ತೆಲುಗು ಬಿಗ್ ಬಾಸ್ ಸ್ಪರ್ಧಿ ಶಿವಕುಮಾರ್ ಅವರ ಗೆಲುವಿಗಾಗಿ ನಟಿ ಪ್ರಿಯಾಂಕಾ ಜೈನ್ ಅವರು ಮೊಣಕಾಲಿನಲ್ಲಿ ತಿರುಮಲ ಬೆಟ್ಟ ಹತ್ತಿ ಪ್ರಾರ್ಥಿಸಿದ್ದಾರೆ. ಬಿಗ್ ಬಾಸ್ ಟ್ರೋಫಿಗಾಗಿ ನಡೆಯುತ್ತಿರುವ ಭಾರಿ ಪೈಪೋಟಿಯ ನಡುವೆ ಈ ಘಟನೆ ಗಮನ ಸೆಳೆದಿದೆ. ಇವರಿಬ್ಬರ ಪ್ರೀತಿ ಮತ್ತು ಮುಂಬರುವ ಮದುವೆಯ ವಿಚಾರವೂ ಚರ್ಚೆಯಲ್ಲಿದೆ.

ತಿರುಮಲ: ಈ ಬಾರಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಬಿಗ್​ಬಾಸ್​ ಏಕಕಾಲದಲ್ಲಿ ಆರಂಭವಾಗಿದೆ. ಇತ್ತ ಕನ್ನಡದ ಬಿಗ್​ಬಾಸ್​ ಹೇಳಿಕೊಳ್ಳುವಷ್ಟು ಸದ್ದೇನೂ ಮಾಡುತ್ತಿಲ್ಲ. ಆದರೆ, ಅತ್ತ ತೆಲುಗು ಬಿಗ್​ಬಾಸ್​ ಸದ್ದು ಮಾಡುತ್ತಿರಲು ಕಾರಣ, ತಮ್ಮ ಗೆಳೆಯ, ಬಿಗ್​ಬಾಸ್​ ಟ್ರೋಫಿ ಗೆಲ್ಲಲಿ ಎನ್ನುವ ಕಾರಣಕ್ಕೆ ನಟಿ ಹಾಗೂ ಮಾಜಿ ಬಿಗ್​ಬಾಸ್ ಸ್ಪರ್ಧಿಯೊಬ್ಬರು ಮೊಣಕಾಲಿನಲ್ಲಿ ತಿರುಪತಿ ಬೆಟ್ಟ ಹತ್ತು ಬಂದಿರುವ ಕಾರಣಕ್ಕೆ. ಇದಾಗಲೇ ತೆಲುಗು ಬಿಗ್​ಬಾಸ್​​ 10ನೇ ಸೀಸನ್​ 11 ವಾರಗಳನ್ನು ಪೂರೈಸಿದ್ದು, ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಬಿಗ್​ಬಾಸ್​ ಟ್ರೋಫಿಗಾಗಿ ಭಾರಿ ಕಸರತ್ತು ನಡೆಯುತ್ತಿದೆ. ಬಿಗ್​ಬಾಸ್​ನ ಸ್ಪರ್ಧಿಗಳ ಅಭಿಮಾನಿಗಳು ಅವರ ಪಿಆರ್​ ಏಜೆನ್ಸಿಗಳು ಎಲ್ಲರೂ ವೋಟ್​ಗಾಗಿ ಕಸರತ್ತು ಕೂಡ ಮಾಡುತ್ತಿದ್ದಾರೆ. ತಮ್ಮವರನ್ನು ಗೆಲ್ಲಿಸಿ ಎಂದು ಕೋರಿಕೊಳ್ಳುತ್ತಿದ್ದಾರೆ. ಅವರು ತಮ್ಮ ಸ್ಪರ್ಧಿಗೆ ಮತ ಚಲಾಯಿಸಲು ಮತ್ತು ಅವರನ್ನು ಗೆಲ್ಲಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತು ಪಿಆರ್ ತಂಡಗಳು ಸಹ ಅನೇಕ ಸ್ಪರ್ಧಿಗಳ ಪರವಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ.

ಇದರ ನಡುವೆಯೇ, ಪ್ರಸಿದ್ಧ ಟಿವಿ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ಜೈನ್ ಅವರು ಬಿಗ್​ಬಾಸ್​ನಲ್ಲಿ ಸ್ಪರ್ಧಿಯಾಗಿರುವ ತಮ್ಮ ಗೆಳೆಯ ಶಿವನಿಗಾಗಿ ತಿರುಮಲ ಬೆಟ್ಟವನ್ನು ಮೊಣಕಾಲುಗಳ ಮೇಲೆ ಹತ್ತಿ ಸೇವೆ ಸಲ್ಲಿಸಿದ್ದಾರೆ. ಅಂದಹಾಗೆ ಶಿವ ಅವರು ಬೆಳಗಾವಿ ಮೂಲದವರು. ಅವರಿಗಾಗಿ ಪ್ರಿಯಾಂಕಾ, 3,550 ಮೆಟ್ಟಿಲುಗಳನ್ನು ಮೊಣಕಾಲಿನಲ್ಲೇ ಹತ್ತುವ ಮೂಲಕ ತಮ್ಮ ಪ್ರೀತಿಯ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದಾಗಿನಿಂದ ಪ್ರಿಯಾಂಕಾ ಶಿವನಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಿದ್ದಾರೆ. ಶಿವನನ್ನು ಬೆಂಬಲಿಸಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಮಾಡುತ್ತಿದ್ದಾರೆ.

ಪ್ರಿಯಾಂಕಾ ಕುಟುಂಬ ವಾರದ ಭಾಗವಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಲ್ಲಿ, ಅವರು ಶಿವನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ರೀತಿ, ಅವರು ತಮ್ಮ ತಿರುಮಲ ಶ್ರೀವಾರಿ ಯಾತ್ರೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ, ಶಿವ ನನಗಾಗಿ ತಿರುಮಲಕ್ಕೆ ಹೋಗಿದ್ದರು. ಈಗ ನಾನು ಶಿವನಿಗಾಗಿ ಎಡುಕೊಂಡಲವಾಡಿಗೆ ಬಂದಿದ್ದೇನೆ. ಬಿಗ್ ಬಾಸ್‌ನಲ್ಲಿ ಶಿವನ ಪ್ರಯಾಣ ಯಶಸ್ವಿಯಾಗಲಿ.. ಓಂ ನಮೋ ವೆಂಕಟೇಶಾಯ,’ ಎಂದು ಪ್ರಿಯಾಂಕಾ ತಮ್ಮ ಪೋಸ್ಟ್‌ನಲ್ಲಿ ವಿನಂತಿಸಿದ್ದಾರೆ.

ನಟ-ನಟಿ ಕುರಿತು

ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸಿದ್ದ ಶಿವಕುಮಾರ್‌ ಈಗ ತೆಲುಗಿನಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ವರ್ಷಗಳಿಂದ ಶಿವಕುಮಾರ್‌, ತೆಲುಗು ನಟಿ ಪ್ರಿಯಾಂಕಾ ಜೈನ್‌ ಪ್ರೀತಿ ಮಾಡುತ್ತಿದ್ದಾರೆ. ಶಿವಕುಮಾರ್‌ ಅವರು ಇಂಜಿನಿಯರಿಂಗ್‌ ಕಲಿಯುತ್ತಿದ್ದರು, ಆ ವೇಳೆ ಮಾಡೆಲಿಂಗ್‌ ಆರಂಭಿಸಿದ್ದರು. ಓದನ್ನು ಅರ್ಧಕ್ಕೆ ಕೈಬಿಟ್ಟು ಆಮೇಲೆ ಬೆಂಗಳೂರಿಗೆ ಬಂದು ಆಡಿಷನ್‌ ಆರಂಭಿಸಿದ್ದರು. ಆಮೇಲೆ ಅವರು ʼನಾಗಕನ್ನಿಕೆʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಈ ಧಾರಾವಾಹಿಯಲ್ಲಿ ಅದಿತಿ ಪ್ರಭುದೇವ ಹೀರೋಯಿನ್‌ ಆಗಿದ್ದರು. ಆಮೇಲೆ ʼಮಾನಸ ಸರೋವರʼ ಧಾರಾವಾಹಿಯಲ್ಲಿ ನಟಿಸಿದ್ದರು.

ಪ್ರಿಯಾಂಕಾ ಜೈನ್‌ ಅವರು ‘ಮೌನ ರಾಗಂ’ ಧಾರಾವಾಹಿಯಲ್ಲಿ ನಟಿಸಿದ್ದರು. 2021ರಲ್ಲೇ‌ ಶಿವಕುಮಾರ್‌ ಮರಿಹಾಳ್‌, ಪ್ರಿಯಾಂಕಾ ಜೈನ್ ಅವರು ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಕೂಡ ಈ ಜೋಡಿ ಪ್ರೀತಿ ಮಾಡುತ್ತಲಿದೆ ಎಂಬ ಸುಳಿವು ಕೊಟ್ಟಿತ್ತು. ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರುವ ಈ ಜೋಡಿ ತಾವು ಲವ್‌ ಮಾಡುತ್ತಿರುವ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿದೆ. ತಾನು ಪ್ರೀತಿಸುತ್ತಿರುವ ಹುಡುಗನಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಬೇಕು ಅಂತ ಪ್ರಿಯಾಂಕಾ ಅಂದುಕೊಂಡಿದ್ದರು. ಅದರಂತೆ ಪ್ರೇಮ ನಿವೇದನೆ ಮಾಡಿದ್ದಾರೆ. ತೆಲುಗು ಶೋವೊಂದರಲ್ಲಿ ತಾವಿಬ್ಬರು ತಮ್ಮ ಮೊಬೈಲ್‌ಗೆ ಒಂದೇ ಪಾಸ್‌ವರ್ಡ್‌ ಇಟ್ಟುಕೊಂಡಿರೋದು ಬೆಳಕಿಗೆ ಬಂದಿತ್ತು, ಆಗ ಇಬ್ಬರಿಗೂ ಶಾಕ್‌ ಆಗಿತ್ತು. ಇದೇ ವರ್ಷವೇ ಪ್ರಿಯಾಂಕಾ ಎಂ ಜೈನ್‌, ಶಿವಕುಮಾರ್‌ ಮರಿಹಾಳ ಅವರು ಮದುವೆ ಆಗಲಿದ್ದಾರಂತೆ. ಗ್ರ್ಯಾಂಡ್‌ ಮದುವೆಗೆ ತಯಾರಿ ನಡೆಯುತ್ತಿದೆ.