ಆಕೆ ಹೆಸರು ಗಂಗೂಬಾಯಿ ಕಥೈವಾಡಿ. ರಾಜಸ್ಥಾನದಿಂದ ಮುಂಬೈ ನಗರಿಗೆ ಬದುಕಿನ ದಾರಿ ಹುಡುಕುತ್ತ ಬಂದ ಆಕೆ ಸೇರಿದ್ದು ಮಹಾನಗರಿಯ ಕಾಮಾಟಿಪುರ ಅಲಿಯಾಸ್‌ ರೆಡ್‌ ಲೈಟ್‌ ಏರಿಯಾಗೆ. ತನ್ನ ನೆಂಟರಿಂದಲೇ ಕೇವಲ 500 ರುಪಾಯಿಗೆ ಮಾರಾಟಗೊಂಡ ಒಬ್ಬ ಸಾಮಾನ್ಯ ವೇಶ್ಯೆ ಆದ ಗಂಗೂಬಾಯಿ ಕಥೈವಾಡಿ ಅದೇ ಕೆಂಪುಪ್ರದೇಶಕ್ಕೆ ನಾಯಕಿ ಆಗುತ್ತಾಳೆ. ಅಕ್ಷರಶಃ ವೇಶ್ಯಾ ಜಗತ್ತಿನ ಡಾನ್‌ ಆಗುತ್ತಾಳೆ. ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಅವರನ್ನು ನೇರವಾಗಿ ಭೇಟಿ ಆಗುವ ಮಟ್ಟಿಗೆ ಬೆಳೆಯುತ್ತಾಳೆ. ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಜತೆಗೆ ನಂಟು ಬೆಳೆಸಿಕೊಳ್ಳುತ್ತಾಳೆ.

60ರ ದಶಕದಲ್ಲಿ ಹೀಗೆ ರಂಗಿನ ಲೋಕದಲ್ಲಿ ಮಿಂಚಿದ ಗಂಗೂಬಾಯಿ ಕಥೈವಾಡಿ ಅವರ ಜೀವನ ಪುಟಗಳನ್ನೇ ಆಧರಿಸಿ ಮಾಡಿರುವ ಸಾಕ್ಷ್ಯಚಿತ್ರವೇ ಈ ರಾಣಿ ಜೇನು. ತನ್ನ ಜೀವನದಲ್ಲಿ ತೀರಾ ಕಡು ಬಡತನದ ಪರಿಸ್ಥಿತಿಯನ್ನು ಅನುಭವಿಸಿದ ಗಂಗೂಬಾಯಿ ಕಥೈವಾಡಿ ಅವರಿಗೆ ಮುಂದೆ ವೇಶ್ಯೆ ಪಟ್ಟದೊರಕಿದ್ದು, ಆಕೆಯ ವ್ಯಕ್ತಿತ್ವ ಹಾಗೂ ಸಮಾಜದ ಬಗ್ಗೆ ಇರೋ ಕಳಕಳಿ... ಈ ಎಲ್ಲವನ್ನೂ ಒಳಗೊಂಡ ಈ ಚಿತ್ರವನ್ನು ದಾ.ಪಿ.ಆಂಜನಪ್ಪ ಡಿಎಎಂ 36 ಸ್ಟುಡಿಯೋ ಬ್ಯಾನರ್‌ ನಲ್ಲಿ ಲೋಕೇಶ್‌ ಎನ್‌ ಗೌಡ ನಿರ್ಮಿಸಿದ್ದಾರೆ. ಮಿಥುನ್‌ ಸುವರ್ಣ ಈ ಚಿತ್ರದ ನಿರ್ದೇಶಕ.

 

ಮೇಘನಾ ಶೆಟ್ಟಿಯವರು ವೇಶ್ಯೆಯ ಪಾತ್ರವನ್ನು ಮಾಡಿದ್ದರೆ, ನಟ ದರ್ಶನ್‌ ಗೌಡ ಚಿತ್ರ ಕಲಾವಿದನ ಪಾತ್ರ ಮಾಡಿದ್ದಾರೆ. ವೀರಕಪುತ್ರ ಶ್ರೀನಿವಾಸ ಅವರ ಕನ್ನಡ ಮಾಣಿಕ್ಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಈಗಾಗಲೇ ಸಾವಿರಾರು ವೀಕ್ಷಣೆಯನ್ನು ಪಡೆದು ನೋಡುಗರ ಮೆಚ್ಚುಗೆ ಪಡೆದಿದೆ.

ಈ ಸಮಾಜದಲ್ಲಿ ಯಾವೊಬ್ಬ ಹೆಣ್ಣು ಮಗಳು ಕೂಡ ವೇಶ್ಯೆ ಅನ್ನೋ ಹೆಸರು ಪಡೆದುಕೊಳ್ಳಲು ಇಷ್ಟಪಡಲ್ಲ. ಕೆಲವೊಂದು ಸಂದರ್ಭ ಸನ್ನಿವೇಶಗಳು ಆ ದಂಧೆಗೆ ಇಳಿಯೋ ರೀತಿ ಮಾಡುತ್ತವೆ ಅಷ್ಟೇ. - ವೀರಕಪುತ್ರ ಶ್ರೀನಿವಾಸ