ನಟಿ ಕಾವ್ಯಾ ಗೌಡ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದ ಬೆನ್ನಲ್ಲೇ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾವ್ಯಾ ಅವರ ಅತ್ತಿಗೆ ಪ್ರೇಮಾ, ಇದೀಗ ನಟಿ, ಅವರ ಪತಿ ಹಾಗೂ ಅಕ್ಕನ ವಿರುದ್ಧವೇ ಪ್ರತಿದೂರು ದಾಖಲಿಸಿದ್ದು, ಚಪ್ಪಲಿಯಿಂದ ಹಲ್ಲೆ ಹಾಗೂ ಮಾಂಗಲ್ಯ ಸರ ಕಿತ್ತ ಆರೋಪ ಮಾಡಿದ್ದಾರೆ.

ಬೆಂಗಳೂರು (ಜ.27): ಸೀರಿಯಲ್‌ ನಟಿ ಕಾವ್ಯಾ ಗೌಡ ಅವರ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ರಾಮಮೂರ್ತಿ ನಗರ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದ ಕಾವ್ಯಾ, ತನ್ನ ಮೇಲೆ ಹಾಗೂ ತನ್ನ ಪತಿ ಸೋಮ್‌ಶೇಖರ್‌ ಮೇಲೆ, ಅವರ ಸಹೋದರ ನಂದೀಶ್‌, ಆತನ ಪತ್ನಿ ಪ್ರೇಮಾ, ಆಕೆಯ ತಂದೆ ರವಿಕುಮಾರ್‌ ಹಾಗೂ ತಂಗಿ ಪ್ರಿಯಾ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲದೆ, ರವಿಕುಮಾರ್‌ ತನಗೆ ಅ*ತ್ಯಾಚಾ*ರ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ ಎಂದಿದ್ದರು. ಈಗ ಈ ಪ್ರಕರಣದಲ್ಲಿ ಪ್ರೇಮಾ ಅವರು ಪ್ರತಿದೂರು ಸಲ್ಲಿಕೆ ಮಾಡಿದ್ದಾರೆ.

ಕಾವ್ಯಾ ಗೌಡ ಮಾತ್ರವಲ್ಲದೆ, ಅವರ ಪತಿ ಸೋಮ್‌ಶೇಖರ್‌ ಹಾಗೂ ಕಾವ್ಯಾ ಅವರ ಅಕ್ಕ ಭವ್ಯಾ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ. ಜನವರಿ 26 ರಂದು ಮಧ್ಯಾಹ್ನ ಮನೆಯಲ್ಲಿ ಪೇಮಾ ಹಾಗೂ ನಂದೀಶ್‌ ಊಟ ಮಾಡುತ್ತಿದ್ದ ವೇಳೆ ಕಾವ್ಯಾ, 'ಇದು ನಮ್ಮ ಮನೆ ನೀವು ಹೊರಗೆ ಹೋಗಿ' ಎಂದು ಹೇಳಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲದೆ, ಪ್ರೇಮಾ ಅವರ ತಂದೆ ರವಿಕುಮಾರ್‌ಗೆ ಕರೆ ಮಾಡಿ ಧಮಕಿ ಕೂಡ ಹಾಕಿದ್ದಾರೆ ಎನ್ನಲಾಗಿದೆ.

ಆ ನಂತರ ಸಂಜೆ 6.30ಕ್ಕೆ ಮನೆಯ ಬಳಿಗೆ ಬಂದಿದ್ದ ನನ್ನ ಸಹೋದರಿ ಕಸ್ತೂರಿ ಮೇಲೆಯೂ ಕಾವ್ಯಾ ಹಾಗೂ ಆಕೆಯ ಸಂಬಂಧಿಕರಿಂದ ಹಲ್ಲೆ ಮಾಡಲಾಗಿದೆ ಎಂದು ಪ್ರೇಮಾ ಆರೋಪಿಸಿದ್ದಾರೆ.

ಕಾವ್ಯಾ ಅವರ ಅಕ್ಕ ಭವ್ಯಾ ಗೌಡ, ಪ್ರೇಮಾ ಹಾಗೂ ನಂದೀಶ್‌ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ವೇಳೆ ಭವ್ಯಾ ತನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿದ್ದಾರೆ ಎಂದು ಪ್ರೇಮಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೊದಲು ದೂರು ನೀಡಿದ್ದ ಕಾವ್ಯಾ ಗೌಡ

ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಾದ ‘ರಾಧಾ ರಮಣ’ ಮತ್ತು ‘ಗಾಂಧಾರಿ’ ಮೂಲಕ ಮನೆಮಾತಾಗಿದ್ದ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಅವರ ಸ್ವಂತ ಸಂಬಂಧಿಕರೇ ದಾರುಣವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯಲ್ಲಿ ದಂಪತಿಗಳಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ಹಲ್ಲೆ ನಡೆಸಿದವರು ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಅವರ ಅಣ್ಣನ ಪತ್ನಿಯ (ಅತ್ತಿಗೆ) ಕಡೆಯವರು ಎನ್ನಲಾಗಿದೆ. ಸೋಮಶೇಖರ್ ಅವರ ಅತ್ತಿಗೆಯ ತಂದೆ ರವಿಕುಮಾರ್ ಮತ್ತು ಇತರರು ಕಾವ್ಯಾ ದಂಪತಿಯ ಮನೆಗೆ ಅಕ್ರಮವಾಗಿ ನುಗ್ಗಿ ವಿವರಿಸಲಾಗದ ರೀತಿಯಲ್ಲಿ ದಾಂಧಲೆ ನಡೆಸಿದ್ದಾರೆ. ಕಾವ್ಯಾ ಗೌಡ ಅವರು ಗಳಿಸಿರುವ ಅತೀವ ಜನಪ್ರಿಯತೆ ಮತ್ತು ಅವರ ಸುಖ ಸಂಸಾರವನ್ನು ಸಹಿಸದೆ, ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ದೂರು ದಾಖಲಿಸಿರುವ ಮಾಹಿತಿಯಂತೆ, ಹಲ್ಲೆಕೋರರು ಕಾವ್ಯಾ ಗೌಡ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, "ನಿನ್ನನ್ನು ರೇ*ಪ್ ಮಾಡುತ್ತೇವೆ" ಎಂದು ಅತ್ಯಂತ ಹೀನಾಯವಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಸೋಮಶೇಖರ್ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಲಾಗಿದ್ದು, ಕಾವ್ಯಾ ಗೌಡ ಅವರ ಮೇಲೂ ದೈಹಿಕವಾಗಿ ತೀವ್ರ ದಾಳಿ ನಡೆಸಲಾಗಿದೆ.