ಶುಭಸ್ಯ ಶೀಘ್ರಂ ಜೀ ಪವರ್‌ನ ಜನಪ್ರಿಯ ಸೀರಿಯಲ್‌. ಈ ಸೀರಿಯಲ್‌ನ ಪ್ರಮುಖ ಪಾತ್ರ ಶ್ರುತಿಯದು. ಆ ಪಾತ್ರ ಮಾಡುವ ಹುಡುಗಿ ದಿವ್ಯಶ್ರೀ ನಾಯಕ್.‌ ಈಕೆ ವಿಶ್ವದ ಮೊದಲ ಯಕ್ಷಗಾನ ಮಹಿಳಾ ಚೆಂಡೆ ವಾದಕಿ ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಸ್ಫೂರ್ತಿದಾಯಕ ಪಯಣದ ಕಥೆಯಿದು.

ಜೀ ಪವರ್‌ ಚಾನೆಲ್‌ ಅಲ್ಲಿ ಶುಭಸ್ಯ ಶೀಘ್ರಂ ಅನ್ನೋ ಸೀರಿಯಲ್‌ ಹಲವು ಕಾರಣಕ್ಕೆ ಫೇಮಸ್‌ ಆಗ್ತಿದೆ. ಇದರಲ್ಲಿ ನಾಯಕಿಯ ಅಕ್ಕನ ಪಾತ್ರದ ಹೆಸರು ಶ್ರುತಿ. ಕಿವಿಯ ಸಮಸ್ಯೆ ಇರುವ ಈ ಹುಡುಗಿ ಒಂದಾದ ಮೇಲೊಂದು ಕಷ್ಟ ಅನುಭವಿಸುತ್ತಿರುವ ನತದೃಷ್ಟೆ. ಈಗ ಈಕೆ ಮದುವೆಯಾಗಿ ಗಂಡನ ಮನೆಗೆ ಹೋದರೂ ಅಲ್ಲಿ ವಿಲನ್‌ ಕೈಗೆ ಸಿಕ್ಕು ತನ್ನದಲ್ಲದ ರೋಲ್‌ ಪ್ಲೇ ಮಾಡುತ್ತಿದ್ದಾಳೆ. ಅಂದರೆ ವಿಲನ್‌ಅವಳನ್ನು ಕೈಗೊಂಬೆ ಮಾಡಿಕೊಂಡಿದ್ದಾಳೆ. ಸದ್ಯ ಈ ಹುಡುಗಿ ಬಹಳ ಒಳ್ಳೆಯವಳಾಗಿದ್ದರೂ ವಿಲನ್‌ ಹುಟ್ಟಿಸಿರುವ ಭಯಕ್ಕೆ ಕೆಟ್ಟವಳಂತೆ ಆಕ್ಟ್‌ ಮಾಡುತ್ತಿದ್ದಾಳೆ. ಈ ವಿಭಿನ್ನ ಶೇಡ್‌ನ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿರುವ ಕಲಾವಿದೆಯ ಹೆಸರು ದಿವ್ಯಶ್ರೀ ನಾಯಕ್.‌ ಇವರ ಬಗ್ಗೆ ಹಲವರಿಗೆ ಗೊತ್ತಿಲ್ಲದ ಒಂದು ಸಂಗತಿ ಅಂದರೆ ಇವರು ವಿಶ್ವದ ಮೊದಲ ಯಕ್ಷಗಾನ ಚೆಂಡೆ ವಾದಕಿ. ರಂಗಭೂಮಿಯಲ್ಲೇ ಹೆಸರು ಮಾಡಿದ ಪ್ರತಿಭೆ. ʼಮಾಧವಿʼ ಅನ್ನುವ ನಾಟಕವವನ್ನು ಹೆಸರಾಂತ ರಂಗ ನಿರ್ದೇಶಕ ಶ್ರೀಪಾದ ಭಟ್‌ ನಿರ್ದೇಶಿಸಿದ್ದಾರೆ. ಅದರಲ್ಲಿ ಮಾಧವಿ ಪಾತ್ರದ ಮೂಲಕ ಗಮನ ಸೆಳೆದವರು ದಿವ್ಯಾ. ವಿಶೇಷ ಅಂದರೆ ಇದರಲ್ಲಿ ದಿವ್ಯಾ ಅವರ ಚೆಂಡೆ ವಾದನದ ಪ್ರತಿಭೆಯನ್ನೂ ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಕರಾವಳಿಯ ಯಕ್ಷಗಾನ ಕಲಾವಿದೆ

ದಿವ್ಯಾ ನಾಯಕ್ ಊರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ. ಸದ್ಯಕ್ಕೀಗ ಕರಾವಳಿಯ ಪ್ರಸಿದ್ಧ ಚೆಂಡೆ ವಾದಕಿಯರಲ್ಲಿ ಒಬ್ಬರಾಗಿರುವ ಇವರ ತಂದೆ ನಾರಾಯಣ ನಾಯಕ್ ಮತ್ತು ತಾಯಿ ಪ್ರೇಮಾ ನಾಯಕ್. ಸಿಂಗಲ್‌ ಪೇರೆಂಟ್‌ ಆಗಿರುವ ಇವರಿಗೆ ಆರೋಹಿ ಎಂಬ ಮುದ್ದಾದ ಮಗಳಿದ್ದಾಳೆ. ತಂದೆಯಿಂದಲೇ ಚೆಂಡೆ ಮತ್ತು ಮದ್ದಳೆ ವಾದನವನ್ನು ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದ ಚೆಂಡೆ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ದಿವ್ಯಾ ಹೆಗ್ಗಳಿಕೆ. ಆರಂಭದಲ್ಲಿ ಪುರುಷ ಪ್ರಾಬಲ್ಯದ ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ ವಾದಕಿಯಾಗಲು ಹೊರಟಾಗ ಸಾಕಷ್ಟು ಟೀಕೆ, ವ್ಯಂಗ್ಯ ಎದುರಿಸಬೇಕಾಯ್ತು. ಹಾಗೆ ಟೀಕಿಸಿದವರೇ ಆಮೇಲೆ ಈ ಹುಡುಗಿಯನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷ. ಇವರ ತಂದೆ ಕೂಡ ಯಕ್ಷಗಾನ ಕಲಾವಿದರು. ಸ್ವತಃ ಮದ್ದಳೆಗಾರರು. ತಂದೆ ಮನೆಯಲ್ಲಿ ಇತರ ವಿದ್ಯಾರ್ಥಿಗಳಿಗೆ ಚೆಂಡೆ ಕಲಿಸುವುದನ್ನು ನೋಡಿ ದಿವ್ಯಶ್ರೀ ಕೂಡ ಚೆಂಡ ಸದ್ದಿನತ್ತ ಆಕರ್ಷಿತರಾದರು. ಮಗಳ ಈ ಆಸಕ್ತಿಯನ್ನು ನೋಡಿ, ತಂದೆ ಸ್ವತಃ ಮಗಳಿಗೆ ಮದ್ದಳೆ, ಚೆಂಡೆ ಕಲಿಸಿದರು. ಹೀಗೆ ತಂದೆಯೇ ಮೊದಲ ಗುರುವಾದರು.

ರಂಗಭೂಮಿ, ಕಿರುತೆರೆಯಲ್ಲಿ ಇವರಿಗೆ ಸಪೋರ್ಟಿವ್‌ ಆಗಿ ನಿಂತವರು ಖ್ಯಾತ ನಟ ಮಂಡ್ಯ ರಮೇಶ್.‌ ಹಲವಾರು ಪ್ರಶಸ್ತಿ, ಬಿರುದು ಪಡೆದಿರುವ ದಿವ್ಯಶ್ರೀ ವಿಶ್ವಾದ್ಯಂತ ಚೆಂಡೆ ವಾದನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಕಿರುತೆರೆಯಲ್ಲಿ ಇವರ ನಟನೆ ಗಮನ ಸೆಳೆಯುತ್ತಿದೆ. ಶುಭಸ್ಯ ಶೀಘ್ರಂ ಸೀರಿಯಲ್‌ನಲ್ಲಿ ಇವರು ಎರಡು ಬಗೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆ ಎರಡು ಶೇಡ್‌ಗಳಲ್ಲಿ ಸಖತ್ತಾಗಿ ಅಭಿನಯಿಸುತ್ತಿರುವ ಕಾರಣ ಇವರ ಅಭಿನಯ ಮೆಚ್ಚುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹೆಣ್ಮಗಳು ಕಿರುತೆರೆಯಲ್ಲಿ ಬೆಳೆಯುವ ಲಕ್ಷಣವೂ ಕಾಣುತ್ತಿದೆ.