ಬಿಗ್ಬಾಸ್ ಅಚ್ಚರಿ: ಹೆಚ್ಚು ಅಂಕ ಪ್ರತಾಪ್‌ಗೆ- ಫಿನಾಲೆ ಟಿಕೆಟ್ ಸಂಗೀತಾಗೆ! ಈ ಪವಾಡ ಆಗಿದ್ದು ಹೇಗೆ?
ಸಂಗೀತಾ ಶೃಂಗೇರಿ ಅವರಿಗೆ ಬಿಗ್ಬಾಸ್ನ ಫಿನಾಲೆ ಟಿಕೆಟ್ ಸಿಕ್ಕಿದ್ದು, ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅವರಿಗೆ ಟಿಕೆಟ್ ಸಿಕ್ಕಿದ್ದು ಹೇಗೆ?
ಬಿಗ್ಬಾಸ್ನಲ್ಲಿ ಅಚ್ಚರಿಯೊಂದು ನಡೆದಿದೆ. ಡ್ರೋನ್ ಪ್ರತಾಪ್ಗಿಂತಲೂ ಕಡಿಮೆ ಪಾಯಿಂಟ್ಸ್ ಇರುವ ಸಂಗೀತಾ ಶೃಂಗೇರಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಫಿನಾಲೆಗೆ ಆಯ್ಕೆಯಾದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಡ್ರೋನ್ ಪ್ರತಾಪ್ ಸಂಗೀತಾ ಅವರಿಗೆ ಬಿಗ್ಶಾಕ್ ನೀಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಅವರನ್ನು ಅಕ್ಕ-ತಮ್ಮ ಎಂದೇ ಮೊದಲಿನಿಂದಲೂ ಹೇಳಲಾಗುತ್ತಿದೆ. ಮುಖದ ಮೇಲೆ ನೀರು ಎರೆಚುವ ಟಾಸ್ಕ್ನಲ್ಲಿ ಸೋಪಿನ ನೀರು ಕಣ್ಣಿಗೆ ಬಿದ್ದು ಆಸ್ಪತ್ರೆಗೆ ಸೇರಿದ್ದರು ಇವರಿಬ್ಬರು. ಇದಾದ ಬಳಿಕ ಇವರ ಸಂಬಂಧ ಇನ್ನಷ್ಟು ಹತ್ತಿರವಾಗಿತ್ತು. ಪ್ರತಾಪ್ ನನ್ನ ತಮ್ಮನ ಹಾಗೇ ಎಂದು ಈ ಹಿಂದೆ ಅನೇಕ ಬಾರಿ ಸಂಗೀತಾ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಕೂಡ ಸಂಗೀತಾ ಅವರನ್ನು ಅಕ್ಕನಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಇನ್ನೇನು ಫಿನಾಲೆ ಹತ್ತಿರ ಇದೆ ಎನ್ನುವಾಗ ಡ್ರೋನ್ ಪ್ರತಾಪ್ ಸಂಗೀತಾ ಅವರಿಗೆ ಶಾಕ್ ನೀಡಿದ್ದರು. ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿದ್ದ ಪ್ರತಾಪ್ ಆಟದಿಂದ ಸಂಗೀತಾ ಅವರನ್ನು ಹೊರಗಡೆ ಇಡುತ್ತೇನೆ ಎನ್ನುವ ಮೂಲಕ ಸಂಗೀತಾ ಅವರಿಗೆ ತಣ್ಣೀರೆಚಿದ್ದರು. ಅವರ ಭರವಸೆಯನ್ನು ಹುಸಿಗೊಳಿಸಿದ್ದರು.
ಆದರೆ ಇದೀಗ ಅಚ್ಚರಿ ನಡೆದಿದೆ. ಪಾಯಿಂಟ್ಸ್ ಟಾಸ್ಕ್ನಲ್ಲಿ ಡ್ರೋನ್ ಪ್ರತಾಪ್ 420 ಅಂಕ ಗಳಿಸಿದ್ದರೆ, ಸಂಗೀತಾ ಅವರಿಗೆ ಬಂದದ್ದು ಕೇವಲ 300. ನಂತರದ ಸ್ಥಾನದಲ್ಲಿ ನಮ್ರತಾ ಇದ್ದರು. ಅವರಿಗೆ 210 ಅಂಕ ಬಂದಿದೆ. ಟಾಪ್ ತ್ರಿ ಸ್ಥಾನದಲ್ಲಿದ್ದ ಈ ಮೂವರು ಸ್ಪರ್ಧಿಗಳನ್ನು ಟಿಕೆಟ್ ಟು ಫಿನಾಲೆ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಫಿನಾಲೆಗೆ ಟಿಕೆಟ್ ನೀಡುವ ಮೊದಲು ಈ ಮೂವರು ತಾವು ಬಿಗ್ಬಾಸ್ಗೆ ಎಂಟರ್ ಆದಾಗಿನಿಂದ ಏನೇನು ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡು ಫಿನಾಲೆಗೆ ತಾವೆಷ್ಟು ಅರ್ಹರು ಎಂಬುದನ್ನು ಸಾಬೀತು ಮಾಡಬೇಕಿತ್ತು.
ಗಟ್ಟಿಮೇಳ ಸೀರಿಯಲ್ನ ಕೊನೆಯ ದಿನದ ಶೂಟಿಂಗ್ ಹೇಗಿತ್ತು? ಸಂಪೂರ್ಣ ವಿಡಿಯೋ ಶೇರ್ ಮಾಡಿದ ಅದಿತಿ!
ಇದೆಲ್ಲಾ ಬೆಳವಣಿಗೆ ನಡುವೆ ಅಚ್ಚರಿಯೊಂದು ನಡೆದುಬಿಟ್ಟಿದೆ. ಹೆಚ್ಚು ಅಂಕ ಪಡೆದಿರುವ ಡ್ರೋನ್ ಪ್ರತಾಪ್ ಅವರಿಗೆ ಬಿಗ್ಬಾಸ್ ಫಿನಾಲೆ ಟಿಕೆಟ್ ಮೊದಲು ಸಿಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಫಿನಾಲೆ ಟಿಕೆಟ್ ಅವರಿಗೆ ಸಿಗಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ಡ್ರೋನ್ ಅವರದ್ದಾಯಿತು. ಅಷ್ಟಕ್ಕೂ ಹೀಗೊಂದು ಜಾದೂ ಆಗಲು ಕಾರಣ ಏನೆಂದರೆ, ಟಾಸ್ಕ್ ನಂತರ ಬಿಗ್ಬಾಸ್ ಕಾರ್ತಿಕ್, ತನಿಷಾ, ವಿನಯ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರಿಗೆ ವೋಟ್ ಹಾಕುವ ಅವಕಾಶ ಕೊಟ್ಟಿತು. ನಮ್ರತಾ, ಸಂಗೀತಾ, ಪ್ರತಾಪ್‌ಗೆ ವೋಟ್ ಮಾಡಬೇಕಾಗಿತ್ತು. ಇಲ್ಲೇ ಪ್ರತಾಪ್ ಸೋತಿದ್ದು.
ಉಳಿದ ಮೂವರು ಸಂಗೀತಾಗೆ ವೋಟ್ ಮಾಡುವುದಾಗಿ ಹೇಳಿದರು. ಈ ಫಿನಾಲೆ ಟಿಕೆಟ್ ಅವಳಿಗೆ ಸೇರಬೇಕು ಎಂದು ಉಳಿದವರೆಲ್ಲಾ ಸಂಗೀತಾ ಪರ ವೋಟು ಮಾಡಿದರು. ಈ ಬಗ್ಗೆ ತಮ್ಮದೇ ಆಗಿರುವ ಅನಿಸಿಕೆಯನ್ನು ಹಂಚಿಕೊಂಡರು. ಪ್ರತಾಪ್ ಮತ್ತು ನಮ್ರತಾಗೆ ತಲಾ ಒಂದೊಂದು ವೋಟ್ ಸಿಕ್ಕರೆ ಸಂಗೀತಾ ಅವರಿಗೆ ಮೂರು ಮತಗಳು ಬಿದ್ದವು. ವರ್ತೂರು ಸಂತೋಷ್ ಪ್ರತಾಪ್‌ಗೆ ವೋಟ್ ಮಾಡಿದ್ದರು. ವಿನಯ್ ನಮ್ರತಾಗೆ ವೋಟ್ ಮಾಡಿದರು. ಕಾರ್ತಿಕ್, ತುಕಾಲಿ ಸಂತೋಷ್, ತನಿಷಾ ಸಂಗೀತಾಗೆ ವೋಟ್ ಮಾಡಿದರು. ಈ ಮೂಲಕ ಸಂಗೀತಾ ಡೈರೆಕ್ಟ್ ಫೈನಲಿಸ್ಟ್ ಆಗಿದ್ದಾರೆ. ಟಿಕೆಟ್ ಟು ಫಿನಾಲೆ ಟಿಕೆಟ್ ಹಿಡಿದು ಸಂಗೀತಾ ಖುಷಿಯಿಂದ ಕುಣಿದಾಡುವ ಪ್ರೊಮೋ ಇದೀಗ ರಿಲೀಸ್ ಆಗಿದೆ. ಇದರಲ್ಲಿ ಡ್ರೋನ್ ಪ್ರತಾಪ್ ಮುಖ ಸಣ್ಣದಾಗಿರುವುದನ್ನು ನೋಡಬಹುದು.
ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್ ಖಾನ್ ಪುತ್ರಿಯ ಹೊಸ ವಿಷ್ಯ?