ನಿಜ ಜೀವನದ ಪ್ರತಿಬಿಂಬವಾಗ್ತಿವೆ ಧಾರಾವಾಹಿಗಳು: ಸೀರಿಯಲ್ಗಳಲ್ಲೂ ಕೆಲಸ ಕಳೆದುಕೊಳ್ತಿರೋ ಪಾತ್ರಧಾರಿಗಳು!
ಶ್ರೀರಸ್ತು ಶುಭಮಸ್ತು ಜೀವಾ ಕೆಲಸ ಕಳೆದುಕೊಂಡಿದ್ದರೆ, 'ಲಕ್ಷ್ಮೀ ನಿವಾಸ'ದ ಶ್ರೀನಿವಾಸ್ ಕೆಲಸ ಕಳೆದುಕೊಳ್ಳೊ ಭೀತಿಯಲ್ಲಿದ್ದಾನೆ. ನಿಜ ಜೀವನದ ಸಂಕಟವನ್ನು ಸೀರಿಯಲ್ನಲ್ಲಿ ತೋರಿಸಿ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಇಡೀ ದೇಶಕ್ಕೆ ಕೊರೋನಾ ಮಹಾಮಾರಿ ಮಾಡಿದ ನಷ್ಟ ಅಷ್ಟಿಷ್ಟಲ್ಲ. ಇದು ಬಹುದೊಡ್ಡ ಹೊಡೆತ ಕೊಟ್ಟಿದ್ದು ವಿಶ್ಯಾದ್ಯಂತ ಐಟಿ-ಬಿಟಿ ಕಂಪೆನಿ ಉದ್ಯೋಗಿಗಳಿಗೆ. ಅದರ ಬೆನ್ನಲ್ಲೇ ಅತಿವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ. ಹಲವಾರು ಕೆಲಸಗಾರರ ಕೆಲಸವನ್ನು ಒಂದೇ ಒಂದು ಯಂತ್ರ ಬಹಳ ಕಡಿಮೆ ಅವಧಿಯಲ್ಲಿ ಮಾಡುವ ತಂತ್ರಜ್ಞಾನ ಮುಂದುವರೆಯುತ್ತಲೇ ಇದೆ. ಇವೆಲ್ಲವುಗಳಿಂದಾಗಿ ಕಳೆದ 3-4 ವರ್ಷಗಳಿಂದ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲಿಯೂ ಲಕ್ಷ ಲಕ್ಷ ಸಂಬಳ ಪಡೆಯುವವರೇ ಹೆಚ್ಚಾಗಿದ್ದಾರೆ. ಹೆಚ್ಚು ಸಂಬಳ ಪಡೆಯುವವರನ್ನೇ ಗುರಿಯಾಗಿಸಿಕೊಂಡು ಚಿಕ್ಕ ಪುಟ್ಟ ಕಂಪೆನಿಗಳೂ ಸೇರಿದಂತೆ ದೈತ್ಯ ಐಟಿ-ಬಿಟಿ ಕಂಪೆನಿಗಳೂ ನಿರ್ದಾಕ್ಷಿಣ್ಯವಾಗಿ ಕೆಲಸಗಾರರನ್ನು ತೆಗೆಯುತ್ತಿದ್ದು, ನೌಕರರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ.
ಕಳೆದ ಕೆಲ ದಿನಗಳ ಹಿಂದೆ ಬೈಜೂಸ್ ಕಂಪೆನಿ ನೂರಾರು ನೌಕರರನ್ನು ಮನೆಗೆ ಕಳುಹಿಸಿದ್ದರೆ, ಇದೀಗ ಪ್ರತಿಷ್ಠಿತ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋದಿಂದ 64 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಪ್ರತಿಷ್ಠಿತ ಕಂಪೆನಿಗಳು ಒಂದಿಷ್ಟು ಲಕ್ಷ ರೂಪಾಯಿಗಳ ಹಣವನ್ನು ನೀಡಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರೆ, ಇನ್ನು ಅದೆಷ್ಟೋ ಕಂಪೆನಿಗಳು ಬಿಡಿಗಾಸನ್ನೂ ಕೊಡದೇ ಕೊನೆಯ ತಿಂಗಳ ಸಂಬಳವನ್ನೂ ಸರಿಯಾಗಿ ಉದ್ಯೋಗಿಗಳಿಗೆ ನೀಡದೇ ಮನೆಗೆ ಕಳುಹಿಸುವುದು ಉಂಟು. ಇದೀಗ ಇಂಥ ನೌಕರರ ಸ್ಥಿತಿ ಏನು ಎಂಬುದು ಬರಿ ಮಾತಿನಿಂದ ಹೇಳಲು ಸಾಧ್ಯವೇ ಇಲ್ಲ ಬಿಡಿ.
ಇದೀಗ ರಿಯಲ್ ಲೈಫ್ನ ಈ ಭಯಾನಕ ಸ್ಟೋರಿಯನ್ನು ಸೀರಿಯಲ್ಗಳಲ್ಲಿಯೂ ತರಲಾಗುತ್ತಿದೆ. ಮಧ್ಯಮ ಕುಟುಂಬದವರ ಮೇಲೆ ಉದ್ಯೋಗ ಕಡಿತ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದು ಎನ್ನಲಾಗಿದೆ. ಅಂದಹಾಗೆ ಈ ಉದ್ಯೋಗ ಕಡಿತ ಶುರುವಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ. ಇದರಲ್ಲಿ ನಾಯಕಿ ಭೂಮಿಕಾ ಸಹೋದರ ಜೀವ ಕೆಲಸ ಕಳೆದುಕೊಂಡಿದ್ದಾನೆ. ಈಗಷ್ಟೇ ಮದುವೆಯಾಗಿರುವವ ಈತ. ಕೆಲಸ ಕಳೆದುಕೊಂಡಿರುವ ಕುರಿತು ಕಂಪೆನಿಯಿಂದ ಕರೆ ಬಂದಿದೆ. ಅದನ್ನು ಯಾರಿಗೂ ಹೇಳದೇ ಮೆಂಟೇನ್ ಮಾಡುವ ಜವಾಬ್ದಾರಿ ಈತನ ಮೇಲಿದೆ. ಪತ್ನಿ ಮಹಿಳಾ ಕೋಟ್ಯಧಿಪತಿಯ ಸಹೋದರಿ. ಇಂಥವಳನ್ನು ಮದುವೆಯಾಗಿರುವ ಜೀವಗೆ ಈಗ ಉದ್ಯೋಗ ಹೋಗಿರುವುದು ತುಂಬಲಾಗದ ನಷ್ಟವೇ ಆಗಿ ಹೋಗಿದೆ. ಅದನ್ನು ಆತ ಹೇಗೆ ನಿಭಾಯಿಸುತ್ತಾನೆಯೋ ನೋಡಬೇಕು. ಇನ್ನು ಲಕ್ಷ್ಮಿ ನಿವಾಸ ಸೀರಿಯಲ್ನಲ್ಲಿಯೂ 'ಲಕ್ಷ್ಮೀ ನಿವಾಸ'ದ ಕನಸು ನನಸಾಗೋ ಮೊದಲೇ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ ಶ್ರೀನಿವಾಸ್. ಸಂಬಳವನ್ನೇ ನಂಬಿರುವ ಈ ಕುಟುಂಬದ ಸ್ಥಿತಿ ಏನಾಗಬಹುದು?
ಇಂಥ ಸ್ಥಿತಿ ಇಂದು ಅದೆಷ್ಟೋ ಮಂದಿಗೆ ಆಗಿದೆ. ಮನೆಯಲ್ಲಿ ಕೆಲವರು ಕೆಲಸ ಕಳೆದುಕೊಂಡಿರುವ ಬಗ್ಗೆ ಹೇಳಿದರೆ, ಇನ್ನು ಎಷ್ಟೋ ಮಂದಿಗೆ ಅದನ್ನು ಮನೆಯಲ್ಲಿ ಹೇಳಲಾಗದ ಸಂಕಟ. ಕೊರೋನ ಸಮಯದಲ್ಲಿ ಗಂಡ ಕೆಲಸ ಕಳೆದುಕೊಂಡಿದ್ದರಿಂದ ಹೆಂಡತಿಯಾದವಳು ಬಿಟ್ಟು ಹೋಗಿರುವ ಉದಾಹರಣೆಗಳೂ ಇವೆ. ಇನ್ನು ಮಗ ಕೆಲಸ ಕಳೆದುಕೊಂಡ ಸುದ್ದಿ ಕೇಳಿ ಅಪ್ಪ-ಅಮ್ಮನಿಗೆ ಹೃದಯಾಘಾತವೂ ಆಗಿದ್ದಿದೆ. ಮನೆಗೆ ಒಬ್ಬನೇ ಆಧಾರವಾಗಿರುವ ಸಮಯದಲ್ಲಿ ಹೀಗೆ ಏಕಾಏಕಿ ಕೆಲಸ ಕಳೆದುಕೊಂಡರೆ ಅದು ಇಡೀ ಕುಟುಂಬದ ಮೇಲೆ ಆಗುವ ಆಘಾತ ಆ ದೇವರೇ ಬಲ್ಲ. ಧಾರಾವಾಹಿಗಳ ಮೂಲಕ ಈ ಸ್ಥಿತಿಯನ್ನು ಅರ್ಥ ಮಾಡಿಸುವ ಅಗತ್ಯವಿದೆ ಎನ್ನುತ್ತಿದ್ದಾರೆ ಸೀರಿಯಲ್ ಅಭಿಮಾನಿಗಳು. ಕೊನೆಯ ಪಕ್ಷ ಇನ್ನೊಂದು ಕೆಲಸ ಸಿಗುವವರೆಗಾದರೂ ಇಲ್ಲವೇ ಸಾಧ್ಯವಾದಷ್ಟು ಹಣವನ್ನು ಕೊಟ್ಟಾದರೂ ಕೆಲಸದಿಂದ ಮನೆಗೆ ಕಳುಹಿಸಿ ಎನ್ನುವುದು ಇವರ ಕೋರಿಕೆ.
ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು... ಅಂತ ಸುಮ್ನೆ ಹೇಳೋದಾ ಹಿರಿಯರು?