'ರಾಧಾರಮಣ' ಖ್ಯಾತಿಯ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಸೋಮಶೇಖರ್‌ಗೆ ಚಾಕು ಇರಿಯಲಾಗಿದ್ದು, ಕಾವ್ಯಾ ಗೌಡ ಅವರಿಗೆ ಅ*ತ್ಯಾಚಾ*ರದ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಜ.27): ರಾಧಾರಮಣ, ಗಾಂಧಾರಿ ಸೀರಿಯಲ್‌ ಮೂಲಕ ಜನರ ಮನೆಮಾತಾಗಿದ್ದ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಕುಟುಂಬದವರಿಂದಲೇ ಹಲ್ಲೆಯಾಗಿದೆ. ಸೋಮಶೇಖರ್‌ ಅವರ ಸಹೋದರ ನಂದೀಶ್‌ ಹಾಗೂ ಅವರ ಪತ್ನಿ ಪ್ರೇಮಾ, ಪ್ರೇಮಾ ಅವರ ತಂದೆ ರವಿ ಕುಮಾರ್‌ ಹಾಗೂ ತಂಗಿ ಪ್ರಿಯಾ ಅವರಿಂದ ಹಲ್ಲೆಯಾಗಿದೆ. ಸೋಮಶೇಖರ್‌ ಅವರಿಗೆ ಚಾಕು ಇರಿಯಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರವಿಕುಮಾರ್‌, ಕಾವ್ಯಾ ಗೌಡ ಅವರಿಗೆ ರೇ*ಪ್‌ ಬೆದರಿಕೆ ಕೂಡ ಹಾಕಿದ್ದಾನೆ. ಪೊಲೀಸ್‌ ಕೇಸ್‌ ದಾಖಲು ಮಾಡಿದ ಬೆನ್ನಲ್ಲಿಯೇ ಕಾವ್ಯಾ ಗೌಡ ಮಾತನಾಡಿದ್ದು, ಸಂಸಾರದ ಜಗಳದ ಬಗ್ಗೆ ತಿಳಿಸಿದ್ದಾರೆ.

ಒಂದು ಮನೆ ಅಂದ್ಮೆಲೇ ಗಲಾಟೆ ಅನ್ನೋದು ಸಾಮಾನ್ಯ. ನನಗೆ ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋಕೆ ಇಷ್ಟ ಇದ್ದಿರಲಿಲ್ಲ. ಹಾಗಾಗಿ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ನನ್ನ ಮಗಳನ್ನು ನೋಡಿಕೊಳ್ಳಲು ಸುಮಾ ಎನ್ನುವ ಹುಡುಗಿ ಕೆಲಸಕ್ಕೆ ಬಂದಿದ್ದಳು. ಇವರುಗಳು ಆಕೆಯ ಮೇಲೆ ಸುಮ್ಮನೆ ಕಳ್ಳತನದ ಆರೋಪ ಹೊರಿಸಿದ್ದರು. ಆಕೆ ನನ್ನ ಮಗಳನ್ನು ನೋಡಿಕೊಳ್ಳಲು ಬಂದ ಹುಡುಗಿ. ಆಕೆಯ ಮೇಲೆ ಕಳ್ಳತನದ ಆರೋಪ ಬಂದಾಗ ಆಕೆ ನನ್ನ ಜವಾಬ್ದಾರಿ ಆಗಿದ್ದಳು. ಆದರೆ ಅವರು ಮಾಡಿರೋ ಆರೋಪ ಸಂಪೂರ್ಣ ಸುಳ್ಳಾಗಿತ್ತು ಎಂದು ಕಾವ್ಯಾ ಹೇಳಿದ್ದಾರೆ.

ಅದಕ್ಕೆ ಕಾರಣವೂ ಇದೆ. ನಮ್ಮ ಮನೆಗೆ ಯಾರೇ ಒಳಗಡೆ ಬರಬೇಕು ಎಂದರೂ ಸಂಪೂರ್ಣ ಚೆಕ್‌ ಆಗುತ್ತೆ. ಸಿಸಿಟಿವಿ ಕ್ಯಾಮೆರಾ ಎಲ್ಲೆಡೆಯೂ ಇದೆ. ಅದೂ ಲಿವಿಂಗ್‌ ಏರಿಯಾದಲ್ಲಿ ಆಕೆ ಕಳ್ಳತನ ಮಾಡಿದ್ದಳು ಎಂದು ಹೇಳಿದ್ದರು. ಲಿವಿಂಗ್‌ ಏರಿಯಾದಲ್ಲಿ ಯಾರೂ ಕೂಡ ಆಭರಣಗಳನ್ನು ಇಡೋದಿಲ್ಲ. ಇದು ಸ್ವಲ್ಪ ಗಲಾಟೆ ಆದಾಗ ನಮ್ಮ ಮಾವ ಇದನ್ನ ಇತ್ಯರ್ಥ ಮಾಡಿದ್ದರು. ಆ ಟೈಮ್‌ನಲ್ಲೂ ಕೂಡ ಇವರು ಹೊಡೆದಿದ್ದರು. ನಾನು ಯಾವ ರೀತಿ ಹುಡುಗಿ ಅಂದರೆ, ನಾನು ಕೆಲವೊಂದು ಘಟನೆಯನ್ನು ಅಲ್ಲಿಂದ, ಅಲ್ಲಿಗೆ ಬಿಟ್ಟುಬಿಡುತ್ತೇನೆ. ಅದನ್ನು ಕ್ಯಾರಿ ಮಾಡೋದಕ್ಕೆ ಹೋಗೋದಿಲ್ಲ. ಕೊಚ್ಚೆ ಮೇಲೆ ಯಾವತ್ತೂ ಕಲ್ಲು ಹಾಕೋಕೆ ಹೋಗಲ್ಲ.

ಆದರೆ, ಸೋಮವಾರ (ಜ.26) ಏನಾಯ್ತು ಅಂದ್ರೆ, ನನ್ನ ಮಗಳು ದ್ರಾಕ್ಷಿ ಹಣ್ಣು ತಿಂದು ಕಿಚನ್‌ನಿಂದ ಬರುವಾಗ ಮತ್ತೊಮ್ಮೆ ಸುಮಾ (ಮಗಳನ್ನ ನೋಡಿಕೊಳ್ಳೋ ಹುಡುಗಿ) 'ಕಳ್ಳಿ..ಕಳ್ಳಿ..' ಅಂದಿದ್ದಾರೆ. ಇದು ನನ್ನ ಕಿವಿಗೂ ಬಿತ್ತು. ಯಾಕೆಂದರೆ ನಾನು ಅಲ್ಲಿಯೇ ಇದ್ದೆ. ಆದ್ರೆ ಇಷ್ಟರವರೆಗೂ ನನ್ನ ಮಾವ ಹೇಳಿದ್ದರು ಅನ್ನೋ ಕಾರಣಕ್ಕೆ ಸುಮ್ಮನಿದ್ದೆ. ಆದರೆ, ಅವರು ನನ್ನ ಪುಟ್ಟ ಮಗಳ ಮೇಲೆ ಕೈ ಮಾಡಲು ಮುಂದಾದರು. ಇದನ್ನ ಯಾವ ತಾಯಿ ಕೂಡ ಒಪ್ಪೋದಿಲ್ಲ. ಆ ಕ್ಷಣಕ್ಕೆ ಇದು ಹೀಗೆ ಬಿಟ್ರೆ ಸರಿ ಹೋಗಲ್ಲ ಅನ್ನೋದು ಗೊತ್ತಾಯ್ತು. ಇದನ್ನ ಪ್ರಶ್ನೆ ಮಾಡಿದೆ. ಅದು, ಇದು ಮಾತಾಯಿತು.

ಅದೇ ದಿನದ ಸಂಜೆ ಅವರ ತಂದೆ ರವಿಕುಮಾರ್‌, ತಂಗಿ ಪ್ರಿಯಾ, ಪ್ರೇಮಾ ಹಾಗೂ ನಂದೀಶ್‌ ನನ್ನ ಮೇಲೆ ದೊಣ್ಣೆಯಿಂದ ದಾಳಿ ಮಾಡುತ್ತಾರೆ. ಈ ಟೈಮ್‌ನಲ್ಲಿ ಪ್ರೇಮಾ ಅವರ ತಂದೆ ರವಿಕುಮಾರ್‌, 'ನನಗೆ ರಾಜಕೀಯದಲ್ಲಿ ಎಲ್ಲರೂ ಗೊತ್ತು. ನಿನ್ನನ್ನ ಮೂರು ಜನರ ಮುಂದೆ ರೇ*ಪ್‌ ಮಾಡಿ ಸಾಯ್ತಿಸ್ತೇನೆ' ಎಂದು ಬೆದರಿಸಿದ್ದಾನೆ. ನನ್ನ ರೇ*ಪ್‌ ಮಾಡೋದಕ್ಕೆ ಅವನು ಯಾರು? ರೇಪ್‌ ಅಂದ್ರೆ ಅಷ್ಟು ಸುಲಭ ಅಂದ್ಕೊಂಡು ಬಿಟ್ಟಿದ್ದಾನ. ಕಾನೂನು ಅಷ್ಟು ಸುಲಭವಾಗಿದ್ಯಾ? ನಾನು ಸಿಲ್ಲಿ ವಿಚಾರಗಳಿಗೆ ನ್ಯೂಸ್‌ಗೆ ಬರುವಂಥ ಹುಡುಗಿ ಅಲ್ಲ. ಅವನು ನನ್ನ ಮೇಲೆ ಎಷ್ಟು ಭೀಕರ ದಾಳಿ ಮಾಡಿದ್ದ ಎಂದರೆ, ನನ್ನ ಖಾಸಗಿ ಭಾಗಗಳಿಗೆಲ್ಲಾ ಒದ್ದಿದ್ದಾನೆ.

100 ಜನರ ಮುಂದೆ ರೇ*ಪ್‌ ಮಾಡ್ತೀನಿ, ಪ್ರಾಣ ತೆಗಿತೀನಿ ಅನ್ನೋ ವ್ಯಕ್ತಿಗೆ ನಾನು ಗೌರವ ಕೊಡೋದಿಲ್ಲ. ನಾನು ಹೊಡೆಯಬಹುದಿತ್ತು. ಆದರೆ, ಹೊಡೆದಿಲ್ಲ. ಯಾಕೆಂದರೆ ನನಗೆ ಕಾನೂನಿನ ಬಗ್ಗೆ ಗೌರವವಿದೆ. ಕಾನೂನೇ ಇದಕ್ಕೆ ಶಿಕ್ಷೆ ನೀಡಬೇಕು. ನನಗೆ ರಾಜಕೀಯ ಶಕ್ತಿ ಇದೆ ಅಂತಾನೆ. ಎಷ್ಟೇ ದೊಡ್ಡವನಾದರೂ ಕಾನೂನು ಎಲ್ಲರಿಗೂ ಒಂದೇ. ನಾನು ತಪ್ಪು ಮಾಡಿಲ್ಲ. ನನಗೆ ಕಾನೂನಿನಿಂದ ನ್ಯಾಯ ಬೇಕು ಅಷ್ಟೇ.

ನನ್ನ ಗಂಡನಿಗೆ ಪ್ರೇಮಾ ಅವರ ತಂಗಿ ಪ್ರಿಯಾ ಹಾಗೂ ತಂದೆ ಚಾಕುವಿನಿಂದ ಚುಚ್ಚಿದ್ದಾರೆ. ದೇವರೆ ದಯೆ ಪ್ರಾಣಕ್ಕೆ ಅಪಾಯವಾಗಿಲ್ಲ. ನಿನ್ನ ಆಸ್ಪತ್ರೆಗೆ ದಾಖಲಾದ ಬಳಿಕ ಇನ್ನೂ ಆಸ್ಪತ್ರೆಯಲ್ಲೇ ಇದ್ದೇನೆ. ಅವನಿಗೆ ನನ್ನಂಥ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ ಇನ್ನೊಂದು ಹೆಣ್ಣುಮಗುವಿಗೆ ಹೀಗೆ ಹೇಳೋಕೆ ಹೇಗೆ ಸಾಧ್ಯ? ಎಂದು ಕಾವ್ಯಾ ಪ್ರಶ್ನೆ ಮಾಡಿದ್ದಾರೆ.

ನನ್ನ ಮಾವನ ಹೆಸರನ್ನು ಉಳಿಸಬೇಕು

ಈ ವಿಚಾರ ಮಾಧ್ಯಮಗಳಿಗೆ ಹೇಗೆ ತಿಳಿಯಿತು ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ನನ್ನ ಮಾವನ ಹೆಸರು ಬರಬಾರದು. ಅವರು ಒಳ್ಳೆಯ ವ್ಯಕ್ತಿ. ಗೌರವಯುತವಾದ ಮನುಷ್ಯ. ನನ್ನ ಅತ್ತೆ-ಮಾವ ನನಗೆ ಒಳ್ಳೆ ಜೀವನ ನೀಡಿದ್ದಾರೆ.ನಾನು ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನಿಮಗೆ ವಿಚಾರ ಗೊತ್ತಾಗಿರಬಹುದು. ರಾಜಕೀಯದವನು ಆಗಿದ್ದರೆ, 100 ಜನರ ಮುಂದೆ ರೇಪ್‌ ಮಾಡಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮನೆಯಲ್ಲಿ ಗಲಾಟೆ ಇದ್ರೂ ಕಾವ್ಯಾ ಅದೇ ಮನೆಯಲ್ಲಿ ಇರೋದೇಕೆ?

ನಮ್ಮದು ದೊಡ್ಡ ಮನೆ. ಜಂಟಿ ಕುಟುಂಬ. ನನಗೆ ಅತ್ತೆ-ಮಾವನ ಜೊತೆ ಇರೋಕೆ ಬಹಳ ಇಷ್ಟ. ನಮ್ಮ ಅತ್ತೆ-ಮಾವ ಕೂಡ ನಮ್ಮೊಂದಿಗೆ ಹಾಗೇ ಇದ್ದಾರೆ.ನನಗೆ ಮದುವೆಯಾಗಿ ಐದು ವರ್ಷ ಆಯ್ತು. ಐದು ವರ್ಷದಿಂದಲೂ ಇವರದ್ದು ಇದೇ ಕಥೆ. ಅವರು ಮಾಡಿದ್ದು ಅವರು ಅನುಭವಿಸ್ತಾರೆ ಅನ್ನೋದನ್ನು ನಾನು ನಂಬುತ್ತೇನೆ. ಆದರೆ, ನನ್ನ ಮಗಳ ಮೇಲೆ ಕೈಮಾಡಿದ್ದರಿಂದ ನಾನು ಈ ನಿರ್ಧಾರಕ್ಕೆ ಬಂದೆ ಎಂದು ಕಾವ್ಯಾ ಹೇಳಿದ್ದಾರೆ.

ಸೋಮಶೇಖರ್‌ ಅವರ ಸಹೋದರ ನಂದೀಶ್‌ ಹಾಗೂ ಆತನ ಪತ್ನಿ ಪ್ರೇಮಾ. ಇವರ ವಿರುದ್ಧವೇ ಕಾವ್ಯಾ ದೂರು ನೀಡಿದ್ದಾರೆ.