್ರಶ್ನೆ ಮಾಡಿದ್ದಾರೆ.

“ನಾನು ನಟಿಯಾಗಬೇಕು ಎಂದು ಐಟಿ ಕಂಪೆನಿಯಲ್ಲಿ ಕೆಲಸ ಮಾಡೋದು ಬಿಟ್ಟು ಬಂದೆ. ನಾವೀಗ ಕಾನೂನಿನ ಮೊರೆ ಹೋದರೆ, ಅದಕ್ಕೆ ಒಂದಿಷ್ಟು ಸಮಯ ಆಗುವುದು. ಇನ್ನೊಂದು ಕಡೆ ನಮ್ಮ ಮನೆ ಮುಂದೆ ಸಾಲಗಾರರು ಬರ್ತಾರೆ, ಕ್ರೆಡಿಟ್‌ ಕಾರ್ಡ್‌ ಬಿಲ್‌ ತುಂಬಬೇಕು ಎಂದು ನಟಿ ಚೈತ್ರಾ ಹೇಳಿದ್ದಾರೆ.

ನಾವು ಹೊರಗಡೆ ಶೂಟಿಂಗ್‌ಗೆ ಹೋದಾಗ ಬೇಸಿಕ್‌ ವ್ಯವಸ್ಥೆ ಕೂಡ ಕೊಡೋದಿಲ್ಲ. ನೀರು ಕೂಡ ಸಿಗೋದಿಲ್ಲ. ಇನ್ನೊಂದು ಕಡೆ ಬಾತ್‌ರೂಮ್‌ ವ್ಯವಸ್ಥೆ ಕೂಡ ಇರೋದಿಲ್ಲ. ಔಟ್‌ಡೋರ್‌ ಶೂಟ್‌ ಇದ್ದಾಗ ವಾಶ್‌ರೂಮ್‌ ಕೂಡ ಇರೋದಿಲ್ಲ, ನಾವು ಬಯಲಿಗೆ ಹೋಗಿದ್ದೇವೆ ಎಂದು ಹಂಸ ಹೇಳಿದ್ದಾರೆ.

ಚಾನೆಲ್‌ನವರ ಬಳಿ ಕೇಳಿದ್ರೆ, ಅವರು ಕಲಾವಿದರಿಗೆ ಅವರು ದುಡ್ಡು ಕೊಡ್ತಾರೆ ಎಂದರೆ ನಾವೇ ಹಣ ಕೊಡ್ತೀವಿ ಅಂತ ಹೇಳ್ತಾರೆ. ನಾವು ಯಾರ ಬಳಿ ಕೇಳಬೇಕು? ಈ ಸೀರಿಯಲ್‌ಗೋಸ್ಕರ ನಾನು ಬೇರೆ ಸೀರಿಯಲ್‌ ಕೈಬಿಟ್ಟೆ ಎಂದು ಹಂಸ ಹೇಳಿದ್ದಾರೆ.

ಬ್ಯಾಟರಾಯಣಪುರ ಪೊಲೀಸ್ ಸ್ಟೇಷನ್ ನಲ್ಲಿ ವಸುದೇವ ಕುಟುಂಬ ಧಾರಾವಾಹಿ ನಿರ್ಮಾಪಕರಾದ ಅನಿಲ್ ಹಾಗೂ ರೇಖಾ ಮೇಲೆ ನಟಿ ಹಂಸ, ರೇಖಾ ವಂಚನೆ ಕೇಸ್ ದಾಖಲು ಮಾಡಿದ್ದಾರೆ.