ಪ್ರತಿಯೊಂದು ಮನೆಯ ಕಪಾಟಿನಲ್ಲಿ ವಿಷದ ಬಾಟ್ಲಿ ಇರೋದು ಕಡ್ಡಾಯನಾ? ಇದೇನು ಚಿನ್ನ-ಬೆಳ್ಳಿನಾ?
ಇಂದಿನ ಬಹುತೇಕ ಸೀರಿಯಲ್ಗಳಲ್ಲಿ ಎಲ್ಲರ ಮನೆಯ ಕಪಾಟಿನಲ್ಲಿಯೂ ವಿಷದ ಬಾಟಲ್ಗಳು ಇದ್ದೇ ಇರುತ್ತವೆ. ಇದರ ಔಚಿತ್ಯವನ್ನು ಪ್ರಶ್ನಿಸುತ್ತಿದ್ದಾರೆ ಪ್ರೇಕ್ಷಕರು! ಇದೇನು ಕಡ್ಡಾಯನಾ ಎನ್ನುವುದು ಅವರ ಪ್ರಶ್ನೆ.
ಪುಡಿ ರೌಡಿಗಳ ಬಳಿ ಬೆಟ್ಟದಷ್ಟು ಸಾಲ ಮಾಡ್ಕೊಂಡಿರೋ ತುಳಸಿ ಮಗಳು ಸಂಧ್ಯಾಳನ್ನು ರೌಡಿಗಳು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಸಾಲ ವಾಪಸ್ ಕೇಳಿದ್ದಕ್ಕೆ ಅವರಿಗೇ ತಿರುಗೇಟು ಕೊಟ್ಟ ಕಾರಣ, ಅವಳನ್ನು ಮುಗಿಸಲು ಮುಂದ್ದಾಗಿದ್ದರು. ದತ್ತಜ್ಜ ಆ ಸಮಯಕ್ಕೆ ಬಂದು ಮೊಮ್ಮಗಳನ್ನು ಕಾಪಾಡಿದ್ದಾನೆ. ಇಲ್ಲದೇ ಹೋಗಿದ್ದರೆ ಸಂಧ್ಯಾಳ ಕಥೆ ಅಲ್ಲಿಗೇ ಮುಗಿಯುತ್ತಿತ್ತು. ಇಂಥ ಅದೆಷ್ಟೋ ಘಟನೆಗಳು ಆದರೂ ದುಡ್ಡಿನ ಆಸೆಗೆ ಬಿದ್ದಿರೋ ಸಂಧ್ಯಾ ಇಂಥ ಅದೆಷ್ಟೋ ಮನೆಹಾಳು ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾಳೆ. ಇವಳು ಇಂಥ ಕೆಲಸ ಮಾಡಿದಾಗಲೆಲ್ಲವೂ ಅಮ್ಮ ತುಳಸಿಯಾಗಲೀ ಅಣ್ಣ ಸಮರ್ಥ್ ಆಗಲೀ ಅವಳಿಗೆ ಬುದ್ಧಿಮಾತು ಹೇಳಿ, ಕೊನೆಗೆ ಆಕೆಯನ್ನು ಸಮರ್ಥಿಸಿಕೊಂಡು ಬಂದಿರೋ ಕಾರಣ, ದುರಾಸೆ ಬುದ್ಧಿಯ ಸಂಧ್ಯಾ ಬುದ್ಧಿ ಕಲಿತೇ ಇರಲಿಲ್ಲ. ದೊಡ್ಡ ಶ್ರೀಮಂತೆಯಾಗುವ ಹಂಬಲ ಆಕೆಗೆ. ಅಮ್ಮ ಶ್ರೀಮಂತರ ಮನೆಯ ಸೊಸೆಯಾಗಿ ಹೋಗಿರುವ ಕಾರಣ, ಅಮ್ಮನಿಗೂ ಆಕೆ ತಂದ ಮುಜುಗರ ಅಷ್ಟಿಷ್ಟಲ್ಲ. ಏನೇ ಆದರೂ ತನ್ನನ್ನು ಸಮರ್ಥಿಸಿಕೊಳ್ಳುವವರು ಇದ್ದಾರೆ ಎಂಬ ಧೈರ್ಯ ಆಕೆಗೆ ಈ ಮಟ್ಟಿಗೆ ತಂದು ನಿಲ್ಲಿಸಿದೆ.
ಈಗ ಸಂಧ್ಯಾಳಿಗೆ ಬುದ್ಧಿ ಬಂದಿದೆ. ಇದೇ ಕಾರಣಕ್ಕೆ ಸಾಯಲು ಮುಂದಾಗಿದ್ದಾಳೆ. ಮನೆಗೆ ಬಂದು ಕಪಾಟಿನಲ್ಲಿದ್ದ ವಿಷದ ಬಾಟಲಿಯನ್ನು ಹುಡುಕಾಡಿದ್ದಾಳೆ. ನಂತರ ಸಮರ್ಥ್ ಅದನ್ನು ತಂದುಕೊಟ್ಟಿದ್ದಾನೆ. ಇದಕ್ಕೇ ತಾನೇ ನೀನು ಹುಡುಕುತ್ತಾ ಇರುವುದು ಕೇಳಿದ್ದಾನೆ. ಆಗ ಸಂಧ್ಯಾ ನಾನು ಸಾಯಬೇಕು, ಕೊಡು ಎಂದಿದ್ದಾಳೆ. ಸಮರ್ಥ್ ತಂಗಿಗೆ ಬುದ್ಧಿಮಾತು ಹೇಳಿದ್ದಾನೆ. ಸದ್ಯ ಇದಿಷ್ಟು ಶ್ರೀರಸ್ತು ಶುಭಮಸ್ತುವಿನ ಕಥೆ.
ಶ್ರೇಷ್ಠಾ-ತಾಂಡವ್ ಮದುವೆಗೆ ಅಡ್ಡಿಯಾದ ಮಳೆ! ಭಾಗ್ಯಳಿಗೆ ಕೊಡೆಯಿಂದ ರಕ್ಷಿಸಿದ ಮದುಮಗಳು- ಇದೆಂಥ ಟ್ವಿಸ್ಟ್?
ಆದರೆ ಇಲ್ಲೊಂದು ಸಂದೇಹ ಸೀರಿಯಲ್ ವೀಕ್ಷಕರನ್ನು ಸದಾ ಕಾಡುತ್ತದೆ. ಅದೇನೆಂದರೆ, ಬಹುತೇಕ ಸೀರಿಯಲ್ಗಳಲ್ಲಿ ಎಲ್ಲರ ಮನೆಯಲ್ಲಿಯೂ ವಿಷದ ಬಾಟಲಿ ಇದ್ದೇ ಇರುತ್ತದೆ. ಅದೂ ಅವರವರಿಗೆ ಸಂಬಂಧಿಸಿದ ಕಪಾಟಿನಲ್ಲಿ ಭದ್ರವಾಗಿ ಇರುತ್ತದೆ. ವಿಷ ಕುಡಿಯುವ ಸ್ಥಿತಿ ಬಂದಾಗ ಯಾರೂ ಕೂಡ ಹೊರಗೆ ಹೋಗಿ ವಿಷದ ಬಾಟಲಿ ಖರೀದಿ ಮಾಡುವುದಿಲ್ಲ. ಬದಲಾಗಿ ಕಪಾಟಿನಲ್ಲಿ ಇಟ್ಟಿರೋ ಬಾಟಲಿಯನ್ನೇ ಹುಡುಕುತ್ತಾರೆ. ಇಲ್ಲವೇ ವಿಲನ್ಗಳು ಸೀರಿಯಲ್ನ ಒಳ್ಳೆಯ ಕ್ಯಾರೆಕ್ಟರ್ಗಳಿಗೆ ವಿಷ ಹಾಕಬೇಕು ಎನ್ನುವ ಸಮಯದಲ್ಲಿಯೂ ಕಪಾಟಿನಲ್ಲಿ ಭದ್ರವಾಗಿ ಇರುವ ವಿಷದ ಬಾಟಲಿಯನ್ನು ತೆಗೆಯುತ್ತಾರೆ. ಹಾಗಿದ್ದರೆ ಪ್ರತಿಯೊಬ್ಬರ ಮನೆಯಲ್ಲಿ ವಿಷದ ಬಾಟಲಿ ಇರುವುದು ಕಡ್ಡಾಯನಾ ಎನ್ನುವ ಪ್ರಶ್ನೆ ಕಮೆಂಟ್ಸ್ಗಳಲ್ಲಿ ಆಗಾಗ್ಗೆ ಕಾಣುವುದು ಉಂಟು. ಇದೇನು ವಿಷದ ಬಾಟಲೋ, ಚಿನ್ನ-ಬೆಳ್ಳಿ ಆಭರಣಗಳೋ ಗೊತ್ತಾಗಲ್ವಾ ಎಂದು ನೆಟ್ಟಿಗರು ಪ್ರಶ್ನಿಸುವಂತಾಗುತ್ತಿದೆ.
ಸೀರಿಯಲ್ಗಳು ಎಂದರೆ ಎಲ್ಲವನ್ನೂ ನಿಜ ಜೀವನದಲ್ಲಿಯೇ ಇದ್ದಂತೆ ತೋರಿಸುವುದು ಕಷ್ಟವೇ ಸರಿ. ಹಾಗೊಮ್ಮೆ ತೋರಿಸಿದರೂ ಪ್ರೇಕ್ಷಕರಿಗೆ ಅದು ಸಹ್ಯವಾಗದೇ ಹೋಗಬಹುದು. ಅದಕ್ಕಾಗಿಯೇ ವಾಸ್ತವದಿಂದ ದೂರವಾಗಿರುವ ಅಂಶಗಳು ಸೀರಿಯಲ್ಗಳಲ್ಲಿ ತುರುಕಲೇಬೇಕು. ಅಂದಾಗ ಮಾತ್ರ ಟಿಆರ್ಪಿ ಬರುವುದು ಸಹಜ ಎನ್ನುವುದು ನಿಜವೇ. ಆದರೂ ಕೆಲವೊಮ್ಮೆ ಇಂಥ ದೃಶ್ಯಗಳನ್ನು ತೋರಿಸಿದಾಗ, ಒಂದಷ್ಟು ಡೌಟ್ಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಅದರಲ್ಲಿಯೂ ವಿಷದ ಬಾಟ್ಲ್ಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು ಎನ್ನುವ ತಪ್ಪು ಸಂದೇಶವನ್ನೂ ಸೀರಿಯಲ್ಗಳು ತೋರಿಸುತ್ತವೆ, ಸಮಸ್ಯೆ ಬಂದಾಗ ವಿಷ ಸೇವನೆಯೊಂದೇ ದಾರಿ ಎನ್ನುವ ಸಂದೇಶವನ್ನೂ ಇವುಗಳು ಸಾರುತ್ತವೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ.
ರೀಲ್ ಬಿಟ್ಟು ರಿಯಲ್ನಲ್ಲೂ ಒಟ್ಟಿಗೇ ಕಾಲ ಕಳೆದ ಸೀತಾ-ರಾಮ: ನಿಜ ಜೀವನದಲ್ಲೂ ಒಂದಾಗಿ ಅಂತಿರೋ ಫ್ಯಾನ್ಸ್