ಸಿಹಿ ಸಾವಿನ ಶೂಟಿಂಗ್ ವೇಳೆ ಜೋರಾಗಿ ಅತ್ತುಬಿಟ್ಟೆ: ಸೀತಾರಾಮ ಶಾಂತಜ್ಜಿ ಮನದ ಮಾತು ಕೇಳಿ...
ಸೀತಾರಾಮ ಸೀರಿಯಲ್ ಸಿಹಿಯನ್ನು ಸಾಯಿಸಿರುವ ಬಗ್ಗೆ ಇದಾಗಲೇ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶಾಂತಜ್ಜಿ ಪಾತ್ರಧಾರಿ ನಟಿ ಪದ್ಮಕಲಾ ಏನು ಹೇಳಿದ್ದಾರೆ ನೋಡಿ...
ಶಾಂತಜ್ಜಿ ಎಂದೇ ಫೇಮಸ್ ಆಗಿರೋ ನಟಿ ಸೀತಾರಾಮ ಶಾಂತಜ್ಜಿ ಪದ್ಮಕಲಾ. ಎಲ್ಲರ ಬಾಯಲ್ಲೂ ಸಿಹಿ ಅಜ್ಜಿ ಸಿಹಿ ಅಜ್ಜಿ ಎಂದೇ ಕರೆಸಿಕೊಳ್ತಿರೋ ಹಿರಿಯ ನಟಿ ಪದ್ಮಕಲಾ ಅವರಿಗೆ ಸೀರಿಯಲ್‌ನಲ್ಲಿ ಸಿಹಿಯ ಪಾತ್ರ ಸಾಯಿಸಿರುವುದಕ್ಕೆ ಎಷ್ಟು ನೋವಾಗಿದೆ? ಈ ಪಾತ್ರದ ಬಗ್ಗೆ ನಟಿ ಹೇಳ್ತಿರೋದೇನು? ಸಿಹಿ ದೆವ್ವ ಅಲ್ಲ, ದೇವತೆ ಎನ್ನುತ್ತಲೇ ಸೀರಿಯಲ್ ಹಾಗೂ ಅಲ್ಲಿರುವ ಪಾತ್ರಗಳ ಬಗ್ಗೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ ನಟಿ. ಅಂದಹಾಗೆ, ಸೀತಾರಾಮ ಸೀರಿಯಲ್‌ನಲ್ಲಿ ಹೈಲೈಟ್ ಆಗಿದ್ದೇ ಸಿಹಿಯ ಪಾತ್ರ. ಅದರಲ್ಲಿಯೂ ಸಿಹಿ ಪಾತ್ರಧಾರಿ ನೇಪಾಳಿ ಪುಟಾಣಿ ರಿತು ಸಿಂಗ್ ಅಭಿನಯವಂತೂ ಹೇಳುವುದೇ ಬೇಡ. ಪಾತ್ರಕ್ಕೆ ತಕ್ಕಂತೆ ಈ ಪುಟಾಣಿ ಎಲ್ಲರನ್ನೂ ಮೋಡಿ ಮಾಡಿಬಿಟ್ಟಿದ್ದಾಳೆ. ಕೆಲವೊಮ್ಮೆ ವಯಸ್ಸಿಗೆ ಮೀರಿದಂತೆ ನಡೆದುಕೊಂಡರೂ ಸಿಹಿಯ ಪಾತ್ರಕ್ಕೆ ಅವಳೇ ಸೈ ಎನ್ನುವಷ್ಟರಮಟ್ಟಿಗೆ ಎಲ್ಲರ ಮನಸ್ಸನ್ನು ಗೆದ್ದು, ಕದ್ದು ಬಿಟ್ಟಿದ್ದಾಳೆ. ಇದೀಗ ರಿತು ಸಿಂಗ್ ಸುಬ್ಬಿ ರೂಪದಲ್ಲಿ ಬರುತ್ತಿದ್ದರೂ, ಸಿಹಿಯ ಪಾತ್ರವನ್ನು ತುಂಬಾ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಅದನ್ನೇ ಮಾತನಾಡಿದ್ದಾರೆ ನಟಿ ಪದ್ಮಕಲಾ. ಸಿಹಿಯನ್ನು ದೆವ್ವದ ರೀತಿಯಲ್ಲಿ ದೇವತೆಯ ರೀತಿಯಲ್ಲಿ ಪ್ರತಿಬಿಂಬಿಸಲಾಗುತ್ತಿದೆ. ಇದರ ಹೊರತಾಗಿಯೂ ಸಿಹಿಯ ಪಾತ್ರವನ್ನು ಸಾಯಿಸುವುದು ಬೇಕಿತ್ತಾ ಎನ್ನುವ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಕಥೆಯನ್ನು ಬೇರೆಯ ರೂಪದಲ್ಲಿ ಕೊಂಡೊಯ್ಯಬಹುದಿತ್ತು ಎಂದು ಅನ್ನಿಸುವ ಜೊತೆಗೇನೇ, ಆತ್ಮ, ದೇವತೆ ಹೀಗೆ ಹೇಳುವ ಮೂಲಕ ಮೌಢ್ಯವನ್ನು ಬಿತ್ತುತ್ತಿದ್ಯಾ ಸೀರಿಯಲ್ ಎಂದು ಅನ್ನಿಸುವುದೂ ಉಂಟು ಎಂದಿದ್ದಾರೆ. ಆದರೆ ಸೀರಿಯಲ್ ಓಡಬೇಕು ಎಂದರೆ, ಕಥೆಯಲ್ಲಿ ಟ್ವಿಸ್ಟ್ ಅಗತ್ಯ. ವೀಕ್ಷಕರು ಎಷ್ಟೇ ಬೈದುಕೊಂಡರೂ ಸೀರಿಯಲ್ ನೋಡುವುದು ಮುಖ್ಯ. ಇದೇ ಕಾರಣಕ್ಕೆ ಹಲವಾರು ಬಾರಿ ಅನಗತ್ಯ ಎಂಬ ದೃಶ್ಯಗಳು, ವಾಸ್ತವಕ್ಕೆ ಹತ್ತಿರವಲ್ಲದ ಸನ್ನಿವೇಶಗಳನ್ನು ತುರುಕುವುದು ನಡೆದೇ ಇರುತ್ತದೆ. ಅದೇ ರೀತಿ ಈ ಸೀರಿಯಲ್‌ನಲ್ಲಿ ಸಿಹಿಯನ್ನು ಸಾಯಿಸಿ ಅವಳ ಆತ್ಮವನ್ನು ತೋರಿಸಲಾಗಿದೆ. ಆದರೆ, ಇದರ ಬಗ್ಗೆ ಖುದ್ದು ಸಿಹಿಯ ಅಜ್ಜಿ ಪಾತ್ರಧಾರಿ ಪದ್ಮಕಲಾ ಅವರೂ ಅಸಮಾಧಾನ ಹೊರಹಾಕಿದ್ದಾರೆ.
ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...
'ಸಿಹಿಯನ್ನು ಸಾಯಿಸುವ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನನಗೂ ತುಂಬಾ ಜನ ಕಾಲ್ ಮಾಡಿದ್ರು. ಸಿಹಿಯನ್ನು ಸಾಯಿಸಬೇಡ ಎಂದೇ ಹೇಳಿದರು. ನನಗೂ ಇದನ್ನು ಕೇಳಿ ತುಂಬಾ ಬೇಜಾರು ಆಯ್ತು. ಅಷ್ಟೇ ಅಲ್ಲ, ಸಿಹಿಯ ಅಂತ್ಯಕ್ರಿಯೆ ದೃಶ್ಯದ ಶೂಟಿಂಗ್ ವೇಳೆ ನಾನು ಸಿಕ್ಕಾಪಟ್ಟೆ ಅತ್ತು ಬಿಟ್ಟೆ. ಅಳು ತಡೆಯಲು ಆಗಲೇ ಇಲ್ಲ, ಇದು ಬೇಕಿರಲಿಲ್ಲ ಎಂದೇ ಎನ್ನಿಸ್ತು. ಆದರೂ ಕಥೆ ಹೇಗೆ ಮುಂದುವರೆಸಬೇಕು ಎನ್ನುವುದು ಚಾನೆಲ್‌ಗೆ ಬಿಟ್ಟ ವಿಷಯ. ಅವರು ಹೇಗೆ ಬೇಕೋ ಹಾಗೆ ಮಾಡುತ್ತಾರೆ. ಅದು ಅನಿವಾರ್ಯ. ಆದರೆ ನನಗಂತೂ ತುಂಬಾ ನೋವಾಯಿತು' ಎಂದಿದ್ದಾರೆ ಪದ್ಮಕಲಾ.
'ನಾನು ಹೋದಲ್ಲೆಲ್ಲಾ ಸಿಹಿ ಅಜ್ಜಿ ಅಲ್ವಾ ಎಂದೇ ಕೇಳುತ್ತಾರೆ ಎಲ್ಲರೂ. ತುಂಬಾ ಸೀರಿಯಲ್ ಮಾಡಿದ್ದೇನೆ. ಅದರೆ ಇಷ್ಟು ಹೆಸರು ತಂದುಕೊಟ್ಟಿದ್ದಿಲ್ಲ. ಆದರೆ ಈಗ ಎಲ್ಲಿಯೇ ಹೋದರೂ ಸಿಹಿ ಅಜ್ಜಿ ಎಂದೇ ಗುರುತಿಸುತ್ತಾರೆ. ಚಿಕ್ಕ ಪುಟ್ಟ ಮಕ್ಕಳೂ ನನ್ನನ್ನು ಅಜ್ಜಿ ಎಂದೇ ಕರೆಯುತ್ತಾರೆ. ಸಿಹಿಯನ್ನು ಕೋಟ್ಯಂತರ ಮಕ್ಕಳು ಫಾಲೋ ಮಾಡುತ್ತಿದ್ದಾರೆ. ಆದ್ದರಿಂದ ಸಿಹಿಯನ್ನು ಸಾಯಿಸುವುದು ಬೇಡದಿತ್ತು ಎನ್ನಿಸುತ್ತಿದೆ' ಎಂದಿದ್ದಾರೆ ನಟಿ. ಒಂದು ಮಗುವಿನ ತಾಯಿಯನ್ನು ಮದುವೆಯಾಗುವ ಮೂಲಕ ರಾಮ್ ಪಾತ್ರವನ್ನು ಆದರ್ಶ ಪತಿಯ ರೂಪದಲ್ಲಿ ತೋರಿಸಲಾಗಿದೆ. ಬಾಡಿಗೆ ತಾಯಿಗೂ ಮಗು ಸಿಗಬಹುದು ಎನ್ನುವ ದೃಶ್ಯಗಳನ್ನೂ ತೋರಿಸಲಾಗಿದೆ. ಇವೆಲ್ಲವೂ ಎಲ್ಲರಿಗೂ ದಾರಿದೀಪ ಆಗುವಂಥದ್ದು. ಸಮಾಜದಲ್ಲಿ ಸುಧಾರಣೆ ಆಗುವಂಥದದು. ಹಲವರಿಗೆ ಇದು ಮಾರ್ಗದರ್ಶನವನ್ನೂ ನೀಡುತ್ತದೆ. ಇವೆಲ್ಲವೂ ಆದರ್ಶ ಪಾತ್ರಗಳಾಗಿವೆ. ಆದರೆ ಸಿಹಿಯ ಪಾತ್ರ ಹೀಗಾಗಿರುವುದಕ್ಕೆ ನೋವಾಗುತ್ತಿದೆ ಎಂದಿದ್ದಾರೆ ಅವರು.
ನಾನು ಜಗ್ಗೇಶ್ ಪತ್ನಿ ಎಂದು ಪ್ರೆಸ್‌ಮೀಟ್‌ನಲ್ಲೇ ಹೇಳಿಬಿಟ್ರು: ಶಾಕಿಂಗ್ ಘಟನೆ ತೆರೆದಿಟ್ಟ ನಟಿ ವಿಜಯಲಕ್ಷ್ಮಿ