ಸೀರಿಯಲ್ ನಟಿ ಕಾವ್ಯ ಗೌಡ ಅವರ ಕೌಟುಂಬಿಕ ಗಲಾಟೆ ಪ್ರಕರಣವು ಜಟಿಲಗೊಂಡಿದೆ. ತಮ್ಮ ಪತಿಗೆ ಚಾಕು ಇರಿಯಲಾಗಿದೆ ಎಂದು ಕಾವ್ಯ ದೂರು ನೀಡಿದರೆ, ಅವರ ವಿರುದ್ಧವೇ ಸಾಕ್ಷ್ಯಗಳೊಂದಿಗೆ ಪ್ರತಿದೂರು ದಾಖಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಮನೆಗೆಲಸದವರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರು: ಸೀರಿಯಲ್ ನಟಿ ಕಾವ್ಯ ಗೌಡ ಹಾಗೂ ಅವರ ಕುಟುಂಬ ಸದಸ್ಯರ ನಡುವೆ ನಡೆದಿರುವ ಗಲಾಟೆ ಪ್ರಕರಣವು ರಾಮಮೂರ್ತಿ ನಗರ ಪೊಲೀಸರಿಗೆ ತೀವ್ರ ತಲೆನೋವಾಗಿದೆ . ಈ ಸಂಬಂಧ ತನಿಖೆಯನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದು, ಪ್ರಕರಣದ ಸತ್ಯಾಸತ್ಯತೆ ಭೇದಿಸಲು ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಾಕು ಇರಿದಿರೋದು ನಿಜಾನಾ? ಸುಳ್ಳಾ?
ಕಾವ್ಯ ಗೌಡ ಅವರು ತಮ್ಮ ಪತಿ ಸೋಮಶೇಖರ್ ಅವರಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಗಂಭೀರವಾಗಿದ್ದು, ಸೋಮಶೇಖರ್ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಚಾಕು ಇರಿತ ನಡೆದಿರುವುದಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಪಷ್ಟವಾದ ಪೂರಕ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿಲ್ಲ.
ಐಸಿಯುಗೆ ಅಡ್ಮಿಟ್ ಆಗುವಷ್ಟು ಚಾಕು ಇರಿತ ಆಗಿದ್ಯಾ?
ಚಾಕು ಇರಿತಕ್ಕೊಳಗಾಗಿದ್ದರೆ, ಅದರ ಗುರುತುಗಳು, ಗಾಯದ ಸ್ವರೂಪ ಹಾಗೂ ಬಳಸಲಾಗಿದೆ ಎನ್ನಲಾದ ಚಾಕು ಪತ್ತೆಯಾಗಬೇಕಿತ್ತು. ಆದರೆ, ಇದುವರೆಗೂ ಇರಿತಕ್ಕೆ ಬಳಸಲಾಗಿದೆ ಎನ್ನಲಾದ ಚಾಕು ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲದೆ, ಐಸಿಯುಗೆ ದಾಖಲಿಸುವಷ್ಟು ಗಂಭೀರ ಗಾಯಗಳು ಆಗಿದ್ದಾವೆವೆಯೇ ಎಂಬುದರ ಕುರಿತು ಪೊಲೀಸರು ವೈದ್ಯಕೀಯ ವರದಿಗಳ ಆಧಾರದ ಮೇಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಗಲಾಟೆ ವೇಳೆ ಹೊಡೆದಾಟ, ಅವಾಚ್ಯ ಶಬ್ದಗಳಿಂದ ಬೈಗುಳ ಹಾಗೂ ಹಲ್ಲೆ ನಡೆದಿದೆ ಎಂಬ ಆರೋಪಗಳನ್ನೂ ಕಾವ್ಯ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಈ ಆರೋಪಗಳಿಗೆ ತಕ್ಕಂತೆ ಸ್ಪಷ್ಟ ಸಾಕ್ಷ್ಯಗಳನ್ನು ಅವರು ಇನ್ನೂ ಪೊಲೀಸರಿಗೆ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಪೂರಕವಾದ ದಾಖಲೆಗಳು, ವಿಡಿಯೋ ಅಥವಾ ಇತರ ಎವಿಡೆನ್ಸ್ ನೀಡುವಂತೆ ಪೊಲೀಸರು ಕಾವ್ಯ ಅವರಿಗೆ ಸೂಚಿಸಿದ್ದಾರೆ.
ಇದರ ನಡುವೆ, ಪ್ರೇಮಾ ಅವರು ಪ್ರತಿದೂರು ದಾಖಲಿಸಿದ್ದು, ಸೋಮಶೇಖರ್ ಹಾಗೂ ಕಾವ್ಯ ಗೌಡರಿಂದಲೇ ತಮಗೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ದೂರಿಗೆ ಪೂರಕವಾಗಿ ಪ್ರೇಮಾ ಅವರು ವಿಡಿಯೋಗಳು ಹಾಗೂ ಫೋಟೋಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಈ ಸಾಕ್ಷ್ಯಗಳ ಆಧಾರದಲ್ಲಿ ಪ್ರಸ್ತುತ ಕಾವ್ಯ ಗೌಡ ಹಾಗೂ ಸೋಮಶೇಖರ್ ವಿರುದ್ಧ ಕೆಲವೊಂದು ದೃಢ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಾವ್ಯ ಗೌಡ ವಿರುದ್ಧವೇ ಹೆಚ್ಚು ಪೂರಕ ಸಾಕ್ಷ್ಯಗಳು ದೊರಕುತ್ತಿರುವುದು ತನಿಖೆಗೆ ಮತ್ತಷ್ಟು ತಿರುವು ನೀಡಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕಡೆಯವರಿಂದಲೂ ಆರೋಪ–ಪ್ರತ್ಯಾರೋಪಗಳ ಸುರಿಮಳೆ ಮುಂದುವರಿದಿದ್ದು, ವಿಚಾರಣೆ ವೇಳೆ ಪ್ರೇಮಾ ಹಾಗೂ ಕಾವ್ಯ ಗೌಡ ಅವರು ತಮ್ಮದೇ ಆವೃತ್ತಿಯನ್ನು ಪೊಲೀಸರ ಮುಂದೆ ದೂರು ಮಂಡಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ಪ್ರಾಥಮಿಕವಾಗಿ ವಿಚಾರಣೆ ನಡೆಸಿರುವ ಪೊಲೀಸರು, ಸೋಮಶೇಖರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ, ಅವರು ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಪೊಲೀಸರು ಮನೆಗೆ ತೆರಳಿ ಸ್ಥಳ ಮಹಜರು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ, ಮನೆಯೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸುವುದರ ಜೊತೆಗೆ, ಮನೆ ಕೆಲಸದವರನ್ನು ಕೂಡ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಮನೆ ಕೆಲಸದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಮೂಲಕ ಘಟನೆ ನಡೆದ ಸಮಯದ ನಿಖರ ಸ್ಥಿತಿಗತಿಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಒಟ್ಟಾರೆ, ಸೀರಿಯಲ್ ನಟಿ ಕಾವ್ಯ ಗೌಡ ಅವರ ಸಂಸಾರದ ಗಲಾಟೆ ಪ್ರಕರಣವು ಹಲವು ಗೊಂದಲಗಳನ್ನು ಹುಟ್ಟಿಸಿದ್ದು, ಪೊಲೀಸರ ತನಿಖೆಯ ಬಳಿಕವೇ ಸತ್ಯಾಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ.


