ಸತ್ಯ ಸೀರಿಯಲ್ ಅಮ್ಮ-ಮಗಳ ಡಾನ್ಸ್ಗೆ ಫ್ಯಾನ್ಸ್ ಅಚ್ಚರಿ! ಊರ್ಮಿಳಾ-ರಿತು ಕುರಿತ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ
ಸತ್ಯ ಸೀರಿಯಲ್ ಅಮ್ಮ-ಮಗಳು ಊರ್ಮಿಳಾ ಮತ್ತು ರಿತು ರೀಲ್ಸ್ ಮಾಡಿದ್ದು, ಇದಕ್ಕೆ ಅಭಿಮಾನಿಗಳಿಂದ ಥಹರೇವಾರಿ ಕಮೆಂಟ್ಸ್ ಸುರಿಮಳೆ ಆಗ್ತಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್ ಇದೀಗ ಬೇರೆಯದ್ದೇ ರೂಪಕ್ಕೆ ತಿರುಗಿದೆ. ಇಲ್ಲಿಯವರೆಗೆ ಅತ್ತೆಯ ಮನೆಯಲ್ಲಿ ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಸತ್ಯ ಮನೆಯವರೆಲ್ಲರ ಅದರಲ್ಲಿಯೂ ಮುಖ್ಯವಾಗಿ ಅತ್ತೆಯ ಬೆಂಬಲದೊಂದಿಗೆ ಇನ್ಸ್ಪೆಕ್ಟರ್ ಆಗಿದ್ದಾಳೆ. ತನ್ನವರು, ಪರರರು ಎಂದು ನೋಡದೇ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಲೇ ಒಂದಷ್ಟು ಮಂದಿಯ ವೈರತ್ವವನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಪೊಲೀಸ್ ಹುದ್ದೆ ಎಂದರೆ ಅಪಾಯಕಾರಿ ಎಂದು ಅರಿತಿದ್ದ ಅತ್ತೆ ಆ ಹುದ್ದೆಗೆ ಹೋಗಬೇಡ ಎಂದು ಸತ್ಯಳಿಗೆ ಆರಂಭದಲ್ಲಿ ಹೇಳಿದ್ದರೂ ಇದೀಗ ಸಂತ್ರಸ್ತರಿಗೆ ನೆರವಾಗಲು ನಿನ್ನಂಥ ಅಧಿಕಾರಿಗಳ ಅಗತ್ಯವಿದೆ ಎನ್ನುತ್ತಲೇ ಹುರಿದುಂಬಿಸುತ್ತಿದ್ದಾಳೆ. ಆದರೆ ಆರಂಭದಲ್ಲಿ ಗಂಡ, ಅತ್ತೆ ಸೇರಿದಂತೆ ಹಲವರು ಸತ್ಯಳನ್ನು ಕಂಡರೆ ಉರಿಬೀಳುತ್ತಿದ್ದ ಸಂದರ್ಭದಲ್ಲಿ ಆಕೆಯ ಪರವಾಗಿ ನಿಂತಾಕೆ ಚಿಕ್ಕತ್ತೆ ಊರ್ಮಿಳಾ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಂದೆಯ ಬೈಕ್ ರಿಪೇರಿ ಅಂಗಡಿಯನ್ನು ಮುನ್ನಡೆಸುತ್ತಾ, ಗಂಡುಬೀರಿಯಂತೆ ಬೆಳೆದು ಸದಾ ನಟ್ಟು, ಬೋಲ್ಟು ಎನ್ನುತ್ತಿದ್ದ ಸತ್ಯ ಈ ಸಂಪ್ರದಾಯಸ್ಥ ಕುಟುಂಬಕ್ಕೆ ಹೊಂದಿಕೊಳ್ಳಲು ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ಸತ್ಯಳ ಪರವಾಗಿ ನಿಂತಿದ್ದವಳು ಈಕೆ. ಈಕೆಯ ಮಗಳು ರಿತು. ಸೀರಿಯಲ್ನ ಅಮ್ಮ-ಮಗಳು ಊರ್ಮಿಳಾ ಮತ್ತು ರಿತು ಇಬ್ಬರೂ ಇದೀಗ ರೀಲ್ಸ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
ಇವರಿಬ್ಬರ ಡ್ಯಾನ್ಸ್ ನೋಡಿದವರು ಊರ್ಮಿಳಾ ಅವರಿಗೆ ನೀವು ಇಷ್ಟು ಚಿಕ್ಕವರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಬ್ಬರೂ ಅಕ್ಕ-ತಂಗಿಯಂತೆ ಕಾಣಿಸುತ್ತಿದ್ದೀರಿ ಎಂದರೆ ಮತ್ತೆ ಕೆಲವರು ಇಬ್ಬರ ನಟನೆಯನ್ನು ಹಾಡಿ ಹೊಗಳಿದ್ದಾರೆ. ಕೆಲವರು ಸ್ವಲ್ಪ ತೆಳ್ಳಗಾದ್ರೆ ನೀವು ಇನ್ನೂ ಸುಂದ್ರಿಯಾಗಿ ಕಾಣಿಸುತ್ತೀರಿ ಎಂದು ಊರ್ಮಿಳಾಗೆ ಹೇಳಿದ್ದಾರೆ. ಅಂದಹಾಗೆ ಈ ಸೀರಿಯಲ್ನಲ್ಲಿ ಊರ್ಮಿಳಾ ಪಾತ್ರಧಾರಿಯಾಗಿರುವವರ ರಿಯಲ್ ಹೆಸರು ಶಾಲಿನಿ ಎಸ್. ರಾವ್. ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿರುವ ನಟಿಗೆ ಹೆಚ್ಚು ಹೆಸರು ತಂದುಕೊಟ್ಟಿರುವ ಸೀರಿಯಲ್ ಸತ್ಯ. ಶಾಲಿನಿ ಅವರು, ಬಣ್ಣ ಹಚ್ಚಿದ್ದು, ಅವರು ಏಳನೇ ತರಗತಿಯಲ್ಲಿದ್ದಾರೆ. ಆಗ ಅವರು 'ವಠಾರ' ಧಾರಾವಾಹಿಯಲ್ಲಿ ನಟಿಸಿದ್ದರು. ಮೂರು ವರ್ಷ ನಡೆದ ಈ ಧಾರಾವಾಹಿ ಮುಗಿಯುವವರೆಗೆ ಶಾಲಿನಿ 10ನೇ ತರಗತಿ ತಲುಪಿದ್ದರು. ಈಗಲೇ ತಮ್ಮನ್ನು ಇದೇ ಧಾರಾವಾಹಿ ಮೂಲಕ ಹೆಚ್ಚು ಮಂದಿ ಗುರುತಿಸುತ್ತಾರೆ ಎನ್ನುತ್ತಾರೆ ಶಾಲಿನಿ.
ಪುಷ್ಪಾ-2 ಹಾಡಿಗೆ ಸೀತಾ-ರಾಮ ಭರ್ಜರಿ ರೀಲ್ಸ್: ಜೋಡಿಯ ನೋಡಿ ಪುನಃ ಮದ್ವೆ ವಿಷಯ ಕೆದಕಿದ ಫ್ಯಾನ್ಸ್!
'ಬ್ರಾಹ್ಮಿನ್ಸ್ ಕೆಫೆ'ಯಲ್ಲಿ ಯಶೋಧಾ ಆಗಿ ನಟಿಸುತ್ತಿದ್ದಾರೆ. ಇದಾಗಲೇ ವಠಾರ ಸೇರಿದಂತೆ ಕಸ್ತೂರಿ, ಸುಕನ್ಯ, ಆಕಾಂಕ್ಷಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಮನೆಯೊಂದು ಮೂರು ಬಾಗಿಲು, ಮಹಾತಾಯಿ, ಒಲವೇ ಜೀವನ ಸೇರಿದಂತೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ, ದೂರದರ್ಶನದಲ್ಲಿ ಮೂಡಿ ಬಂದ 'ಥ್ಯಾಂಕ್ಯೂ ಸರು' ಎಂಬ ಧಾರಾವಾಹಿಯಲ್ಲಿ ತಾರಾ ಅವರ ಮಗಳಾಗಿ ನಟಿಸಿದ್ದರು. ಆಮೇಲೆ ಅನೇಕ ಸೀರಿಯಲ್ಗಳಲ್ಲಿ ನಟಿಸಿದ್ದರು. ನಂತರ ಸುಮಾರು ಹತ್ತು ವರ್ಷ ಬಣ್ಣದ ಲೋಕದಿಂದ ದೂರ ಉಳಿದು, ಬಳಿಕ 'ಮಮತೆಯ ಕರೆಯೋಲೆ' ಧಾರಾವಾಹಿ ಮೂಲಕ ಮತ್ತೆ ಮರಳಿ ಈಗ ಸತ್ಯ ಸೀರಿಯಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಫ್ಯಾಷನ್ ಡಿಸೈನರ್ ಕೂಡ ಹೌದು. ಈಗಲೂ ಇವರು ತಮ್ಮ ಬ್ಲೌಸ್‌ಗಳನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ಇವರು ಮಾಡಿರುವ ಸೀರಿಯಲ್ಗಳಲ್ಲಿ ಇವರಿಗೆ ಸಿಕ್ಕಿದ್ದು ಪಾಸಿಟಿವ್ ರೋಲ್ಗಳೇ. ಆದ್ದರಿಂದ ಒಮ್ಮೆಯಾದರೂ ನೆಗೆಟಿವ್ ರೋಲ್ ಮಾಡುವ ಆಸೆ ಇದೆ ಎಂದಿದ್ದಾರೆ. ಇವರ ಹುಟ್ಟುಹಬ್ಬದ ಈ ಆಸೆಯೂ ಈಡೇರಲಿ ಎಂದು ಫ್ಯಾನ್ಸ್ ವಿಷ್ ಮಾಡುತ್ತಿದ್ದಾರೆ.
ಇನ್ನು ರಿತು ಕುರಿತು ಹೇಳುವುದಾದರೆ, ಇವರ ರಿಯಲ್ ಹೆಸರು ರಕ್ಷಿತಾ ಭಾಸ್ಕರ್. ರಕ್ಷಿತಾ ಅವರು, ಇದಾಗಲೇ ಕೆಲವು ಕಿರುತೆರೆಗಳಲ್ಲಿ ನಟಿಸಿದ್ದಾರೆ. ʻರಾಜಾ ರಾಣಿʼ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಚಂದನಾ ಅನಂತಕೃಷ್ಣ ಮತ್ತು ರಕ್ಷಿತಾ ಹೂಮಳೆ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಇದಾದ ಬಳಿಕ ಸತ್ಯ ಸೀರಿಯಲ್ ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿದೆ. ಕ್ಲಾಸಿಕಲ್ ಡ್ಯಾನ್ಸರ್ ಕೂಡ ಆಗಿರುವ ರಕ್ಷಿತಾ ಇದಾಗಲೇ ಹಲವು ಕಡೆಗಳಲ್ಲಿ ಕಾರ್ಯಕ್ರಮ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇವರ ಈ ಪ್ರತಿಭೆಯನ್ನು ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ನೋಡಬಹುದು. ಡ್ಯಾನ್ಸ್ ವಿಡಿಯೋ ಜೊತೆ ಸುಮಧುರ ಹಾಡುಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇವರ ಪ್ರತಿಭೆ ಕೇವಲ ನಟನೆಗೆ ಸೀಮಿತವಾಗಿಲ್ಲ. ಈ ಸೀರಿಯಲ್ನಲ್ಲಿ ರಿತು ಹಾಡನ್ನು ಕೂಡ ಹಾಡಿದ್ದಾರೆ. ಅದು ಅವರ ಕಂಠದಿಂದಲೇ ಬಂದಿರುವ ಹಾಡು. ಇದು ಬೇರೆ ಯಾವುದೇ ಕಲಾವಿದೆ ಕಂಠದಾನ ಮಾಡಿದ್ದಲ್ಲ. ಅಂಥ ಅದ್ಭುತ ಕಂಠ ಅವರದ್ದು. ಇವರು ಹಲವಾರು ಗಾಯನ ಷೋಗಳಲ್ಲಿ ಅಪಾರ ಬಹುಮಾನ ಪಡೆದಿದ್ದಾರೆ. 2006 ಮತ್ತು 2007ರಲ್ಲಿ ಕನ್ನಡದ ಎದೆ ತುಂಬಿ ಹಾಡುವೆನು ಮತ್ತು ತೆಲುಗಿನ ಪಾಡಾಲಾನಿ ರಿಯಾಲಿಟಿ ಷೋಗಳಲ್ಲಿ ವಿಜೇತರಾಗಿದ್ದಾರೆ. ಬಾಲ್ಯದಲ್ಲಿಯೇ ಸಂಗೀತ ಮತ್ತು ನೃತ್ಯ ಪ್ರವೀಣೆ ಇವರು. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ರಕ್ಷಿತಾ, ಹಲವಾರು ಡ್ಯಾನ್ಸ್ ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಅಲ್ಲದೇ ಇವರು ನಟನೆಯನ್ನು ತರಗತಿಗೆ ಹೋಗುವ ಮೂಲಕ ಅಭ್ಯಾಸ ಮಾಡಿದ್ದಾರೆ. ರಕ್ಷಿತಾ ಇಂದಿಗೂ ಬೆನಕ ಥಿಯೇಟರ್ ಎನ್ನುವ ರಂಗತಂಡದಲ್ಲಿ ಕಾರ್ಯನಿರತರಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾರೆ.
500ರ ಸಂಭ್ರಮದಲ್ಲಿರೋ ಭಾಗ್ಯಳ ಕೈಗೆ ಬಂತು ಒಂದು ಲಕ್ಷ ರೂ. ಚೆಕ್! ಗೃಹಿಣಿಯ ತಾಕತ್ತಿಗೆ ಶ್ಲಾಘನೆಗಳ ಮಹಾಪೂರ