ಗಾಯಕಿ ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರು ಮನೆಯವರ ಒಪ್ಪಿಗೆ ಇಲ್ಲದೆ ದೇವಸ್ಥಾನದಲ್ಲಿ ಮದುವೆ ಆಗಿರೋದು ಎಲ್ಲರಿಗೂ ಗೊತ್ತಿರೋದೇ. ಆದರೆ ಇನ್ನೂ ಪೃಥ್ವಿ ತಂದೆ ಮದುವೆಗೆ ಒಪ್ಪಿಲ್ಲವಂತೆ. 

ಗಾಯಕಿ ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಎನ್ನುವವರು ಮನೆಯವರಿಗೆ ತಿಳಿಸದೆ ದೇವಸ್ಥಾನದಲ್ಲಿ ಮದುವೆಯಾಗಿ ದೊಡ್ಡ ವಿವಾದ ಸೃಷ್ಟಿ ಆಯ್ತು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಮೂರು ತಿಂಗಳುಗಳ ಬಳಿಕ ಈ ಜೋಡಿಯು Ent Clinic ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದೆ.

ಪರಿಚಯ ಎಲ್ಲಿ ಆಯ್ತು?

2018ರಲ್ಲಿ ಅಭಿಷೇಕ್‌ ಹಾಗೂ ಪೃಥ್ವಿ ಭಟ್‌ ಅವರಿಗೆ ಪರಿಚಯ ಆಗಿದೆ. ಪರಿಚಯ ಆಗಿ ಒಂದು ವರ್ಷದ ಬಳಿಕ ಅಭಿಷೇಕ್‌ ಅವರೇ ಪೃಥ್ವಿಗೆ ಪ್ರೇಮ ನಿವೇದನೆ ಮಾಡಿದ್ದರು. ಮೊದಲೇ ಪ್ರೀತಿ ಹುಟ್ಟಿದ್ದರೂ ಕೂಡ ಪೃಥ್ವಿ ಕಾಲೇಜು ಲೈಫ್‌ ಮುಗಿಯಲಿ ಎಂದು ಅಭಿಷೇಕ್‌ ಕಾಯುತ್ತಿದ್ದರಂತೆ.

ಓಡಿ ಹೋಗಿ ಮದುವೆ ಆಗಿದ್ಯಾಕೆ?

ಆರಂಭದಲ್ಲಿ ಪೃಥ್ವಿ ಅವರು “ನನಗೆ ನೀವು ಅಂದ್ರೆ ಇಷ್ಟ. ತಂದೆ-ತಾಯಿ ಒಪ್ಪಿದರೆ ಮದುವೆ ಆಗ್ತೀನಿ” ಎಂದು ಅಭಿಷೇಕ್‌ಗೆ ಹೇಳಿದ್ದರು. ಯಾವಾಗ ತಂದೆ-ತಾಯಿ ಊರಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಗೊತ್ತಾಯಿತೋ ಆಗ ಅವರು ಮನೆ ಬಿಟ್ಟು ಬಂದು ಮದುವೆ ಆಗಲು ರೆಡಿಯಾದರು.

ನನ್ನ ಮ್ಯೂಸಿಕ್‌ಗೆ ಬೆಂಬಲ ಕೊಡೋರು ಬೇಕಿತ್ತು!

“ನನಗೆ ಬೇರೆ ಹುಡುಗನ ಜೊತೆ ಮದುವೆ ಮಾಡುತ್ತಾರಾ ಅಥವಾ ನಿಶ್ಚಿತಾರ್ಥ ಮಾಡುತ್ತಾರಾ ಎಂಬ ಭಯ ಇತ್ತು, ಹೀಗಾಗಿ ನಾನು ಈ ರೀತಿ ಮದುವೆ ಆಗುವ ಹಾಗೆ ಆಯ್ತು. ಅಪ್ಪ-ಅಮ್ಮ ಮದುವೆಗೆ ಬಂದಿಲ್ಲ, ಅವರಿಗೆ ಈ ಮದುವೆಗೆ ಒಪ್ಪಿಗೆ ಇಲ್ಲ ಎಂಬ ಬೇಸರದಲ್ಲಿ ನಾನು ಮದುವೆ ಆದೆ. ಅಭಿಷೇಕ್‌ ಬಿಟ್ಟು ಬೇರೆ ಯಾವುದೇ ಹುಡುಗನ ಜೊತೆ ಮದುವೆ ಆದರೂ ಕೂಡ ನಾನು ಖುಷಿಯಾಗಿ ಇರುತ್ತಿರಲಿಲ್ಲ. ನಾನು ಸಂಗೀತ ಕ್ಷೇತ್ರದಲ್ಲಿದ್ದೇನೆ, ನನ್ನ ಮದುವೆಯಾಗುವ ಹುಡುಗ ಸಂಗೀತಕ್ಕೆ ಬೆಲೆ ಕೊಡ್ತಾರೆ, ಇದೇ ವೃತ್ತಿಯಲ್ಲಿ ಇರೋಕೆ ಬೆಂಬಲ ಕೊಡ್ತಾರೆ ಎನ್ನುವ ನಂಬಿಕೆ ಇರಲಿಲ್ಲ. ಸಾಕಷ್ಟು ಜನರು ಮದುವೆಗೆ ಮುಂಚೆ ಎಲ್ಲ ಮಾತಿಗೂ ಒಪ್ಪಿ, ಆಮೇಲೆ ವರಸೆ ಬದಲಿಸುತ್ತಾರೆ. ಹೀಗಾಗಿ ನನಗೆ ನನ್ನ ವೃತ್ತಿಗೆ ಬೆಂಬಲ ಕೊಡುವವರೇ ಬೇಕಿತ್ತು” ಎಂದು ಪೃಥ್ವಿ ಅವರು ಹೇಳಿದ್ದಾರೆ.

ಮದುವೆಗೆ ಯಾರು ಬಂದಿದ್ರು?

ಪೃಥ್ವಿ ಭಟ್‌, ಅಭಿಷೇಕ್‌ ಅವರು ಮದುವೆಯಾಗಿ ಒಂದು ತಿಂಗಳಿನ ಬಳಿಕ ಎಲ್ಲರಿಗೂ ಈ ವಿಷಯ ಗೊತ್ತಾಗಿದೆ. ಪೃಥ್ವಿ ಭಟ್‌ ಅವರ ತಂದೆಯ ಆಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಮಗಳು ಓಡಿ ಹೋಗಿ ಮದುವೆ ಆಗಿದ್ದಾಳೆ, ಅವಳಿಗೆ ವಶೀಕರಣ ಆಗಿದೆ ಎಂದು ಅವರು ಆ ಆಡಿಯೋದಲ್ಲಿ ಹೇಳಿದ್ದರು. ದೇವಸ್ಥಾನದಲ್ಲಿ ನಡೆದಿದ್ದ ಈ ಮದುವೆಗೆ ಅಭಿಷೇಕ್‌ ಹಾಗೂ ಪೃಥ್ವಿ ಸ್ನೇಹಿತರಷ್ಟೇ ಹಾಜರಿ ಹಾಕಿದ್ದರು, ಅಲ್ಲಿ ಅಭಿಷೇಕ್‌ ಪಾಲಕರು ಕೂಡ ಬಂದಿರಲಿಲ್ಲ.

ಅಭಿಷೇಕ್‌ ಯಾರು?

ಮೈಸೂರಿನ ಹುಡುಗ ಅಭಿಷೇಕ್‌ ಅವರು ಮಾಸ್ಟರ್ಸ್‌ ಮಾಡಿದ್ದಾರೆ. ಇದಾದ ಬಳಿಕ ಅವರು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ಆಮೇಲೆ‌ ಕಲರ್ಸ್‌ ಕನ್ನಡ ವಾಹಿನಿಯಲ್ಲಿಯೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಜೀ ಕನ್ನಡದಲ್ಲಿ ರಿಯಾಲಿಟಿ ಶೋಗಳ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆಗಿ ನೇಮಕಗೊಂಡರು. ಪೃಥ್ವಿ ಭಟ್‌ ರೀತಿಯಂತೆ ಅಭಿಷೇಕ್‌ ಕೂಡ ಸಸ್ಯಾಹಾರಿಯಂತೆ.

ಮಲೇಷಿಯಾದಲ್ಲಿ ಹನಿಮೂನ್!‌

ಇಂಟರ್‌ನ್ಯಾಶನಲ್ ಟ್ರಿಪ್‌ ಮಾಡಬೇಕು ಎನ್ನೋದು ಈ ಜೋಡಿಯ ಆಸೆಯಾಗಿತ್ತು. ಹೀಗಾಗಿ ಮದುವೆ ಬಳಿಕ ಇವರು ಮಲೇಷಿಯಾಕ್ಕೆ ಹೋಗಿ ಬಂದಿದೆ. ಅಂದಹಾಗೆ ಸರಿಗಮಪ‌, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ವೀಕೆಂಡ್‌ ವಿಥ್‌ ರಮೇಶ್ ಸೇರಿದಂತೆ ರಿಯಾಲಿಟಿ ಶೋಗಳ ಅನೇಕ ಸೀಸನ್‌ಗಳ ಕಾಲ ಡೈರೆಕ್ಷನಲ್‌, ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದಾರೆ.

ಪೃಥ್ವಿ ಭಟ್‌ ಮನವಿ!

ಪೃಥ್ವಿ ಭಟ್‌ ಅವರು “ಅಪ್ಪ ನನಗೆ ಮೆಸೇಜ್‌ ಮಾಡ್ತಾರೆ. ಅಪ್ಪ-ಅಮ್ಮ ಇಬ್ಬರೂ ಚೆನ್ನಾಗಿರಬೇಕು ಎನ್ನೋದು ನನ್ನ ಆಸೆ. ಅವರಿಬ್ಬರು ಆದಷ್ಟು ಬೇಗ ನಮ್ಮನ್ನು ಒಪ್ಪಿಕೊಳ್ಳಲಿ” ಎಂದು ಹೇಳಿದ್ದಾರೆ.

YouTube video player