ಕನ್ನಡ ಹಾಗೂ ತಮಿಳು ಕಿರುತೆರೆ ನಟಿ ನಂದಿನಿ, ಬೆಂಗಳೂರಿನ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಒತ್ತಡ ಮತ್ತು ವೃತ್ತಿಜೀವನದ ಸಮಸ್ಯೆಗಳಿಂದ ನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಡೆತ್‌ನೋಟ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಡಿ.29): ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ನಂದಿನಿ (27) ಬೆಂಗಳೂರಿನ ಕೆಂಗೇರಿ ಉಪನಗರದ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಸಮಸ್ಯೆಗಳು ಹಾಗೂ ವೃತ್ತಿಜೀವನದ ಒತ್ತಡದಿಂದ ನೊಂದು ನಟಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ:
ವಿಜಯನಗರ ಜಿಲ್ಲೆಯ ಕೊಟ್ಟೂರು ಮೂಲದವರಾದ ನಂದಿನಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಂದಿನಿ 'ನೀನಾದೆ ನಾ' ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಪ್ರಸ್ತುತ ತಮಿಳು ಭಾಷೆಯ ಕಲೈಗ್ನಾರ್ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಗೌರಿ ಧಾರಾವಾಹಿಯಲ್ಲಿ ಗೌರಿ ಎಂಬ ಪ್ರಮುಖ ಪಾತ್ರದ ಮೂಲಕ ಮಿಂಚುತ್ತಿದ್ದರು. ಆದರೆ, ಭಾನುವಾರ ಮಧ್ಯರಾತ್ರಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಪಿಜಿಯಲ್ಲಿ ಇವರು ಏಕಾಏಕಿ ಆತ್*ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಆತ್ಮ*ಹತ್ಯೆಗೆ ಕಾರಣವೇನು?
ಪೊಲೀಸ್ ಮೂಲಗಳ ಪ್ರಕಾರ, ನಂದಿನಿ ಅವರು ಕೆಲವು ಸಮಯದಿಂದ ವೈಯಕ್ತಿಕ ಸಮಸ್ಯೆಗಳು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ತಂದೆ ಹಾಗೂ ತಾಯಿ ಇಬ್ಬರೂ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಅವರ ತಂದೆ ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇರುವುದರಿಂದ ಹಿರಿಯ ಮಗಳಾದ ನಂದಿನಿಗೆ ಅನುಕಂಪದ ಆಧಾರದ ಮೇಲೆ ತಂದೆಯ ಶಿಕ್ಷಕ ವೃತ್ತಿಯನ್ನು ಮುಂದುವರಿಸುವಂತೆ ಕುಟುಂಬಸ್ಥರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ, ನಂದಿನಿಗೆ ನಟನಾ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ಈ ಕೌಟುಂಬಿಕ ಒತ್ತಡ ಮತ್ತು ಆರೋಗ್ಯದ ಏರುಪೇರಿನಿಂದ ನೊಂದಿದ್ದ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ನಂದಿನಿ ಅವರು ಬರೆದಿರುವ ಡೆತ್‌ನೋಟ್ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದಯೋನ್ಮುಖ ನಟಿಯ ಈ ಸಾವು ಕಿರುತೆರೆ ಲೋಕಕ್ಕೆ ದೊಡ್ಡ ಆಘಾತ ತಂದಿದೆ.


