ಒತ್ತು ಶ್ಯಾವಿಗೆಗಾಗಿ ಬಸ್​ ಹಿಂದೆ ಓಡಿದ  ಸ್ಟಾರ್​ ಹೋಟೆಲ್​ ಸಿಬ್ಬಂದಿ! ಇಂಗ್ಲಿಷ್​ ಹೋಗಿ ಕನ್ನಡವೂ ಬಂತು. ಇದನ್ನು ನೋಡಿ ನೆಟ್ಟಿಗರು ಹೇಳ್ತಿರೋದೇನು?   

ಹಲವಾರು ಬಾರಿ ಸೀರಿಯಲ್​ಗಳಲ್ಲಿ ವಾಸ್ತವಕ್ಕೆ ದೂರವಾಗಿರುವ ಸನ್ನಿವೇಶಗಳನ್ನು ತರುವುದು ಉಂಟು. ಈಗಿನ ಹೆಚ್ಚಿನ ದೊಡ್ಡ ದೊಡ್ಡ ಬಜೆಟ್​ಗಳ ಸಿನಿಮಾಗಳಲ್ಲಂತೂ ಬಿಡಿ, ಹೇಳುವುದೇ ಬೇಡ... ವಾಸ್ತವಿಕತೆಗೆ ಹತ್ತಿರವಾಗಿರುವ ಸೀನ್​ಗಳು ಸಿಗುವುದೇ ಅಪರೂಪ. ಇದಕ್ಕೆ ಹೋಲಿಸಿದರೆ ಧಾರಾವಾಹಿಗಳಲ್ಲಿ ಪರವಾಗಿಲ್ಲ. ಆದರೆ ಕೆಲವೊಮ್ಮೆ ಟಿಆರ್​ಪಿಗೋಸ್ಕರ ಅಥವಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಒಂದಿಷ್ಟು ಅವಾಸ್ತವಿಕ ಅಂಶಗಳನ್ನು ತುರುಕುವುದು ಉಂಟು. ಸೋಷಿಯಲ್​ ಮೀಡಿಯಾ ಸಕತ್​ ಸ್ಟ್ರಾಂಗ್​ ಆಗಿರುವ ಹಿನ್ನೆಲೆಯಲ್ಲಿ ಇಂಥ ದೃಶ್ಯಗಳನ್ನು ಸಾಕಷ್ಟು ಟ್ರೋಲ್​ ಮಾಡುವುದೂ ಇದೆ. ಇದೀಗ ಇಂಥದ್ದೇ ಒಂದು ಘಟನೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿಯೂ ನಡೆದಿದೆ.

ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಯಾರದ್ದೋ ಹೆಸರಿನಲ್ಲಿ ಸೇರಿಕೊಂಡುಬಿಟ್ಟಿದ್ದಳು. ಖುದ್ದು ಅವಳಿಗೂ ವಿಷಯ ಗೊತ್ತಿರಲಿಲ್ಲ. ಆದರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆಯೇ ಅವಳನ್ನು ಕೆಲಸದಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಯಾವ ಕೆಲಸ ಕೊಟ್ಟರೂ ಸರಿ ಮಾಡುತ್ತೇನೆ, ಅಡುಗೆ ಕೆಲಸ ಕೊಡಿ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಕಾರಣ, ಅವಳಿಗೆ ಇಂಗ್ಲಿಷ್​ ಬರಲ್ಲ, ಸೀರೆಯುಡುವ ಅಪ್ಪಟ ಗೃಹಿಣಿ ಎನ್ನುವ ತಾತ್ಸಾರ. ಭಾಗ್ಯ ಹೋಟೆಲ್​ನವರಿಗೆ ಕಾಡಿ ಬೇಡಿದರೂ ಅವರಿಗೆ ಕರುಣೆ ಬರುವ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ. ಭಾಗ್ಯಳ ಗೋಳು ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

ಸೀರೆ ಉಟ್ಟ ಮಾತ್ರಕ್ಕೆ ಸ್ಟಾರ್​ ಹೋಟೆಲ್​ ಕೆಲ್ಸ ಬರಲ್ಲ ಅಂದ್ಕೊಂಡ್ರಾ? ಗೃಹಿಣಿ ತಾಕತ್ತು ಏನ್​ ಗೊತ್ತುರೀ?

 ಸ್ಟಾರ್​ ಹೋಟೆಲ್​ನ ಮೇನ್​ ಶೆಫ್​ ಅವಳನ್ನು ಇನ್ನೇನು ನೂಕಿ ಹೊರಹಾಕುವುದೊಂದೇ ಬಾಕಿ. ಅಷ್ಟರಲ್ಲಿಯೇ ಖ್ಯಾತ ಪತ್ರಕರ್ತರಾಗಿರುವ ಜೊತೆಗೆ ಬಿಗ್​ಬಾಸ್ ಸ್ಪರ್ಧಿಯೂ ಆಗಿದ್ದ ಗೌರೀಶ್​ ಅಕ್ಕಿ ಅವರ ಎಂಟ್ರಿಯಾಗಿದೆ. ಅವರಿಗೆ ಒತ್ತು ಶ್ಯಾವಿಗೆ ಬೇಕಾಗಿರುತ್ತದೆ. ಇದನ್ನು ಕೇಳಿದವರಿಗೆ ಪಕ್ಕದ ಚಿಕ್ಕ ಹೋಟೆಲ್​ನಿಂದ ಖರೀದಿ ಮಾಡುವ ಪಾಡು ಈ ಸ್ಟಾರ್​ ಹೋಟೆಲ್​ನವರದ್ದು. ಆದರೆ ಅಲ್ಲಿ ಅವರಿಗೆ ಸಿಗುವುದಿಲ್ಲ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಭಾಗ್ಯ ತನಗೆ ಇದು ಚೆನ್ನಾಗಿ ಮಾಡುವುದು ಗೊತ್ತು. ನಾನು ಮಾಡುತ್ತೇನೆ ಎಂದರೂ ಮುಖ್ಯಸ್ಥ ಆಕೆಯನ್ನು ಹೀಯಾಳಿಸುತ್ತಾನೆ. ಒತ್ತು ಶ್ಯಾವಿಗೆ ಮಾಡಿಕೊಟ್ಟು ಹೋಟೆಲ್​ನವರ ಭಯದಿಂದ ಅಲ್ಲಿಂದ ಕಾಲ್ಕೀಳುತ್ತಾಳೆ ಭಾಗ್ಯ. ಪತ್ರಕರ್ತರಿಗೆ ಭಾಗ್ಯಳ ಒತ್ತುಶ್ಯಾವಿಗೆ ಇಷ್ಟವಾಗುತ್ತದೆ. ಆದರೆ ಇಲ್ಲೇ ಇದ್ದರೆ ಪೊಲೀಸರಿಗೆ ಕರೆಸುತ್ತೇನೆ ಎಂದು ಮುಖ್ಯಸ್ಥ ಹೆದರಿಸಿದ್ದರಿಂದ ಭಾಗ್ಯ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾಳೆ.

ಪತ್ರಕರ್ತ ಶ್ಯಾವಿಗೆಯನ್ನು ಹೊಗಳಿ ಕೊಂಡಾಡಿದ ಬಳಿಕ, ಭಾಗ್ಯ ಎಲ್ಲಿ ಎಂದು ಕೇಳಿದಾಗ ಹಿತಾ ಭಾಗ್ಯ ಬಸ್​ ಹತ್ತಿಕೊಂಡು ಹೋದರು ಎನ್ನುತ್ತಾಳೆ. ಆಗ ಹೋಟೆಲ್​ ಸಿಬ್ಬಂದಿ ಭಾಗ್ಯ ಹತ್ತಿಕೊಂಡು ಹೋಗಿದ್ದ ಬಸ್​ ಹಿಂದೆ ಓಡುತ್ತಾರೆ. ಈ ಸನ್ನಿವೇಶ ಸಕತ್​ ಟ್ರೋಲ್​ ಆಗುತ್ತಿದೆ. ಅಂತೂ ಭಾಗ್ಯ ಸಿಗುತ್ತಾಳೆ. ಆಕೆಯನ್ನು ಕರೆದುಕೊಂಡು ಬಂದಾಗ ಪತ್ರಕರ್ತ ಭಾಗ್ಯಳನ್ನು ಹೊಗಳುತ್ತಾರೆ. ಕೊನೆಗೆ ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಗುತ್ತದೆ. ಅವಳಿಗಾಗಿ ರೂಲ್ಸ್​ ಕೂಡ ಚೇಂಜ್​ ಮಾಡಲಾಗುತ್ತದೆ. ಇನ್ನು ಮುಂದೆ ಕನ್ನಡದಲ್ಲಿಯೇ ಆರ್ಡರ್​ ಪಡೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಭಾಗ್ಯಳ ಭಾಗ್ಯ ಖುಲಾಯಿಸಿದ್ದಕ್ಕೆ ಪ್ರೇಕ್ಷಕರಿಗೆ ಖುಷಿಯಾಗಿರುವುದು ಒಂದೆಡೆಯಾದರೆ, ಇದಕ್ಕಾಗಿ ಕೆಲವೊಂದು ಅಸಹಜ ಎನ್ನುವ ಘಟನೆಗಳನ್ನು ಸೇರಿಸಿದ್ದಕ್ಕೆ ಸಕತ್​ ಟೀಕೆಗಳೂ ವ್ಯಕ್ತವಾಗುತ್ತಿದೆ. 

ಚಹ ಕುಡಿಯೋದು ಬಿಡು ಅಥ್ವಾ ಚೀನಿ ಹಾಡು ಹೇಳು ಅಂದ್ರೆ ಸೀತಾರಾಮ ಅಶೋಕ್​ ಹೀಗೆ ಮಾಡೋದಾ?