Asianet Suvarna News Asianet Suvarna News

ಸೇತೂರಾಂ ಹೊಸ ಸೀರಿಯಲ್ ಯುಗಾಂತರ ಬರ್ತಿದೆ!

'ಮಂಥನ', 'ಅನಾವರಣ' ಮೊದಲಾದ ಅರ್ಥಗರ್ಭಿತ ಸೀರಿಯಲ್‌ಗಳ ಮೂಲಕ ಹೆಸರು ಮಾಡಿದವರು ಎಸ್‌ ಎನ್‌ ಸೇತುರಾಂ. ಅವರ ಹೊಸ ಸೀರಿಯಲ್‌ ಹೆಸರು ಯುಗಾಂತರ. ಈ ಸೀರಿಯಲ್‌ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

S N Sethuram new serial Yuganthara
Author
Bengaluru, First Published May 9, 2022, 6:14 PM IST

ಎಸ್‌ ಎನ್ ಸೇತೂರಾಂ(S N Sethuram) ಅಂದರೆ ಮೊದಲಿಗೆ ನೆನಪಾಗೋದು 'ಮಾಯಾಮೃಗ' (Mayamruga) ಸೀರಿಯಲ್. 1998 ರಲ್ಲಿ ಡಿಡಿ ಚಂದನದಲ್ಲಿ(DD Chandana) ಬರುತ್ತಿದ್ದ ಈ ಸೀರಿಯಲ್‌ನಲ್ಲಿ ಅವರು ಮಾಲವಿಕಾ (Malavika Avinash) ತಂದೆಯಾಗಿ ನಟಿಸಿದ್ದರು. ನಾರಾಯಣ ಮೂರ್ತಿಯ ಪಾತ್ರದಲ್ಲಿ ಅವರ ನಟನೆಯ ಮಧ್ಯಮ ವರ್ಗದ ಸೀರಿಯಲ್‌ ವೀಕ್ಷಕರ ಗಮನ ಸೆಳೆದಿತ್ತು. ವಯಸ್ಸಾದ, ನಗುತ್ತಲೇ ಅಪದ್ಧ ಮಾತಾಡೋ ವಿಚಿತ್ರ ವ್ಯಕ್ತಿತ್ವದ ತಂದೆಯ ಪಾತ್ರವನ್ನು ಸೇತೂರಾಂ ಲೀಲಾಜಾಲವಾಗಿ ನಿಭಾಯಿಸಿದ್ದರು.

ಇದೀಗ ನಿರೀಕ್ಷೆ ಮೂಡಿಸುತ್ತಿರುವ ಎಸ್‌ ಎನ್‌ ಸೇತೂರಾಮ್ ಅವರ ಹೊಸ ಸೀರಿಯಲ್‌ 'ಯುಗಾಂತರ' (Yuganthara). ಈ ಸೀರಿಯಲ್‌ಗೆ ಕತೆ, ಸಂಭಾಷಣೆ ಬರೆದು ನಿರ್ದೇಶನವನ್ನು ಸೇತೂರಾಂ ಮಾಡುತ್ತಿದ್ದಾರೆ. ಜೊತೆಗೆ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸೀರಿಯಲ್‌ನ ಪ್ರೋಮೋದ(promo) ಅದ್ಭುತ ಹಾಡು ಎಲ್ಲೆಡೆ ಹರಿದಾಡುತ್ತಿದೆ. ಮೇ 23 (May 23) ರಿಂದ ಈ ಸೀರಿಯಲ್‌ಅನ್ನು ಸಿರಿ ಕನ್ನಡ ವಾಹಿನಿಯಲ್ಲಿ (Siri kannada channel) ನೋಡಬಹುದು.

ಗಾಸಿಪ್ ಮಾಡೋರಿಗೆ ಕಾಲು ತೋರಿಸಿದ್ರಾ ಸಾಯಿ ಪಲ್ಲವಿ? ಫೋಟೋ ವೈರಲ್

ಈ ಸೀರಿಯಲ್‌ನ ಗೀತೆಯನ್ನು ರಚಿಸಿದವರು ಹಿರಿಯ ಕವಿ ಎಚ್‌ಎಸ್‌ ವೆಂಕಟೇಶ ಮೂರ್ತಿ (Dr H S Venkatesh Murthy). ಟಿ ಎನ್‌ ಸೀತಾರಾಂ ನಿರ್ದೇಶನದ ಎಲ್ಲ ಸೀರಿಯಲ್‌ಗಳ ಹಾಡೂ ನಿಮಗೆ ನೆನಪಿರಬಹುದು. ಸೃಜನಶೀಲ ಸಾಹಿತ್ಯ ಸೃಷ್ಟಿಯ ಜೊತೆಗೆ ಚಿಂತನೆಗೆ ಹಚ್ಚುವ ಸೀರಿಯಲ್‌ಗಳಿಗೂ ಹಾಡು ಹೊಸೆದವರು ಎಚ್‌ಎಸ್‌ವಿ. ಈ ಸೀರಿಯಲ್‌ನಲ್ಲಿ ಅವರ ಬರೆದ ಹಾಡು ಅದ್ಭುತ ಅರ್ಥಗಳನ್ನು ಹೊಳೆಸುವ ಹಾಗಿದೆ. ಜೊತೆಗೆ ಈ ಸೀರಿಯಲ್‌ನ ಕಥೆ ಏನು ಅನ್ನೋದನ್ನು ಸೂಚ್ಯವಾಗಿ ಹೇಳುವಂತಿದೆ. 'ಎಂಥಾ ದೈನಾಸಿ ಬದುಕು, ಭೂಮಿಯ ಮೇಲೆ, ಕರೆಯಬಹುದೇ ಇದನು ಕೂಡಾ ದೇವರ ಲೀಲೆ..' ಅನ್ನೋ ಸಾಲುಗಳಿಂದ ಈ ಹಾಡು ಶುರುವಾಗುತ್ತೆ. ಮೊದಲ ಸಾಲೇ ನಾವೆಲ್ಲ ಬದುಕಿನ ಬಹು ಬೇಸರದ ದಿನಗಳಲ್ಲಿ ಹೇಳುವ ಮಾತನ್ನೇ ಹಾಡಿನ ರೂಪದಲ್ಲಿ ಹೇಳಿದ ಹಾಗಿದೆ. 'ದಾಹ ದಾಹವೆಂದು ನದಿಯೇ ನೀರ ಕುಡಿಯಿತು, ಹಸಿದ ಭೂಮಿಯು ಬೀಜವನ್ನು ತಾನೇ ನುಂಗಿತು' ಎಂಬ ಸಾಲುಗಳು ಇದರಲ್ಲಿದೆ. ಅಂದರೆ ದುರಾಸೆಯ ಇಂದಿನ ಬದುಕಿನ ಕತೆಯನ್ನು ಈ ಧಾರಾವಾಹಿ ಒಳಗೊಂಡಿದೆ ಎನ್ನಬಹುದು.

ಡಾಲಿ ಧನಂಜಯ್ ನಟನೆಯ ಸಸ್ಪೆನ್ಸ್‌ ಚಿತ್ರ 'ಟ್ವಿಂಟಿ ಒನ್‌ ಅವರ್ಸ್‌'

"ಗಂಡು ದರ್ಪ ಹೆಡೆಯ ಬಿಚ್ಚಿ ಭುಸ್ಸೆನ್ನುತ್ತಿರಲು, ಎಲ್ಲಿದೆ ಕೇಡನು ಮೆಟ್ಟುವ ದೈವದ ಕಾಲು, ವೇಷಧಾರಿ ವ್ಯಾರ್ಘ್ರವೇ ನೀನು ಹೇಳು' ಎಂದು ಸಾಗುವ ಹಾಡಿನ ಸಾಲಿನಲ್ಲಿ ಈ ಸೀರಿಯಲ್‌ನ ಅಂತರಾರ್ಥ ಅಡಗಿದ ಹಾಗೆ ಭಾಸವಾಗುತ್ತದೆ. ಗಂಡು ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ದನಿ ತುಳಿತಕ್ಕೊಳಗಾಗುವ, ಆತಂಕದಲ್ಲಿ ಬದುಕುವ ಹೆಣ್ಣಿನ ಬದುಕನ್ನು ಈ ಸೀರಿಯಲ್‌ ಚಿತ್ರಿಸಿದ ಹಾಗೆ ತೋರುತ್ತದೆ. 'ಜೀವ ಚೈತನ್ಯ ಚಿಲುಮೆಯಂತೆ ಪೊರೆಯುವ ಹೆಣ್ಣು, ಕೆಸರಿನಲ್ಲೂ ಅರಳುತಿರುವ ತಾಯಿಯ ಕಣ್ಣು, ತೂಗುವುದನು ಬಿಡದ ತೊಟ್ಟಿಲು, ಇದ್ದೇ ಇದೆ ಅಳುವ ತುಟಿಗೆ ಹಾಲ ಬಟ್ಟಲು' ಎಂಬ ಸೊಗಸಾದ ಸಾಲುಗಳು ಈ ಸೀರಿಯಲ್‌ನಲ್ಲಿ ದುಃಖ, ನೋವಿನ ಜೊತೆಗೆ ಪೊರೆವ ಜೀವಗಳಾಗಿ ಹೆಣ್ಣಗಳ ಬದುಕಿದೆ ಅನ್ನೋದನ್ನು ಹೇಳುತ್ತೆ.

ಮಂತ್ರ ಹೇಳ್ಬೇಕಾಗುತ್ತೆ ಅಂತ ನಾನ್‌ವೆಜ್ ಬಿಟ್ರಂತೆ ಋತ್ವಿಕ್: ಕಂಡಹಾಗಲ್ಲ ಈ ರಾಮಾಚಾರಿ ಹೀರೋ!

"ನಮ್ಮ ಎದೆಯ ಒಳಗೆ ನಮ್ಮ ಕಾಯ್ವ ದೇವರು ಒಂದು ಕಾಳಜಿಯ ಕರೆಗೆ ಕಾಯುತ್ತಿರುವರು, ತನಗೆ ತಾನೆ ತೆರೆವುದಾಗ ಬಿಡುಗಡೆಯ ದಾರ.. ಅಂತರಾಳದೊಂದು ಕೂಗು ಈ ಯುಗಾಂತರ' ಎಂಬ ಸಾಲಿನಲ್ಲಿ ಹೊಸ ಭರವಸೆ, ಬಿಡುಗಡೆಯ ಹಾದಿ ಕಂಡಂತೆ ತೋರುತ್ತದೆ. ಈ ಹಾಡಿಗೆ ಪ್ರವೀಣ್ ಡಿ ರಾವ್ ಸಂಗೀತವಿದೆ. 'ಯುಗಾಂತರ'ದಲ್ಲಿ ಸೇತೂರಾಂ ಅವರ ಜೊತೆಗೆ ಸುಧಾ ಬೆಳವಾಡಿ, ಶ್ರೀಪತಿ ಮಂಜನಬೈಲು, ದಿವ್ಯಾ ಕಾರಂತ್ ಮೊದಲಾದವರು ನಟಿಸಿದ್ದಾರೆ.

 

ಸೇತೂರಾಂ ಅವರ ಸೀರಿಯಲ್‌ ಅಂದರೆ ಅಲ್ಲೊಂದು ಗಾಢವಾದ ಚಿಂತನೆ ಇರುತ್ತದೆ. ಅವರ ಈ ಹಿಂದಿನ 'ಮಂಥನ', 'ಅನಾವರಣ' ಮೊದಲಾದ ಸೀರಿಯಲ್‌ ನೋಡಿದವರಿಗೆ ಇದೆಲ್ಲ ತಿಳಿದಿರುವಂಥಾದ್ದೇ. ಸೇತೂರಾಂ ಅವರ ನಾಟಕಗಳು, ಕತೆಗಳು, ಅವರ ಭಾಷಣಗಳೂ ಪ್ರಖರ ಚಿಂತನೆಗೆ ಹೆಸರುವಾಸಿ. ಟಿ ಎನ್‌ ಎಸ್‌ ಅವರ 'ಮುಕ್ತ ಮುಕ್ತ' (Muktha Muktha), 'ಮಹಾಪರ್ವ' ಸೀರಿಯಲ್‌ ಗಳ ನಂತರ ಚಿಂತನೆಗೆ ಹಚ್ಚುವಂಥಾ ಮತ್ಯಾವ ಸೀರಿಯಲ್‌ ಯಾವ ಚಾನಲ್‌ನಲ್ಲೂ ಪ್ರಸಾರ ಕಾಣಲಿಲ್ಲ. ಇದೀಗ ಆ ಕೊರತೆ ತುಂಬುವ ಹಾಗೆ ಸೇತೂರಾಂ ಅವರ ಹೊಸ ಸೀರಿಯಲ್‌ ಬರುತ್ತಿದೆ. ಅವರ 'ಅನಾವರಣ' ಸೀರಿಯಲ್‌ನ ಕೆಲವೊಂದು ಸಂಭಾಷಣೆಯನ್ನು ಜನ ಈಗಲೂ ನೆನಪಿಸುವುದುಂಟು. 'ಯುಗಾಂತರ' ಧಾರಾವಾಹಿ ಮತ್ತೆ ಅಂಥಾ ಗಾಢ ಚಿಂತನೆಗೆ ಹಚ್ಚುವ ಕೆಲಸ ಮಾಡಲಿದೆ. ಈ ಮೂಲಕ ಸವಕಲು ಕತೆ, ಡ್ರಾಮಾಗಳೇ ತುಂಬಿರುವ ಸೀರಿಯಲ್‌ಗಳ ಮಧ್ಯೆ ಇದೊಂದು ಗುಣಮಟ್ಟದ ಸೀರಿಯಲ್‌ ಆಗಿ ನಿಲ್ಲಲಿದೆ ಅನ್ನೋದು ಸೇತೂರಾಂ ಅಭಿಮಾನಿಗಳ ನಂಬಿಕೆ.

Follow Us:
Download App:
  • android
  • ios