ಶಾಲೆಯಲ್ಲಿ ಹೆಚ್ಚು ಮಾತಾಡೋನಿಗೆ ಲೀಡರ್ ಮಾಡಿದಂಗಾಯ್ತು ಶಾರ್ವರಿ ಸ್ಥಿತಿ: ಇಂಗು ತಿಂದ ಮಂಗ ಅಂತಿದ್ದಾರೆ ವೀಕ್ಷಕರು!
ಅಭಿಯನ್ನು ಮನೆ ಬಿಟ್ಟು ಹೋಗುವ ಹಾಗೆ ಮಾಡ್ತಿರೋ ಶಾರ್ವರಿಗೇ ಈಗ ದೊಡ್ಡ ಜವಾಬ್ದಾರಿ ಬಂದುಬಿಟ್ಟಿದ್ದು, ಅವಳ ಸ್ಥಿತಿ ಇಂಗು ತಿಂದ ಮಂಗನಂತಾಗಿದೆ. ಆಗಿದ್ದೇನು?
ಅಭಿ ಒಂದು ರೀತಿಯಲ್ಲಿ ವಿಚಿತ್ರ ಸ್ವಭಾವದವ. ಅವನನ್ನು ಯಾರು ಹೇಗೆ ಬೇಕಾದರೂ ಪಳಗಿಸಬಹುದು. ಇವರು ಹೇಳಿದಾಗ ಅದು ಹೌದು ಅನಿಸತ್ತೆ, ಅವರು ಹೇಳಿದಾಗ ಅದು ಕೂಡ ಹೌದು ಎನ್ನಿಸುತ್ತದೆ. ಇದೇ ಕಾರಣಕ್ಕೆ ಅವನನ್ನು ಯಾರು ಹೇಗೆ ಬೇಕಾದರೂ ಪಳಗಿಸಬಹುದು, ಕುತಂತ್ರಿಗಳು ತಮಗೆ ಬೇಕಾದ ಹಾಗೆ ಅವನನ್ನು ಬಳಸಿಕೊಳ್ಳಬಹುದು. ಅದೇ ಮಾಡ್ತಿರೋದು ಪತ್ನಿ ದೀಪಿಕಾ ಮತ್ತು ಚಿಕ್ಕಮ್ಮ ಶಾರ್ವರಿ. ಇದೀಗ ಅವಿ ಮತ್ತು ಅಭಿಯ ನಡುವೆ ಹುಳಿ ಹಿಂಡಾಗಿದೆ. ಇಬ್ಬರನ್ನೂ ಬೇರೆ ಬೇರೆ ಮಾಡುವಲ್ಲಿ ದೀಪಿಕಾ ಮತ್ತು ಶಾರ್ವರಿ ಬಹುತೇಕ ಯಶಸ್ವಿಯಾಗಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಅಭಿ ಈಗ ಅಣ್ಣನ ಎದುರೇ ಆಸ್ತಿಯ ಪಾಲು ಕೇಳಿದ್ದಾನೆ. ನನ್ನ ಆಸ್ತಿಯ ಭಾಗವನ್ನು ನನಗೆ ಕೊಡು ಎಂದು ಎಲ್ಲರ ಎದುರಿಗೇ ಹೇಳಿದ್ದಾನೆ. ಇದನ್ನು ಕೇಳಿ ಎಲ್ಲರೂ ಶಾಕ್ ಆದರೂ ದೀಪಿಕಾ ಮತ್ತು ಶಾರ್ವರಿ ತಮ್ಮ ಸಂಚು ಫಲಿಸುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ.
ಆ ಬಳಿಕ ಅಭಿ ಎಲ್ಲರಲ್ಲಿಯೂ ಜಗಳವಾಡಿದ್ದಾನೆ. ನಿನಗೆ ಖುಷಿಯಾಗುತ್ತದೆ ಎಂದಾದರೆ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ತುಳಸಿ ಹೇಳಿದ್ದಾಳೆ. ಅಭಿಯಲ್ಲಾಗಿರುವ ಈ ಬದಲಾವಣೆ ಗಮನಿಸಿದ ಅವಿ, ನಿನಗೆ ಆಸ್ತಿ ಬೇಕು ತಾನೆ ಅಷ್ಟೇ ಅಲ್ವಾ ಎಂದು ಖಾಲಿ ಹಾಳೆಯಲ್ಲಿ ಸಹಿ ಮಾಡಿಕೊಂಡು, ನನ್ನ ಪಾಲು ಏನು ಬೇಕೋ ಎಲ್ಲವನ್ನೂ ತೆಗೆದುಕೊಂಡು ಬಿಡು, ನಿನಗೆ ಅನ್ನಿಸಿದ್ದನ್ನೆಲ್ಲಾ ಬರೆದುಕೋ ಎಂದಿದ್ದಾರೆ. ಇದನ್ನು ಕೇಳಿ ದೀಪಿಕಾ ಮತ್ತು ಶಾರ್ವರಿಗೆ ಖುಷಿಯೋ ಖುಷಿ. ಇವರೆಲ್ಲರೂ ಹೀಗೆ ಹೇಳಿದ್ದನ್ನು ಕೇಳಿ ಅಭಿಯ ಮನಸ್ಸು ಛೇ ನಾನು ಭಾಗ ಕೇಳ್ತಿರೋದು ತಪ್ಪು ಅನ್ನುತ್ತಿರುವಾಗಲೇ ಅವನ ತಲೆ ತಿರುಗಿಸ್ತಿದ್ದಾರೆ ಪತ್ನಿ ಮತ್ತು ಚಿಕ್ಕಮ್ಮ.
ನಮ್ಮನೆಯಲ್ಲೂ ಇಂಥ ಮನೆಹಾಳಿ ದೀಪಿಕಾ ಇದ್ದಾಳೆ: ಸೀರಿಯಲ್ ನೋಡಿ ನೋವು ತೋಡಿಕೊಳ್ತಿರೋ ನೆಟ್ಟಿಗರು!
ಇದೀಗ ಅಭಿ ಆಸ್ತಿ ಕೇಳಿ ಮನೆ ಬಿಟ್ಟು ಹೋಗುವ ಪ್ಲ್ಯಾನ್ ಮಾಡಿದ್ದಾನೆ. ಅದನ್ನು ಮಾಡಿಸಿದ್ದು ಇದೇ ಶಾರ್ವರಿ ಮತ್ತು ದೀಪಿಕಾ. ಆದರೆ ಅವರು ತುಂಬಾ ಒಳ್ಳೆಯವರು ಎಂದುಕೊಂಡಿದ್ದಾರೆ ಮಾಧವ್ ಮತ್ತು ತುಳಸಿ. ಪತ್ನಿಯ ಕುತಂತ್ರ ಬುದ್ಧಿ ಮಹೇಶ್ಗೆ ಗೊತ್ತಿದ್ದರೂ ಆಕೆ ಇವರಿಬ್ಬರ ಪ್ರಾಣಕ್ಕೆ ಕುತ್ತು ತರುತ್ತಾಳೆ ಎಂದು ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿ ಇದ್ದಾನೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಕುತೂಹಲ ಹಂತಕ್ಕೆ ಬಂದು ತಲುಪಿದೆ. ಅತ್ತ ಮನೆಬಿಟ್ಟು ಹೋಗಲು ಶಾರ್ವರಿಯೇ ಅಭಿಯ ತಲೆಗೆ ತುಂಬುತ್ತಿದ್ದರೆ, ಅದರ ಅರಿವಿಲ್ಲದ ತುಳಸಿ ಮತ್ತು ಮಾಧವ್, ಅಭಿಯನ್ನು ಇಲ್ಲಿಯೇ ಉಳಿಸಿಕೊಳ್ಳುವಂತೆ ಮಾಡುವುದು ನಿಮ್ಮಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಇದನ್ನು ಕೇಳಿ ಶಾರ್ವರಿಗೆ ಶಾಕ್ ಆಗಿದೆ. ಶಾಲೆಗಳಲ್ಲಿ ಕೆಲವು ಬುದ್ಧಿವಂತ ಮೇಸ್ಟ್ರುಗಳು ತಾವು ಹೊರಗೆ ಹೋಗುವ ಸಮಯದಲ್ಲಿ ಹೆಚ್ಚು ಮಾತಾಡೋನಿಗೆ ಲೀಡರ್ ಮಾಡಿ, ಮಾತನಾಡಿದವ ಹೆಸರು ಬರಿ ಅನ್ನುತ್ತಾರೆ. ಇದೀಗ ಶಾರ್ವರಿ ಸ್ಥಿತಿಯೂ ಹಾಗೆಯೇ ಆಗಿದೆ. ಸರಿ ನಾನು ಅಭಿಯ ಬಳಿ ಆಮೇಲೆ ಮಾತನಾಡುತ್ತೇನೆ ಎಂದರೂ ಮಾಧವ್-ತುಳಸಿ ಕೇಳ್ತಿಲ್ಲ. ಆಮೇಲೆ ಬೇಡ, ಈಗಲೇ ನಮ್ಮೆದುರಿಗೇ ಮಾತನಾಡಿ. ನಮಗೂ ಸಮಾಧಾನ ಆಗುತ್ತದೆ. ಆತ ನಿಮ್ಮ ಮಾತನ್ನು ಎಂದಿಗೂ ಮೀರುವುದಿಲ್ಲ. ಇಲ್ಲಿಯೇ ಉಳಿಯುವಂತೆ ಹೇಳಿ ಎಂದಾಗ ಇಂಗು ತಿಂದ ಮಂಗನಂತಾಗುತ್ತದೆ ಶಾರ್ವರಿ ಸ್ಥಿತಿ. ಮುಂದೇನಾಗುತ್ತದೆ ಎಂದು ವೀಕ್ಷಕರು ಕಾತರದಲ್ಲಿದ್ದಾರೆ.