Asianet Suvarna News Asianet Suvarna News

ಗಾಯಕ ಸೂರ್ಯಕಾಂತ್ ಊರಿಗೆ ಬಸ್ ಸೇವೆ ನೀಡಿದ ಸಿಎಂ ಬೊಮ್ಮಾಯಿ

ಮಾತಿನ ಸಮಸ್ಯೆ ಇರುವ ಅದ್ಭುತ ಹಾಡುಗಾರ ಸೂರ್ಯಕಾಂತ್ ಇದೀಗ ಊರಿಗೆ ಬಸ್ ಬರುವಂತೆ ಮಾಡಿ ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ. ಮುಖ್ಯಮಂತ್ರಿಗಳೇ ಗಾಯಕನ ಮನವಿಗೆ ಸ್ಪಂದಿಸಿದ್ದಾರೆ.

singer suryakanths village gets bus by CM Bommayi
Author
Bengaluru, First Published Sep 12, 2021, 4:41 PM IST

ಕಲರ್ಸ್ ಕನ್ನಡದ 'ಎದೆತುಂಬಿ ಹಾಡುವೆನು' ರಿಯಾಲಿಟಿ ಶೋ ಆರಂಭವಾಗಿ ತಿಂಗಳು ಸಮೀಪಿಸುತ್ತಿದೆ. ಅಂದಿನಿಂದ ಇಂದಿನವರೆಗೂ ಎದೆ ತುಂಬಿ ಹಾಡುವೆನು ಶೋ ನೋಡುವವರ, ನೋಡದವರ ಬಾಯಲ್ಲಿ ಕೇಳಿ ಬರ್ತಿರೋದು ಗಾಯಕ ಸೂರ್ಯಕಾಂತ್ ಹೆಸರು. ಸೂರ್ಯಕಾಂತ್ ಅವರಿಗೆ ಉಗ್ಗುವ ಸಮಸ್ಯೆ ಇದೆ, ಸಾಮಾನ್ಯರಂತೆ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಹಾಡಲು ಶುರು ಮಾಡಿದರೆ ಯಾವ ಉಗ್ಗುವಿಕೆಯೂ ಇಲ್ಲದೇ ಕಲ್ಲೂ ಕರಗುವಷ್ಟು ಆರ್ದ್ರವಾಗಿ ಹಾಡುತ್ತಾರೆ.

ಇವರ 'ಮೂಕನಾಗಬೇಕು' ಹಾಡಿಗೆ ಇಡೀ ರಾಜ್ಯದ ಜನತೆ ಸ್ಪಂದಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಮುಖ್ಯಮಂತ್ರಿಗಳೇ ಇದೀಗ ತಾನು ಸೂರ್ಯಕಾಂತ್ ಅವರ ಅಭಿಮಾನಿ ಎನ್ನುವ ಹೊಸ ಪ್ರತಿಭೆಯ ಕಣ್ಣಲ್ಲಿ ಬೆಳಕು ಮೂಡಿಸಿದ್ದಾರೆ. ಸೂರ್ಯಕಾಂತ್ ಊರಿಗೆ ಬಸ್ ಸೌಲಭ್ಯ ನೀಡಿ ಊರವರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಸೂರ್ಯಕಾಂತ್ ಅವರ ಊರು ಯಾವುದು, ಅಲ್ಲಿಗೆ ಯಾಕೆ ಬಸ್ ಸೌಲಭ್ಯ ಇರಲಿಲ್ಲ, ಇದೀಗ ಹೇಗೆ ಆ ಊರಿಗೆ ಬಸ್ ಬಂತು ಅನ್ನೋದು ಇಂಟರೆಸ್ಟಿಂಗ್ ಸ್ಟೋರಿ. 

ಕಂಗನಾ ರಣಾವತ್ ರಾಜಕೀಯಕ್ಕೆ ಸೇರುತ್ತಾರಾ? ನಟಿ ಹೇಳಿದ್ದಿಷ್ಟು!

ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಹಳ್ಳಿ ಸೂರ್ಯಕಾಂತ್ ಊರು. ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ತನ್ನ ಊರಿನ ಬಗ್ಗೆ ಸೂರ್ಯಕಾಂತ್ ಹೇಳಿಕೊಂಡಿದ್ದರು. 'ನನ್ನ ಊರು ಎಂಥಾ ಕುಗ್ರಾಮ ಅಂದ್ರೆ ಅಲ್ಲಿಗೆ ಇನ್ನೂ ಒಂದೇ ಒಂದು ಬಸ್ ಇಲ್ಲ. ಊರಿನ ಗರ್ಭಿಣಿ ಹೆಣ್ಣುಮಗಳೂ ಎಲ್ಲಾದರೂ ಹೋಗಬೇಕು ಅಂದರೆ ಮೈಲಿಗಟ್ಟಲೆ ನಡೆದುಹೋಗಬಹುದು. ಇದನ್ನು ನೋಡೋದು ಬಹಳ ಕಷ್ಟ. ನಾನು ಎಲ್ಲೇ ಹೋಗೋದಿದ್ರೂ ದೇವ್ರಿಗೆ ಶಾಪ ಹಾಕಿಯೇ ಹೋಗ್ತಿದ್ದದ್ದು' ಅಂತ ತಮ್ಮೂರಿನ ಜನರ ಕಷ್ಟವನ್ನು ಸೂರ್ಯಕಾಂತ್ ಶೋದಲ್ಲಿ ಹೇಳಿಕೊಂಡಿದ್ರು.

ತನ್ನೂರಿಗೆ ಬಸ್ ಸೌಲಭ್ಯ ನೀಡಿ ಅಂತ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿದ್ರು. ಅದೃಷ್ಟ ಅಂದರೆ ಸಂವೇದನಾಶೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸೂರ್ಯಕಾಂತ್ ಅವರ ಹಾಡು ಕೇಳಿದವರೇ, ಆ ದನಿಗೆ ಮಾರು ಹೋಗಿ ಅವರ ಅಭಿಮಾನಿಯಾದವರೇ. ಇದೀಗ ಶೋದಲ್ಲಿ ಸೂರ್ಯಕಾಂತ್ ತಮ್ಮೂರಿಗೆ ಬಸ್ಸಿಲ್ಲ ಅಂದಿದ್ದು ಮುಖ್ಯಮಂತ್ರಿಗಳಿಗೆ ತಿಳಿದಿದೆ. ಅಲ್ಲಿಗೆ ಬಸ್ ಬರುವಂತೆ ಅವರು ಮಾಡಿದ್ದಾರೆ. 

ಅನುಷ್ಕಾ ಶರ್ಮಾ- ಆಲಿಯಾ ಭಟ್: ಈ ನಟಿಯರು ಯಶಸ್ವೀ ಉದ್ಯಮಿಗಳು ಕೂಡ!

ತಮ್ಮ ಊರಿಗೆ ಬಸ್ ಬಂದ ವಿಚಾರ ಕೇಳಿ ಸೂರ್ಯಕಾಂತ್ ಅವರ ಕಣ್ಣು ತುಂಬಿ ಬಂದಿದೆ. ಅವರು ವೇದಿಕೆಗೆ ನಮಿಸಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. 'ನಮ್ಮ ಊರಿನ ಜನ ಬಸ್ ಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಯಾರ್ಯಾರದೋ ಕೈಕಾಲು ಹಿಡಿದು ಬೇಡಿಕೊಂಡಿದ್ರು. ಆದರೂ ಸರ್ಕಾರ ಬಸ್ ವ್ಯವಸ್ಥೆ ನೀಡಲಿಲ್ಲ. ಇದೀಗ ಬಸ್ ವ್ಯವಸ್ಥೆ ಮಾಡಿರುವ ಸಂಗತಿ ತಿಳಿಯಿತು. ನಮ್ಮೂರಿಗೆ ಬಸ್ ಬರುತ್ತಿರುವ ಸುದ್ದಿ ಗೊತ್ತಾದಾಗ ಹಂಡೆ ಹಾಲು ಕುಡಿದಷ್ಟು ಖುಷಿ ಆಯ್ತು. ಗಡಿಲಿಂಗದಳ್ಳಿಗೆ ಬಸ್ ವ್ಯವಸ್ಥೆ ಮಾಡಿದ್ದು ಎಷ್ಟು ಉಪಕಾರ ಆಯ್ತು ಅಂದ್ರೆ ನಮ್ಮೂರ ಜನ ಸಂತೋಷದಲ್ಲಿ ಕಣ್ಣೀರು ಹಾಕ್ತಿದ್ದಾರೆ' ಎನ್ನುತ್ತಾ ಆನಂದಬಾಷ್ಪ ಸುರಿಸುತ್ತಾರೆ ಸೂರ್ಯಕಾಂತ್.

ಸೂರ್ಯಕಾಂತ್ ಅವರ ಊರಿಗೆ ಮೊದಲ ಬಸ್ ವ್ಯವಸ್ಥೆ ಆಗಿದ್ದಕ್ಕೆ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಜಡ್ಜ್‌ಗಳು, ಇತರ ಸ್ಪರ್ಧಿಗಳೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಗುರು ಕಿರಣ್ ಈ ಕಾರ್ಯವನ್ನು ಮೆಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಸೂರ್ಯಕಾಂತ್ ಅವರ ಉಗ್ಗುವ ಸಮಸ್ಯೆಗೆ ಪರಿಣಿತ ವೈದ್ಯರಿಂದ ಚಿಕಿತ್ಸೆ ಕೊಡಿಸುವುದಾಗಿ ಜಡ್ಜ್‌ಗಳಲ್ಲೊಬ್ಬರಾದ ರಘು ದೀಕ್ಷಿತ್ ಹೇಳಿದ್ದಾರೆ. ಹಾಗೇ ಹಿರಿಯ ಕಲಾವಿದ ಸಿಹಿಕಹಿ ಚಂದ್ರು ಅವರೂ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಅನೂಪ್ ಭಂಡಾರಿ ಜೊತೆ ಕೈ ಜೋಡಿಸಿ ಮತ್ತೊಂದು ಗುಡ್‌ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್!

ಒಟ್ಟಾರೆ 'ಎದೆತುಂಬಿ ಹಾಡುವೆನು' ಶೋ ಮೂಲಕ ಸೂರ್ಯಕಾಂತ್ ಅವರ ಬದುಕೂ ಬದಲಾಗ್ತಿದೆ. ಹಣ, ಹೆಸರು, ಸಮಸ್ಯೆಗೆ ಪರಿಹಾರ, ಊರಿಗೆ ಬಸ್ ಎಲ್ಲ ಸಿಗುತ್ತಿದೆ. ಹಿಂದೆ ಉಪೇಂದ್ರ ಅವರನ್ನು ತೋರಿಸ್ತೀನಿ ಅನ್ನೋ ಆಮಿಷವೊಡ್ಡಿ ಸೂರ್ಯಕಾಂತ್ ಅವರನ್ನು ಬೆಂಗಳೂರಿಗೆ ಕರೆತಂದು ಲಿಫ್ಟ್‌ ಕ್ಲೀನಿಂಗ್‌ ಕೆಲಸ ಮಾಡಿಸಿದ ವ್ಯಕ್ತಿಗಳೂ ಮುಟ್ಟಿ ನೋಡಿಕೊಳ್ಳುವಂಥಾ ಎತ್ತರಕ್ಕೆ ಸೂರ್ಯಕಾಂತ್ ಏರುತ್ತಿದ್ದಾರೆ.

Follow Us:
Download App:
  • android
  • ios